Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, September 18, 2011

Bhagavad Geeta Kannada Chapter 10 Shloka 27-29


ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗಳು ಹೀಗೆ ಬ್ರಹ್ಮ ತೇಜಸ್ಸು ಮತ್ತು ಅವರು ಮಾಡುವ ವೇದಾಧ್ಯಾಯನ, ತಪಸ್ಸು, ಯಜ್ಞ-ಎಲ್ಲದರ ಬಗ್ಗೆ  ಹೇಳಿದ ಕೃಷ್ಣ, ಮುಂದಿನ ಶ್ಲೋಕದಲ್ಲಿ  ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತಾನೆ.                     
                  
ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್    ।
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್     ॥೨೭॥

ಉಚ್ಚೈಃಶ್ರವಸಮ್ ಅಶ್ವಾನಾಮ್ ವಿದ್ಧಿ ಮಾಮ್ ಅಮೃತ ಉದ್ಭವಮ್  ।
ಐರಾವತಮ್ ಗಜೇಂದ್ರಾಣಾಮ್ ನರಾಣಾಮ್ ಚ ನರಾಧಿಪಮ್—ಕುದುರೆಗಳಲ್ಲಿ ಕಡಲಲ್ಲಿ ಮೂಡಿಬಂದ ಉಚ್ಚೈಃಶ್ರವಸ್ಸನ್ನು, ಹಿರಿಯಾನೆಗಳಲ್ಲಿ ಐರಾವತವನ್ನು, ಮನುಜರಲ್ಲಿ ಒಡೆಯನಾದ ಅರಸನನ್ನು[ಉನ್ನತಕೀರ್ತಿ ಪಡೆದು ‘ಉಚ್ಚೈಃಶ್ರವಸ್’ ಎನ್ನಿಸಿ ಉಚ್ಚೈಃಶ್ರವದಲ್ಲಿರುವವನು, ಐರಾ=ಲಕ್ಷ್ಮಿಗೆ, ಅವನ=ರಕ್ಷಕನಾಗಿ ‘ಐರಾವತ’ ಎನ್ನಿಸಿ ಐರಾವತದಲ್ಲಿರುವವನು, ನರರಿಗೆಲ್ಲ ಒಡೆಯನಾದ್ದರಿಂದ ‘ನರಾಧಿಪ’ ಎನ್ನಿಸಿ ಅರಸನಲ್ಲಿರುವವನು] ನಾನೆಂದು ತಿಳಿ.

ಹಿಂದೆ ಸೇನೆಯಲ್ಲಿ ಮುಖ್ಯವಾದ ಅಂಗಗಳಾಗಿ ಕುದುರೆ ಮತ್ತು  ಆನೆಗಳನ್ನು ರಾಜರು ಬಳಸುತ್ತಿದ್ದರು. ಕೃಷ್ಣ ಈ ಶ್ಲೋಕದಲ್ಲಿ ಕುದುರೆ, ಆನೆ ಮತ್ತು ರಾಜರಲ್ಲಿ ತನ್ನ ವಿಶೇಷ ವಿಭೂತಿಯನ್ನು ಹೇಳಿದ್ದಾನೆ. ಕೃಷ್ಣ ಹೇಳುತ್ತಾನೆ “ಸಮುದ್ರ ಮಥನದಲ್ಲಿ ಅಮೃತದ ಜೊತೆಗೆ ಹುಟ್ಟಿದ ಅಶ್ವ ‘ಉಚ್ಚೈಃಶ್ರವಸ್ಸು’ ಮತ್ತು ಹಿರಿಯಾನೆ ‘ಐರಾವತ’ ನಾನೆಂದು ತಿಳಿ” ಎಂದು. ಈ ಎರಡೂ ಪ್ರಾಣಿಗಳು ಬಹಳ ವಿಶೇಷ ಪ್ರಾಣಿಗಳು. ಕುದುರೆ ಮತ್ತು ಆನೆ  ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು. ಇವು ತನ್ನನ್ನು ಪ್ರೀತಿಯಿಂದ ಸಾಕುವ ಧನಿಗೆ ಎಂದೂ ಮೋಸ ಮಾಡುವುದಿಲ್ಲ. ಇನ್ನು ನರರಲ್ಲಿ ಶ್ರೇಷ್ಠ ‘ನರಾಧಿಪ’. ಮನುಕುಲಕ್ಕೆ ನಾಯಕರಾಗಿ ನಿಂತು ಧರ್ಮನಿಷ್ಠರಾಗಿ ಜನಪಾಲನೆ ಮಾಡುವ ಮುಖಂಡರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ, ಪರೀಕ್ಷಿತ ಇತ್ಯಾದಿ ರಾಜರನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.
ಇಲ್ಲಿ ಬಂದಿರುವ ಭಗವಂತನ ಹೆಸರು ಉಚ್ಚೈಃಶ್ರವಸ್ಸು, ಐರಾವತಃ ಮತ್ತು ನರಾಧಿಪಃ. ‘ಶ್ರವಸ್ಸು’ ಎಂದರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿರುವ ಕೀರ್ತಿ ಹೊಂದಿರುವ, ಮಹಾಜ್ಞಾನಿಯಾದ ಭಗವಂತ ಈ ಸೃಷ್ಟಿ-ಸ್ಥಿತಿ-ಸಂಹಾರವೆಂಬ ಮಹಾಕರ್ಮವನ್ನು ಸದಾ ಮಾಡುತ್ತಿರುವ ‘ಉಚ್ಚೈಃಶ್ರವಸ್ಸು’ . ಐರಾ ಎಂದರೆ ಭೂದೇವಿಯಲ್ಲಿ ಸನ್ನಿಹಿತಳಾಗಿರುವ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿರುವ ಭಗವಂತ ‘ಐರಾವತಃ’. ನರರಿಗೆ, ಸರ್ವ ಜೀವಜಾತಕ್ಕೆ ಅಧಿಪತಿಯಾಗಿ, ಅರಸರಲ್ಲಿ ಸನ್ನಿಹಿತನಾಗಿರುವ ಭಗವಂತ ‘ನರಾಧಿಪಃ’.          
   
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥

ಆಯುಧಾನಾಮ್ ಅಹಮ್ ವಜ್ರಮ್ ಧೇನೂನಾಮ್ ಅಸ್ಮಿ ಕಾಮಧುಕ್ ।
ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಮ್ ಅಸ್ಮಿ ವಾಸುಕಿಃ – ಆಯುಧಗಳಲ್ಲಿ ವಜ್ರಾಯುಧ ನಾನು. [ಅರಿವರ್ಜಿತನಾದ್ದರಿಂದ ‘ವಜ್ರ’ ಎನ್ನಿಸಿ ವಜ್ರಾಯುಧದಲ್ಲಿದ್ದೇನೆ.] ಹಸುಗಳಲ್ಲಿ ಕಾಮಧೇನು ನಾನು. [ಕಾಮ=ಬಯಸಿದ್ದನ್ನು, ಧುಕ್=ಕರೆಯುವುದರಿಂದ ‘ಕಾಮಧುಕ್’ ಎನ್ನಿಸಿ ಕಾಮಧೇನುವಿನಲ್ಲಿದ್ದೇನೆ.] ಸಂತಾನವನ್ನೀಯುವ ಕಾಮದೇವ [ಕಂ=ಸುಖದ, ದರ=ಹಲವು ಬಗೆಗಳನ್ನು, ಪ=ಉಣ್ಣಿಸುವುದರಿಂದ ‘ಕಂದರ್ಪ’ ಎನ್ನಿಸಿ ಕಾಮದೇವನಲ್ಲಿದ್ದು ಅವನಿಗೆ ಹುಟ್ಟಿನ ಸೆಳೆತದ ಶಕ್ತಿಯನ್ನಿತ್ತವನು] ನಾನು. ಹಾವುಗಳಲ್ಲಿ ವಾಸುಕಿ ನಾನು. [ವಾಸು=ಎಲ್ಲೆಡೆ ವಾಸಮಾಡಿ, ಕಿ=ಸುಖವನ್ನೀಯುವುದರಿಂದ ‘ವಾಸುಕಿ’ ಎನ್ನಿಸಿ ವಾಸುಕಿಯಲ್ಲಿದ್ದೇನೆ.]

ಆಯುಧಗಳಲ್ಲಿ ಸರ್ವಶ್ರೇಷ್ಠ ಆಯುಧ ಭಗವಂತ ಧರಿಸುವ ಸುದರ್ಶನ. ಭಗವಂತನ ಆಯುಧವನ್ನು ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. ಕೃಷ್ಣ ಹೇಳುತ್ತಾನೆ “ಆಯುಧಗಳಲ್ಲಿ ವಜ್ರಾಯುಧ ನಾನು” ಎಂದು. ಈ ವಜ್ರಾಯುಧ ಇಂದ್ರನ ಆಯುಧ. ಇದಕ್ಕೆ ಮೂರು ಲೋಕವನ್ನು ನಿಯಂತ್ರಿಸುವ ಶಕ್ತಿಯನ್ನು ಭಗವಂತ ಕೊಟ್ಟ.  ವ್ರತ್ರನನ್ನು ಸಂಹಾರ ಮಾಡಲು ಭಗವಂತನ ಆದೇಶದಂತೆ ದಧೀಚಿ ಎನ್ನುವ ಮುನಿಯ ಪೂರ್ಣ ತಪಸ್ಸಿನ ಫಲವನ್ನು ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಂದಾಗ ಕಾಣುವ ಸಿಡಿಲು-ಮಿಂಚನ್ನು ವಜ್ರಾಯುಧದ ಪ್ರತೀಕವೆನ್ನುತ್ತಾರೆ. ಈ ಆಯುಧದಲ್ಲಿ ಭಗವಂತ ‘ವಜ್ರಃ’ ನಾಮಕನಾಗಿ ಸನ್ನಿಹಿತನಾಗಿದ್ದಾನೆ. ‘ವರ್ಜನಾತ್ ಇತಿ ವಜ್ರಃ’. ಶತ್ರುಗಳನ್ನು, ಸಮಸ್ತ ದೋಷವನ್ನು, ವರ್ಜನೆ ಮಾಡುವ ಭಗವಂತ ವಜ್ರಃ.
ಅಸ್ತ್ರದ ಬಗ್ಗೆ ಹೇಳಿದ ಕೃಷ್ಣ ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವನ್ನು ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತಾನೆ. ಪ್ರಾಣಿಗಳಲ್ಲೇ ಶ್ರೇಷ್ಠ ಪ್ರಾಣಿ-ಧೇನು(ಹಸು). ನಮ್ಮ ಜೀವಮಾನವಿಡೀ ನಮಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಠ ವಿಭೂತಿ ಹಸು. ಈ ಕಾರಣಕ್ಕಾಗಿ ಕೃಷ್ಣ ಬಾಲಕನಿದ್ದಾಗಿ ಗೋಪೂಜೆಯನ್ನು ಚಾಲ್ತಿಗೆ ತಂದ. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯವಲ್ಲ. ಯಾವುದರಿಂದಲೂ ಗುಣವಾಗದ ಚರ್ಮರೋಗಕ್ಕೆ ಗೋಮಯ ಮತ್ತು  ಮೃತ್ತಿಕೆ(ಕೆಂಪು ಮಣ್ಣು)ಯಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. ಮನೆ ಮುಂದೆ ಸಗಣಿ ಸಾರಿಸುವುದರಿಂದ  ಅಲ್ಲಿ ಕ್ರಿಮಿ ಕೀಟ ಇಲ್ಲವಾಗುತ್ತದೆ.  ಗೋಮಯದಲ್ಲಿ ಲಕ್ಷ್ಮಿಯ ಸನ್ನಿಧಾನವಿದೆ ಎಂದು ಮಹಾಭಾರತದಲ್ಲಿ ಬರುವ ಒಂದು ಕಥೆಯಲ್ಲಿ ಹೇಳಲಾಗಿದೆ. ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. ಭಗವಂತ ಬಯಸಿದ್ದನ್ನು ಕೊಡುವ ‘ಕಾಮಧುಕ್’ ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯಾಗಿ ನಿಂತ.
ಈ ಪ್ರಪಂಚದಲ್ಲಿರುವ ಜೀವಿಗಳಲ್ಲಿ  ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತ(Sexual desire)ವಾಗಿ ನಿಂತಿರುವವ- ಸಂತಾನವನ್ನೀಯುವ ಕಾಮದೇವ. ಈ ಕಾಮದೇವ(ಕಂದರ್ಪ)ನಲ್ಲಿ ಭಗವಂತನ ವಿಶಿಷ್ಠ ಶಕ್ತಿ ಅಡಗಿದೆ. ಸೃಷ್ಟಿಯಲ್ಲಿ ಸಂತಾನ ಕ್ರಿಯೆ ನಡೆಯುವುದಕ್ಕೋಸ್ಕರ ಅಧಮ್ಯ ಬಯಕೆಯನ್ನು ಎಲ್ಲರೊಳಗೆ ತುಂಬಿ, ಅಲ್ಲಿ ಭಗವಂತ ಕೂತ. ಈ ಕಾರಣದಿಂದ ಭಗವಂತನ ಅನುಗ್ರಹವಿಲ್ಲದೆ ಲೀಲಾಜಾಲವಾಗಿ ಯಾರೂ ಕೂಡ ಈ ಶಕ್ತಿಯಿಂದೀಚೆಗೆ ಬರಲಾರರು. ಬಲವಂತವಾಗಿ ಅದನ್ನು ಬಿಡಲಾಗದು. ಭಗವಂತ ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. ಮನುಷ್ಯನಿಗೆ ಅನೇಕ ರೀತಿಯ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ, ವಿಚಿತ್ರ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸುವ ಭಗವಂತ ‘ಕಂದರ್ಪಃ’.
ಕಾಮದೇವ-ಮನ್ಮಥನ  ನಂತರ ಕಾಮದ ಸಂಕೇತವಾದ ಸರ್ಪದ ಬಗ್ಗೆ ಕೃಷ್ಣ ವಿವರಿಸುತ್ತಾನೆ. ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು ಸರ್ಪ ಎನ್ನುತ್ತಾರೆ. ಸರೀಸೃಪಗಳಿಗೆಲ್ಲ  ರಾಜ ವಾಸುಕಿ. ಭಗವಂತ ‘ವಾಸುಕಿಃ’ ನಾಮಕನಾಗಿ ನಿಂತು, ವಾಸುಕಿಗೆ ಈ ಸ್ಥಾನವನ್ನು ಕೊಟ್ಟ. ಭಗವಂತ ಇಲ್ಲದ ಸ್ಥಳವಿಲ್ಲ. ಎಲ್ಲೆಡೆ ವಾಸಮಾಡುವ ಭಗವಂತ ‘ವಾಸುಕಿಃ.’.                       

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್  ।
ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥೨೯॥

ಅನಂತಃ ಚ ಅಸ್ಮಿ ನಾಗಾನಾಮ್ ವರುಣಃ ಯಾದಸಾಮ್ ಅಹಮ್     ।
ಪಿತೄಣಾಮ್ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಮ್ ಅಹಮ್ –ನಾಗರಹಾವುಗಳಲ್ಲಿ ಶೇಷ ನಾನು. [ಅಳಿವಿರದ್ದರಿಂದ ‘ಅನಂತ’ ಎನ್ನಿಸಿ ಶೇಷನಲ್ಲಿದ್ದೇನೆ.] ಜಲಚರಗಳ ಒಡೆಯ ವರುಣ [ವರ=ಹಿರಿದಾದ, ಣ=ಆನಂದಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು ಅವನಿಗೆ ಜಲಚರಗಳ ಒಡೆತನವನ್ನಿತ್ತವನು] ನಾನು. ಪಿತೃದೇವತೆಗಳಲ್ಲಿ ಅರ್ಯಮ ನಾನು. [ಅರ್ಯ=ಅರಿಯಬೇಕಾದವನು ಮತ್ತು ಮಾ=ಅರಿತವನು ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ.] ದಂಡಿಸುವವರಲ್ಲಿ ಯಮ[ನಿಯಮಿಸುವುದರಿಂದ ‘ಯಮ’ ಎನ್ನಿಸಿ, ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆಯಿತ್ತವನು]ನಾನು.

ಸರ್ಪಗಳ ಜಾತಿಯಲ್ಲಿ ಹೆಡೆ ಉಳ್ಳದ್ದು ‘ನಾಗರ’. ನಾಗರದಲ್ಲಿ ಅತ್ಯಂತ ಶ್ರೇಷ್ಠ ‘ಶೇಷ’. ಬಲರಾಮನಾಗಿ, ಲಕ್ಷ್ಮಣನಾಗಿ, ಸದಾ ಭಗವಂತನ ಹಾಸಿಗೆಯಾಗಿ ಇರುವ ಬಹಳ ದೊಡ್ಡ ದೇವತೆ ಶೇಷ. ಶೇಷ ಭೂಮಿಯ ಆಕರ್ಷಣ ಶಕ್ತಿಯಾದ(Gravity) ಸಂಕರ್ಷಣ. ಹೀಗಾಗಿ ಭೂಮಿಯನ್ನು ಶೇಷ ಹೊತ್ತಿದ್ದಾನೆ ಎನ್ನುತ್ತಾರೆ. ಇಂತಹ ಶೇಷನಲ್ಲಿ ಭಗವಂತ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಹೆಡೆಯಿರುವ ಹಾವುಗಳಿಗೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿದ, ಎಂದೂ ಅಳಿವಿರದ ಶೇಷಶಯನ ಭಗವಂತ ‘ಅನಂತಃ’.
“ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ ‘ವರುಣ’ ನಾನು”  ಎನ್ನುತ್ತಾನೆ ಕೃಷ್ಣ. ನೀರಿನ ಆವರಣದಲ್ಲಿ ಅನೇಕ ಜಲಚರ ಪ್ರಾಣಿಗಳಿಗೆ ಬದುಕು ಕೊಡುವ ವರುಣನೊಳಗೆ ವಿಶೇಷ ವಿಭೂತಿಯಾಗಿ ಭಗವಂತ ತುಂಬಿದ. ಇಲ್ಲಿ ಬರುವ ಭಗವಂತನ ನಾಮ ವರುಣಃ. ಹಿರಿದಾದ ಆನಂದ ಸ್ವರೂಪನಾದ್ದರಿಂದ ‘ವರುಣ’ ಎನ್ನಿಸಿ ವರುಣನಲ್ಲಿದ್ದು, ಅವನಿಗೆ ಜಲಚರಗಳ ಒಡೆತನವಿತ್ತ ಭಗವಂತ ‘ವರುಣಃ’.
ಭೂಮಿಯಿಂದ ದೇಹತ್ಯಾಗ ಮಾಡಿ ಹೋದ ಜೀವಗಳನ್ನು ನಿಯಂತ್ರಿಸುವ ದೇವತಾ ಶಕ್ತಿ-ಪಿತೃದೇವತೆಗಳು. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬ ಅರ್ಯಮನಲ್ಲಿ ಭಗವಂತ ವಿಶೇಷ ಶಕ್ತಿಯಾಗಿ ನಿಂತ. “ಅರಿಯಬೇಕಾದವನು(ಅರ್ಯ) ಮತ್ತು ಅರಿತವನು(ಮಾ) ಆದ್ದರಿಂದ ‘ಅರ್ಯಮನ್’ ಎನ್ನಿಸಿ, ಪಿತೃಪತಿಯಾದ ಅರ್ಯಮನೆಂಬ ಆದಿತ್ಯನಲ್ಲಿದ್ದೇನೆ”  ಎನ್ನುತ್ತಾನೆ ಕೃಷ್ಣ.
ಪಾಪ ಮಾಡಿದ ಜೀವಗಳನ್ನು ನಿಯಂತ್ರಿಸುವವ ಯಮ. ಯಮನೊಳಗೆ ಭಗವಂತನ ವಿಶೇಷ ಸನ್ನಿಧಾನವಿದೆ. ಯಮನಲ್ಲಿದ್ದು ನಿಯಮಿಸುವ ಭಗವಂತ ‘ಯಮಃ’. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ.        

No comments:

Post a Comment