Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, January 7, 2012

Bhagavad Gita Kannada Chapter-18 Shloka 58-66


ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ ವಿವಿನಂಕ್ಷ್ಯಸಿ                   ॥೫೮॥

ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ ವಿವಿನಂಕ್ಷ್ಯಸಿ ನನ್ನಲ್ಲೆ ಒಳಬಗೆಯಿಟ್ಟಾಗ, ನನ್ನ ಹಸಾದದಿಂದ ಎಲ್ಲ ಕೋಟಲೆಗಳನ್ನು ದಾಟುವೆ. ಒಂದೊಮ್ಮೆ ಹೆಮ್ಮೆಯಿಂದ ಕಿವಿಗೊಡದಿದ್ದರೆ ಕೆಟ್ಟುಹೋಗುವೆ.

ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯಲ್ಲಿ ಭಗವಂತನನ್ನು ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆ ಶಾಶ್ವತಗೊಳಿಸಿದಾಗ, ನಮ್ಮ ಎಲ್ಲ ಕ್ರಿಯೆಗಳೂ ಭಗವಂತನ ಪೂಜೆಯಾಗುತ್ತದೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ ಹಾಗು ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ, ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ. ಹೀಗೆ ಜ್ಞಾನಿ ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನೆಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿ ಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ವೇದಾಂತ ಕೇವಲ ಬೊಗಳೆ, ಅದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.        

ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।
ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ                       ॥೫೯॥

ಯತ್ ಅಹಂಕಾರಮ್ ಆಶ್ರಿತ್ಯ ನ ಯೋತ್ಸ್ಯೇ  ಇತಿ ಮನ್ಯಸೇ ।
ಮಿಥ್ಯಾ ಏಷಃ ವ್ಯವಸಾಯಃ ತೇ ಪ್ರಕೃತಿಃ ತ್ವಾಮ್ ನಿಯೋಕ್ಷ್ಯತಿ – ಅಹಂಕಾರದಿಂದ ಬೀಗಿ ‘ನಾನು ಹೋರಾಡುವುದಿಲ್ಲ’ ಎಂದು ತಿಳಿದಿರುವೆಯಾದರೆ ನಿನ್ನ ಈ ನಿರ್ಧಾರ ಹುಸಿಯಾದದ್ದು. ನಿನ್ನ ಸ್ವಭಾವ [ಭಗವಂತನ ಇಚ್ಛೆ] ನಿನ್ನನ್ನು ಹೊರಾಡಿಸುತ್ತದೆ.

‘ನಾನು ಯುದ್ಧ ಮಾಡುವುದಿಲ್ಲ’ ಎಂದು ಅರ್ಜುನ ರಥದಲ್ಲಿ ಕುಸಿದು ಕುಳಿತಿದ್ದನ್ನು ನಾವು ಅಧ್ಯಾಯ ಒಂದರಲ್ಲಿ ನೋಡಿದ್ದೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ “ ‘ನಾನು ಯುದ್ಧ ಮಾಡುವುದಿಲ್ಲ’ ಎನ್ನುವುದು ನಿನ್ನ ಅಹಂಕಾರಭರಿತ ಭ್ರಮೆ. ನೀನು ಏನನ್ನು  ಮಾಡುವುದಿಲ್ಲ ಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯ” ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿ ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನು ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ.

ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋSಪಿ ತತ್              ॥೬೦॥

ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನ ಇಚ್ಛಸಿ ಯತ್ ಮೋಹಾತ್ ಕರಿಷ್ಯಸಿ ಅವಶಃ ಅಪಿ ತತ್ – ಕೌಂತೇಯ, ಸ್ವಭಾವ ಸಹಜವಾದ ನಿನ್ನ ಕರ್ಮದಿಂದ ನೀನು ಸುತ್ತುವರಿದಿರುವೆ. ಅಜ್ಞಾನದಿಂದಾಗಿ  ಯಾವುದನ್ನು ಮಾಡಬಾರದು ಎಂದೆಣಿಸಿರುವೆ ಅದನ್ನು ನೀನು ನಿನಗರಿವಿಲ್ಲದಂತೆಯೆ[ಭಗವದಿಚ್ಛೆಗೆ ವಶನಾಗಿ] ಮಾಡುವೆ.

ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ.  ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಚೆಯಂತೆ ನಡೆಯುತ್ತದೆ.     

ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ        ॥೬೧॥

ಈಶ್ವರಃ ಸರ್ವಭೂತಾನಾಂ ಹೃತ್ ದೇಶೇ ಅರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರ ಆರೂಢಾನಿ ಮಾಯಯಾ – ಅರ್ಜುನ, ಎಲ್ಲ ಜೀವಿಗಳ ಎದೆಯ ತಾಣದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ – ಸುತ್ತುವ ಜಗದ್ ಯಂತ್ರದಲ್ಲಿ ಕೂತ ಎಲ್ಲ ಜೀವಿಗಳನ್ನೂ ಪ್ರಕೃತಿಯ ಮಾಯೆಯಿಂದ [ತನ್ನ ಇಚ್ಛೆಯಿಂದ]ತಿರುಗಾಡಿಸುತ್ತ.

ಎಲ್ಲ ಜೀವರ ಹೃತ್ಕಮಲದ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ  ಒಡೆಯ. ಎಲ್ಲರೊಳಗಿದ್ದು ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ.  ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ. 

ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ         ।
ತತ್ ಪ್ರಸಾದಾತ್ ಪರಾಂ ಶಾಂತಿ  ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್    ॥೬೨॥

ತಮ್ ಏವ ಶರಣಂ ಗಚ್ಛ ಸರ್ವಭಾವೇನ ಭಾರತ     ।
ತತ್ ಪ್ರಸಾದಾತ್ ಪರಾಂ ಶಾಂತಿ  ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ – ಭಾರತ, ಎಲ್ಲ ಬಗೆಯಿಂದಲೂ ಅವನಿಗೇ ಶರಣಾಗು. ಅವನ ಕರುಣೆಯಿಂದ ಹಿರಿದಾದ ಸುಖವನ್ನು, ಅಳಿವಿರದ ತಾಣವನ್ನು ಪಡೆಯುವೆ. 

ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು.[ಕೇವಲ ಕಷ್ಟ ಕಾಲದಲ್ಲಿ ಮಾತ್ರವಲ್ಲ]. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ-ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣು ತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟ ಆನಂದ ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು.

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯತರಂ ಮಯಾ ।
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು                              ॥೬೩॥

ಇತಿ ತೇ ಜ್ಞಾನಮ್ ಆಖ್ಯಾತಂ ಗುಹ್ಯಾತ್  ಗುಹ್ಯತರಂ ಮಯಾ          ।
ವಿಮೃಶ್ಯ ಏತತ್ ಅಶೇಷೇಣ ಯಥಾ ಇಚ್ಛಸಿ ತಥಾ ಕುರು  -- ತುಂಬ ಜತನದಿಂದ ಬಚ್ಚಿಡಬೇಕಾದ ಈ ತಿಳಿವನ್ನು ನಾನು ನಿನ್ನೆದುರು ಬಿಚ್ಚಿಟ್ಟೆ. ಇದನ್ನೆಲ್ಲ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು.

ಕೃಷ್ಣ ಹದಿನೈದನೇ ಅಧ್ಯಾಯದಲ್ಲಿ ಜ್ಞಾನದ ಉಪಸಂಹಾರ ಮಾಡಿದ್ದ. ಇಲ್ಲಿ ಉಪಾಸನೆಯ ಎಲ್ಲ ಅರಿವನ್ನು ಕೊಟ್ಟ ನಂತರ  ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ: “ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ರಹಸ್ಯ. ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಮನವರಿಕೆಯಾದಂತೆ ಮಾಡು” ಎಂದು. ಇಲ್ಲಿ 'ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು' ಎಂದು ಅರ್ಜುನನಿಗೆ ಹೇಳುವ ಮೂಲಕ-ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಮಾಜನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ.  

ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟೋSಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್               ॥೬೪॥

ಸರ್ವ ಗುಹ್ಯ ತಮಮ್  ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟಃ ಅಸಿ ಮೇ ದೃಢಮ್ ಇತಿ ತತಃ  ವಕ್ಷ್ಯಾಮಿ ತೇ ಹಿತಮ್ – ಎಲ್ಲಕ್ಕಿಂತ ಹೆಚ್ಚು ಬಚ್ಚಿಡಬೇಕಾದ ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬ ಮೆಚ್ಚಿನವನೆಂದು, ಅದಕ್ಕಾಗಿ ನಿನಗೆ ಹಿತವಾದ ಹೇಳುತ್ತಿದ್ದೇನೆ: 

ಹಿಂದೆ ಹೇಳಿದ ಸಾಧನೆಯ ಸಾರವನ್ನು, ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು,  ಅದಕ್ಕಾಗಿ ಅದನ್ನು ಮತ್ತೊಮ್ಮೆ  ಹೇಳುತ್ತಿದ್ದೇನೆ- ಕೇಳು:   

ಮನ್ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ ನಮಸ್ಕುರು       ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋSಸಿ ಮೇ               ॥೬೫॥

ಮತ್ ಮನಾಃ  ಭವ ಮತ್  ಭಕ್ತಃ  ಮತ್  ಯಾಜೀ ಮಾಂ ನಮಸ್ಕುರು            ।
ಮಾಮ್ ಏವ ಏಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯಃ ಅಸಿ ಮೇ  --  ನನ್ನಲ್ಲೆ ಬಗೆಯಿಡು. ನನ್ನಲ್ಲೆ ಭಕ್ತಿಯಿಡು. ನನ್ನನ್ನೆ ಪೂಜಿಸು. ನನಗೇ  ಪೊಡಮಡು. ಆಗ ನನ್ನನ್ನೆ ಸೇರುವೆ. ನೀನು ನನಗೆ ಮೆಚ್ಚಿನವ. ನಿನ್ನಾಣೆಗೂ ಇದು ನಿಜ.

ಸಾಧನೆಯ ಸಾರವನ್ನು ವಿವರಿಸುತ್ತ ಕೃಷ್ಣ ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು, ಸಾಧನೆಯ ಸಾರಸಂಗ್ರಹವನ್ನು  ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ.  ಕೃಷ್ಣ ಹೇಳುತ್ತಾನೆ: “ನನ್ನಲ್ಲೇ ಮನಸ್ಸನ್ನಿಡು” ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ಭಗವಂತನಲ್ಲಿ “ಶುದ್ಧವಾದ ಪ್ರೀತಿ ಇರಲಿ”. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎನ್ನುವ ಸತ್ಯವನ್ನು ತಿಳಿದು ಸರ್ವಾಂತರ್ಯಾಮಿ ಭಗವಂತನನ್ನು ಪೂಜಿಸು. ಈ ರೀತಿ ಎಲ್ಲ ಉಪಾಸನೆಯಲ್ಲಿ ಭಗವಂತನನ್ನು ಕಂಡರೆ "ನನ್ನನ್ನೇ ಬಂದು ಸೇರುತ್ತೀಯ ಇದು ನಿನ್ನಾಣೆಗೂ ಸತ್ಯ" ಎನ್ನುತ್ತಾನೆ ಕೃಷ್ಣ.

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ                        ॥೬೬॥

ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್  ಶರಣಂ ವ್ರಜ ।
ಅಹಂ ತ್ವಾಮ್  ಸರ್ವ ಪಾಪೇಭ್ಯಃ  ಮೋಕ್ಷಯಿಷ್ಯಾಮಿ ಮಾ ಶುಚಃ       -- ಎಲ್ಲ ಬಿನುಗು ಧರ್ಮಗಳನ್ನೂ ಫಲದ ಹಂಬಲಗಳನ್ನೂ ತೊರೆದು ನನಗೊಬ್ಬನಿಗೇ ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಪಾರುಗಾಣಿಸುತ್ತೇನೆ. ಕೊರಗದಿರು.

‘ಸರ್ವಧರ್ಮಾನ್ ಪರಿತ್ಯಜ್ಯ’ ಎಂದರೆ ಎಲ್ಲ ಪುಣ್ಯಕರ್ಮಗಳನ್ನು ಮಾಡಿ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ  ಇರುವುದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಹೇಳುತ್ತಾಳೆ: “ಧರ್ಮೋ ರಕ್ಷತಿ ರಕ್ಷಿತಃ - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ,  ಅದು ನಿನ್ನನ್ನು ಏಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು? ” ಎಂದು. ಅದಕ್ಕೆ ಧರ್ಮರಾಯ ಕೊಡುವ ಉತ್ತರ ರೋಚಕ. ಆತ ಹೇಳುತ್ತಾನೆ: “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೋ ಫಲಾಪೇಕ್ಷೆಯಿಂದಲ್ಲ” ಎಂದು.  ಹೀಗೆ ಯಾವುದೇ ಧರ್ಮವಿದ್ದರೂ ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ. ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ. ಇಲ್ಲಿಗೆ ಗೀತೆಯಲ್ಲಿ ಭಗವಂತನ ಉಪದೇಶದ ಭಾಗ ಮುಗಿಯಿತು. ಈ ಅಧ್ಯಾಯದ ಮುಂದಿನ ಶ್ಲೋಕಗಳಲ್ಲಿ ಗೀತೆಯ ಫಲಶ್ರುತಿಯನ್ನು ಕಾಣಬಹುದು. 

2 comments: