Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, August 6, 2011

Bhagavad Geeta Kannada Chapter-09 Shloka 26-27


ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ  ?
ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ,  ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ  ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ   ಅಲ್ಲಿ ನಾವು  ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ’ ಎಂದು ಸಂಕಲ್ಪ ಮಾಡಿದಾಗ   ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ‘ನನ್ನ ಗುರು’ ಎಂದು ನಮಸ್ಕಾರ ಮಾಡಿದರೆ ಭಾಗವತ ‘ಆ ಗುರುಗಳ ಒಳಗೆ ಭಗವಂತ  ಕೂತು ನನಗೆ ಪಾಠ ಹೇಳುತ್ತಿದ್ದಾನೆ’ ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ  ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ.  ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ ‘ನನಗೆ ಇದನ್ನು ಕೊಡು’ ಎಂದಾಗಾಲಿ ಅಥವಾ  ‘ಇದನ್ನು ನಿವಾರಿಸು’ ಎಂದಾಗಲಿ  ಎಂದೂ  ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ  ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ ‘ಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು.  ಇದು ಇಲ್ಲಿರುವ ಮೂಲ ಸಂದೇಶ.
ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:         

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ೨೬

ಪತ್ರಮ್  ಪುಷ್ಪಮ್  ಫಲಮ್  ತೋಯಮ್  ಯಃ  ಮೇ ಭಕ್ತ್ಯಾ ಪ್ರಯಚ್ಛತಿ
ತ್ ಅಮ್  ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತತ್ಮನಃ –ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.

  ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ‘ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ‘ಮನಸ್ಸು ತುಂಬಿ ಆರಾಧನೆ’ ಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ.  ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.  

ತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್  
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ೨೭

ತ್ ಕರೋಷಿ ಯತ್ ಅಶ್ನಾಸಿ ಯತ್ ಜುಹೋಷಿ ದದಾಸಿ ಯತ್     
ತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮತ್ ಅರ್ಪಣಮ್-ಕೌಂತೇಯ, ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನು ನನಗೆ ಒಪ್ಪಿಸು.

ಕೃಷ್ಣ ಹೇಳುತ್ತಾನೆ “ನನಗಾಗಿ ನೀನು ಏನನ್ನೂ ಮಾಡುವುದು ಬೇಡ ಆದರೆ ನಿನಗೋಸ್ಕರ ಏನು ಮಾಡುತ್ತೀಯೋ ಅದನ್ನು ನನಗೆ ಅರ್ಪಿಸು” ಎಂದು. ನಮ್ಮ ನಿತ್ಯ ಜೀವನದಲ್ಲಿ ಮಾಡಬೇಕಾದ ಅನೇಕ ಅನಿವಾರ್ಯ ವೃತ್ತಿ ಕಾರ್ಯಗಳಿರುತ್ತವೆ. ಜೀವನ ನಿರ್ವಹಣೆಯ ಕಾಯಕವಿರುತ್ತದೆ. ನಾವು ಅದನ್ನೇ ಭಗವಂತನ ಪೂಜೆ ಎಂದು ತಿಳಿದು ಮಾಡಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಧರ್ಮವ್ಯಾಧನ ಕಥೆ. ಮಾಂಸ ವಿಕ್ರಯ ಮಾಡಿ ಜೀವನ ಸಾಗಿಸುತ್ತಿದ್ದ ಆತನಲ್ಲಿ ಒಂದು ಸಂಕಲ್ಪ ಇತ್ತು. “ಮಾಂಸ ತಿನ್ನುವುದು ನನಗೆ ಆನುವಂಶೀಯವಾಗಿ ಬಂದ ಅಭ್ಯಾಸ. ಆದ್ದರಿಂದ ನಾನು ಮಾಂಸ ತಿನ್ನುತ್ತೇನೆ, ನನಗೆ ಬದುಕುವುದಕ್ಕೋಸ್ಕರ ಮತ್ತು ನನ್ನ ತಂದೆತಾಯಿಯನ್ನು ಸಾಕುವುದಕ್ಕೊಸ್ಕರ ನನ್ನ ಪಾಲಿಗೆ ಬಂದ ಈ ವೃತ್ತಿಯನ್ನು ನಾನು ಮಾಡುತ್ತೇನೆ. ಇದರಿಂದ ನನ್ನ ಬದುಕಿಗೆ ಬೇಕಾದಷ್ಟನ್ನು ಮಾತ್ರ ನಾನು ಗಳಿಸುತ್ತೇನೆ. ಎಂದೂ ವ್ಯವಹಾರದಲ್ಲಿ ಜನರ ಶೋಷಣೆ ಮಾಡುವುದಿಲ್ಲ” ಎಂದುಕೊಂಡು ಮಾಂಸ ವಿಕ್ರಯ ಮಾಡುತ್ತಿದ್ದ ಆತ. ಇದರಿಂದ ಆತನಿಗೆ ದೊಡ್ಡ ಜ್ಞಾನಿ ಧರ್ಮವ್ಯಾಧ ಎನ್ನುವ ಹೆಸರು ಬಂತು. ಋಷಿ ಮುನಿಗಳು ಆತನಿಂದ ಪಾಠ ಕಲಿಯುವ ಪ್ರಸಂಗ ಬಂತು. ಇದಕ್ಕೆ ಮೂಲ ಕಾರಣ ಆತ ತಾನು ಏನು ಮಾಡುತ್ತಿದ್ದನೋ ಅದನ್ನು ದೇವರ ಪೂಜೆ ಎಂದು ಮಾಡಿದ ಅಷ್ಟೇ. ಹೀಗೆ ಎಂದೂ ನಾವು ಮಾಡುವ ವೃತ್ತಿ  ಮುಖ್ಯವಾಗುವುದಿಲ್ಲ,  ಬದಲಿಗೆ ಅದನ್ನು ಭಗವಂತನ ಪೂಜೆ ಎಂದು ಮಾಡುವ ಅನುಸಂಧಾನ ಮುಖ್ಯವಾಗುತ್ತದೆ.
ನಿನ್ನ ನಿತ್ಯ ಕರ್ತವ್ಯ ಏನಿದೆ ಅದನ್ನು ಭಗವಂತನಿಗೆ ಅರ್ಪಿಸು. ಅದನ್ನು ಭಗವಂತನ ಪೂಜೆ ಎಂದು ಮಾಡು. ಭಗವಂತನಿಗಾಗಿ ಭಕ್ಷ್ಯ ಭೋಜ್ಯವನ್ನು ಮಾಡುವ ಅಗತ್ಯವಿಲ್ಲ. ನೀನು ಏನನ್ನು ತಿನ್ನುತ್ತೀಯೋ ಅದನ್ನು ಭಗವಂತನಿಗೆ ಅರ್ಪಿಸು. ಹೀಗೆ ಮಾಡಿದಾಗ ಭಗವಂತನ ಆರಾಧನೆ ಪ್ರತ್ಯೇಕವಾಗುವುದಿಲ್ಲ ಮತ್ತು ಕಷ್ಟವಾಗುವುದಿಲ್ಲ. ಭಗವಂತನಿಗಾಗಿ ಯಾವುದೋ ವಿಶೇಷ ಹೋಮ ಹವನ ಮಾಡುವ ಅಗತ್ಯವಿಲ್ಲ. ನೀನು ಏನು ಹೋಮ ಮಾಡುತ್ತೀಯೋ ಅದನ್ನೇ ‘ಅಗ್ನಿ ಅಂತರ್ಗತ ನಾರಾಯಣಾಯ ಇದಮ್ ನ ಮಮ’ ಎಂದು ಅರ್ಪಿಸು.  ಒಬ್ಬ ಹಸಿದ ವ್ಯಕ್ತಿ ಆತನ ಹೊಟ್ಟೆಯಲ್ಲಿ ವೈಶ್ವಾನರ ರೂಪಿ ಭಗವಂತನನ್ನು ಹೊತ್ತು ಬಂದಿದ್ದಾನೆ ಎಂದು ತಿಳಿದು  ಆತನೊಳಗಿರುವ  ವೈಶ್ವಾನರ ಪ್ರಸನ್ನನಾಗಲಿ ಎಂದು ಆ ವ್ಯಕ್ತಿಯನ್ನು ಸತ್ಕಾರ ಮಾಡು. ಇದೇ ಭಗವಂತನ ಮಹಾ ಪೂಜೆ ಎನಿಸುತ್ತದೆ.
ಕೃಷ್ಣ ಹೇಳುತ್ತಾನೆ “ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್” ಎಂದು. ಇಲ್ಲಿ ತಪಸ್ಸು ಎಂದರೆ ‘ಚಿಂತನೆ’ ಅಥವಾ ವೃತಾನುಷ್ಟಾನ. ಉದಾಹರಣೆಗೆ ‘ಸಂಕಷ್ಟಿ’- ಅದನ್ನು ಆಚರಿಸುವಾಗ ಗಣಪತಿ ಅಂತರ್ಗತನಾದ ಭಗವಂತನಿಗೆ ಅರ್ಪಿತವಾಗಲಿ ಎಂದು ಮಾಡು. ಅಲ್ಲಿ ಯಾವುದೇ ಫಲಾಪೇಕ್ಷೆ ಅಹಂಕಾರ ಇಟ್ಟುಕೊಳ್ಳಬೇಡ. ಹೀಗೆ ಯಾವ ಆಚರಣೆಯೂ ಕೂಡಾ ಅಂತತಃ ಪರಮ ಪುರುಷನಾದ ಭಗವಂತನಿಗೆ ಅರ್ಪಿತ ಎಂದು ತಿಳಿದು ಮಾಡಿದಾಗ ಅದು ನಿಜವಾದ ತಪಸ್ಸಾಗುತ್ತದೆ.  ಇಲ್ಲಿ ಅರ್ಜುನನಿಗೆ “ನಿನ್ನ ಕರ್ತವ್ಯ ಕರ್ಮವಾಗಿ ಬಂದಿರುವ ಈ  ಯುದ್ಧವನ್ನೂ ಕೂಡಾ ಭಗವಂತನ ಪೂಜೆಯಾಗಿ ಮಾಡು” ಎನ್ನುವ ಸಂದೇಶವನ್ನು ಈ ಶ್ಲೋಕದ ಮೂಲಕ  ಕೃಷ್ಣ ನೀಡಿದ್ದಾನೆ.

No comments:

Post a Comment