Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, December 27, 2011

Bhagavad GitA Kannada Chapter-18 Shloka 01-10



ಅಧ್ಯಾಯ ಹದಿನೆಂಟು
ಹಿಂದಿನ ಹದಿನೇಳು ಅಧ್ಯಾಯಗಳಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ್ದ ಕೃಷ್ಣ, ಇಲ್ಲಿ ಆ ಸಾಧನೆಯ ಸಂದೇಶವನ್ನು ಸಂಗ್ರಹ ರೂಪದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಇದರ ಜೊತೆಗೆ ಅಧ್ಯಾಯ ಹದಿನೇಳರಲ್ಲಿ ವಿವರಿಸದೇ ಇರುವ ಸಾಧನೆಗೆ ಕುರಿತಾದ  ತ್ರೈಗುಣ್ಯದ ಮುಂದುವರಿದ ವಿವರಣೆ ಕೂಡ ಇಲ್ಲಿದೆ. ಇದು ಗೀತೆಯ ಉಪಸಂಹಾರ.  ಈ ಅಧ್ಯಾಯ ಅರ್ಜುನನ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ.
         
ಅರ್ಜುನ ಉವಾಚ ।
ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ                             ॥೧॥

ಅರ್ಜುನ ಉವಾಚ –ಅರ್ಜುನ ಕೇಳಿದನು:
ಸಂನ್ಯಾಸಸ್ಯ ಮಹಾಬಾಹೋ ತತ್ವಮ್ ಇಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ – ಮಹಾಬಾಹೋ, ಸಂನ್ಯಾಸದ ಮತ್ತು ತ್ಯಾಗದ ಅಂತರವೇನು? ಓ ಹೃಷೀಕೇಶ, ಇದರ ನಿಜವನ್ನು ಕೇಶಿನಿಸೂದನನಾದ ನೀನು ನನಗೆ ತಿಳಿಸು.

ಕೃಷ್ಣ ಮೊದಲು ಸಂನ್ಯಾಸದ ಬಗ್ಗೆ ಹೇಳಿದ್ದ; ಆನಂತರ ಹಿಂದಿನ ಅಧ್ಯಾಯದಲ್ಲಿ ಯಜ್ಞ, ದಾನ, ತಪಸ್ಸು ಎನ್ನುವ ಕರ್ಮಗಳನ್ನು ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಹಾಗಾಗಿ ಅರ್ಜುನ ಕೃಷ್ಣನಲ್ಲಿ ಕರ್ಮತ್ಯಾಗ ಮತ್ತು ಕರ್ಮಸಂನ್ಯಾಸ ಇವೆರಡರ ನಡುವಿನ ಅಂತರವೇನು ಎಂದು ಕೇಳುತ್ತಾನೆ. ತ್ಯಾಗ ಮತ್ತು ಸಂನ್ಯಾಸ ಎರಡು ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ಕೊಟ್ಟಂತೆ ಕಂಡರೂ ಕೂಡ, ಅದು ಬೇರೆಬೇರೆ.  ಸಂನ್ಯಾಸ ಮತ್ತು ತ್ಯಾಗದ ಮೂಲಭೂತ ಅರ್ಥವೇನು ? ಅವೆರಡನ್ನು ಪ್ರತ್ಯೇಕವಾಗಿ ಅರ್ಥೈಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು ಮಹಾಬಾಹೋ, ಹೃಷೀಕೇಶ ಮತ್ತು ಕೇಶಿನಿಸೂದನ ಎನ್ನುವ ಮೂರು ದಿವ್ಯ ನಾಮಗಳಿಂದ ಸಂಬೋಧಿಸಿದ್ದಾನೆ. ಇದು ಆತನಲ್ಲಿರುವ ಗುರುಭಕ್ತಿಯನ್ನು ಸೂಚಿಸುತ್ತದೆ ಮತ್ತು  ಕೃಷ್ಣ ಕೇವಲ ವಸುದೇವನ ಮಗನಲ್ಲ, ಅವನು ‘ಭಗವಂತ’ ಎಂದು ಅರ್ಥ ಮಾಡಿಕೊಂಡು ಈ ಪ್ರಶ್ನೆ ಕೇಳಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ‘ಮಹಾಬಾಹು’ ಅಂದರೆ ಶತ್ರುಗಳನ್ನು ಎದುರಿಸುವ, ನೀಳವಾದ, ಗಟ್ಟಿಯಾದ ತೊಳುಗಳುಳ್ಳವ ಎನ್ನುವುದು ಮೇಲ್ನೋಟದ ಅರ್ಥ. ದುಷ್ಟನಿಗ್ರಹ ಮಾಡಿ ಶಿಷ್ಟ ರಕ್ಷಣೆ ಮಾಡುವ, ಎಲ್ಲರೊಳಗಿನ ಅಜ್ಞಾನವನ್ನು ನೀಗಿಸುವ, ಲೋಕರಕ್ಷಕ ತೋಳುಳ್ಳವ ಎನ್ನುವುದು ಈ ದಿವ್ಯ  ನಾಮದ ಹಿಂದಿರುವ ಮೂಲ ಅರ್ಥ.  ಇನ್ನು ‘ಹೃಷೀಕ’ ಎಂದರೆ ಇಂದ್ರಿಯಗಳು. ಪಿಂಡಾಂಡದೊಳಗಿದ್ದು ಸರ್ವ ಇಂದ್ರಿಯಗಳನ್ನು ನಿಯಂತ್ರಿಸುವ ಭಗವಂತ ಹೃಷೀಕೇಶ. ‘ಕೇಶಿ’ ಅಂದರೆ ಸೂರ್ಯಕಿರಣ; ವಾಯುದೇವರು(Ref: ಋಗ್ವೇದ ೧೦.೧೩೬.೦೭). ಸೌರಮಂಡಲದಲ್ಲಿದ್ದು; ತನ್ನ ಅಂತರಂಗದ ಭಕ್ತನಾದ ಪ್ರಾಣದೇವರಲ್ಲಿದ್ದು; ನಮ್ಮ ಅಭೀಷ್ಟವನ್ನು ಪೂರೈಸುವ, ನಮಗೆ ಶಕ್ತಿತುಂಬುವ  ಭಗವಂತ ‘ಕೇಶಿನಿಸೂದನ’. ಅವನು ಬ್ರಹ್ಮಾಂಡ ಮತ್ತು ಪಿಂಡಾಂಡದೊಳಗಿದ್ದು ಇಡೀ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ . [ಹೆಚ್ಚಿನ ಕಡೆ ‘ಕೇಶಿನಿಷೂದನ’ ಎನ್ನುವ ಪದ ಬಳಕೆಯಲ್ಲಿದೆ, ಆದರೆ ಸರಿಯಾದ ಪದ ಕೇಶಿನಿಸೂದನ).           

ಭಗವಾನುವಾಚ ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ                         ॥೨॥

ಭಗವಾನ್ ಉವಾಚ- ಭಗವಂತ ಹೇಳಿದನು:
ಕಾಮ್ಯಾನಾಮ್  ಕರ್ಮಣಾಮ್  ನ್ಯಾಸಮ್  ಸಂನ್ಯಾಸಂ ಕವಯಃ  ವಿದುಃ ।
ಸರ್ವಕರ್ಮಫಲ ತ್ಯಾಗಮ್  ಪ್ರಾಹುಃ ತ್ಯಾಗಂ ವಿಚಕ್ಷಣಾಃ –ಕಾಮ್ಯ ಕರ್ಮಗಳನ್ನು ತೊರೆಯುವುದನ್ನು ಬಲ್ಲವರು ‘ಸಂನ್ಯಾಸ’ ಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೆ ತೊರೆಯುವುದನ್ನು ತಿಳಿದವರು ‘ತ್ಯಾಗ’ ಎನ್ನುತ್ತಾರೆ.

ಇಲ್ಲಿ ಹೇಳುವ ಸಂನ್ಯಾಸ ಗೃಹಸ್ಥರನ್ನೂ ಒಳಗೊಂಡು ಎಲ್ಲ ಸಾಧಕರಿಗೂ ಅನ್ವಯವಾಗುವ ಸಂನ್ಯಾಸ. ಸಂನ್ಯಾಸದಲ್ಲಿ ಎರಡು ವಿಧ. ಒಂದು ಕರ್ಮದ ಫಲವನ್ನು ಬಿಡುವುದು, ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಇಲ್ಲಿ ತ್ಯಾಗ ಎಂದರೆ ಕರ್ಮವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ಯಾವ ಕರ್ಮವೇ ಇರಲಿ, ಅದನ್ನು ಮಾಡಿ-ಯಾವುದೇ ಫಲನ್ನು ಬಯಸದೇ ಇರುವುದು. ಆದ್ದರಿಂದ ಕರ್ಮತ್ಯಾಗ ಅಂದರೆ: ವೇದಾಧ್ಯಯನ ಬಿಡುವುದು, ಸಂಧ್ಯಾವಂದನೆ ಬಿಡುವುದು, ವೃತಾನುಷ್ಠಾನ ಇತ್ಯಾದಿಯನ್ನು ಬಿಡುವುದು ಎಂದಲ್ಲ. ಬದಲಿಗೆ ಸತ್ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು ಎಂದರ್ಥ. ಯಾವ ಕರ್ಮವೇ ಇರಲಿ ಅದನ್ನು ಭಗವದ್ ಪ್ರೀತ್ಯರ್ತ ಮಾಡು-ಫಲ ಬಯಕೆಯಿಂದಲ್ಲ. 
ಇಲ್ಲಿ ಕವಯಃ ಮತ್ತು ವಿಚಕ್ಷಣಾಃ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಲಾಗಿದೆ. ಶಬ್ದಾರ್ಥದ ಸಂಬಂಧವನ್ನು ತಿಳಿದವರು-ಕವಿಗಳು; ಶಬ್ದಾರ್ಥವನ್ನು ತಿಳಿದು ಅದನ್ನು ಅನುಭವಿಸಿ ಆಚರಿಸುವವರು ವಿಚಕ್ಷಣರು. “ಕವಿಗಳು ಮತ್ತು ವಿಚಕ್ಷಣರು ಸಂನ್ಯಾಸ ಮತ್ತು ತ್ಯಾಗಕ್ಕೆ ಈ ವಿವರಣೆಯನ್ನು ಕೊಡುತ್ತಾರೆ” ಎಂದಿದ್ದಾನೆ ಕೃಷ್ಣ.

ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ      ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ                            ॥೩॥

ತ್ಯಾಜ್ಯಂ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ            ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ – ದೋಷವುಳ್ಳ ಕರ್ಮವನ್ನು ತೊರೆಯಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಬಾರದು ಎನ್ನುತ್ತಾರೆ ಮತ್ತೆ ಕೆಲವರು.

ಕರ್ಮತ್ಯಾಗದ ಬಗ್ಗೆ ಒಂದೊಂದು ಶಾಸ್ತ ಒಂದೊಂದು ರೀತಿ ಹೇಳಿದಂತೆ ನಮಗೆ ಕಾಣುತ್ತದೆ. ಆದರೆ ಎಲ್ಲಾ ಶಾಸ್ತ್ರಗಳ ಅಂತರಂಗದ ತಿರುಳು ಒಂದೆ. ತ್ಯಾಗ ಅಂದರೆ ಏನು ಎನ್ನುವುದು ತಿಳಿದಾಗ ಇದು ಸ್ಪಷ್ಟವಾಗುತ್ತದೆ. ತಿಳಿದ ಬುದ್ಧಿವಂತರು ಹೇಳುತ್ತಾರೆ: “ಕರ್ಮವನ್ನು ಬಿಡಬೇಕು” ಎಂದು.  ಇನ್ನು ಕೆಲವು ವೇದಾನುಯಾಯಿಗಳು ಹೇಳುತ್ತಾರೆ: “ಯಜ್ಞ-ದಾನ-ತಪಸ್ಸನ್ನು ಮಾಡಬೇಕು” ಎಂದು. “ನಿನ್ನ ಉಸಿರಿರುವ ತನಕ ಅಗ್ನಿಹೊತ್ರದಿಂದ ಭಗವಂತನನ್ನು ಆರಾಧಿಸು” ಎನ್ನುತ್ತದೆ-ಯಜುರ್ವೇದ. ಇಲ್ಲಿ ಹೇಳಿದ ವಿಷಯ ಸರಿಯಾಗಿ ಅರ್ಥವಾಗಬೇಕಾದರೆ ನಾವು ತ್ಯಾಗ ಪದದ ಅರ್ಥವನ್ನು ವಿವಿಧ ಮುಖದಲ್ಲಿ ನೋಡಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಇದರ ಸುಂದರ ವಿವರಣೆಯನ್ನು ಕೊಟ್ಟಿದ್ದಾನೆ.

ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ                      ॥೪॥

ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗಃ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ  -- ಭರತಸತ್ತಮ, ಅದರಲ್ಲಿ ತ್ಯಾಗದ ಬಗ್ಗೆ ನನ್ನ ನಿರ್ಧಾರ ಕೇಳು. ಪುರುಷವ್ಯಾಘ್ರ, ಮೂರು ಬಗೆಯ ತ್ಯಾಗ ಉಕ್ತವಾಗಿದೆ.

“ತ್ಯಾಗದ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಹೇಗೆ ಯಜ್ಞ-ದಾನ-ತಪಸ್ಸು ಮೂರು ವಿಧವೋ ಹಾಗೇ  ತ್ಯಾಗವೂ ಕೂಡ ಮೂರು ವಿಧ. ಅದನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಭರತಸತ್ತಮ ಮತ್ತು ಪುರುಷವ್ಯಾಘ್ರ ಎಂದು ಸಂಬೋಧಿಸಿದ್ದಾನೆ. ಭರತವಂಶದ ಅರಸರ ಮಾಲಿಕೆಯಲ್ಲಿ ಗಣ್ಯನಾದ್ದರಿಂದ ಅರ್ಜುನ ಭರತಸತ್ತಮ-ಇದು ಮೇಲ್ನೋಟದ ಅರ್ಥ. ಭಗವಂತನಲ್ಲಿ ಮತ್ತು ಜ್ಞಾನದಲ್ಲಿ ರತನಾದವ, ಭಕ್ತಿ ಉಳ್ಳವ ಭರತಸತ್ತಮ ಎನ್ನುವುದು ಈ ಸಂಬೋಧನೆಯ ಅಂತರಂಗದ ಅರ್ಥ. ಅದೇ ರೀತಿ ಪುರುಷವ್ಯಾಘ್ರ  ಎಂದರೆ ಪುರುಷಶ್ರೇಷ್ಠ ಎಂದರ್ಥ. ಭಗವಂತನ ಕಡೆಗೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು ಪುರುಷರು. ಅವರಲ್ಲಿ ಶ್ರೇಷ್ಠ-ಪುರುಷಶ್ರೇಷ್ಠ. ಅಂದರೆ ಜ್ಞಾನಿಗಳಲ್ಲಿ ಶ್ರೇಷ್ಠ ಎಂದರ್ಥ. ನಾವೂ ಕೂಡ ನಮ್ಮ ಜೀವನದಲ್ಲಿ ಭರತಸತ್ತಮರು, ಪುರುಷವ್ಯಾಘ್ರರು ಆಗಬೇಕು. ಆಗ ಭಗವಂತನ ಸಂದೇಶ ನಮಗೆ ತಲುಪುತ್ತದೆ.         

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್      ।
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್                   ॥೫॥

ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಮ್  ಕಾರ್ಯಮ್ ಏವ ತತ್        ।
ಯಜ್ಞಃ ದಾನಮ್  ತಪಃ ಚ ಏವ ಪಾವನಾನಿ ಮನೀಷಿಣಾಮ್ – ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞ, ದಾನ, ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ.

ಯಾವಾಗಲೂ ಭಗವಂತನ ಆರಾಧನಾ ರೂಪವಾದ ಯಜ್ಞ, ದಾನ, ತಪವನ್ನು ಬಿಡಬಾರದು. ಅದನ್ನು ಮಾಡಲೇಬೇಕು. ಇದಕ್ಕಿಂತ ಮಂಗಳವಾದ ಸಂಗತಿ ಇನ್ನೊಂದಿಲ್ಲ. ಇವು ಮೂರು ಕೂಡ ನಮ್ಮ ಬದುಕನ್ನು ಪವಿತ್ರಗೊಳಿಸುವ ಕ್ರಿಯೆಗಳು. ಇದಕ್ಕಿಂತ ಹೆಚ್ಚು ಪವಿತ್ರವಾದ ಕ್ರಿಯೆ ಇನ್ನೊಂದು ಜಗತ್ತಿನಲ್ಲಿಲ್ಲ. ಇತರ ಎಲ್ಲ ಕ್ರಿಯೆಗಳೂ ಈ ಮೂರು ಕ್ರಿಯೆಯಲ್ಲಿ ಅಂತರ್ಭಾವವಾಗಿರುತ್ತವೆ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಕ್ರಿಯೆ ಕೂಡ ಯಜ್ಞ-ದಾನ-ತಪವಾಗಬೇಕು.

ಏತಾನ್ಯಪಿತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್                   ॥೬॥

ಏತಾನಿ ಅಪಿ ತು ಕರ್ಮಾಣಿ ಸಂಗಮ್  ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಮ್ – ಆದರೆ, ಪಾರ್ಥ, ಈ ಕರ್ಮಗಳನ್ನು ಮಮತೆ ತೊರೆದು, ಫಲದ ಹಂಬಲ ತೊರೆದು ಮಾಡಬೇಕು ಎನ್ನುವುದು ನನ್ನ ಖಚಿತವಾದ ಮತ್ತು ಹಿರಿದಾದ ಆಶಯ.

ಕರ್ಮ ಮಾಡುವಾಗ ಅದರಲ್ಲಿ ಬರುವ ಮೂಲ ದೋಷ ‘ನಾನು ಮಾಡಿದೆ, ನನ್ನಿಂದಾಯಿತು' ಎನ್ನುವ ಅಹಂಕಾರ. ಇದರ ಜೊತೆಗೆ ದೇವರ ಬಳಿ ನಮ್ಮ ಫಲಕಾಮನೆಯ ಪಟ್ಟಿ ಕೊಟ್ಟು ಫಲಾಪೇಕ್ಷೆಯಿಂದ ಕರ್ಮ ಮಾಡುವುದು. ಇವು ಕರ್ಮದಲ್ಲಿನ ಮಹಾದೋಷ. ಅಹಂಕಾರದಿಂದ ಕರ್ಮ ಮಾಡಿದರೆ ಅದು ವ್ಯರ್ಥ –ಏಕೆಂದರೆ ಅಹಂಕಾರವಿದ್ದೆಡೆಗೆ ಭಗವಂತ ಬರಲಾರ. ಇನ್ನು ನಾವು ಫಲದ ಅಸೆಯಿಂದ ಕರ್ಮ ಮಾಡುವುದು. ಫಲದಾಸೆಯಿಂದ ಕರ್ಮ ಮಾಡಿ ಒಂದು ವೇಳೆ ನಾವು ಬಯಸಿದ ಫಲ ನೆರವೇರದಿದ್ದರೆ, ಆಗ ನಮಗೆ ಆ ಕರ್ಮದಲ್ಲಿ ಆಸಕ್ತಿ ದೂರವಾಗುತ್ತದೆ. ದೇವರ ಬಗ್ಗೆ ವೈರತ್ವ ಉಂಟಾಗುತ್ತದೆ. ಇದು ಫಲಾಪೇಕ್ಷೆಯಿಂದ ಕರ್ಮ ಮಾಡುವುದರಿಂದ ಆಗುವ ಅನಾಹುತ. “ಇದು ನನ್ನ ನಿಶ್ಚಿತವಾದ ಅಭಿಪ್ರಾಯ. ನೀನು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ಕರ್ಮಫಲವನ್ನು ಮತ್ತು  ನಾನು ಮಾಡಿದೆ ಎನ್ನುವ ಆಸಕ್ತಿ-ಅಹಂಕಾರವನ್ನು” ಎನ್ನುತ್ತಾನೆ ಕೃಷ್ಣ. ಇದು ಕರ್ಮ ಸಿದ್ಧಾಂತದ ಅತ್ಯಂತ ಶ್ರೇಷ್ಠ ತೀರ್ಮಾನ. ಅಹಂಕಾರವನ್ನು, ಕಾಮ್ಯಕರ್ಮವನ್ನು(ಫಲಕ್ಕಾಗಿಯೇ ಕರ್ಮ ಮಾಡುವುದನ್ನು) ಮತ್ತು ಕರ್ಮದಲ್ಲಿ ಫಲವನ್ನು ಬಯಸುವುದನ್ನು-ಬಿಡುವುದು ನಿಜವಾದ ತ್ಯಾಗ ಹೊರತು, ನಿಯತಕರ್ಮವನ್ನು ಬಿಡುವುದಲ್ಲ. ಇದು ನಿಶ್ಚಿತವಾದ ಸಿದ್ಧಾಂತ.   

ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ        ।
ಮೋಹಾತ್ ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ                       ॥೭॥

ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ          ।
ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ – ವಿಹಿತವಾದ ಕರ್ಮವನ್ನು ತೊರೆಯುವುದು ತರವಲ್ಲ. ಅರಿವುಗೆಟ್ಟು ಅದನ್ನು ತೊರೆವುದು ತಾಮಸ ತ್ಯಾಗ ಎನಿಸುತ್ತದೆ.

ಯಾವ ಕಾಲಕ್ಕೂ ನಾವು ನಮ್ಮ ನಿಯತಕರ್ಮವನ್ನು ತೊರೆಯಬಾರದು. ಒಂದು ವೇಳೆ ತಪ್ಪು ತಿಳುವಳಿಕೆಯಿಂದ ನಿಯತ ಕರ್ಮವನ್ನು ಬಿಟ್ಟರೆ ಆಗ ಅದು ತಾಮಸ ತ್ಯಾಗ ಎನಿಸುತ್ತದೆ. ಇಲ್ಲಿ ‘ನಿಯತಕರ್ಮ’ ಎಂದರೆ ನಮ್ಮ ಜೀವಯೋಗ್ಯತೆಗೆ ಯಾವುದು ನಿಯತವೋ ಆ ಕರ್ಮ. ನಮಗೆ ತಿಳಿದಂತೆ ಎಲ್ಲ ಕರ್ಮವನ್ನು ಎಲ್ಲರೂ ಮಾಡುವಂತಿಲ್ಲ. ಉದಾಹರಣೆಗೆ ಯಜ್ಞ: ಯತಿಗಳು ಅಗ್ನಿಮುಖದಲ್ಲಿ ಆಹುತಿ ನೀಡುವಂತಿಲ್ಲ; ಬ್ರಹ್ಮಚಾರಿಗಳು ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಂತಿಲ್ಲ. ಆದರೆ ಯತಿಗಳು ಜ್ಞಾನಯಜ್ಞ ಮಾಡಬಹುದು ಅದು ಅವರ ನಿಯತಕರ್ಮ. ಎಲ್ಲ ಕಾಲದಲ್ಲೂ ಎಲ್ಲರೂ ಮಾಡಬಹುದಾದ ಯಜ್ಞ ‘ನಾಮಯಜ್ಞ’. ಅಂದರೆ ಭಗವಂತನ ನಾಮ ಸ್ಮರಣೆ. ಇದು ಯಜ್ಞದಲ್ಲಿ ಎಲ್ಲರಿಗೂ ಅನ್ವಯಿಸುವ ನಿಯತಕರ್ಮ.  ಇನ್ನು ದಾನ: ಬ್ರಹ್ಮಚಾರಿಗಳು ಕನ್ಯಾದಾನ ಮಾಡಲಾಗುವುದಿಲ್ಲ, ಅದನ್ನು ಗೃಹಸ್ಥ ಮಾಡಬೇಕು. ಗೃಹಸ್ಥನಿಗೆ ಕನ್ಯಾದಾನ ನಿಯತಕರ್ಮ. ಎಲ್ಲರೂ ಮಾಡಬಹುದಾದ ದಾನ-ಅಭಯದಾನ ಮತ್ತು ಜ್ಞಾನದಾನ. ಮೂರನೆಯದು ತಪಸ್ಸು: ಕೆಲವು ತಪಸ್ಸನ್ನು ಎಲ್ಲರೂ ಮಾಡಲಾಗುವುದಿಲ್ಲ. ಅದಕ್ಕೆ ವೇದಧೀಕ್ಷೆ ಬೇಕಾಗಬಹುದು. ಆದರೆ ಎಲ್ಲರೂ ಮಾಡಬಹುದಾದ ತಪಸ್ಸು ಎಂದರೆ ಉಪವಾಸಾದಿ ವೃತಾನುಷ್ಠಾನಗಳು. ಈ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಬಹುದು. ಹೀಗೆ ಯಾರಿಗೆ ಯಾವ ಕರ್ಮ ನಿಯತವೋ ಆ ಕರ್ಮವನ್ನು ಮಾಡಬೇಕು. ನಿಯತ ಕರ್ಮದಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಲ್ಲ. ತಪ್ಪು ತಿಳುವಳಿಕೆಯಿಂದ ನಿಯತಕರ್ಮವನ್ನು ಬಿಟ್ಟರೆ ಅದು ತಾಮಸ ತ್ಯಾಗ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಈ ಶ್ಲೋಕದ ಮೂಲಕ ಕೊಟ್ಟಿದ್ದಾನೆ.   

ದುಃಖಮಿತ್ಯೇವ ಯತ್ ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್                  ॥೮॥

ದುಃಖಮ್ ಇತಿ ಏವ ಯತ್ ಕರ್ಮ ಕಾಯ ಕ್ಲೇಶ ಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಮ್  ತ್ಯಾಗಮ್  ನ ಏವ  ತ್ಯಾಗ ಫಲಮ್  ಲಭೇತ್ – ಮಾಡುವುದಕ್ಕೆ ಮೈಬಗ್ಗದೆ, ಬಗೆಯೊಗ್ಗದೆ, ಕಷ್ಟವಾಗುತ್ತದೆ ಎಂದು ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ದೊರೆಯದು.

ನಮಗೆ ನಮ್ಮ ನಿಯತಕರ್ಮ ಮಾಡಬೇಕು ಎನ್ನುವುದು ಗೊತ್ತಿದ್ದೂ, ಮನಸ್ಸಿಗೆ ದೇಹಕ್ಕೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ಮವನ್ನು ಮಾಡದೆ ಬಿಡುವುದು ರಾಜಸ ತ್ಯಾಗ ಎನಿಸುತ್ತದೆ. ಉದಾಹರಣೆಗೆ ಯಾವುದೋ ದೂರದರ್ಶನದ ದಾರಾವಾಹಿಯನ್ನು ನೋಡಬೇಕು ಎನ್ನುವ ಮನಸ್ಸಿನ ಉತ್ಕಟ ಬಯಕೆಯಿಂದ ಕರ್ಮವನ್ನು ಕೈಬಿಡುವುದು, ಚಳಿಯಾಗುತ್ತದೆ ಎಂದು ಸಂಧ್ಯಾವಂದನೆ ಮಾಡದೇ ಇರುವುದು, ಇತ್ಯಾದಿ ರಾಜಸ ತ್ಯಾಗ. ಇಂಥಹ ರಾಜಸ ತ್ಯಾಗ ಮಾಡಿದರೆ  ನಿಜವಾದ ತ್ಯಾಗದ ಫಲ ಸಿಗದು.

ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇSರ್ಜುನ  ।
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ                ॥೯॥

ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್  ಕ್ರಿಯತೇ ಅರ್ಜುನ  ।
ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ  ತ್ಯಾಗಃ  ಸಾತ್ತ್ವಿಕಃ  ಮತಃ – ಅರ್ಜುನ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೆ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ.

ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ ಬಿಡಲು ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೆ ಇರುವುದು; ಎಲ್ಲ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು-  ಸಾತ್ತ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು.
ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, ‘ಎಲ್ಲವೂ ಮೂಢನಂಬಿಕೆ’ ಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ ತ್ಯಾಗ.  

ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ                 ॥೧೦॥

ನ ದ್ವೇಷ್ಟಿ ಅಕುಶಲಮ್  ಕರ್ಮ ಕುಶಲೇ ನ ಅನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟಃ ಮೇಧಾವೀ ಛಿನ್ನಸಂಶಯಃ – ಮುದ ನೀಡದ ಕರ್ಮದ ಬಗ್ಗೆ ಹಗೆಯೂ ಇಲ್ಲ, ಮುದ ನೀಡುವ ಕರ್ಮದ ಬಗ್ಗೆ ಅತಿಯಾದ ನಂಟೂ ಇಲ್ಲ. ಇಂಥವನು ಸಾತ್ವಿಕ-ತ್ಯಾಗಿ. ಅವನು ತಿಳಿದವನು ಮತ್ತು ಸಂದೇಹವಳಿದವನು.

ಈ ಶ್ಲೋಕ ಒಬ್ಬ ಸಾತ್ವಿಕ ತ್ಯಾಗಿ ಯಾವ ರೀತಿ ತನ್ನ ಕರ್ಮಗಳನ್ನು ನೋಡುತ್ತಾನೆ ಎನ್ನುವುದನ್ನು ಹೇಳುತ್ತದೆ. ನಾವು ಮಾಡಿದ ಹಿಂದಿನ ಯಾವುದೋ ಒಂದು ಕರ್ಮದಿಂದ ಇಂದು ಕೆಟ್ಟ ಪರಿಣಾಮ ಆಗುತ್ತಿದ್ದರೆ, ಅಥವಾ ಹಿಂದೆ ಮಾಡಿದ ಇನ್ಯಾವುದೋ ಕರ್ಮದಿಂದ ಒಳ್ಳೆಯದು ಆಗುತ್ತಿದ್ದರೆ, ಸಾತ್ವಿಕ ತ್ಯಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಒಳ್ಳೆಯದಾಯಿತು ಎಂದು ಹಾರಾಡುವುದಿಲ್ಲ, ಕೆಟ್ಟದ್ದಾಯಿತು ಎಂದು ಕುಸಿಯುವುದಿಲ್ಲ. ಈತ ದುಃಖಕಾರವಾದ ಕರ್ಮವನ್ನು ದ್ವೇಷಿಸುವುದೂ ಇಲ್ಲ. ಔಷಧಿ ಹೇಗೆ ಕಹಿ ಇರುತ್ತದೋ ಹಾಗೇ ಸತ್ಕರ್ಮ ಕಿಂಚಿತ್ ದುಃಖಕರವಾದಾಗ ಅದರ ಬಗ್ಗೆ ಆತ ಚಿಂತೆ ಮಾಡುವುದಿಲ್ಲ.
ಸಾತ್ವಿಕ ತ್ಯಾಗಿಯ ಮನಸ್ಸು ಸತ್ತ್ವಗುಣದಲ್ಲಿ ತುಂಬಿರುತ್ತದೆ. ಅವನಿಗೆ ತಾಮಸ-ರಾಜಸ ಚಿಂತೆಗಳೇ ಬರುವುದಿಲ್ಲ. ಬಲಜ್ಞಾನಗಳಿಂದ ಪರಿಪೂರ್ಣನಾದ ಭಗವಂತನಲ್ಲಿ ಎಲ್ಲವನ್ನು ಅರ್ಪಿಸಿ ಆತ ಕರ್ಮ ಮಾಡುತ್ತಿರುತ್ತಾನೆ. ಇದರಿಂದ ಆತನ ಮನಸ್ಸು ಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತದೆ. ಮೇಧಾವಿಯಾಗಿರುವ ಈತನಿಗೆ ತನ್ನ ಬದುಕಿನ ಪ್ರತೀ ನಡೆಯ ಎಚ್ಚರವಿರುತ್ತದೆ. ಭಗವಂತನಲ್ಲಿ ನೆಲೆಗೊಂಡ ಇಂಥವರ ಮನಸ್ಸಿಗೆ ಎಂದೂ ಯಾವ ಗೊಂದಲವೂ ಸುಳಿಯುವುದಿಲ್ಲ. ಇಂಥವರ ಜೀವನದ ನಡೆ ನೋಡಲು ಸಾಮಾನ್ಯವಾಗಿರುತ್ತದೆ ಆದರೆ ಅವರ ಕ್ರಿಯೆಯ ಹಿಂದಿನ ಅನುಸಂಧಾನ ಮಾತ್ರ ಭಿನ್ನವಾಗಿರುತ್ತದೆ. ಇವರು “ಭಗವಂತ ನೀನು ಮಾಡಿಸುತಿದ್ದಿ-ನಾನು ಮಾಡುತ್ತಿದ್ದೇನೆ” ಎನ್ನುವ ಅನುಸಂಧಾನದಿಂದ ತಮ್ಮ ಕರ್ಮವನ್ನು ಮಾಡುತ್ತಿರುತ್ತಾರೆ.  

No comments:

Post a Comment