Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, August 30, 2011

Bhagavad Geeta Kannada Chapter-10 Shloka 12-14


ಅರ್ಜುನ ಉವಾಚ
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್
ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್        ೧೨

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ೧೩


ಅರ್ಜುನಃ  ಉವಾಚ--ಅರ್ಜುನನು ಹೇಳಿದನು:
ಪರಮ್  ಬ್ರಹ್ಮ ಪರಮ್  ಧಾಮ ಪವಿತ್ರಮ್  ಪರಮಮ್  ಭವಾನ್
ಪುರುಷಮ್  ಶಾಶ್ವತಮ್  ದಿವ್ಯಮ್ ಆದಿ ದೇವಮ್ ಅಮ್  ವಿಭುಮ್  ||
ಹುಃ ತ್ವಾಮ್ ಋಷಯಃ ಸರ್ವೇ ದೇವ ಋಷಿಃ ನಾರದಃ ತಥಾ
ಅಸಿತಃ  ದೇವಲಃ  ವ್ಯಾಸಃ ಸ್ವಯಂ ಚ ಏವ ಬ್ರವೀಷಿ ಮೇ  -- ಪೂಜ್ಯನಾದ ನೀನು ಹಿರಿದಕ್ಕಿಂತ ಹಿರಿಯ ತತ್ವ. ಹಿರಿಯ ಆಸರೆ. ಪಾವನಗಳಿಗೂ ಪಾವನ. ನಿನ್ನನ್ನು ಗುಣಪೂರ್ಣನಾದ, ಪರಮ ‘ಪುರುಷ’ನೆಂದು, ಬದಲಾಗದವನೆಂದು, ಲೀಲಾಮಯನೆಂದು, ಎಲ್ಲ ದೇವತೆಗಳಿಗೂ ಮೊದಲಿಗನೆಂದು, ಜನ್ಮರಹಿತನೆಂದು, ಬಗೆಬಗೆಯ ರೂಪಗಳಿಂದ ಎಲ್ಲೆಡೆ ತುಂಬಿರುವವನೆಂದು ಬಲ್ಲವರೆಲ್ಲ ಹೊಗಳುತ್ತಾರೆ. ದೇವರ್ಷಿ ನಾರದ ಕೂಡ. ಅಸಿತ-ದೇವಲರು ಕೂಡ. ವ್ಯಾಸ ಮುನಿ ಹೇಳಿದ್ದುಂಟು. ಸ್ವತಃ ನೀನೂ ನನಗೆ ಹೇಳುತಿದ್ದೀಯಾ.

ಇಲ್ಲಿ ಅರ್ಜುನ ಕೃಷ್ಣನನ್ನು “ಪರಂಬ್ರಹ್ಮ, ಪರಂಧಾಮ, ಪರಮಪವಿತ್ರ ನೀನು”  ಎಂದು  ಸಂಬೋಧಿಸುತ್ತಾನೆ. ಯಾವುದು ಎಲ್ಲವುದಕ್ಕಿಂತ ದೊಡ್ಡದೋ ಅದು ಬ್ರಹ್ಮ. ಬ್ರಹ್ಮ ಅನ್ನುವ ಪದವನ್ನು ಇನ್ನೂ ಅನೇಕ ಅರ್ಥದಲ್ಲಿ ಬಳಸುತ್ತಾರೆ. ಅದಕ್ಕಾಗಿ ಇಲ್ಲಿ ಸ್ಪಷ್ಟತೆಗಾಗಿ ‘ಪರಂ ಬ್ರಹ್ಮ’ ಎಂದಿದ್ದಾರೆ. “ಎಲ್ಲಕ್ಕಿಂತ ದೊಡ್ಡವ ಮತ್ತು ನಂಬಿದವರನ್ನು ಎತ್ತರಕ್ಕೇರಿಸುವ ನೀನು ಪರಿಪೂರ್ಣ. ನಾನು ನನ್ನ ವ್ಯಕ್ತಿತ್ವದ ಪೂರ್ಣತೆಯನ್ನು ಕಾಣಲು ನಿನ್ನ ಅನುಗ್ರಹ ಬೇಕು” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇನ್ನು ಪರಂ ಧಾಮ: ‘ಧಾಮ’ ಅಂದರೆ ಆಶ್ರಯ. ಭಗವಂತನನ್ನು ಆಶ್ರಯಿಸದೆ ಇರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ. “ನೀನು ಸರ್ವಸ್ವತಂತ್ರ, ಮತ್ತು ನಾವೆಲ್ಲರೂ ನಿನ್ನ ಅಧೀನ, ನೀನು ಆಶ್ರಯಧಾತ ಮತ್ತು ನಾವು ಆಶ್ರಿತರು” ಎನ್ನುವ ಅರ್ಥದಲ್ಲಿ ಅರ್ಜುನ ಕೃಷ್ಣನನ್ನು ‘ಪರಂ ಧಾಮ’ ಎಂದಿದ್ದಾನೆ. ತತ್ವಾಭಿಮಾನಿ ದೇವತೆಗಳು ಒಂದೊಂದು ರೂಪದಲ್ಲಿ ನಮಗೆ ಆಶ್ರಯ ನೀಡುತ್ತಾರೆ. ಆದರೆ ಇಂತಹ ದೇವತೆಗಳಿಗೂ ಆಶ್ರಯಧಾತನಾಗಿರುವ ಭಗವಂತ ಪರಂ ಧಾಮ. ಸಮಸ್ತ ಜೀವರ ಅನಂತ ಯಾತ್ರೆಯಲ್ಲಿ ಆಶ್ರಯಧಾತನಾಗಿ ಉದ್ಧಾರ ಮಾಡುವ ಭಗವಂತ ಸರ್ವಾಶ್ರಯಧಾತ.
ಭಗವಂತ ‘ಪರಮಪವಿತ್ರ’. ಇಂತಹ  ಭಗವಂತನನ್ನು ನಾವು ಪವಿತ್ರತೆಯ ಪ್ರತೀಕವಾದ  ಅಗ್ನಿ ಮುಖೇನ  ಉಪಾಸನೆ ಮಾಡುತ್ತೇವೆ. ಅಗ್ನಿ ಸ್ವಯಂ ಪವಿತ್ರ ಮತ್ತು ಅದು ಎಂದೂ ಕೊಳಕಾಗುವುದಿಲ್ಲ. ಅಗ್ನಿ ತನ್ನ ಸ್ಪರ್ಶಕ್ಕೆ ಬಂದ ವಸ್ತುವನ್ನು  ಕೊಳೆರಹಿತ ಮಾಡುತ್ತದೆ. ಭಗವಂತ ನಮ್ಮನ್ನು ಮತ್ತು ಪ್ರಪಂಚವನ್ನು ಪಾವನಗೊಳಿಸುವ ಪರಮಶಕ್ತಿ.
ಅರ್ಜುನ ಇಲ್ಲಿ ತನ್ನೆಲ್ಲಾ ಭೌತಿಕ ಸಂಬಂಧವನ್ನು ಮೀರಿ ತನ್ನೆದುರು ನಿಂತಿರುವ ಆ ಪರಬ್ರಹ್ಮನನ್ನು ಕಾಣುತ್ತಿದ್ದಾನೆ. “ನನ್ನಲ್ಲಿ ಕೊಳೆ ತುಂಬಿದೆ, ಅಸೂಯೆ ಅಸಹನೆ ತುಂಬಿದೆ. ನಿನ್ನ ಅನುಗ್ರಹದಿಂದ, ಆಶ್ರಯದಿಂದ ನಾನು ಪವಿತ್ರನಾಗಬೇಕು. ನಿನ್ನಿಂದ ನಾನು ಆ ಎತ್ತರಕ್ಕೇರಿ ನನ್ನ ಪೂರ್ಣತೆಯನ್ನು ಪಡೆಯಬೇಕು” ಎನ್ನುವ ಬಯಕೆ ಅರ್ಜುನನ ಈ ಸಂಬೋಧನೆಯಲ್ಲಿದೆ.
ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಒಬ್ಬ ಸಾಧಕನಿಗೆ ದೇವರ ಉಪಾಸನೆಯಲ್ಲಿ ಇದು ಬಹಳ ಮುಖ್ಯ ಅಂಶ. ಏಕೆಂದರೆ ನಾವು ದೇವರ ಬಗ್ಗೆ ಏನು ಕಲ್ಪನೆ ಮಾಡಿದರೂ ಅದು ಕೇವಲ ಕಲ್ಪನೆ ಹೊರತು ಸಾಕ್ಷಾತ್ಕಾರವಲ್ಲ. ನಮ್ಮ ಕಲ್ಪನೆ ನಮ್ಮ ಮನಸ್ಸಿನ ಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಮನಸ್ಸಿನಲ್ಲಿ ಉತ್ಸಾಹ ಇದ್ದಾಗ ಏನೇನೋ ಹೊಸ-ಹೊಸ ಕಲ್ಪನೆಗಳು ಬರುತ್ತವೆ. ಅವೆಲ್ಲವೂ ಸತ್ಯವಾಗಿರಬೇಕೆಂದಿಲ್ಲ. ಹಾಗಾಗಿ ಅವರವರ ಬುದ್ಧಿ ಮಟ್ಟಕ್ಕೆ ತಕ್ಕಂತೆ ಅವರವರ ಕಲ್ಪನೆ ಹೊರತು ಭಗವಂತ ಹೇಗಿದ್ದಾನೆ ಹಾಗೆ ನಮ್ಮ ಕಲ್ಪನೆ ಇರುವುದಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ತನಗೆ ಬಂದ ವಿಚಾರ ತನ್ನ ಬುದ್ಧಿಮಟ್ಟದ ಕಲ್ಪನೆಯಲ್ಲ ಇದು ವಸ್ತುಸ್ಥಿತಿ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಋಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.
ಅರ್ಜುನ ಹೇಳುತ್ತಾನೆ “ನಿನ್ನನ್ನು ಪುರುಷಃ, ಶಾಶ್ವತಃ, ದಿವ್ಯಃ, ಆದಿದೇವಃ ಅಜಃ , ವಿಭುಃ ಎಂದು ಈ ಮಹಾತ್ಮರು ಹೇಳಿದ್ದಾರೆ” ಎಂದು. ಇಲ್ಲಿ ಬಳಸಿರುವ ಒಂದೊಂದು ಪದದಲ್ಲಿ  ಭಗವಂತನ ಅನಂತ ಗುಣ ಅಡಗಿದೆ. ವಿಷ್ಣುಸಹಸ್ರನಾಮದಲ್ಲಿ ಈ ಎಲ್ಲಾ ಪದಗಳನ್ನು  ಭಗವಂತನ ನಾಮವಾಗಿ ನಾವು ಕಾಣುತ್ತೇವೆ. ಬನ್ನಿ, ಇಲ್ಲಿ ಸಂಕ್ಷಿಪ್ತವಾಗಿ ಈ ಪದಗಳ ಅರ್ಥಾನುಸಂಧಾನ ಮಾಡೋಣ:  
ಪುರುಷಃ : ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಪುರದಲ್ಲಿ ವಾಸಿಸುವವನು ‘ಪುರುಷಃ’.  ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ ‘ಪುರುಷಸೂಕ್ತ’ ಭಗವಂತನನ್ನು ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ.  ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು, ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರಾ+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ. ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ, ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ. ಒಂದೊಂದು ಪಿಂಡಾಂಡದೊಳಗೆ ಒಂದೊಂದು ರೂಪದಲ್ಲಿ ಬಿಂಬ ರೂಪನಾಗಿ ತುಂಬಿ ಆ ಪಿಂಡಾಂಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ, ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ. ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸೃಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಎಲ್ಲೆಡೆ ಇರುವ ಈ ಹೃತ್ಕಮಲ ಮಧ್ಯ ನಿವಾಸಿ ಭಗವಂತ, ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರ. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮ ಅನೇಕ ರೀತಿಯಲ್ಲಿ ಭಗವಂತನ ಗುಣಾನುಸಂಧಾನ ಮಾಡುವ ನಾಮ.
ಶಾಶ್ವತಃ: ಅನಾದಿ ಅನಂತ ಕಾಲದಲ್ಲಿ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವ ಆನಂದಸ್ವರೂಪ ಭಗವಂತ ಶಾಶ್ವತಃ .
ದಿವ್ಯಃ : ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ದೇವರುಈ ಪದಗಳು ದಿವುಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.
೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. 
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'.
ಆದಿದೇವಃ: ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಯಾರಿಗೆ ಲೀಲಾ ಮಾತ್ರವೋ ಆತ ಆದಿದೇವಃ. ಭಗವಂತ ಈ ಪ್ರಪಂಚ ಇರುವಾಗಲೂ, ಇಲ್ಲದಾಗಲೂ ಇರುವವ. ಆತ ಎಲ್ಲಕ್ಕಿಂತ ಎತ್ತರದಲ್ಲಿರುವವನು. ಎಲ್ಲಾ ಕಾಲದಲ್ಲೂ  ಜಗತ್ತಿನ ಸರ್ವ ವ್ಯವಹಾರವನ್ನು ನಡೆಸುವವ ಆತ. ಹೀಗೆ ಎಲ್ಲವುದರ ಒಳಗಿದ್ದು, ಎಲ್ಲಾ ಕ್ರಿಯೆಗಳನ್ನು ನಡೆಸುವ ಭಗವಂತ ಆದಿದೇವಃ.    
ಅಜಃ: 'ನ ಜಾಯತೇ ಇತಿ ಅಜಃ'; '' ಎಂದರೆ ಜನನ; ಅ+ಜಃ-ಅಜಃ ಎಂದರೆ ಹುಟ್ಟಿರದವನು. ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿದ  ಚತುರ್ಮುಖನನ್ನು ಅಜ ಎನ್ನುತ್ತಾರೆ. ಇಂತಹ ಚತುರ್ಮುಖನೊಳಗೆ ಸನ್ನಿಹಿತನಾಗಿ, ಸೃಷ್ಟಿ ಮಾಡುವ ಭಗವಂತ, ತಾನು ಹುಟ್ಟದೆ, ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ ಅಜಃ. ಎಲ್ಲರೂ ಭಗವಂತನ ಮಕ್ಕಳು, ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ. ಇನ್ನು ಅಜಃ ಎಂದರೆ ಎಲ್ಲ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ '' ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ. ಅವನಲ್ಲಿ ಯಾವ ದೋಷವೂ ಇಲ್ಲ. ಇನ್ನೊಂದು ಅರ್ಥದಲ್ಲಿ ಅಜಃ ಅಂದರೆ ಯಾರಿಂದಲೂ ಹುಟ್ಟದವನು-ಆದರೆ ಎಲ್ಲರಲ್ಲೂ ಹುಟ್ಟುವವನು! ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಆತ ಹುಟ್ಟುತ್ತಾನೆ. ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ.
ವಿಭುಃ: ವಿವಿಧ+ಭವತಿ- ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ.  ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭುಃ.
ಇಲ್ಲಿ ಅರ್ಜುನ ವಿಶೇಷವಾಗಿ ದೇವರ್ಷಿ ನಾರದ, ಅಸಿತ-ದೇವಲ ಮತ್ತು ವ್ಯಾಸರ ಹೆಸರನ್ನು ಉಲ್ಲೇಖಿಸುತ್ತಾನೆ. ಏಕೆಂದರೆ ಅರ್ಜುನ ಇವರನ್ನು ಕಂಡಿದ್ದ ಮತ್ತು ಅವರು ಭಗವಂತನ ಬಗೆಗೆ ಹೇಳುವುದನ್ನು ಕೇಳಿದ್ದ. ನಾರದ ಮಹಾನ್ ಜ್ಞಾನಿ ಎನ್ನುವುದು ನಮಗೆ ತಿಳಿದಿದೆ. ದೇವತಾ ತಾರತಮ್ಯದಲ್ಲಿ ಇವರು ಹದಿನಾಲ್ಕನೇ ಮೆಟ್ಟಿಲಲ್ಲಿದ್ದಾರೆ. ಇವರು ಧರ್ಮರಾಯನ ಆಸ್ಥಾನದಲ್ಲಿ  ಭಗವಂತನ ಅಗ್ರಪೂಜೆ ನಡೆದಾಗ  ಬಂದು ಹರಸಿರುವ ದೇವಲೋಕದ ಋಷಿ. ನರ ಸಮುದಾಯದಲ್ಲಿರುವ ಅಜ್ಞಾನವನ್ನು ಸಂಹಾರ ಮಾಡಿ, ಭಗವಂತನ ಜ್ಞಾನವನ್ನು ಕೊಡುವ ನಾರದ, ನಮಗೆ ಸತ್ಯವನ್ನು ಹೊಳೆಸುವ ಅಂತಃಪ್ರಜ್ಞೆಯ(Intuition)ದೇವತೆ. ಆಜ್ಞಾಚಕ್ರವನ್ನು ಜಾಗೃತಗೊಳಿಸಿದಾಗ ನಮಗೆ ನಾರದರ ದರ್ಶನವಾಗುತ್ತದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ಅಂತರ್ದೃಷ್ಟಿಯಿಂದ ಉತ್ತರಿಸುವವರು ನಾರದರು.  ಅಸಿತ-ದೇವಲರು ಮಂತ್ರದೃಷ್ಟಾರರಾದ ವೇದಕಾಲದ ಋಷಿಗಳು. ಇವರು ಧರ್ಮರಾಯನ ಸಭೆಗೆ ಬಂದು ಆತನಿಗೆ ಧರ್ಮೋಪದೇಶ ಮಾಡಿದ್ದನ್ನು ಅರ್ಜುನ ನೋಡಿದ್ದ. ಇನ್ನು ವ್ಯಾಸರು: ವೇದವನ್ನು ವಿಭಾಗ ಮಾಡಿ, ನಮಗೆ ಹದಿನೆಂಟು ಪುರಾಣವನ್ನು, ಮಹಾಭಾರತ, ಪಂಚಮವೇದವನ್ನು ಕೊಟ್ಟ ಭಗವಂತನ ಅವತಾರ. “ಈ ಎಲ್ಲಾ ಮಹಾತ್ಮರು ಏನನ್ನು ಹೇಳಿದ್ದರೂ ಅದನ್ನೇ ನೀನು ನನಗೆ ಹೇಳುತ್ತಿದ್ದೀಯ” ಎನ್ನುತ್ತಾನೆ ಅರ್ಜುನ. ಹೀಗೆ ತನಗಾಗುತ್ತಿರುವ  ಅನುಭವ ಕೇವಲ ಭ್ರಮೆ ಅಲ್ಲ ಎನ್ನುವುದನ್ನು ಅರ್ಜುನ ಖಚಿತಪಡಿಸಿಕೊಳ್ಳುತ್ತಾನೆ.        

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ
ನಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ೧೪

ಸರ್ವಮ್ ಏತತ್ ಋತಮ್ ಮನ್ಯೇ ಯತ್ ಮಾಮ್ ವದಸಿ ಕೇಶವ
ಹಿ ತೇ ಭಗವನ್ ವ್ಯಕ್ತಿಮ್  ವಿದುಃ ದೇವಾಃ ನ ದಾನವಾಃ – ಓ ಕೇಶವ, ನೀನು ನನಗೇನು ಹೇಳಿದೆ ಅದೆಲ್ಲ ನಿಜವೆಂದು ಬಲ್ಲೆ. ಓ ಭಗವಾನ್, ನೀನು ಮೂಡಿಬಂದ ಬಗೆಯನ್ನು ದೇವತೆಗಳಾಗಲಿ, ದಾನವರಾಗಲಿ ಅರಿತವರಲ್ಲ.

“ನೀನು ಹೇಳುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎನ್ನುವುದನ್ನು ಬಲ್ಲೆ. ನಿನ್ನ ಅರಿವಿನ ಅಭಿವ್ಯಕ್ತಿಯನ್ನು ದೇವತೆಗಳಾಗಲಿ ದಾನವರಾಗಲಿ ತಿಳಿದಿಲ್ಲ” ಎನ್ನುತ್ತಾನೆ ಅರ್ಜುನ. ದೇವತೆಗಳಿಗೆ ಭಗವಂತನ ಗುಣಪ್ರಮಾಣವನ್ನು ಅಳೆಯಲು ಸಾಧ್ಯವಾಗಿಲ್ಲ. ದಾನವರು ಭಗವಂತನಲ್ಲಿ ದೋಷ ಹುಡುಕುವುದರಲ್ಲಿ ಯಶಸ್ವಿ ಆಗಿಲ್ಲ. ಏಕೆಂದರೆ ಭಗವಂತ ಅನಂತ ಗುಣಪೂರ್ಣ. ಆತನಲ್ಲಿ ಯಾವುದೇ ದೋಷವಿಲ್ಲ. ಆತನನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಅಸಾಧ್ಯ. ಭಗವಂತನ ಬಗೆಗೆ ಅವನೇ ಹೇಳಬೇಕು ಹೊರತು ಇನ್ನೊಬ್ಬರು ಅದನ್ನು ವರ್ಣಿಸಲು ಸಾಧ್ಯವಿಲ್ಲ. ಭಗವಂತನನ್ನು ಪೂರ್ಣ ತಿಳಿಯುವುದು ಹಾಗಿರಲಿ, ಆತನ ಒಂದು ಅವತಾರವನ್ನು, ಅವತಾರದಲ್ಲಿನ ಆತನ ಒಂದು ಲೀಲೆಯನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಕಷ್ಟ.  ಕೃಷ್ಣ ತನ್ನ ಅವತಾರದಲ್ಲಿ ನಡೆದುಕೊಂಡ ರೀತಿ ನಮಗೆ ಅರ್ಥವಾಗುವುದಿಲ್ಲ. ನಮಗೆ ಅದು ವಿಚಿತ್ರ ಎನಿಸುತ್ತದೆ. ಆತನನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆತನ ಒಂದೊಂದು ನಡೆಯ ಹಿಂದೆ ಒಂದೊಂದು ಸಂದೇಶವಿದೆ.

No comments:

Post a Comment