Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, October 16, 2011

Bhagavad Gita Kannada Chapter-13 Shloka 1-4


ಅಧ್ಯಾಯ ಹದಿಮೂರು

ಇದು ಭಗವದ್ಗೀತೆಯ ಮೂರನೇ ಷಟ್ಕದ  ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಈ ಅಧ್ಯಾಯ. ಜಡಪ್ರಪಂಚ, ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ- ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿಕ್ಷಿಪ್ತವಾಗಿ ನೋಡಿದ್ದೇವೆ. ಅದೆಲ್ಲವುದರ ಒಂದು ಸಮಷ್ಠಿ ಸಂಗ್ರಹ(ಸರ್ವಾರ್ತ ಸಂಕ್ಷೇಪಃ) ಈ ಅಧ್ಯಾಯ. ಈ ಅಧ್ಯಾಯ ಗೀತೆಯಲ್ಲಿ ಅತ್ಯಂತ ಗ್ರಾಹ್ಯವಾದ ಅಧ್ಯಾಯ.

ಇಲ್ಲಿ ಪ್ರಾರಂಭದಲ್ಲಿ ಒಂದು ಶ್ಲೋಕವಿದೆ. ಈ ಅಧ್ಯಾಯದಲ್ಲಿ ಮುಂದೆ ಏನು ವಿವರಣೆ ಬರುತ್ತದೆ ಅದನ್ನು ತಾನು ತಿಳಿಯಬೇಕೆಂದು ಅರ್ಜುನ ಕೃಷ್ಣನನ್ನು ಕೇಳುವ ಶ್ಲೋಕ. ಈ ಶ್ಲೋಕ ಹೀಗಿದೆ:

ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |
ಏತದ್ ವೇದಿತುಮಿಚ್ಛಾಮಿ ಜ್ಞಾನಂ  ಜ್ಞೇಯಂ ಚ ಕೇಶವ ||

ಅರ್ಥಾತ್- “ಕೇಶವ, ನಾನಿದನ್ನು ತಿಳಿಯಬಯಸುತ್ತೇನೆ: ಪ್ರಕೃತಿಯನ್ನು, ಪುರುಷನನ್ನು, ಕ್ಷೇತ್ರವನ್ನು, ಕ್ಷೇತ್ರಜ್ಞನನ್ನು, ಜ್ಞಾನವನ್ನು ಮತ್ತು   ಜ್ಞೇಯವನ್ನು”.

ವಾಸ್ತವವಾಗಿ ಈ ಶ್ಲೋಕ ಭಗವದ್ಗೀತೆಯ ಶ್ಲೋಕವಲ್ಲ. ಪ್ರಾಚೀನ ಭಾಷ್ಯಕಾರರು ಯಾರೂ ಈ ಶ್ಲೋಕವನ್ನು ಗೀತೆಯ ಶ್ಲೋಕವೆಂದು ಪರಿಗಣಿಸಿಲ್ಲ. ಬಹಳ ಮಂದಿಯ ಅಭಿಪ್ರಾಯದಂತೆ ಇದು ಪ್ರಕ್ಷಿಪ್ತಶ್ಲೋಕ.  ಗೀತೆಯಲ್ಲಿ ಒಟ್ಟು ಏಳುನೂರು ಶ್ಲೋಕಗಳಿವೆ. ಅದಕ್ಕಾಗಿ ಗೀತೆಯನ್ನು ‘ಸಪ್ತಶತಿ’ ಎಂದು ಕರೆಯುತ್ತಾರೆ. [ಇದಕ್ಕಾಗಿ ವಾದಿರಾಜರು ತಮ್ಮ ಯುಕ್ತಿಮಲ್ಲಿಕಾದಲ್ಲಿ ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯನ್ನು ರಚಿಸಿದ ವೇದವ್ಯಾಸರನ್ನು ‘ಸೂತ್ರಸಪ್ತಶತೀಪತೇ’ ಎಂದು ಸಂಬೊಧಿಸಿದ್ದಾರೆ]. ಇಂಥಹ ಏಳುನೂರು ಶ್ಲೋಕಗಳಿರುವ ಭಗವದ್ಗೀತೆಗೆ ಈ ಮೇಲಿನ ಶ್ಲೋಕವನ್ನು ಸೇರಿಸಿದರೆ ಒಟ್ಟು ಏಳುನೂರ ಒಂದು ಶ್ಲೋಕವಾಗುತ್ತದೆ. ಇನ್ನು ಈ ಶ್ಲೋಕದಲ್ಲಿ ಕೇಳಲಾದ ಪ್ರಶ್ನೆಗೆ ಸಂಬಂಧಪಟ್ಟಂತೆ ಹಿಂದಿನ ಅಧ್ಯಾಯದ ಕೊನೆಯಲ್ಲಿ ಎಲ್ಲೂ ಕೃಷ್ಣ ಉಲ್ಲೇಖ ಮಾಡಿಲ್ಲ. ಈ ಕಾರಣದಿಂದ  ಇಲ್ಲಿ ಅರ್ಜುನ ಈ ರೀತಿ ಪ್ರಶ್ನೆ ಮಾಡುವ ಸಾಧ್ಯತೆ ಇಲ್ಲ. ಆದ್ದರಿಂದ ಈ ಶ್ಲೋಕ ಪ್ರಕ್ಷಿಪ್ತಶ್ಲೋಕ. ಗೀತೆಯ ಏಳುನೂರು ಶ್ಲೋಕಗಳಲ್ಲಿ ಇದು ಸೇರಿಲ್ಲ.

ನೇರವಾಗಿ ಕೃಷ್ಣ ಅರ್ಜುನನಿಗೆ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎನ್ನುವುದರ ಶಾಸ್ತ್ರೀಯ ಅರ್ಥವನ್ನು ವಿವರಿಸುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ.     

ಭಗವಾನುವಾಚ
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ
ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ

ಭಗವಾನ್ ಉವಾಚ-ಭಗವಂತ ಹೇಳಿದನು:
ಇದಮ್  ಶರೀರಮ್  ಕೌಂತೇಯ ಕ್ಷೇತ್ರಮ್ ಇತಿ ಅಭಿಧೀಯತೇ
ಏತತ್ ಯಃ ವೇತ್ತಿ ತಮ್  ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್ ವಿದಃ –ಭಗವಂತನ ಶರೀರದಂತಿರುವ ಈ ಚರಾಚರ ವಿಶ್ವ ‘ಕ್ಷೇತ್ರ’ ಎನಿಸಿದೆ. ಇದನ್ನು ಅರಿತವನನ್ನು ಬಲ್ಲವರು ‘ಕ್ಷೇತ್ರಜ್ಞ’ ಎನ್ನುತ್ತಾರೆ.

‘ಕ್ಷೇತ್ರ’ ಅನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವಿಲ್ಲ. ಈ ಶ್ಲೋಕದಲ್ಲಿ ಕ್ಷೇತ್ರಂ ಅನ್ನುವ ಪದವನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎನ್ನುವ ಸುಳಿವನ್ನು ಕೃಷ್ಣ ಕೊಟ್ಟಿದ್ದಾನೆ. ಕ್ಷೇತ್ರ ಎಂದರೆ ‘ಇದಂ ಶರೀರಂ’ ಎಂದಿದ್ದಾನೆ ಕೃಷ್ಣ. ಆದ್ದರಿಂದ ಇಲ್ಲಿ ಕ್ಷೇತ್ರ ಎಂದರೆ ಜೀವ ವಾಸಮಾಡುವ ನೆಲೆಮನೆ ಪಿಂಡಾಂಡದಿಂದ- ಬ್ರಹ್ಮಾಂಡದ ತನಕ ಎಲ್ಲವೂ ಹೌದು. ಈ ಬ್ರಹ್ಮಾಂಡಕ್ಕೆ 'ಕ್ಷೇತ್ರ ಮತ್ತು ಶರೀರ' ಅನ್ನುವುದು ಅನ್ವರ್ಥನಾಮ(epithet). ಇಂಥಹ ಕ್ಷೇತ್ರವನ್ನು ಯಾರು ಸಮಗ್ರವಾಗಿ ತಿಳಿದಿದ್ದಾನೋ ಅವನು 'ಕ್ಷೇತ್ರಜ್ಞ'. ಯಾರೀತ? ಮುಂದಿನ ಶ್ಲೋಕದಲ್ಲಿ ನೋಡೋಣ.

ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ ತಜ್ ಜ್ಞಾನಂ ಮತಂ ಮಮ        

ಕ್ಷೇತ್ರಜ್ಞಮ್  ಚಪಿ ಮಾಮ್  ವಿದ್ಧಿ ಸರ್ವ ಕ್ಷೇತ್ರೇಷು ಭಾರತ
ಕ್ಷೇತ್ರ ಕ್ಷೇತ್ರಜ್ಞಯೋ ಜ್ಞಾನಮ್ ತ್ ತತ್  ಜ್ಞಾಮ್ ಮತಮ್  ಮಮ –ಓ ಭಾರತ, ಎಲ್ಲ ಕ್ಷೇತ್ರಗಳಲ್ಲಿ ನೆಲೆಸಿರುವ ನನ್ನನ್ನೆ ‘ಕ್ಷೇತ್ರಜ್ಞ’ನೆಂದು ತಿಳಿ. ಕ್ಷೇತ್ರ ಮತ್ತು  ಕ್ಷೇತ್ರಜ್ಞರ  ಅರಿವೆ ನಿಜವಾದ ‘ಜ್ಞಾನ’ ಎನ್ನುವುದು ನನ್ನ ಅಭಿಪ್ರಾಯ.

ಒಳಗೂ ಹೊರಗೂ ತುಂಬಿರುವ, ಎಲ್ಲ ಕ್ಷೇತ್ರದಲ್ಲಿರುವ ಭಗವಂತನೇ ಕ್ಷೇತ್ರಜ್ಞ. ಜೀವ ಕೇವಲ ಕ್ಷೇತ್ರಸ್ಥ. ನಿಜವಾದ ಜ್ಞಾನವೆಂದರೆ ವಿಶ್ವದ ಅರಿವು; ವಿಶ್ವದಲ್ಲಿ ತುಂಬಿರುವ ಭಗವಂತನ ಅರಿವು. ಈ ವಿಶ್ವದೊಳಗೆ ನಾವು ಹೇಗಿದ್ದೇವೆ? ಈ ವಿಶ್ವ ನಮಗೆ ಹೇಗೆ ಬಂಧಕವಾಗಿದೆ? ಈ ಬಂಧನವನ್ನು ಕಳಚಿಕೊಂಡು ಆ ವಿಶ್ವಾತ್ಮ ಭಗವಂತನನ್ನು ನಾವು ಸೇರುವುದು ಹೇಗೆ? ಈ ಅರಿವೇ ಜ್ಞಾನ. ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ ನಾವು ಹದಿನೈದು ಬೇಲಿಗಳ ಸೆರೆಮನೆಯಲ್ಲಿದ್ದೇವೆ. ಆದರೆ ಇದು ಶಿಕ್ಷೆಯಲ್ಲ, ಶಿಕ್ಷಣ. ಈ ಬಂಧನದಿಂದ ಪಾರಾಗಬೇಕಾದರೆ ಭವಮೋಚಕನಾದ ಕ್ಷೇತ್ರಜ್ಞನನ್ನು ತಿಳಿಯಬೇಕು. ಈ ಎಚ್ಚರವೇ ನಿಜವಾದ ಜ್ಞಾನ.    

ತ್ ಕ್ಷೇತ್ರಂ ಯಚ್ಚ ಯಾದೃಕ್ ಚ ದ್ ವಿಕಾರಿ ಯತಶ್ಚ ಯತ್    
ಸ ಚ ಯೋ ಯತ್ ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು

ತ್  ಕ್ಷೇತ್ರಮ್ ತ್ ಚ  ಯಾದೃಕ್ ಚ ತ್  ವಿಕಾರಿ ಯತಃ ಚ ಯತ್      
ಸಃ  ಚ ಯಃ ತ್ ಪ್ರಭಾವಃ ಚ ತತ್ ಸಮಾಸೇನ ಮೇ ಶೃಣು – ಆ ಕ್ಷೇತ್ರವೆಂದರೇನು? ಅದು ಎಂಥದು? ಅದರ ವಿಕಾರಗಳೇನು? ಅದರ ಪ್ರೇರಕ ಶಕ್ತಿ ಯಾರು? ಅವನು ಎಂಥವನು ? ಅವನ ಹಿರಿಮೆಗಳೇನು? ಅದನ್ನು ಅಡಕವಾಗಿ ನನ್ನಿಂದ ಕೇಳು.

ಮೊದಲು ಕ್ಷೇತ್ರವೆಂದರೇನು? ಬ್ರಹ್ಮಾಂಡ ಮತ್ತು ಪಿಂಡಾಂಡ ಹೇಗೆ ಮತ್ತು ಯಾವುದರಿಂದ ನಿರ್ಮಾಣವಾಗಿದೆ? ಅದರ ಗುಣಧರ್ಮವೇನು? ಅದು ಯಾವ ಯಾವ ರೀತಿ ರೂಪಾಂತರಗೊಳ್ಳುತ್ತದೆ? ಈ ಬದಲಾವಣೆಗಳು ಹೇಗಾಗುತ್ತದೆ? ಯಾರಿಂದ ಆಗುತ್ತದೆ? ಇದೆಲ್ಲವನ್ನು ಸೂತ್ರರೂಪವಾಗಿ ಸಂಕ್ಷಿಪ್ತವಾಗಿ, ಚುಟುಕಾಗಿ ನನ್ನಿಂದ ಕೇಳು.      

ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ

ಋಷಿಭಿಃ ಬಹುಧಾ ಗೀತಮ್  ಛಂದೋಭಿಃ ವಿವಿಧೈಃ ಪೃಥಕ್
ಬ್ರಹ್ಮಸೂತ್ರಪದೈಃ ಚ ಏವ ಹೇತುಮದ್ಭಿಃ ವಿನಿಶ್ಚಿತೈಃ –ಬಗೆಬಗೆಯ ಬೇರೆಬೇರೆ ಮಂತ್ರಗಳಿಂದ ಋಷಿಗಳು ಅದನ್ನು ಬಗೆಬಗೆಯಿಂದ ಹಾಡಿದ್ದಾರೆ. ಯುಕ್ತಿಯಿಂದ ನಿರ್ಣಯಿಸುವ ವೇದಾಂತ ಸೂತ್ರದ ನುಡಿಗಳು ಕೂಡ.

ಜ್ಞಾನಿಗಳು ಕೂಡ ಈ ವಿಚಾರವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅದು ಅವರ ಅನುಭವಕ್ಕೆ ಸೀಮಿತವಾಗಿರುತ್ತದೆ. ಬ್ರಹ್ಮಸೂತ್ರದಲ್ಲಿ ಹೇಳಿರುವ ವಿಚಾರ ಸುಲಭವಾಗಿ ಅರ್ಥವಾಗದು. ಆದ್ದರಿಂದ ನಿಜವನ್ನು ಕ್ಷೇತ್ರಜ್ಞನಾದ ನಾನೆ ನೇರವಾಗಿ ಹೇಳುತ್ತೇನೆ ಕೇಳು.  

No comments:

Post a Comment