Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, October 13, 2011

Bhagavad Gita Kannada Chapter-12 Shloka 15-17


ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ
ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ ೧೫

ಯಸ್ಮಾತ್ ನ ಉದ್ವಿಜತೇ ಲೋಕಃ  ಲೋಕಾತ್ ನ ಉದ್ವಿಜತೇ ಚ ಯಃ
ಹರ್ಷ ಮರ್ಷ ಯ ಉದ್ವೇಗೈಃ ಮುಕ್ತಃ ಯಃ ಸಃ  ಚ ಮೇ ಪ್ರಿಯಃ –ಯಾರಿಂದಲೂ ನೋಯದವನು, ಯಾರನ್ನೂ ನೋಯಿಸದವನು, ಹಮ್ಮಿನಿಂದ ಕೇಡಿಗೆಳೆಸದವನು, ರೇಗದವನು, ಅಂಜದವನು, ತಲ್ಲಣಗೊಳ್ಳದವನು-ಅವನು ನನಗೆ ಅಚ್ಚುಮೆಚ್ಚು.

ನಮ್ಮನ್ನು ನೋಡಿ ಇನ್ನೊಬ್ಬರು ಉದ್ವೇಗಗೊಳ್ಳಬಾರದು ಹಾಗು ನಾವು ಇನ್ನೊಬ್ಬರನ್ನು ಉದ್ವೇಗಗೊಳಿಸಬಾರದು. ಯಾರೂ ನಮ್ಮನ್ನು ನೋಡಿ ಅಸಹನೆ-ಅತೃಪ್ತಿ ತಾಳಬಾರದು ಮತ್ತು ಇನ್ನೊಬ್ಬರನ್ನು ನೋಡಿ ನಾವು ಅಸಹನೆ ತಾಳಬಾರದು. ಪ್ರಪಂಚವನ್ನು ಪ್ರೀತಿಸಿದಾಗ ಇದನ್ನು ಸಾಧಿಸಲು ಸಾಧ್ಯ. ಭಗವಂತ ಮೆಚ್ಚುವ ಕೆಲಸ ಮಾಡಿದಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಭಗವಂತ ಪ್ರೀತಿಸುವವರನ್ನು ಇಡೀ ಪ್ರಪಂಚವೇ ಪ್ರೀತಿಸುತ್ತದೆ.
ನಾವು ಹರ್ಷ ಮರ್ಷ ಯ ಮತ್ತು ಉದ್ವೇಗದಿಂದ ಮುಕ್ತರಾಗಬೇಕು.ಮಾಡಬಾರದ್ದನ್ನು ಮಾಡುವುದರಲ್ಲಿ ಹಿಗ್ಗು  ಹರ್ಷ; ಇನ್ನೊಬ್ಬರು ಮಾಡಬೇಕಾದ್ದನ್ನು ಮಾಡಿದಾಗ ಅದನ್ನು ನೋಡಿ ಹೊಟ್ಟೆಕಿಚ್ಚು ಪಡುವುದು ಅಮರ್ಷ. ಹರ್ಷ ಅಮುರ್ಷದಿಂದ ನಾವು ಮುಕ್ತರಾಗಬೇಕು. ಹೆದರುವಂತಹ ಕೆಲಸ ಮಾಡಬೇಡ ಮತ್ತು ತಪ್ಪು ಮಾಡದಿದ್ದಾಗ ಭಯಬೇಡ. ಇನ್ನೊಬ್ಬರನ್ನು ನಾವು ಸಂಶಯ ದೃಷ್ಟಿಯಿಂದ ನೋಡಿದರೆ ಅವರೂ ನಮ್ಮನ್ನು ಸಂಶಯ ದೃಷ್ಟಿಯಿಂದ ನೋಡುತ್ತಾರೆ, ಇನ್ನೊಬ್ಬರನ್ನು ನಂಬದಿದ್ದಾಗ ಅವರೂ ನಮ್ಮನ್ನು ನಂಬುವುದಿಲ್ಲ. ಇದರಿಂದ ಉದ್ವೇಗ. “ಜೀವನದಲ್ಲಿ ಎಲ್ಲರನ್ನು ಪ್ರೀತಿಸುವವರು, ಹರ್ಷ ಮರ್ಷ ಯ ಮತ್ತು ಉದ್ವೇಗದಿಂದ ಮುಕ್ತರಾದವರು-ನನಗೆ ಪ್ರಿಯ” ಎನ್ನುತ್ತಾನೆ ಕೃಷ್ಣ.

ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ
ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ       ೧೬

ಅನಪೇಕ್ಷಃ ಶುಚಿಃ ದಕ್ಷಃ ಉದಾಸೀನಃ ಗತವ್ಯಥಃ
ಸರ್ವ ಆರಂಭ ಪರಿತ್ಯಾಗೀ ಯಃ ತ್ ಭಕ್ತಃ ಸಃ ಮೇ ಪ್ರಿಯಃ –ಏನನ್ನೂ ಬಯಸದವನು, ಚೊಕ್ಕವಾಗಿ ಚುರುಕಾಗಿರುವವನು, ಯಾವುದನ್ನೂ ಹಚ್ಚಿಕೊಳ್ಳದವನು, ಕಂಗೆಡದವನು, ಭಗವಂತನ ಆರಾಧನೆಯಲ್ಲದ ಯಾವ ತೊಡಗುವಿಕೆಯಲ್ಲು ತೊಡಗದವನು,[ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ನಾನು-ನನ್ನದು ಎಂಬ ಹಮ್ಮು ತೊರೆದವನು], ಇಂಥ ನನ್ನ ಭಕ್ತ ನನಗೆ ಅಚ್ಚುಮೆಚ್ಚು.

ತನ್ನ ಭಕ್ತನಲ್ಲಿರಬೇಕಾದ, ಭಕ್ತಿಗೆ ಪೂರಕವಾದ ಆರು ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ.  
(೧) ಅನಪೇಕ್ಷಃ : ಅದು ಬೇಕು ಇದು ಬೇಕು ಎಂದು ಬಯಸದೆ ಇರುವುದು. ಯಾವುದರಿಂದ ತಾತ್ಕಾಲಿಕ ಸುಖ ಬರುತ್ತದೋ ಅದರ ಹಿಂದೆ ಹೋಗದೆ, ಶಾಶ್ವತವಾದ ಮೋಕ್ಷ ಮಾರ್ಗದಲ್ಲಿ ನಡೆಯುವುದು. ಏನು ಸಿಕ್ಕಿತೋ ಅದರಲ್ಲಿ ಸಂತೋಷಪಡುವುದು-ಇದು ಅನಪೇಕ್ಷಃ.
(೨) ಶುಚಿಃ : ನಿರ್ಮಲ ಮತ್ತು ನಿರಾಳವಾಗಿರುವುದು. ಇದೇ ಮಡಿ. ಬಾಯಲ್ಲಿ ಕೆಟ್ಟ ಮಾತು, ಮನಸ್ಸಿನಲ್ಲಿ ಕೆಟ್ಟ ಯೋಚನೆ, ಮೈಯಲ್ಲಿ ಕೊಳೆ-ಇದು ಮೈಲಿಗೆ.  ಮೊದಲು ನಾವು ನಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ. ಇದಕ್ಕಾಗಿ ಶಾಂತಿ ಪಾಠದಲ್ಲಿ  ಹೀಗೆ ಹೇಳುತ್ತೇವೆ: “ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ” ಎಂದು.  ನಾವು ಒಳ್ಳೆಯದನ್ನು ನೋಡೋಣ, ಒಳ್ಳೆಯದನ್ನು ಮಾತನಾಡೋಣ, ಒಳ್ಳೆಯದನ್ನು ಯೋಚಿಸೋಣ. ಇದು ನಿಜವಾದ ಮಡಿ.
ಮಡಿಯ ಬಗ್ಗೆ ಹೆಚ್ಚು ಪ್ರಸಿದ್ಧವಾದ ಎರಡು ಶ್ಲೋಕಗಳಿವೆ:
ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಮತ್ತು
ಅತಿನೀಲಘನಶ್ಯಾಮಂ ನಲಿನಾಯತಲೋಚನಂ     |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ||
ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ. ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಾನೆ. ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು ಮೀಯುತ್ತಿದ್ದೇನೆ. ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ. ನಾನು ಅದರಲ್ಲಿ ಮಿಂದೆ ಎನ್ನುವ ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಬೇಕು.
(೩) ದಕ್ಷಃ : ನಮ್ಮಲ್ಲಿ ಮನಸ್ಸನ್ನು ಭಗವಂತನೆಡೆಗೆ ಹರಿಸುವ ದಕ್ಷತೆ ಇರಬೇಕು. ಆತ ನಮ್ಮ ಬಾಹ್ಯ ಪ್ರಯತ್ನಕ್ಕೆ ಒಲಿಯಲಾರ. ನಾವು ಅಂತರಂಗದಿಂದ ಆತನೆಡೆಗೆ ಹೋಗಬೇಕು. ಬಾಹ್ಯ ಕ್ರಿಯೆ ನಮ್ಮ ಅಂತರಂಗದ ಸಾಧನೆಗೆ ಪೂರಕ  ಅಷ್ಟೆ. ಭಗವಂತನನ್ನು ಹೇಗೆ ಸೇರಬಹುದು ಎನ್ನುವ ತಿಳುವಳಿಕೆ, ಜಾಣತನ ನಮ್ಮಲ್ಲಿರಬೇಕು.
(೪) ಉದಾಸೀನ : ಅಂತರ್ಯಾಮಿಯಾಗಿರುವುದು. ಯಾವುದೇ ಬಾಹ್ಯ ಕ್ರಿಯೆಗೆ ಒತ್ತು ಬೇಡ, ಆಗ್ರಹ ಬೇಡ. ಉದಾಹರಣೆಗೆ- ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ತಮ್ಮ ಯಾವುದೋ ಒಂದು ಫಲಾಪೇಕ್ಷೆಯನ್ನು ಈಡೇರಿಸಿಕೊಳ್ಳಲು ಯಾವುದೋ ಒಂದು ಪೂಜೆ ಮಾಡಿಸುತ್ತಿದ್ದಾರೆ. ಅಂಥಹ ಸಂದರ್ಭದಲ್ಲಿ ಅದನ್ನು ವಿರೋಧಿಸಿ ನಿಲ್ಲುವುದು ಒಳ್ಳೆಯದಲ್ಲ. ಏನೇ ಇರಲಿ ಅದು ಭಗವಂತನ ಸೇವೆ, ಅದು ಭಗವಂತನನ್ನು ಸೇರಲಿ ಎಂದು ಪ್ರಾರ್ಥಿಸಿ, ಎಲ್ಲರೊಂದಿಗಿದ್ದು ಯಾವುದೇ ಆಗ್ರಹವಿಲ್ಲದೆ ಇರುವುದು.     
(೫) ಗತವ್ಯಥಃ  :  ಏನೇ ಆದರೂ ಬೇಸರಿಸಿಕೊಳ್ಳದೆ ಸದಾ ಆನಂದವಾಗಿರುವುದು.
(೬) ಸರ್ವಾರಂಭಪರಿತ್ಯಾಗಿ :  ಭಗವಂತನ ಪಾರಮ್ಯಕ್ಕೆ ವಿರುದ್ಧವಾದ ಯಾವ ಆರಂಭಕ್ಕೂ ತೊಡಗದಿರುವುದು. ಎಲ್ಲ ಆರಂಭವನ್ನು ಫಲಕಾಮನೆಯಿಂದ ಮಾಡುವುದನ್ನು ಬಿಡು. ಎಲ್ಲವನ್ನೂ ಕೊನೆಗೆ ಕೃಷ್ಣಾರ್ಪಣಮಸ್ತು  ಎಂದು ಭಗವಂತನಲ್ಲಿ ಅರ್ಪಿಸು.
“ಯಾರು ಈ ಗುಣಗಳೊಂದಿಗೆ ನನ್ನನ್ನು ಪ್ರೀತಿಸುತ್ತಾರೋ ಅಂಥಹ ಭಕ್ತ ನನಗೆ ಅಚ್ಚುಮೆಚ್ಚು” ಎನ್ನುತ್ತಾನೆ ಕೃಷ್ಣ.    

ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ  
ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ  ಸ ಮೇ ಪ್ರಿಯಃ      ೧೭

ಯಃ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ  
ಶುಭಶುಭ ಪರಿತ್ಯಾಗೀ ಭಕ್ತಿಮಾನ್ ಯಃ  ಸಃ ಮೇ ಪ್ರಿಯಃ –ಬೀಗುವುದಿಲ್ಲ; ಹೇಸುವುದಿಲ್ಲ; ಕೊರಗುವುದಿಲ್ಲ; ಬಯಸುವುದಿಲ್ಲ. ಒಳಿತು ಕೆಡುಕುಗಳ ಕುರಿತು ಕಾಳಜಿಯಿಲ್ಲ, ಇಂಥ ಭಕ್ತನು ನನಗೆ ಅಚ್ಚುಮೆಚ್ಚು.

ಇಲ್ಲಿ ಹಿಂದೆ ಹೇಳಿದ ಕೆಲವು ವಿಚಾರ ಪುನರುಕ್ತಿಯಾಗಿದೆ. ಸಾಮಾನ್ಯವಾಗಿ ಒಂದು ವಿಷಯವನ್ನು ಹೆಚ್ಚು ಸ್ಪಷ್ಟಪಡಿಸುವುದಕ್ಕಾಗಿ ಮತ್ತು ಒಂದು ವಿಚಾರಕ್ಕೆ ಹೆಚ್ಚು ಒತ್ತು ಕೊಡುವುದಕ್ಕಾಗಿ ಪುನರುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: ಯಾವುದೋ ಒಂದು ಒಳ್ಳೆಯ ಕೆಲಸ ಮಾಡಿದಾಗ ಬೀಗಬೇಡ ಮತ್ತು ಇನ್ನೊಬ್ಬರನ್ನು ಕಂಡು ಹೇಸಿಗೆ ಪಡಬೇಡ. ಸಿಕ್ಕಿತೆಂದು ಅತೀವ ಖುಶಿ, ಸಿಗಲಿಲ್ಲವೆಂದು ದುಃಖ ಅಥವಾ ದ್ವೇಷ ಬೇಡ. ಜೀವನದಲ್ಲಿ ಜ್ಞಾನ ಭಕ್ತಿ ವೈರಾಗ್ಯ ಇದು ಶುಭ. ಉಳಿದ ಎಲ್ಲಾ ವಿಷಯಗಳ ಒಳಿತು ಕೆಡುಕುಗಳ ವಿಶ್ಲೇಷಣೆ ಬೇಡ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ನಮಗೆ ತಿಳಿಯದೇ ಇರುವ ಒಂದು ಕಾರಣವಿರುತ್ತದೆ. ಅದಕ್ಕಾಗಿ ಅದನ್ನು ಶುಭ-ಅಶುಭ ಎಂದು ನಿರ್ಧರಿಸಲು ನಾವು ಸಮರ್ಥರಲ್ಲ. ಈ ರೀತಿ ತಿಳಿದು ಬದುಕುವ ಭಕ್ತ ನನಗೆ ಪ್ರಿಯ ಎನ್ನುತ್ತಾನೆ ಕೃಷ್ಣ.

No comments:

Post a Comment