Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, October 2, 2011

Bhagavad Gita Kannada Chapter-11 Shloka 23-31


ರೂಪಂ ಮಹತ್ ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಳಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥೨೩॥

ರೂಪಮ್  ಮಹತ್ ತೇ ಬಹು ವಕ್ತ್ರ ನೇತ್ರಮ್  ಮಹಾಬಾಹೋ ಬಹುಬಾಹು ಊರು ಪಾದಮ್ ।
ಬಹು ಉದರಮ್  ಬಹುದಂಷ್ಟ್ರಾಕರಾಳಮ್  ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ ತಥಾ ಅಹಮ್ – ಓ ಮಹಾಬಾಹೂ, ಹಬ್ಬಿ ನಿಂತ ನಿನ್ನ ರೂಪಕ್ಕೆ ಹಲವು ಬಾಯಿ ಕಣ್ಣುಗಳು. ಹಲವು ತೊಡೆ ಕಾಲುಗಳು, ಹಲವು ಹೊಟ್ಟೆಗಳು. ಹಲವು ದಾಡೆಗಳಿಂದ ಅಬ್ಬರಗೊಂಡ ಈ ರೂಪವನ್ನು ಕಂಡು ಲೋಕದ ಮಂದಿ ಬೆಚ್ಚಿಬಿದ್ದಿದ್ದಾರೆ; ನಾನು ಕೂಡ.   

ಭಗವಂತನ ಅಂಗಾಂಗಗಳಲ್ಲಿ ಹೇಗೆ ಸೃಷ್ಟಿ ಕ್ರಿಯೆ ನಡೆಯುತ್ತಿದೆ ಎನ್ನುವುದನ್ನು ಅರ್ಜುನ ಕಾಣುತ್ತಿದ್ದಾನೆ. ಪುರುಷ ಸೂಕ್ತದಲ್ಲಿ ಹೇಳುವಂತೆ :
ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜನ್ಯಃ ಕೃತಃ            |
ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಗ್ಂ ಶೂದ್ರೋ ಅಜಾಯತ  ||೧೩||
ಅಂದರೆ ಭಗವಂತನ ಮುಖದಿಂದ ಜ್ಞಾನಿಗಳ(Wisdom) ಸೃಷ್ಟಿ, ಬಾಹುವಿನಿಂದ ಕ್ಷತ್ರಿಯರ(Protection) ಸೃಷ್ಟಿ, ಸೊಂಟ ಅಥವಾ ತೊಡೆಯಿಂದ ವೈಶ್ಯರ(Production) ಸೃಷ್ಟಿ ಮತ್ತು ಪವಿತ್ರವಾದ ಪಾದದಿಂದ ಶೂದ್ರರ(Service) ಸೃಷ್ಟಿ. ಈ ನಾಲ್ಕು ವರ್ಗ ಈ ಸಮಾಜದ ನಾಲ್ಕು ಆಧಾರ ಸ್ಥಂಭಗಳು. ಅರ್ಜುನನಿಗೆ ಈ ನಾಲ್ಕು ವರ್ಗದ ಸೃಷ್ಟಿ ಭಗವಂತನ ದೇಹದಲ್ಲಾಗುತ್ತಿರುವುದು ಕಾಣಿಸುತ್ತಿದೆ.  ಅದರ ಜೊತೆಗೆ ಆತ ಅಲ್ಲಿ ಎಲ್ಲರನ್ನು ಕಬಳಿಸುವ (ಸಂಹಾರ ಕ್ರಿಯೆ) ಹಲವು ದಾಡೆಗಳಿಂದ ತುಂಬಿದ ರೂಪವನ್ನು ಕಾಣುತ್ತಾನೆ. ಭಗವಂತನ ಈ ರೂಪವನ್ನು ಕಂಡು ಎಲ್ಲರೂ ವಿಸ್ಮಯರಾಗಿದ್ದಾರೆ. “ನಾನೂ ಕೂಡ ಗಾಬರಿಗೊಳಗಾಗಿದ್ದೇನೆ” ಎನ್ನುತ್ತಾನೆ ಅರ್ಜುನ.  

ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ        ॥೨೪॥

ನಭಃಸ್ಪೃಶಮ್  ದೀಪ್ತಮ್ ಅನೇಕ ವರ್ಣಮ್  ವ್ಯಾತ್ತ ಆನನಮ್  ದೀಪ್ತ ವಿಶಾಲ ನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತ ಅಂತಃ ಆತ್ಮಾ ಧೃತಿಮ್  ನ ವಿಂದಾಮಿ ಶಮಮ್  ಚ ವಿಷ್ಣೋ – ಮುಗಿಲ ಮುತ್ತಿಟ್ಟ, ಹೊಳೆವ ಬಗೆಬಗೆಯ ಬಣ್ಣಗಳು. ತೆರೆದ ಬಾಯಿಗಳು. ಹೊಳೆವಗಲ ಕಣ್ಣುಗಳು. ಇಂಥ ನಿನ್ನನ್ನು ಕಂಡು ಬಗೆ ಬೆಚ್ಚಿಬಿದ್ದಿದೆ. ಓ ಒಳಗು ಹೊರಗೂ ತುಂಬಿ ನಿಂತವನೆ, ನಾನು ಸೈರಿಸಲಾರೆ. ನಾನು ನೆಮ್ಮದಿಗಾಣೆ.

ಭೂಮಿ ಆಕಾಶದಲ್ಲಿ ವ್ಯಾಪಿಸಿರುವ ನಿನ್ನ ಅನಂತ ರೂಪ-ಕತ್ತಲೆಯ ಸ್ಪರ್ಶವೇ ಇಲ್ಲದ ಬೆಳಕಿನ ಪುಂಜ. ನಿನ್ನೊಳಗೆ ಅನೇಕರು ಅನೇಕ ಶ್ರುತಿ ವಚನಗಳಿಂದ, ವೇದಗಳಿಂದ ನಿನ್ನನ್ನು ವರ್ಣಿಸುತ್ತಿದ್ದಾರೆ. ನಿನ್ನ ಅಪ್ರಾಕೃತವಾದ  ಬಣ್ಣವನ್ನು ನಾನು  ಕಾಣುತ್ತಿದ್ದೇನೆ. ನಿನ್ನ ಅನುಗ್ರಹ ಬೀರುವ, ಕಾರುಣ್ಯದ ಅರಳುಗಣ್ಣುಗಳನ್ನು ನಾನು ಕಂಡೆ. ಎಲ್ಲವನ್ನು ನೋಡಿ ಮನಸ್ಸು ಗೊಂದಲವಾಗುತ್ತಿದೆ. “ಓ ವಿಷ್ಣೋ, ಈ ನಿನ್ನ ವಿಚಿತ್ರ ರೂಪವನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ” ಎನ್ನುತ್ತಾನೆ ಅರ್ಜುನ. [ವಿಷ್ಣು ಅನ್ನುವ ಪದದ ವಿಶಿಷ್ಟವಾದ ಅರ್ಥವನ್ನು ನಾವು ಹಿಂದಿನ ಅಧ್ಯಾಯದಲ್ಲಿ ವಿಶ್ಲೇಸಿದ್ದೇವೆ]         

ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥೨೫॥

ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವಾ ಏವ ಕಾಲ ಅನಲ ಸನ್ನಿಭಾನಿ ।
ದಿಶಃ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗತ್ ನಿವಾಸ –ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೊರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ದೇವೇಶ, ಜಗದ ಆಸರೆಯೆ ದಯೆದೋರು.

ಎಲ್ಲಕ್ಕಿಂತ ಮಿಗಿಲಾಗಿ ನರಸಿಂಹನಂತೆ  ಕೋರೆ ದಾಡೆಗಳಿಂದ ಬಾಯ್ದೆರೆದು ನಿಂತಿರುವ ನಿನ್ನ ಮುಖವನ್ನು ಕಂಡು ದಿಕ್ಕು ತೋಚದಾಗಿದೆ. ಪ್ರಳಯ ಕಾಲದ ಬೆಂಕಿಯಂತೆ ವ್ಯಾಪಿಸಿರುವ ನಿನ್ನನ್ನು ಕಂಡು ಗಾಬರಿಯಿಂದ ಆನಂದ ಮಾಯವಾಗುತ್ತಿದೆ. ನೆಮ್ಮದಿ ಕಳೆದುಕೊಳ್ಳುತ್ತಿದ್ದೇನೆ. ಓ ಸರ್ವ ದೇವತೆಗಳ ಒಡೆಯನೆ, ಜಗತ್ತಿಗೆ ಆಸರೆಯಾಗಿರುವ ನೀನು ನನ್ನ ಮೇಲೆ ದಯೆ ತೋರು.

ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾSಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ        ॥೨೬॥

ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ           ।
ಕೇಚಿದ್ ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥೨೭॥

ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹ ಏವ ಅವನಿಪಾಲ ಸಂಘೈಃ ।
ಭೀಷ್ಮಃ ದ್ರೋಣಃ ಸೂತಪುತ್ರಃ ತಥಾ ಅಸೌ ಸಹ ಅಸ್ಮದೀಯೈಃ ಅಪಿ ಯೋಧ ಮುಖ್ಯೈಃ ||
ವಕ್ತ್ರಾಣಿ ತೇ ತ್ವರಮಾಣಾಃ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ          ।
ಕೇಚಿತ್  ವಿಲಗ್ನಾಃ ದಶನ ಅಂತರೇಷು ಸಂದೃಶ್ಯಂತೇ ಚೂರ್ಣಿತೈಃ ಉತ್ತಮಾಂಗೈಃ – ಭೀಷ್ಮ ದ್ರೋಣ ಮತ್ತು ಈ  ಕರ್ಣ, ಜೊತೆಗೆ ನಮ್ಮ ಕಾದಾಳುಗಳ ಮುಖಂಡರು ಕೂಡ. ಕಾಣುತ್ತಿದ್ದೇನೆ ಕಟವಾಯಿಯೆಡೆಯಲ್ಲಿ ಸಿಕ್ಕು ನುಗ್ಗು ನುರಿಯಾದ ಕೆಲವರನ್ನು; ನುಜ್ಜುಗುಜ್ಜಾದ ಅವರ ತಲೆಬುರುಡೆಗಳನ್ನು.

ಅರ್ಜುನ ಭಗವಂತನಲ್ಲಿ ಭವಿಷತ್ಕಾಲದಲ್ಲಿ ನಡೆಯುವ ಘಟನೆಗಳನ್ನು ಕಾಣುತ್ತಿದ್ದಾನೆ. ಪ್ರಪಂಚದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತ. ಇದನ್ನು ಅರ್ಜುನ ತನ್ನ ದಿವ್ಯ ದೃಷ್ಟಿಯಲ್ಲಿ ಕಾಣುತ್ತಿದ್ದಾನೆ ಅಷ್ಟೆ. ಭೀಷ್ಮ ದ್ರೋಣ ಮತ್ತು ಈ  ಕರ್ಣ ಎಲ್ಲರೂ ಆ ನಿನ್ನ ಬಾಯಿಯೊಳಗೆ ಹೋಗುತ್ತಿದ್ದಾರೆ. ಜೊತೆಗೆ ನಮ್ಮ ಸೈನ್ಯದ ಮುಖಂಡರೂ ಕೂಡ. ಅಲ್ಲಿ ಕೆಲವರು ಭಯಂಕರವಾದ ಆ ನಿನ್ನ ಕೋರೆ ದಾಡೆಗಳಿಗೆ ಸಿಕ್ಕು ನುಜ್ಜುಗುಜ್ಜಾಗುತ್ತಿರುವುದನ್ನು ಕಾಣುತ್ತಿದ್ದೇನೆ.  

ಯಥಾ ನದೀನಾಂ ಬಹವೋSಮ್ಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥೨೮॥

ಯಥಾ ನದೀನಾಮ್  ಬಹವಃ ಅಂಬುವೇಗಾಃ ಸಮುದ್ರಮ್ ಏವ ಅಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾಃ  ವಿಶಂತಿ ವಕ್ತ್ರಾಣಿ ಅಭಿವಿಜ್ವಲಂತಿ –-ನರಲೋಕದ ಈ ವೀರರೆಲ್ಲ ಕೋರೈಸುವ ನಿನ್ನ ಮೋರೆಗಳೊಳಗೆ ಸೇರುತ್ತಿದ್ದಾರೆ. ನದಿಗಳ ಹತ್ತು ಹಲವು ನೀರ ಸೆಲೆಗಳು ಕಡಲ ಕಡೆಗೆ ಹರಿಯುವಂತೆ.

ಪುಣ್ಯ ಜೀವಿಗಳು ಭಗವಂತನ ಬಾಯಿಯನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎನ್ನುವುದನ್ನು ಅರ್ಜುನ ವರ್ಣಿಸುತ್ತಿದ್ದಾನೆ. ಹೇಗೆ ಎಲ್ಲ ನದಿ ನೀರು ಸಮುದ್ರವನ್ನು ಸೇರುತ್ತದೋ ಹಾಗೆ ಈ ನರಲೋಕದ ವೀರರು ನಿನ್ನನ್ನು ಸೇರುತ್ತಿದ್ದಾರೆ ಎನ್ನುತ್ತಾನೆ ಅರ್ಜುನ. ಇದೊಂದು ಮಾಂಗಲಿಕ ದೃಷ್ಟಾಂತ. ಇಲ್ಲಿ ಭಯಾನಕ ನೋಟವಿಲ್ಲ.  

ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ  ಲೋಕಾಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ          ॥೨೯॥

ಯಥಾ ಪ್ರದೀಪ್ತಮ್  ಜ್ವಲನಮ್  ಪತಂಗಾಃ ವಿಶಂತಿ ನಾಶಾಯ ಸಮೃದ್ಧ ವೇಗಾಃ ।
ತಥಾ ಏವ  ನಾಶಾಯ ವಿಶಂತಿ  ಲೋಕಾಃ ತವ ಅಪಿ ವಕ್ತ್ರಾಣಿ ಸಮೃದ್ಧ ವೇಗಾಃ  --ಲೋಕದ ಮಂದಿಯೆಲ್ಲ ಗಡಬಡಿಸಿ ಓಡುತ್ತ ಬಂದು ಸಾಯಲೆಂದು ನಿನ್ನ ಬಾಯ್ಗಳಲ್ಲಿ ಬೀಳುತ್ತಿವೆ- ಪತಂಗಗಳು ಹಾರಿ ಬಂದು ಬೆಂಕಿಯಲ್ಲಿ ಬಿದ್ದು ಸಾಯುವಂತೆ.

ಪಾಪಿಗಳು ಹೇಗೆ ಭಗವಂತನ ಬಾಯಿಯನ್ನು ಪ್ರವೇಶಿಸುತ್ತಿದ್ದಾರೆ ಎಂದು ವರ್ಣಿಸುತ್ತ ಅರ್ಜುನ ಹೇಳುತ್ತಾನೆ: “ಉರಿಯುವ ಬೆಂಕಿಗೆ ಪತಂಗಗಳು ಬಿದ್ದು ನಾಶವಾದಂತೆ ಗಡಬಡಿಸಿ ಬಂದು ಬಿದ್ದು ನಾಶವಾಗುತ್ತಿದ್ದಾರೆ” ಎಂದು.

ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥೩೦॥

ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈಃ ಜ್ವಲದ್ಭಿಃ ।
ತೇಜೋಭಿಃ ಆಪೂರ್ಯ ಜಗತ್ ಸಮಗ್ರಮ್  ಭಾಸಃ ತವ ಉಗ್ರಾಃ ಪ್ರತಪಂತಿ ವಿಷ್ಣೋ –ಓ ಎಲ್ಲೆಲ್ಲು  ತುಂಬಿರುವವನೆ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲ ಲೋಕಗಳನ್ನು ಎಲ್ಲೆಡೆಯು ನುಂಗಿ ನೊಣೆಯುತ್ತಿರುವೆ. ಕೋರೈಸುವ ನಿನ್ನ ಮೈಯ ಹೊಳಪು ಇಡಿಯ ವಿಶ್ವವನ್ನು ಝಳದಿಂದ ತುಂಬಿ ಸುಡುತ್ತಿವೆ.

ಎಲ್ಲವನ್ನು ನಿನ್ನ ನಾಲಿಗೆಯಿಂದ ಸವರಿ ನುಂಗುತ್ತಿದ್ದೀಯ, ಎಲ್ಲವೂ ನಿನ್ನ ಹೊಟ್ಟೆಯನ್ನು ಸೇರುತ್ತಿವೆ. ಈ ಜಗತ್ತೇ ನಿನಗೊಂದು ತುತ್ತಾಗುತ್ತಿದೆ. ಆ ನಿನ್ನ ಮೈಯ ತೇಜಸ್ಸು ಜಗತ್ತಿನೆಲ್ಲೆಡೆಗೆ ತುಂಬುತ್ತಿದೆ. ಎಲ್ಲರ ಒಳಗೂ ಹೊರಗೂ ತುಂಬಿರುವ ನೀನು ಸರ್ವ ಸಂಹಾರಕರನಾಗಿ ಕಾಣುತ್ತಿದ್ದೀಯ(ವಿಷ್ಣೋ).  

ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋSಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥೩೧॥

ಆಖ್ಯಾಹಿ ಮೇ ಕಃ  ಭವಾನ್ ಉಗ್ರ ರೂಪಃ  ನಮಃ ಅಸ್ತು ತೇ ದೇವ ವರ ಪ್ರಸೀದ ।
ವಿಜ್ಞಾತುಮ್ ಇಚ್ಛಾಮಿ ಭವಂತಮ್ ಆದ್ಯಮ್  ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ –ಹೇಳು ನನಗೆ: ಅಂಜಿಸುವ ರೂಪ ತಳೆದು ಬಂದ ನಿನ್ನ ಬಿತ್ತರವೇನು? ಓ ಹಿರಿಯ ದೈವತವೆ, ನಿನಗೆ ತಲೆಬಾಗುತಿದ್ದೇನೆ. ದಯೆದೋರು. ಎಲ್ಲಕ್ಕೂ ಮೊದಲಿರುವ ನಿನ್ನನ್ನು ತಿಳಿಯ ಬಯಸುತ್ತೇನೆ.ನಿನ್ನ ಉದ್ದೇಶವೇನು ಎಂದು ತಿಳಿಯುತ್ತಿಲ್ಲ.

 ಈ ನಿನ್ನ ಭಯಂಕರ ರೂಪವನ್ನು ಕಂಡು ನನಗೇನು ಅರ್ಥವಾಗುತ್ತಿಲ್ಲ. ನಿನ್ನ ಮಹಿಮೆ ಅರಿಯದಾಗಿದ್ದೇನೆ. ನಿನ್ನಲ್ಲಿ ನಾನು ಶರಣು ಬಂದಿದ್ದೇನೆ. ನನ್ನನ್ನು ಉದ್ಧರಿಸು. ಈ ಭಯಂಕರ ರೂಪ ತೊಟ್ಟ ನಿನ್ನನ್ನು ತಿಳಿಯಬಯಸುತ್ತಿದ್ದೇನೆ. ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.

No comments:

Post a Comment