Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, December 1, 2011

Bhagavad GitA in Kannada Chapter-15 Shloka-3-4


ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನಚಾSದಿರ್ನ ಚ ಸಂಪ್ರತಿಷ್ಠಾ
ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ

ತತಃ ಪದಂತ್ ಪರಿಮಾರ್ಗಿತವ್ಯಂ ಯಸ್ಮಿನ್ ಗತಾ ನ ನಿವರ್ತಂತಿ ಭೂಯಃ
ತಮೇವ ಚಾSದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ

ನ ರೂಪಮ್ ಅಸ್ಯ ಇಹ ತಥಾ ಉಪಲಭ್ಯತೇ ನ ಅಂತಃ  ನ ಚ ಆದಿಃ ನ ಚ ಸಂಪ್ರತಿಷ್ಠಾ
ಅಶ್ವತ್ಥಮ್ ಏಮ್ ಸು ವಿರೂಢ ಮೂಲಮ್ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ  ||
ತತಃ ಪದಂತ್ ಪರಿಮಾರ್ಗಿತವ್ಯಮ್  ಯಸ್ಮಿನ್ ಗತಾಃ  ನ ನಿವರ್ತಂತಿ ಭೂಯಃ
ಮ್ ಏವ ಚದ್ಯಮ್  ಪುರುಷಮ್ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ –-ಇದರ ಇರವು ಇದ್ದ ಹಾಗೆ ಕಾಣಿಸುವುದಿಲ್ಲ. ಇದರ ಕೊನೆ ಕಾಣದು; ಬುಡ ಕಾಣದು; ನೆಲೆ ಕೂಡ. ಬಲವಾಗಿ ಬೇರೂರಿದ ಈ ಅರಳಿಯನ್ನು ಅನಾಸಕ್ತಿಯೆಂಬ ಹರಿತವಾದ ಕತ್ತಿಯಿಂದ ತರಿದು, ಅನಂತರ ಆ ಪರತತ್ವವನ್ನು ಅರಸಬೇಕು. ಅವನನ್ನು ಸೇರಿದವರು ಮತ್ತೆ ಮರಳುವುದಿಲ್ಲ. ಅವನಿಂದಲೆ ಈ ಪುರಾತನವಾದ ಪಯಣ ಪ್ರಾರಂಭವಾಯಿತು. ಎಲ್ಲದರ ಮೊದಲಿರುವ ಆ ಪರಮ ಪುರುಷನಿಗೇ ಶರಣಾಗಬೇಕು. 

ವಿಶ್ವವನ್ನು ಇಲ್ಲಿ ವಿವರಿಸಿದಷ್ಟು ಸ್ಪಷ್ಟವಾಗಿ ಎಲ್ಲಿಯೂ ವರ್ಣಿಸಿಲ್ಲ. ಇತರೆಡೆ ಸ್ವಲ್ಪ ಸ್ವಲ್ಪ ವಿವರಣೆ ಕಾಣಬಹುದು. ಆದರೆ ಕೃಷ್ಣ ಇಲ್ಲಿ ಪೂರ್ಣ ವಿವರಣೆ ಕೊಟ್ಟ. ಇಷ್ಟು ವಿವರಿಸಿದ ಮೇಲೆ ಕೃಷ್ಣ ಒಂದು ಎಚ್ಚರವನ್ನು ಕೊಡುತ್ತಾನೆ. ಕೃಷ್ಣ ಹೇಳುತ್ತಾನೆ: “ಈ ಪ್ರಪಂಚದಲ್ಲೇ ಇದ್ದು ಪ್ರಪಂಚವನ್ನು ನೋಡಿದರೆ ನಾನು ವರ್ಣಿಸಿದ ಅಖಂಡ ದರ್ಶನ ಸಾಧ್ಯವಿಲ್ಲ” ಎಂದು.  ನಮಗೆ ಯಾವ ವಸ್ತುವನ್ನು ಕೂಡ ಪರಿಪೂರ್ಣವಾಗಿ ಸಮಗ್ರವಾಗಿ ತಿಳಿದುಕೊಳ್ಳಲು ಆಗುವುದೇ ಇಲ್ಲ. ಏಕೆಂದರೆ ಇಡೀ ವಿಶ್ವವನ್ನು ತಿಳಿಯದೆ ವಿಶ್ವದ ಒಂದು ಚಿಕ್ಕ  ಕಣ ಅರ್ಥವಾಗದು. ಸಮುದ್ರದ ತೀರದಲ್ಲಿನ ಒಂದು ಕಪ್ಪೆ ಸಮುದ್ರದ ಆಳ-ಅಗಲ ಮತ್ತು ಸಮುದ್ರದ ಅಗಾಧತೆಯನ್ನು ಹೇಗೆ ತಿಳಿಯಲಾರದೋ, ಹಾಗೆ ನಾವು ಈ ಪ್ರಪಂಚವನ್ನು ಪೂರ್ಣ ತಿಳಿಯಲು ಸಾಧ್ಯವಿಲ್ಲ.
ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು? ಅದು ಪ್ರಳಯ ಕಾಲದಲ್ಲಿ ನಾಶವಾಗಿ ಎಲ್ಲಿಗೆ ಹೋಗುತ್ತದೆ? ಈ ಆಕಾಶದಲ್ಲಿ ಎಲ್ಲ ಗ್ರಹ ಗೋಲಗಳು ನಿರಾಧಾರವಾಗಿ ಹೇಗೆ ನಿಂತಿವೆ? ನಾವು ಈ ರೀತಿ ಪ್ರಶ್ನೆ ಹಾಕುತ್ತಾ ಹೋದರೆ ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ವಿಜ್ಞಾನದಲ್ಲಿ ಕೂಡ ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಏಕೆಂದರೆ ವಿಜ್ಞಾನ ನಿಂತಿರುವುದು ಕೇವಲ ಕಲ್ಪನೆಯ ಗೋಪುರದ ಮೇಲೆ.
ಋಗ್ವೇದದಲ್ಲಿ ಪ್ರಳಯ ಕಾಲದ ಸ್ಥಿತಿಯನ್ನು ವಿವರಿಸುತ್ತ ಹೇಳುತ್ತಾರೆ: “ನಾಸದಾಸೀನ್ನೋSಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ....||೧೦.೧೨೯-೧|| : ಅಂದರೆ ಕಣ್ಣಿಗೆ ಕಾಣುವಂತದ್ದೂ ಇಲ್ಲ; ಕಣ್ಣಿಗೆ ಕಾಣದ್ದೂ ಇಲ್ಲ; ಈ ಲೋಕಗಳೆ ಪ್ರಳಯಕಾಲದಲ್ಲಿ ಇಲ್ಲ ಎಂದು. ಹಾಗಾದರೆ ಏನೂ ಇಲ್ಲದೆ ಈ ಪ್ರಪಂಚ ಸೃಷ್ಟಿಯಾಯಿತೆ? ಛಾಂದೋಗ್ಯ ಉಪನಿಷತ್ತಿನಲ್ಲಿ 'ಏನೂ ಇಲ್ಲದೆ ಎಲ್ಲವೂ ಹುಟ್ಟಿತು' ಅನ್ನುವುದನ್ನು ಖಂಡನೆ ಮಾಡುತ್ತ ಹೇಳುತ್ತಾರೆ: “ ಕಥಮಸತಃ ಸಜ್ಜಾಯೇತಃ...||೬.೨.೨||” ಎಂದು. ಪ್ರಳಯ ಕಾಲದಲ್ಲಿ ಭಗವಂತ ಪ್ರಳಯ ಸಮುದ್ರದಲ್ಲಿ ಮಲಗಿರುತ್ತಾನೆ ಎನ್ನುವುದನ್ನು ನಾವೆಲ್ಲರೂ ಕೇಳಿದ್ದೇವೆ. ಈ ಲೋಕವೇ ಇಲ್ಲದಿರುವಾಗ, ಯಾವ ಸಮುದ್ರ? ಯಾವ ನೀರು? ಇದೆಲ್ಲವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
 ಸಂಕ್ಷಿಪ್ತವಾಗಿ ಹೇಳಬೇಕೆಂದರೆ: ಪ್ರಳಯ ಕಾಲದಲ್ಲಿ ಎಲ್ಲವೂ ಸಿಡಿದು ಪರಮಾಣುವಿನ ರೂಪವನ್ನು ಪಡೆಯುತ್ತವೆ.  ಇದೇ ಪ್ರಳಯ ಸಮುದ್ರ. ಈ ಕಾಲದಲ್ಲಿ ಎಲ್ಲ ಜೀವ ಜಾತಗಳು ತಮ್ಮ ಸ್ಥೂಲ ಶರೀರವನ್ನು ಕಳಚಿಕೊಂಡು ಸೂಕ್ಷ್ಮಶರೀರದಲ್ಲಿ ತಮ್ಮ ಇರವಿನ ಅರಿವೂ ಇಲ್ಲದೆ ಭಗವಂತನ ಒಡಲಿನಲ್ಲಿರುತ್ತವೆ. ಸೃಷ್ಟಿ ಕಾಲದಲ್ಲಿ ಹಂತ ಹಂತವಾಗಿ ಈ ಪ್ರಪಂಚ ರೂಪುಗೊಳ್ಳುತ್ತದೆ. ಇದೆಲ್ಲವನ್ನು ಮಾಡುವವ ಆ ಭಗವಂತ. ಇಂಥಹ ಪ್ರಪಂಚ ತಲೆ-ಬುಡ-ನಡು ಯಾವುದೂ ತಿಳಿಯದಷ್ಟು ಆಳವಾಗಿದೆ. ಇದಕ್ಕಾಗಿ ನಾವು ಯಾವುದನ್ನು ತಿಳಿದರೆ ಎಲ್ಲವನ್ನು ತಿಳಿಯಬಹುದೋ ಅದನ್ನು ಮೊದಲು ತಿಳಿಯಬೇಕು. ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ಧಾಲಕ ಗುರುಕುಲದಲ್ಲಿ ಹನ್ನೆರಡು ವರ್ಷ ವಿದ್ಯಾಭಾಸ ಮುಗಿಸಿಕೊಂಡು ಬಂದು, ತನ್ನೆದುರು ಅಹಂಕಾರದಿಂದ ಸೆಟೆದು ನಿಂತ ಮಗ ಶ್ವೇತಕೇತುವನ್ನು ಉದ್ದೇಶಿಸಿ ಕೇಳುತ್ತಾನೆ: “ಉತ ತಂ ಆದೇಷ್ಯಂ ಅಪ್ರಾಕ್ಷ್ಯಃ; ಎನಾಶ್ರುತಂ ಶ್ರುತಂ ಭವತಿ, ಅಮತಂ ಮತಂ ಅವಿಜ್ಞಾತಂ ವಿಜ್ಞಾತಂ..||೬.೧.೩||”  “ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ, ಅದು ತಿಳಿಯಿತೇ?” ಎಂದು. ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ ಅದನ್ನು ತಿಳಿವುದಕ್ಕೊಸ್ಕರ ಆ ಪರಶಕ್ತಿಯಲ್ಲಿ ಶರಣಾಗು” ಎಂದು. ಮುಂಡಕ ಉಪನಿಷತ್ತೂ ಕೂಡ ಇದನ್ನೇ ಹೇಳುತ್ತದೆ: “ಯಸ್ಮಿನ್ ವಿಜ್ಞಾತೇ ಸರ್ವಮೇವಂ ವಿಜ್ಞಾತಂ ಭವತಿ.. || ೧.೩||”.  
ಭಗವಂತನನ್ನು ತಿಳಿದರೆ ಎಲ್ಲವನ್ನು ತಿಳಿದಂತೆ ಎನ್ನುವುದೇನೋ ಸರಿ, ಆದರೆ ಅವನನ್ನು ಅರಿಯುವ ಪರಿ ಯಾವುದು? ಈ ಅಖಂಡವಾಗಿ ಬೇರೂರಿರುವ ಮರದ ಮೂಲವನ್ನು ಸೇರುವುದು ಹೇಗೆ? ಇದಕ್ಕೆ ಕೃಷ್ಣ ಹೇಳುತ್ತಾನೆ: “ಜ್ಞಾನವೆಂಬ ಕತ್ತಿಯನ್ನು, ಅನಾಸಕ್ತಿ(detachment) ಮತ್ತು ಉಪಾಸನೆ ಎನ್ನುವ ಸಾಣೆಯ ಕಲ್ಲಿನಲ್ಲಿ ಹರಿತಗೊಳಿಸಿ, ಆಳವಾಗಿ ಬೇರೂರಿರುವ ಮರವನ್ನು ತರಿದು, ಪರತತ್ವವನ್ನು ಹುಡುಕು” ಎಂದು.  ನಾವು ಎಲ್ಲಿಗೆ ಹೋದರೆ ಮರಳಿ ಇಲ್ಲಿಗೆ ಬರುವುದು ಬೇಡವೋ, ಅದನ್ನು ಅನ್ವೇಷಣೆ ಮಾಡಬೇಕು. ಭಗವಂತನ ಇತಿಮಿತಿರಾಹಿತ್ಯವನ್ನು ಅರಿಯುವ ಜ್ಞಾನವೇ ಇದಕ್ಕೆ ಕೊಡಲಿ. ಇಲ್ಲಿಯೂ ಕೂಡ ನಾವೇ ನಮ್ಮ ಪ್ರಯತ್ನದಿಂದ ಮೂಲವನ್ನು ಸೇರಲು ಸಾಧ್ಯವಿಲ್ಲ. ಆ ಶಕ್ತಿ ನಮಗಿಲ್ಲ. ಅದಕ್ಕಾಗಿ ಇರುವ ಒಂದೇ ಮಾರ್ಗ ಆ ಪರಶಕ್ತಿಯಲ್ಲಿ ಶರಣಾಗುವುದು. ಆತನ ಅನುಗ್ರಹದಿಂದ ಮಾತ್ರ  ನಾವು ಆ ಪುರುಷೋತ್ತಮನನ್ನು ಸೇರಬಹುದು.  

No comments:

Post a Comment