Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, October 6, 2011

Bhagavad Gita Kannada Chapter-12 Shloka-01


ಅಧ್ಯಾಯ ಹನ್ನೆರಡು

ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯಎಂದು ಹೇಳಿದ. ಹೀಗೆ ಹೇಳಿದಾಗ-ಯಾವ ರೀತಿ ಭಗವಂತನಲ್ಲಿ ನಾವು ಭಕ್ತಿ ಮಾಡಬೇಕು, ಯಾವುದು ನಿಜವಾದ ಭಕ್ತಿ, ಭಕ್ತನಲ್ಲಿರಬೇಕಾದ ಗುಣಗಳೇನು, ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಪ್ರಶ್ನೋಪನಿಷತ್ತಿನಲ್ಲಿ ಹೇಳುವಂತೆ:
ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನಃ
ಅನ್ನಮನ್ನಾದ್ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ಚ ನಾಮ ಚ ||  ||
ಭಗವಂತ ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಈ ಸಂಸಾರದಲ್ಲಿ ಜೀವವನ್ನು ಇಟ್ಟ. ಈ ಹದಿನೈದು ಬೇಲಿಗಳೆಂದರೆ:  
1. ಶ್ರದ್ಧೆಯ ಬೇಲಿ:  ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ)- 'ಜೀವ ಸ್ವಭಾವದಿಂದ ಬಂದ ಶ್ರದ್ಧೆ'. ಮತ್ತು  ಕಿತ್ತೆಸೆಯಬೇಕಾದ ಬೇಲಿ-ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ.
2 -6. ಪಂಚಭೂತಗಳ ಬೇಲಿ : ಮಣ್ಣು-ನೀರು( ಅನ್ನಮಯ ಕೋಶ) ಬೆಂಕಿ-ಗಾಳಿ-ಆಕಾಶ(ಪ್ರಾಣಮಯ ಕೋಶ).
7.  ಇಂದ್ರಿಯಗಳ ಬೇಲಿ: ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು.
8.  ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು
9. ಅನ್ನದ ಬೇಲಿ: ಆಹಾರ
10. ವೀರ್ಯದ ಬೇಲಿ: ಶಕ್ತಿ
11. ತಪಃ : ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ).
12. ಮಂತ್ರಃ :ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆ..
13. ಕರ್ಮಃ : ಕನಸನ್ನು ಸಾಧಿಸಲು ಮಾಡುವ ಕರ್ಮ.
14. ಲೋಕಗಳು : ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು , ನನ್ನದು ಅನ್ನುವ ಸೊತ್ತುಗಳು)
15. ನಾಮದ ಬೇಲಿ : ಕೀರ್ತಿ(Name and fame).
ಈ ಹದಿನೈದು ಬೇಲಿಯ ಒಳಗೆ ಸಿಕ್ಕಿ ಹಾಕಿಕೊಂಡಿರುವ ಹದಿನಾರನೆಯದಾದ ಕ್ಷರ’. ಜೀವನಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಕಳಿಸಿರುವ ಚಿತ್ ಪ್ರಕೃತಿ ಹದಿನೇಳನೆಯವಳಾದ-ಲಕ್ಷ್ಮಿ. ಆಕೆ ಅಕ್ಷರಪುರುಷಳು. ಕ್ಷರ-ಅಕ್ಷರಗಳಿಗಿಂತ ಅತೀತನಾದ ಭಗವಂತ ಹದಿನೆಂಟನೆಯವನಾದ ಪುರುಷಃ. ಆತ    ಪುರುಷೋತ್ತಮ. ಗೀತೆಯಲ್ಲಿ ಇಲ್ಲಿಯ ತನಕ ಭಗವಂತ ಹೇಳಿರುವುದೇನೆಂದರೆ ನನ್ನನ್ನು ಭಕ್ತಿಯಿಂದ ಭಜಿಸುವವನು ಈ ಸಂಸಾರ ಬಂಧದಿಂದ ಮುಕ್ತಿ ಪಡೆದು ನನ್ನನ್ನು ಸೇರುತ್ತಾನೆಎಂದು. ಇಲ್ಲಿ ನಮಗೆ ಬರುವ ಪ್ರಶ್ನೆ ಏನೆಂದರೆ-ಏಕೆ ಹದಿನೇಳನೆಯವಳಾದ ಶ್ರೀತತ್ವವನ್ನು ಪೂಜಿಸಬಾರದು, ತಂದೆಗಿಂತ ತಾಯಿ ಕರುಣಾಮಯಿ. ನಮ್ಮನ್ನು ಸಂಸಾರಬಂಧದಲ್ಲಿ ಹಾಕಿದ ತಾಯಿಯನ್ನು ಪೂಜಿಸುವುದರಿಂದ ನಮಗೆ ಮೋಕ್ಷಪ್ರಾಪ್ತಿ ಸುಲಭವಾಗಬಹುದಲ್ಲವೇ? ಯಾವ ದಾರಿ ಹೆಚ್ಚು ಸೂಕ್ತ ಎನ್ನುವುದು. ಶ್ರೀತತ್ವದಿಂದ ಮುಕ್ತಿ ಸಾಧ್ಯ ಎಂದು ಸ್ತುತಿಯಲ್ಲಿ ಹೇಳಲಾಗಿದೆ. ಉದಾಹರಣೆಗೆ ಎಲ್ಲರೂ ದೇವರ ಪೂಜೆ ಮಾಡಿ ಮಂಗಳಾರತಿ ಮಾಡುವಾಗ ಹೇಳುವ ಈ ಕೆಳಗಿನ ಶ್ರೀಸೂಕ್ತದ ಸಾಲು:
ಶ್ರಿಯೇ ಜಾತಃ  ಶ್ರಿಯ ಆನಿರ್ಯಾಯಃ  ಶ್ರಿಯಂ ವಯೋ ಜನಿತೃಭ್ಯೋದಧಾತು |
ಶ್ರಿಯಂ ವಸಾನಾಃ ಅಮೃತತ್ವಮಾಯನ್ ಭಜಂತಿ ಸದ್ಯಸ್ಸಮಿಧಾ ಮಿತದ್ಯೂನ್  ||
ಇಲ್ಲಿ ಹೇಳುವಂತೆ: "ಶ್ರೀತತ್ವದ ಉಪಾಸನೆಗೋಸ್ಕರ ನಾವು ಹುಟ್ಟಿದ್ದೇವೆ. ಶ್ರೀತತ್ವವನ್ನು ಸ್ತೋತ್ರಮಾಡುವವನಿಗೆ ಆಕೆ ಸಂಪತ್ತನ್ನೂ ಧೀರ್ಘಾಯುಷ್ಯವನ್ನು ಕೊಡುತ್ತಾಳೆ. ಶ್ರೀತತ್ವ ಉಪಾಸನೆ ಮಾಡಿದವರು ಅಮೃತತ್ವವನ್ನು ಪಡೆದರು. ದಂಪತಿಗಳು ಶ್ರೀತತ್ವವನ್ನು ಉಪಾಸನೆ ಮಾಡುವುದರಿಂದ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆಕೆ ಮೋಕ್ಷಪ್ರದಳು". ಹೀಗೆ ಹೇಳಿರುವುದರಿಂದ ಶ್ರೀತತ್ವದ ಉಪಾಸನೆಯಿಂದ ಕೂಡ ಮೋಕ್ಷ ಪಡೆಯಬಹುದು ಎನ್ನುವ ಅಂಶ ಸ್ಪಷ್ಟ.  ಪುರುಷೋತ್ತಮ ಭಗವಂತನ  ಉಪಾಸನೆ ಮತ್ತು ಶ್ರೀತತ್ವ ಅಥವಾ ಅಕ್ಷರ ಉಪಾಸನೆ ಇದರಲ್ಲಿ ಯಾವ ದಾರಿ ಹೆಚ್ಚು ಸೂಕ್ತ? ಇದು ಇಲ್ಲಿ ನಮ್ಮ ನಿಮ್ಮೆಲರ ಪ್ರಶ್ನೆ. ನಮ್ಮ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಭಗವಂತನ ಮುಂದಿಡುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ. ಎರಡನೆ ಷಟ್ಕದ ಕೊನೆಯ ಅಧ್ಯಾಯವಾದ ಇಲ್ಲಿ ಕೇವಲ ಇಪ್ಪತ್ತು ಶ್ಲೋಕಗಳಿವೆ. ಅಧ್ಯಾಯ ಚಿಕ್ಕದಾದರೂ ಕೂಡ ಈ ಅಧ್ಯಾಯ ಅಪೂರ್ವ ವಿಷಯಗಳನ್ನೊಳಗೊಂಡ ಅಧ್ಯಾಯ. ಭಗವಂತ ಇಲ್ಲಿ ಹೇಳಿರುವ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಬನ್ನಿ, ಈ ಅಧ್ಯಾಯದಲ್ಲಿ  ಹೇಳಿರುವ ಅಪೂರ್ವ ಗುಣ-ಭಕ್ತಿ ಸಂದೇಶವನ್ನು ತಿಳಿಯೋಣ.

ಅರ್ಜುನ ಉವಾಚ ।
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ       ।
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ       ॥೧॥

ಅರ್ಜುನ ಉವಾಚ ಅರ್ಜುನ ಕೇಳಿದನು:
ಏವಮ್  ಸತತ ಯುಕ್ತಾಃ ಯೇ ಭಕ್ತಾಃ ತ್ವಾಮ್ ಪರ್ಯುಪಾಸತೇ        ।
ಯೇ ಚ ಅಪಿ ಅಕ್ಷರಮ್ ಅವ್ಯಕ್ತಮ್  ತೇಷಾಮ್  ಕೇ ಯೋಗವಿತ್ತಮಾಃ ಹೀಗೆ ನಿರಂತರ ಸಾಧನೆಯಿಂದ ನಿನ್ನನ್ನು ಸೇವಿಸುವ ಭಕ್ತರು ಮತ್ತು ಅಳಿವಿರದ ಅವ್ಯಕ್ತತತ್ವ(ಶ್ರೀತತ್ವ)ದ ಉಪಾಸಕರು. ಇವರಲ್ಲಿ ಯಾರು ಹೆಚ್ಚಿನವರು.

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಭಗವಂತನ ವಿಶಿಷ್ಟರೂಪದ ಉಪಾಸನೆ ಮತ್ತು ಯಾವುದೇ ರೂಪಗಳಿಂದ ವ್ಯಕ್ತವಾಗದ ನಿರಾಕಾರ ಉಪಾಸನೆ-ಇವೆರಡರಲ್ಲಿ ಯಾವುದು ಸೂಕ್ತ ಎಂದು ಕೇಳಿದಂತೆ ಕಾಣುತ್ತದೆ. ಆದರೆ ಈ ಶ್ಲೋಕದಲ್ಲಿ ಅರ್ಜುನ ಕೇಳುತ್ತಿರುವ ಮೂಲ ಪ್ರಶ್ನೆಯೇ ಬೇರೆ. ಇದನ್ನು ಮಧ್ವಾಚಾರ್ಯರು ವಿಶಿಷ್ಟವಾಗಿ ವಿವರಿಸಿದ್ದಾರೆ.
ಭಗವಂತನ ಚಿಂತನೆ ಮಾಡುವವರೆಲ್ಲ ಭಗವದ್ ಭಕ್ತರಾಗಿರಬೇಕೆಂದಿಲ್ಲ.  ಭಗವಂತನ ಚಿಂತನೆ ಮಾಡುವುದಕ್ಕೆ ಮೂಲದ್ರವ್ಯ ಪ್ರೀತಿ. ಜ್ಞಾನಪೂರ್ವಕವಾದ ಪ್ರೀತಿ-ಭಕ್ತಿ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ದೇವರ ಕೋಣೆಯಲ್ಲೊಂದು ವಿಗ್ರಹವಿರುತ್ತಿತ್ತು. ಅವರವರ ಉಪಾಸನೆಗೆ ಯಾವುದು ಇಷ್ಟವೋ ಅಂತಹ ಇಷ್ಟದೇವತೆಯ ವಿಗ್ರಹ. ನಾವು ಈ ಅಂಶವನ್ನು ವಿಶ್ಲೇಷಿಸಿದರೆ ಏಕೆ ಈ ರೀತಿ ಪ್ರತಿಮೆಯನ್ನು ಇಟ್ಟು ಪೂಜಿಸುತ್ತಿದ್ದರು ಎನ್ನುವುದು ತಿಳಿಯುತ್ತದೆ. ಇಲ್ಲಿ ಮೊದಲು ನಾವು ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳಬೇಕು. ಕಣ್ಣಿನಿಂದ ನೋಡದ್ದನ್ನು ಮನಸ್ಸು ಗ್ರಹಿಸುವುದಿಲ್ಲ. ಉದಾಹರಣೆಗೆ ಭಗವಂತ ಅತ್ಯಂತ ಸುಂದರಎಂದು ತಿಳಿದು ನಾವು ಕಣ್ಣುಮುಚ್ಚಿ ಧ್ಯಾನಕ್ಕೆಕುಳಿತರೆ, ನಮ್ಮ ಮನಸ್ಸು ನಾವು ನೋಡಿದ ಯಾವುದೋ ಒಬ್ಬ ಸುಂದರ ಮನುಷ್ಯನನ್ನು ನಮಗೆ ತೋರಿಸುತ್ತದೆ! ಇದಕ್ಕಾಗಿ ಹಿಂದಿನವರು ಭಗವಂತನಿಗೆ ನಮ್ಮಂತೆ ಕರಚರಣಗಳಿವೆ, ಆದರೆ ಆತ ಯಾವ ಮನುಷ್ಯರಂತೆಯೂ ಇಲ್ಲ ಎನ್ನುವಂತೆ ಆತನ ಪ್ರತಿಮೆಯನ್ನು ಕಡೆದರು. ಈ ಪ್ರತಿಮೆಯನ್ನು ನೆನಪಿನಲ್ಲಿಟ್ಟುಕೊಂಡು ಕಣ್ಣುಮುಚ್ಚಿ ಭಗವಂತನ ಗುಣಾನುಸಂಧಾನ ಮಾಡಿದರೆ, ನಮಗೆ ಕೇವಲ ಆ ಮೂರ್ತಿ ಕಾಣಿಸುತ್ತದೆ ಹೊರತು ನಮ್ಮ ಪರಿಚಯದ ಮನುಷ್ಯರಲ್ಲ. ಇದರಿಂದ ಧ್ಯಾನ ಸುಲಭಸಾಧ್ಯವಾಗುತ್ತದೆ.  ಮನಸ್ಸು ಯಾವುದೋ ವ್ಯಕ್ತಿಯನ್ನು ಚಿಂತಿಸದೆ ಪ್ರತಿಮೆಯ ರೂಪದಲ್ಲಿ ಭಗವಂತನನ್ನು ಕಾಣಲಾರಂಭಿಸುತ್ತದೆ. ಈ ಕಾರಣಕ್ಕಾಗಿ ಭಗವಂತನ ಚಿಂತನೆ ಮಾಡಲು ಒಂದು ರೂಪ ಅಗತ್ಯ.
ನಮಗೆ ತಿಳಿದಂತೆ ಮಾತೆ ಶ್ರೀಲಕ್ಷ್ಮಿಯನ್ನು  ಶ್ರೀತತ್ವ, ಅಕ್ಷರಳು, ಅವ್ಯಕ್ತಳು, ಪ್ರಕೃತಿ, ಹ್ರೀ, ಇತ್ಯಾದಿ ಅನೇಕ ಹೆಸರಿನಿಂದ ಕರೆಯುತ್ತಾರೆ. ಭಗವದ್ಗೀತೆಯಲ್ಲೇ ಅನೇಕ ಕಡೆ ಈ ರೀತಿಯ ಸಂಬೋಧನೆ ಕಾಣಸಿಗುತ್ತವೆ. ಕಠೋಪನಿಷತ್ತಿನಲ್ಲಿ ಹೇಳುವಂತೆ "ಮಹತಃ ಪರಮವ್ಯಕ್ತಮವ್ಯಕ್ತಾತ್ಪುರುಷಃ ಪರಃ" . ಅಂದರೆ ಮಹತತ್ವಕ್ಕಿಂತ ಅವ್ಯಕ್ತ ತತ್ವ ಹಿರಿದು, ಅವ್ಯಕ್ತ ತತ್ವಕ್ಕಿಂತ ಪುರುಷನಾದ ಭಗವಂತ ಹಿರಿಯ. ಇಲ್ಲಿ ಸ್ಪಷ್ಟವಾಗಿ ನಮಗೆ ತಿಳಿವುದೇನೆಂದರೆ-ಅವ್ಯಕ್ತಳು, ಅಕ್ಷರಳು ಎಂದರೆ ಮಾತೆ ಶ್ರೀಲಕ್ಷ್ಮಿ.         
ನಿರಂತರವಾಗಿ ಮನಸ್ಸಿನಲ್ಲಿ ನೀನು ಹೇಳಿರುವ ಗುಣಗಳ ಅನುಸಂಧಾನ ಮಾಡುತ್ತಾ, ಶಾಸ್ತ್ರಗಳ ಮೂಲಕ ನಿನ್ನ ಮಹಿಮೆಯನ್ನು, ನಿನ್ನ ರೂಪ ವಿಶೇಷಗಳನ್ನು ತಿಳಿದುಕೊಂಡು, ಅದರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು, ನಿನ್ನ ಉಪಾಸನೆ ಮಾಡಿದರೆ ಒಳ್ಳೆಯದೋ, ಅಥವಾ ಕ್ಷರಾತೀತ(ಅಕ್ಷರ)ಳಾದ ಶ್ರೀತತ್ವದ ಉಪಾಸನೆ ಒಳ್ಳೆಯದೋ, ಯಾವ ದಾರಿ ಹೆಚ್ಚು ಸೂಕ್ತ-ಎನ್ನುವುದು ಅರ್ಜುನನ ಪ್ರಶ್ನೆ.             

No comments:

Post a Comment