Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, October 25, 2011

Bhagavad Gita Kannada Chapter-13 Shloka-7


ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(code of conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(discipline)ಗಳನ್ನು ಕೃಷ್ಣ ಮುಂದಿನ ಐದು ಶ್ಲೋಕಗಳಲ್ಲಿ ವಿವರಿಸುತ್ತಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎನ್ನುವ ಎಚ್ಚರವನ್ನು ಕೂಡ ಕೃಷ್ಣ  ಇಲ್ಲಿ ಕೊಟ್ಟಿದ್ದಾನೆ.

ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ                

ಅಮಾನಿತ್ವಮ್ ಅಡಂಭಿತ್ವಮ್ ಅಹಿಂಸಾ ಕ್ಷಾಂತಿಃ ಆರ್ಜವಮ್
ಚಾರ್ಯ ಉಪಾಸನಮ್ ಶೌಚಮ್  ಸ್ಥೈರ್ಯಮ್ ಆತ್ಮವಿನಿಗ್ರಹಃ -- ಬಿಂಕ ತೊರೆಯುವುದು, ಹಿರಿತನದ ಸೋಗು ಹಾಕದಿರುವುದು, ನೋಯಿಸದಿರುವುದು, ಸೈರಣೆ, ನೇರ ನಡೆ ನುಡಿ, ಗುರುಸೇವೆ, ಮೈಮನಗಳ ಮಡಿ, ಕದಲದ ತೀರ್ಪು, ಬಗೆಯ ಬಿಗಿತ,

(೧) ಅಮಾನಿತ್ವಮ್: ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರೀಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು- ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ- ಅಲ್ಲಿ ನಮ್ರತೆಯಿಂದಿರು. 
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೆ ಇರುವುದು ಅಹಿಂಸೆ.
(೪)  ಕ್ಷಾಂತಿಃ :  ಪ್ರತಿಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ  ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೆ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲಿ  ಶಾಪ ಹಾಕುವುದಕ್ಕಾಗಲಿ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್: ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವನು. ತಾನು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು  ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್: ಶೌಚ ಎಂದರೆ ಶುಚಿತ್ವ. ಈ ವಿಷಯವನ್ನು ಹಿಂದಿನ ಅಧ್ಯಾಯದಲ್ಲಿ ಸ್ವಲ್ಪ ಮಟ್ಟಿಗೆ ನೋಡಿದ್ದೇವೆ. ಕನ್ನಡದಲ್ಲಿ ಶೌಚಮ್ ಎಂದರೆ ‘ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ.  ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟಿದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯೇನ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ  ನಾವು ಮೈಲಿಗೆ. ನಿಜವಾಗಿ ಕಾಯೇನ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ  ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆ ‘ಪಂಕ್ತಿಪಾವನ’ ಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಯಾಮ. “ಓ ಭಗವಂತ,  ನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು, ನನ್ನೊಳಗಿನ ಎಲ್ಲ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿ” ಎನ್ನುವ ಅನುಸಂಧಾನದಿಂದ,  ಧ್ಯಾನಪೂರ್ವಕ ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. “ಓ ನೀರೆ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡು” ಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನು ನಾವು ತಿಳಿದು ಮಾಡಿದಾಗ ಮಾತ್ರ  ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction)ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. “ಎಲ್ಲಿ ಪ್ರಶ್ನೆ ಇದೆಯೊ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.   
(೯) ಆತ್ಮವಿನಿಗ್ರಹಃಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.           

1 comment:

  1. Bhagavad Gita In Kannada: Bhagavad Gita Kannada Chapter-13 Shloka-7 >>>>> Download Now

    >>>>> Download Full

    Bhagavad Gita In Kannada: Bhagavad Gita Kannada Chapter-13 Shloka-7 >>>>> Download LINK

    >>>>> Download Now

    Bhagavad Gita In Kannada: Bhagavad Gita Kannada Chapter-13 Shloka-7 >>>>> Download Full

    >>>>> Download LINK 3u

    ReplyDelete