Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, July 19, 2011

Bhagavad Geeta Kannada Chapter-08 Shloka 11-16

ಹೀಗೆ ಭ್ರುಮಧ್ಯೆ ಜೀವವನ್ನು ತಂದು ನಿಲ್ಲಿಸುವ ವಿಧಾನವನ್ನು ವಿವರಿಸಿದ ಕೃಷ್ಣ, ಅಲ್ಲಿಂದ ಮುಂದೆ ಸಹಸ್ರಾರದ ಶಕ್ತಿ ಕೇಂದ್ರದ ದ್ವಾರದ ಮೂಲಕ ಜೀವ  ಹೊರ ಹೋಗುವ  ವಿಧಾನವನ್ನು ಇನ್ನೂ ವಿವರವಾಗಿ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.      

ಯದಕ್ಷರಂ ವೇದವಿದೋ ವದಂತಿ ವಿಶಂತಿ ದ್ ಯತಯೋ ವೀತರಾಗಾಃ   
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ  ತ್  ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ೧೧

ತ್ ಅಕ್ಷರಂ ವೇದವಿದಃ  ವದಂತಿ ವಿಶಂತಿ ತ್  ಯಯಃ  ವೀತ ರಾಗಾಃ
ತ್ ಇಚ್ಛಂತಃ  ಬ್ರಹ್ಮಚರ್ಯಮ್  ಚರಂತಿ  ತ್  ತೇ ಪದಮ್  ಸಂಗ್ರಹೇಣ ಪ್ರವಕ್ಷ್ಯೇ –ವೇದ ಬಲ್ಲವರು ಅಳಿವಿರದ ಅದನ್ನು ‘ಅಕ್ಷರ’ ಎನ್ನುತ್ತಾರೆ. ಭೋಗದ ಒಲವು ತೊರೆದ ಸಾಧಕರು ಅದನ್ನೇ ಸೇರುತ್ತಾರೆ. ಅದನ್ನು ಸೇರಬಯಸಿಯೆ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ.  ಅಂಥ ಮುಕ್ತಿಪ್ರದವಾದ ಪರತತ್ವವನ್ನುನಿನಗೆ ಅಡಕವಾಗಿ ಹೇಳುತ್ತೇನೆ.

ಕೃಷ್ಣ ಹೇಳುತ್ತಾನೆ “ಯೋಗ ಸಾಧನೆಯಿಂದ ಭ್ರುಮಧ್ಯೆ ತಂದು ನಿಲ್ಲಿಸಿದ ಜೀವವನ್ನು ಅಲ್ಲಿಂದ ಧ್ಯಾನ ಮಾಡುತ್ತಾ ಮೇಲಕ್ಕೆ ಸಹಸ್ರಾರದತ್ತ ತೆಗೆದುಕೊಂಡು ಹೋಗಬೇಕು” ಎಂದು. ಈ ಕಾಲದಲ್ಲಿ ಧ್ಯಾನ ಮಾಡಬೇಕಾದ ರೂಪದ ಬಗ್ಗೆ  ಹೇಳುತ್ತಾ ಕೃಷ್ಣ ಹೇಳುತ್ತಾನೆ “ವೇದವನ್ನು ಬಲ್ಲವರು ಅದನ್ನು ಅಳಿವಿರದ ‘ಅಕ್ಷರ’(ಓಂಕಾರ ಎನ್ನುವ ಅಕ್ಷರದಿಂದ ಪ್ರತಿಪಾಧ್ಯನಾದ ಸರ್ವಶಬ್ದ ವಾಚ್ಯ) ಎನ್ನುತ್ತಾರೆ” ಎಂದು. ಮಹಾ ಪ್ರಯತ್ನದಿಂದ ಭಗವಂತನನ್ನು ಒಲಿಸಿಕೊಂಡವರು, ಪ್ರಾಪಂಚಿಕ ಸೆಳೆತದಿಂದ ಪಾರಾದವರು, ಆ ಭಗವಂತನನ್ನು ಹೋಗಿ ಸೇರುತ್ತಾರೆ. “ಅವರು ಅಂತಹ ಭಗವಂತನನ್ನು ತಿಳಿದುಕೊಳ್ಳಬಯಸಿ ಬ್ರಹ್ಮಚರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ”  ಎನ್ನುತ್ತಾನೆ ಕೃಷ್ಣ. [ಇಲ್ಲಿ ‘ಬ್ರಹ್ಮಚರ್ಯ’ ಎಂದರೆ ನಿಘಂಟಿನಲ್ಲಿ ಹೇಳುವ  ದೈಹಿಕ ಬ್ರಹ್ಮಚರ್ಯವಲ್ಲ, ಬದಲಿಗೆ ‘ಬ್ರಹ್ಮಣಿ ಚರಣಂ’-ಭಗವಂತನಲ್ಲಿ ಮನಸ್ಸು ನೆಲೆಗೊಳ್ಳುವಿಕೆ-ಬ್ರಹ್ಮಚರ್ಯ]. “ಅದನ್ನು ಸೇರಬಯಸಿಯೆ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ. ಈ ರೀತಿ ಮೋಕ್ಷವನ್ನು ಪಡೆಯುವ ಪ್ರಕ್ರಿಯೆಯನ್ನು ಸಂಗ್ರಹವಾಗಿ ನಿನಗೆ ಹೇಳುತ್ತೇನೆ” ಎಂದು ಹೇಳಿ ಕೃಷ್ಣ ಈ ಪ್ರಕ್ರಿಯೆಯನ್ನು ಮುಂದಿನ ಶ್ಲೋಕಗಳಲ್ಲಿ ಅರ್ಜುನನಿಗೆ ವಿವರಿಸುತ್ತಾನೆ.       

ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುದ್ಧ್ಯ
ಮೂರ್ಧ್ನ್ಯಾSಧಾಯಾSತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್            ೧೨

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್  ಮಾಮನುಸ್ಮರನ್
ಯಃ ಪ್ರಯಾತಿ ತ್ಯಜನ್ ದೇಹಂ  ಸ ಯಾತಿ ಪರಮಾಂ ಗತಿಮ್ ೧೩

ಸರ್ವದ್ವಾರಾಣಿ ಸಂಯಮ್ಯ ಮನಃ  ಹೃದಿ ನಿರುದ್ಧ್ಯ
ಮೂರ್ಧ್ನಿ ಆಧಾಯಾತ್ಮನಃ ಪ್ರಾಣಮ್ ಆಸ್ಥಿತಃ  ಯೋಗ ಧಾರಣಾಮ್ ||
ಓಂ ಇತಿ ಏಕಾಕ್ಷರಮ್  ಬ್ರಹ್ಮ ವ್ಯಾಹರನ್  ಮಾಮ್ ಅನುಸ್ಮರನ್
ಯಃ ಪ್ರಯಾತಿ ತ್ಯಜನ್ ದೇಹಮ್   ಸಃ  ಯಾತಿ ಪರಮಾಮ್  ಗತಿಮ್ – ಎಲ್ಲ ನಾಡೀ ದ್ವಾರಗಳನ್ನು ತಡೆ ಹಿಡಿದು , ಬಗೆಯನ್ನು ಭಗವಂತನಲ್ಲೆ ಬಿಗಿ ಹಿಡಿದು,ತನ್ನ ಪ್ರಾಣವಾಯುವನ್ನು ನೆತ್ತಿಯಲ್ಲಿರಿಸಿ ಯೋಗ ಸಾಧನೆಯಲ್ಲಿ ನೆಲೆಗೊಂಡವನು, ‘ಓಮ್’ ಎಂಬ ಒಂದಕ್ಷರದಿಂದ ವಾಚ್ಯನಾದ ಪರತತ್ವವನ್ನು ಕೊಂಡಾಡುತ್ತಾ, ನನ್ನನ್ನು ನೆನೆಯುತ್ತ, ದೇಹ ತೊರೆದು ಮೇಲೇರಿದವನು ಮರಳಿ ಬರದ ತಾಣವನ್ನು ಸೇರುತ್ತಾನೆ.

ಸಹಸ್ರಾರದತ್ತ ಜೀವವನ್ನು ಕೊಂಡೊಯ್ಯುವಾಗ ದೇಹದ ಇತರ ಎಲ್ಲಾ ದ್ವಾರಗಳನ್ನೂ ಯೋಗ ಬಲದಿಂದ ಮುಚ್ಚಬೇಕು ಮತ್ತು ಮುಚ್ಚಿರುವ ಸಹಸ್ರಾರದ ಬಾಗಿಲನ್ನು ತೆರೆದು ಹೊರಹೋಗಬೇಕು. ಈ ರೀತಿ ಮಾಡುವಾಗ ಮನಸ್ಸನ್ನು ಆ ಸರ್ವಸಂಹಾರಕ ಭಗವಂತನಲ್ಲಿ ನೆಲೆಗೊಳಿಸಬೇಕು. ಪೂರ್ಣಪ್ರಮಾಣದಲ್ಲಿ ತನ್ನ ಯೋಗಾಭ್ಯಾಸವನ್ನು ಬಳಸಿ, ಶ್ವಾಸ ನಿರೋಧ ಮಾಡಿ, ಮನಸ್ಸನ್ನು ಭಗವಂತನಲ್ಲಿಟ್ಟು ಧ್ಯಾನ ಮಾಡಬೇಕು. “ಓಂಕಾರ ಪ್ರತಿಪಾಧ್ಯನಾದ ನನ್ನನ್ನು ಓಂಕಾರದಿಂದ ನೆನೆಯುತ್ತಾ ಸಹಸ್ರರದ ಬಾಗಿಲಿನಿಂದ ಹೊರಬಂದು ದೇಹ ತ್ಯಾಗ ಮಾಡಿ ಮೇಲೇರಿದವನು ಮುಂದೆಂದೂ ಮರಳಿ ಬರದ ತಾಣವಾದ ಮೋಕ್ಷ(ಭಗವಂತ)ವನ್ನು ಸೇರುತ್ತಾನೆ".

ಈ ಸಾಧನೆ ಕೇವಲ ಹಠಯೋಗಿಗಳಿಗೆ ಸಾಧ್ಯ ಮತ್ತು ಇದು ತುಂಬಾ ಕಷ್ಟದ ಸಾಧನೆ. ಎಲ್ಲರೂ ಈ ರೀತಿ ಯೋಗಾಭ್ಯಾಸ ಮಾಡಿ ಸಿದ್ಧಿ ಪಡೆಯುವುದು ಸಾಧ್ಯವಿಲ್ಲ. ಅದಕ್ಕಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ಸುಲಭದ ಮಾರ್ಗವನ್ನು ವಿವರಿಸುತ್ತಾನೆ.         

ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ
ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ          ೧೪

ಅನನ್ಯ ಚೇತಾಃ ಸತತಮ್  ಯಃ  ಮಾಮ್  ಸ್ಮರತಿ ನಿತ್ಯಶಃ
ತಸ್ಯಮ್  ಸುಲಭಃ ಪಾರ್ಥ ನಿತ್ಯ ಯುಕ್ತಸ್ಯ ಯೋಗಿನಃ   -ಪಾರ್ಥಾ, ಬೇರೇನನ್ನೂ ನೆನೆಯದೆ ಅನುದಿನವೂ ನಿರಂತರ ನನ್ನನ್ನು ನೆನೆಯುವವನಿಗೆ, ಅಂಥ ನಿರಂತರ ಸಾಧನೆಯಿಂದ ಸಿದ್ಧಿಪಡೆದವನಿಗೆ ನಾನು ಕೈಸೆರೆ.

  “ನಿರಂತರ ನಿತ್ಯ ಭಗವಂತನ ಚಿಂತನೆ ಮಾಡುತ್ತಾ ಬೇರೇನನ್ನೂ ನೆನೆಯದೆ ನನ್ನನ್ನು ಭಜಿಸುವ ಸಾಧಕನಿಗೆ ನಾನು ಅನಾಯಾಸವಾಗಿ ಸ್ವಾಧೀನನಾಗುತ್ತೇನೆ” ಎನ್ನುತ್ತಾನೆ ಕೃಷ್ಣ. ಸಾಧನೆಯಲ್ಲಿ ನಿತ್ಯ ತೊಡಗಿ, ಸಾಧನೆಯ ತುದಿ ಮುಟ್ಟಿದವ ಬೇರೆ ಯಾವ ಪ್ರಯತ್ನವೂ ಇಲ್ಲದೆ ಭಗವಂತನನ್ನು ಸೇರುತ್ತಾನೆ  

ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್     
ನಾSಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ    ೧೫

ಮಾಮ್ ಉಪೇತ್ಯ ಪುನಃ ಜನ್ಮ ದುಃಖಲಯಮ್ ಅಶಾಶ್ವತಮ್     
ನ ಅಪ್ನುವಂತಿ ಮಹಾತ್ಮಾನಃ ಸಂಸಿದ್ಧಿಮ್  ಪರಮಾಮ್  ಗತಾಃ –ಹಿರಿಯ ಸಿದ್ಧಿಯನ್ನು ಪಡೆದ ಇಂಥ ಜೀವಗಳು ನನ್ನನ್ನು ಪಡೆದ ಮೇಲೆ ದುಗುಡಗಳ ನೆಲೆಯಾದ ನಾಲ್ಕು ದಿನದ ಈ ಸಂಸಾರದಲ್ಲಿ ಮರಳಿ ಹುಟ್ಟಿ ಬರುವುದಿಲ್ಲ.

ಸಾಧನೆಯ ಮೂಲಕ ಸಿದ್ಧಿಯನ್ನು ಪಡೆದು ಭಗವಂತನನ್ನು ಸೇರಿದ ಜೀವರು ಎಂದೂ ದುಃಖಮಾಯವಾದ ಮತ್ತು ಅಶಾಶ್ವತವಾದ ಈ ಸಂಸಾರದಲ್ಲಿ ಮರಳಿ ಹುಟ್ಟುವುದಿಲ್ಲ. “ನನ್ನನ್ನು ಬಂದು ಸೇರುವವರು ಪುಣ್ಯಾತ್ಮರು. ಜಗತ್ತಿನಲ್ಲಿ, ಜೀವನದ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠವಾದ ಸಿದ್ಧಿ ಎಂದರೆ ಭಗವಂತನ ಸಾಕ್ಷಾತ್ಕಾರ. ಅದನ್ನು ಪಡೆದವರು ಮತ್ತೆ ಸಂಸಾರದ ಬಂಧದಲ್ಲಿ ಸಿಲುಕಿ ಒದ್ದಾಡುವ ಅಗತ್ಯವಿಲ್ಲ” ಎನ್ನುತ್ತಾನೆ ಕೃಷ್ಣ .   

ಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ         
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ        ೧೬

ಬ್ರಹ್ಮಭುವನಾತ್ ಲೋಕಾಃ  ಪುನಃ ಆವರ್ತಿನಃ ಅರ್ಜುನ  
ಮಾಮ್ ಉಪೇತ್ಯ ತು ಕೌಂತೇಯ ಪುನಃ ಜನ್ಮ ನ ವಿದ್ಯತೇ –ಅರ್ಜುನ, ಬ್ರಹ್ಮ ಲೋಕದ ತನಕದ ಎಲ್ಲ ಲೋಕಗಳಿಂದಲೂ  ಮರಳಿ ಬರಲೇಬೇಕು. ಕೌಂತೇಯ, ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ.

ಬ್ರಹ್ಮ ಲೋಕದಿಂದ ಹಿಡಿದು ಇತರ ಎಲ್ಲಾ ಲೋಕಗಳಿಗೂ ಒಂದು ದಿನ ನಾಶವಿದೆ. ಚತುರ್ಮುಖ ಬ್ರಹ್ಮನ ಆಯಸ್ಸು 31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ. ಇದು ಭಗವಂತನಿಗೆ ಒಂದು ಹಗಲಿನಂತೆ!  ಭಗವಂತ ಕಾಲಾತೀತ. ಆದ್ದರಿಂದ ಕೃಷ್ಣ ಹೇಳುತ್ತಾನೆ “ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ” ಎಂದು.  

No comments:

Post a Comment