Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, September 1, 2011

Bhagavad Geeta Kannada Chapter-10 Shloka 19-20


ಭಗವಾನುವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ        ೧೯

ಭಗವಾನ್ ಉವಾಚ-ಭಗವಂತ ನುಡಿದನು:
ಹಂತ ತೇ ಕಥಯಿಷ್ಯಾಮಿ ದಿವ್ಯಾಃ ಹಿ ಆತ್ಮ ವಿಭೂತಯಃ
ಪ್ರಾಧಾನ್ಯತಃ ಕುರುಶ್ರೇಷ್ಠ ನ ಅಸ್ತಿ ಅಂತಃ  ವಿಸ್ತರಸ್ಯ ಮೇ—ಕುರುಗಳ ಮುಂದಾಳೆ, ಭಲೆ! ನನ್ನ ಅಲೌಕಿಕವಾದ ವಿಭೂತಿ ರೂಪಗಳಲ್ಲಿ ಕೆಲವನ್ನು ಆಯ್ದು ಹೇಳುತ್ತೇನೆ. ನನ್ನ ಬಿತ್ತರಕ್ಕೆ ಕೊನೆಯಿಲ್ಲ.

ಸಂಸ್ಕೃತದಲ್ಲಿ  ‘ಹಂತ’ ಎನ್ನುವ ಪದ ಸಂತೋಷ ಮತ್ತು ವಿಸ್ಮಯವನ್ನು ವ್ಯಕ್ತಪಡಿಸಲು ಬಳಸುವ ಪದ. ಕೃಷ್ಣ ಅರ್ಜುನನ ಆಸಕ್ತಿಯನ್ನು ಕಂಡು ಆತನನ್ನು ‘ಭಲೆ’ ಎಂದು ಹೊಗಳುತ್ತಾನೆ.
ಇಂದು ಯಾರಿಗೂ ವೇದಾಂತ ಕೇಳುವ ಇಚ್ಛೆ ಇಲ್ಲ. “ನಮಗೆ ಸಮಯವಿಲ್ಲ” ಎಂದು ಜಾರಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಮಾನಸಿಕವಾಗಿ ನೋಡಿದರೆ ‘ಸಮಯವಿಲ್ಲ’ ಎನ್ನುವುದು ತಮಗೆ ಇಷ್ಟವಿಲ್ಲ ಎನ್ನುವುದನ್ನು ಮುಚ್ಚಿಡಲು ಬಳಸುವ ಪದ! ನಮಗೆ ಇಷ್ಟವಿದ್ದರೆ ಸಮಯವಿರುತ್ತದೆ! ಇಲ್ಲಿ ಅರ್ಜುನನ ಕಾತರತೆಯನ್ನು ಕೃಷ್ಣ ಪ್ರಶಂಸಿಸುತ್ತಾನೆ ಮತ್ತು “ನೀನು ಕೇಳಬೇಕೆಂದು ಬಯಸಿದ್ದನ್ನು ಖಂಡಿತವಾಗಿಯೂ ಹೇಳುತ್ತೇನೆ” ಎನ್ನುತ್ತಾನೆ. ಭಗವಂತನ ವಿಭೂತಿ ದಿವ್ಯವಾದದ್ದು ಮತ್ತು ಅದು ಅನಂತ. ಅದನ್ನು ಪೂರ್ಣ ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೃಷ್ಣ ನಾವು ಮುಖ್ಯವಾಗಿ ಉಪಾಸನೆ ಮಾಡಬೇಕಾದ ಭಗವಂತನ ವಿಭೂತಿಯನ್ನು ಸಂಕ್ಷಿಪ್ತವಾಗಿ ಸಂಗ್ರಹ ಮಾಡಿ ಹೇಳಿದ್ದಾನೆ.
ಇಲ್ಲಿ ‘ಕುರುಶ್ರೇಷ್ಠ’ ಎನ್ನುವ ವಿಶೇಷಣ ಬಳಕೆಯಾಗಿದೆ. ತಮ್ಮನ್ನು ತಾವು ಭಗವದುಪಾಸನೆ ದಾರಿಯಲ್ಲಿ ತೊಡಗಿಸಿಕೊಂಡ ಸಾಧಕರು ‘ಕುರುಗಳು’. ಇದು ಅಧ್ಯಾತ್ಮಕ್ಕೆ ಬೇಕಾದ ಕನಿಷ್ಠ ಅರ್ಹತೆ. “ನೀನು ಅಧ್ಯಾತ್ಮ ಸಾಧನೆಯಲ್ಲಿ ಎತ್ತರಕ್ಕೇರಿದವನು. ನಿನಗೆ ಈ ಸಾಧನೆಯಲ್ಲಿ ಕಳಕಳಿ ಇದೆ. ಅದಕ್ಕಾಗಿ ನಿನಗೆ ಖಂಡಿತವಾಗಿ ಹೇಳುತ್ತೇನೆ” ಎನ್ನುವ ಭಾವ ಈ ಸಂಬೋಧನೆಯ ಹಿಂದಿದೆ.        

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ೨೦

ಅಹಮ್ ಆತ್ಮಾ ಗುಡಾಕೇಶ ಸರ್ವಭೂತಶಯಸ್ಥಿತಃ
ಅಹಮ್ ಆದಿಃ ಚ ಮಧ್ಯಮ್  ಚ ಭೂತಾನಾಮ್ ಅಂತಃ ಏವ ಚ—ಓ ಗುಡಾಕೇಶ, ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ. ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ವಿಭೂತಿಯ ಒಟ್ಟು ಸಾರ(essence) ಏನೆಂದರೆ: ‘ಭಗವಂತ ಎಲ್ಲರ ಒಳಗೂ ತುಂಬಿದ್ದಾನೆ’ ಎನ್ನುವುದು. ಕೃಷ್ಣ ಹೇಳುತ್ತಾನೆ: “ನಾನು ಪ್ರತಿಯೊಂದು ಜೀವಿಯ ಒಳಗೆ ಆತ್ಮವಾಗಿ ತುಂಬಿದ್ದೇನೆ. ಎಲ್ಲ ಜೀವಗಳ ಆತ್ಮ ನಾನು” ಎಂದು. ಈ ಶ್ಲೋಕದಲ್ಲಿ ‘ಜೀವಾತ್ಮ-ಪರಮಾತ್ಮ ಒಂದೆ’ ಎಂದು ಹೇಳಲಾಗಿದೆ ಎಂದು ಕೆಲವರು ತಪ್ಪಾಗಿ  ತಿಳಿದುಕೊಳ್ಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳಿರುವುದು 'ಜೀವಾತ್ಮರ ಆತ್ಮನಾಗಿ ನಾನು ತುಂಬಿದ್ದೇನೆ' ಎಂದೇ ಹೊರತು 'ನಾನೇ ಜೀವಾತ್ಮ' ಎಂದಲ್ಲ. ಇದು ಪ್ರತಿಯೊಂದು ಜೀವರ ಒಳಗೆ ಅಂತರ್ಯಾಮಿಯಾಗಿರುವ ಬಿಂಬರೂಪಿ ಭಗವಂತನನ್ನು ಹೇಳುತ್ತದೆ. ಭಗವಂತ ‘ಸರ್ವಭೂತಾಶಯಸ್ಥಿತಃ’. ಸಮಸ್ತ ಜೀವಜಾತದ ಹೃದಯಗುಹೆಯಲ್ಲಿ ಅಂತರ್ಯಾಮಿಯಾಗಿ ನಿಂತಿದ್ದಾನೆ ಆ ಹೃತ್ಕಮಲ ಮಧ್ಯ ನಿವಾಸಿ. ಇದು ಭಗವಂತನ ಅತಿ ದೊಡ್ಡ ವಿಭೂತಿ. ಅನಂತ ಜೀವರೊಳಗೆ ಅನಂತ ವಿಭೂತಿ ರೂಪದಲ್ಲಿ ಭಗವಂತ ವ್ಯಕ್ತನಾಗುತ್ತಾನೆ. ಈ ಕಾರಣದಿಂದ ನಾವು ಒಂದೊಂದು ಜೀವರಲ್ಲಿ ಒಂದೊಂದು ಶಕ್ತಿ ವೈಶಿಷ್ಟ್ಯವನ್ನು ಕಾಣುತ್ತೇವೆ.  ಸಮಸ್ತ ಜೀವಗಳು- ಹುಟ್ಟುವ ಮುಂಚೆ ಅವುಗಳ ಒಳಗೆ ನಿಯಾಮಕನಾಗಿ ನಿಂತು, ಅವುಗಳ ಸೃಷ್ಟಿಗೆ ಕಾರಣನಾಗಿ, ಅವುಗಳನ್ನು ರಕ್ಷಣೆ ಮಾಡಿ, ಪ್ರಳಯಕಾಲದಲ್ಲೂ ಕೂಡ ಎಲ್ಲವನ್ನು ಕಾಪಾಡುವ ಭಗವಂತ-ಎಲ್ಲ ಅವಸ್ಥೆಗಳಲ್ಲಿಯೂ ಒಳಗೆ ನಿಂತು ರಕ್ಷಿಸುವ ಶಕ್ತಿ.
ಇಲ್ಲಿ ಗುಡಾಕೇಶ ಎನ್ನುವ ವಿಶೇಷಣ ಬಳಸಲಾಗಿದೆ. ಇದು ಕೂಡಾ ಒಂದು ವಿಭೂತಿ ಗಮಕ. ‘ಗುಡಾಕ’ ಎಂದರೆ ನಿದ್ದೆ. ‘ಗುಡಾಕೇಶ’ ಎಂದರೆ ನಿದ್ದೆಯನ್ನು ಗೆದ್ದವ. ಅರ್ಜುನನಲ್ಲಿ ಈ ವಿಶೇಷ ಸಾಮರ್ಥ್ಯವಿತ್ತು. ಅದಕ್ಕಾಗಿ ಆತನನ್ನು ಈ ನಾಮದಿಂದ ಕರೆಯುತ್ತಿದ್ದರು. “ನಿನ್ನೊಳಗೆ ನಿದ್ದೆಯನ್ನು ಗೆಲ್ಲುವ ಶಕ್ತಿಯಾಗಿ ತುಂಬಿರುವವನೂ ನಾನೆ” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ  ತನ್ನ ವಿಶಿಷ್ಟವಾದ ವಿಭೂತಿಯನ್ನು ವಿವರಿಸುತ್ತಾನೆ.     

No comments:

Post a Comment