Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, July 6, 2011

Bhagavad Geeta in Kannada Chapter-07 Shloka 24-26


ಭಗವಂತನನ್ನು ತಿಳಿಯಬೇಕು ಎಂದು ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಸಾಗಿದವರಿಗೂ ಕೂಡ ಭಗವಂತನನ್ನು ತಿಳಿಯುವುದು ಎಷ್ಟು ಕಷ್ಟ ಎನ್ನುವುದನ್ನು ಕೃಷ್ಣ ಈ ಅಧ್ಯಾಯದಲ್ಲಿ ಇನ್ನೂ ವಿವರಿಸುತ್ತಾನೆ.    

ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್    ೨೪

ಅವ್ಯಕ್ತಮ್  ವ್ಯಕ್ತಿಮ್ ಅಪನ್ನಮ್  ಮನ್ಯಂತೇ ಮಾಮ್ ಅಬುದ್ಧಯಃ
ಪರಮ್  ಭಾವಮ್ ಅಜಾನಂತಃ ಮಮ ಅವ್ಯಯಮ್ ಅನುತ್ತಮಮ್-ಅಳಿವಿರದ, ಮಿಗಿಲಿರದ ನನ್ನ ಮಹಿಮೆಯ ಹಿರಿಮೆಯನ್ನರಿಯದ  ತಿಳಿಗೇಡಿಗಳು ದೇಹದಿಂದ ಹುಟ್ಟಿಬರದ ನನ್ನನ್ನು ಹುಟ್ಟಿಬಂದೆ ಎಂದು [ಭಗವಂತನೇ ಜೀವಭಾವ ಪಡೆದನೆಂದು ] ತಿಳಿದುಬಿಡುತ್ತಾರೆ.
ಸಾಮಾನ್ಯವಾಗಿ ಭಗವಂತನ ಬಗೆಗೆ ಸರಿಯಾದ ತಿಳುವಳಿಕೆ ಗಳಿಸುವುದು ಕಷ್ಟ. ಆದರೆ ತಪ್ಪು ಗ್ರಹಿಕೆ ಸುಲಭ. ಇಲ್ಲಿ ಕೃಷ್ಣ ಹೇಳುತ್ತಾನೆ “ನಾನು ವಸ್ತುತಃ ಅವ್ಯಕ್ತ” ಎಂದು. ಜೀವ ವ್ಯಕ್ತ ಆಗುವುದು ಅದಕ್ಕೆ ಪಾಂಚಭೌತಿಕ ಶರೀರ ಬಂದಾಗ. ಆದ್ದರಿಂದ ಸ್ಥೂಲವಾದ ಶರೀರವುಳ್ಳದ್ದನ್ನು ವ್ಯಕ್ತ ಎನ್ನುತ್ತಾರೆ. ಭಗವಂತನಿಗೆ ಒಂದು ದಿನ ನಾಶವಾಗುವ ಪಾಂಚಭೌತಿಕ ಶರೀರ ಇಲ್ಲ- ಆತ ಸರ್ವದಾ ಅವ್ಯಕ್ತ. ಇಂತಹ ಅವ್ಯಕ್ತ ಭಗವಂತ ತನ್ನ ಅವತಾರದಲ್ಲಿ  ತನ್ನ ಸ್ವತಃ ಇಚ್ಛೆಯಿಂದ ಒಂದು ರೂಪದಲ್ಲಿ  ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ.  ಶಾಸ್ತ್ರೀಯವಾಗಿ ಭಗವಂತನ ಸ್ವರೂಪದ ಅರಿವಿಲ್ಲದ ಜನ ತಮಗೆ ಕಾಣುವ ಅವತಾರರೂಪಿ ಭಗವಂತನಿಗೆ ತಮ್ಮಂತೆ ಪಾಂಚಭೌತಿಕ ಶರೀರವಿದೆ ಮತ್ತು ಭಗವಂತ ಒಂದು ದಿನ ದೇಹತ್ಯಾಗ ಮಾಡುತ್ತಾನೆ ಎಂದು ತಿಳಿಯುತ್ತಾರೆ. ವ್ಯಕ್ತವಾದ, ಸ್ಥೂಲವಾದ, ನಶ್ವರವಾದ, ಪ್ರಾಕೃತವಾದ ಶರೀರ ಇಲ್ಲದ ಭಗವಂತನನ್ನು ಅಂತಹ ಸ್ಥೂಲವಾದ ಶರೀರದೊಳಗೆ ಬದ್ಧನಾಗಿರುವವನು ಎನ್ನುವ ಅರ್ಥದಲ್ಲಿ ಅವರು ತಿಳಿದುಕೊಳ್ಳುತ್ತಾರೆ. “ಹೀಗೆ ತಿಳಿದುಕೊಳ್ಳುವವರು ಬುದ್ಧಿಶೂನ್ಯರು” ಎನ್ನುತ್ತಾನೆ ಕೃಷ್ಣ.    

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ    
ಮೂಢೋSಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್   ೨೫

ಅಹಮ್ ಪ್ರಕಾಶಃ ಸರ್ವಸ್ಯ ಯೋಗ ಮಾಯಾ ಸಮಾವೃತಃ         
ಮೂಢಃ ಅಮ್ ನ ಅಭಿಜಾನಾತಿ ಲೋಕಃ  ಮಾಮ್ ಅಮ್ ಅವ್ಯಯಮ್-ನನ್ನ ಸಾಮರ್ಥ್ಯ ಮತ್ತು ಪ್ರಕೃತಿಯ ಮಾಯೆಯಿಂದ ಮುಚ್ಚಿಕೊಂಡಿರುವ ನಾನು ಎಲ್ಲರಿಗೂ ಬಯಲಾಗಲಾರೆ. ಹುಟ್ಟಿರದ ಸಾವಿರದ ನನ್ನನ್ನು ಈ ತಿಳಿಗೇಡಿ ಮಂದಿ ತಿಳಿಯಲಾರರು.

ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಆತನ ಅನಂತ ಗುಣದ ಸ್ಪಷ್ಟ ಚಿತ್ರ ಯಾರಿಗೂ ಬರುವುದು ಸಾಧ್ಯವಿಲ್ಲ. ಮನುಷ್ಯನ ಚಿಂತನೆಗೆ ಒಂದು ಮಿತಿ ಇದೆ, ಆದರೆ ಭಗವಂತ ಆ ಮಿತಿಯ ಒಳಗಿಲ್ಲ. ಆದ್ದರಿಂದ ನಮ್ಮ ಬುದ್ಧಿ ಆತನ ಅನಂತವಾದ ಜ್ಞಾನವನ್ನು, ಅನಂತವಾದ ಶಕ್ತಿಯನ್ನೂ, ಆನಂತ ರೂಪವನ್ನು ಗ್ರಹಿಸಲಾರದು. ನಾವು ಇಚ್ಛೆಪಟ್ಟಾಗ ಭಗವಂತ ಕಾಣುವುದಿಲ್ಲ. ಆದರೆ ಕಾಲ ಪಕ್ವವಾದಾಗ ತನ್ನ ಇಚ್ಛೆಯಂತೆ  ಭಗವಂತ ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಗಳಿಗೆ ಯಥಾಶಕ್ತಿ ಗೋಚರವಾಗಬಲ್ಲ.
ಈ ಲೋಕದಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ  ಎಂದೂ ಭಗವಂತನನ್ನು ಗ್ರಹಿಸಲಾರದು. ಜೀವನಿಗೂ ಮತ್ತು ಭಗವಂತನಿಗೂ ನಡುವೆ ಇರುವ ಅಜ್ಞಾನವೆಂಬ ಮಾಯಾ ಪರದೆಯಿಂದಾಗಿ ಭಗವಂತ ನಮಗೆ ಕಾಣುವುದಿಲ್ಲ.     

ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ         
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ೨೬

ವೇದ ಅಹಮ್ ಸಮತೀತಾನಿ ವರ್ತಮಾನಾನಿ ಚ ಅರ್ಜುನ  
ಭವಿಷ್ಯಾಣಿ ಚ ಭೂತಾನಿ ಮಾಮ್  ತು ವೇದ ನ ಕಶ್ಚನ- ಅರ್ಜುನ , ನಾನು ತಿಳಿದಿದ್ದೇನೆ-ಹಿಂದಿದ್ದ ಜೀವಿಗಳನ್ನು, ಈಗಿರುವವರನ್ನು,ಮುಂದೆ ಬರುವವರನ್ನು ಕೂಡ. ನನ್ನನ್ನು ಮಾತ್ರ ಯಾರೂ ತಿಳಿದಿಲ್ಲ.

ಜೀವ ಮತ್ತು ಭಗವಂತನ ನಡುವಿನ ವೆತ್ಯಾಸವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ “ ಹಿಂದೆ ಆಗಿ ಹೋದ ಭೂತಗಳು, ಈಗ ಇರುವ ಭೂತಗಳು, ಮತ್ತು ಮುಂದೆ ಬರಲಿರುವ ಭೂತಗಳು ಈ ಎಲ್ಲವನ್ನೂ ನಾನು ತಿಳಿದಿದಿದ್ದೇನೆ” ಎಂದು. ಇಲ್ಲಿ ಭೂತ ಎನ್ನುವ ಪದಕ್ಕೆ ಅನೇಕ ಅರ್ಥವಿದೆ. ಪಂಚಭೂತಗಳು, ಅದರಿಂದ ನಿರ್ಮಾಣವಾದ ಬ್ರಹ್ಮಾಂಡ, ಅದರಿಂದ ರೂಪುಗೊಂಡ ಸಮಸ್ತ ವಸ್ತುಗಳು ಮತ್ತು ಸಮಸ್ತ ಜೀವಜಾತಗಳು ಎಲ್ಲವೂ ಭೂತಗಳು. ಈ ಹಿಂದೆ ಸೃಷ್ಟಿಯಾದ ಅನಂತ ಬ್ರಹ್ಮಾಂಡ, ಈಗಿರುವ ಬ್ರಹ್ಮಾಂಡ, ಮುಂದೆ ಸೃಷ್ಟಿಯಾಗಲಿರುವ ಅನಂತ ಬ್ರಹ್ಮಾಂಡ, ಹಿಂದೆ ಇದ್ದ ಅನಂತ ಜೀವಜಾತಗಳು, ಈಗಿರುವ ಅನಂತ ಜೀವಜಾತಗಳು ಮತ್ತು ಮುಂದೆ ಸೃಷ್ಟಿಯಾಗಲಿರುವ ಅನಂತ ಜೀವಜಾತಗಳನ್ನು ತಿಳಿದವನು ಆ ಅನಂತಕೋಟಿ ಬ್ರಹ್ಮಾಂಡ ನಾಯಕ ಭಗವಂತನೊಬ್ಬನೆ. ಕೃಷ್ಣ ಹೇಳುತ್ತಾನೆ “ಮಾಮ್  ತು ವೇದ ನ ಕಶ್ಚನ” ಎಂದು. ಅಂದರೆ ‘ನನ್ನನ್ನು ಬಿಟ್ಟು ಇನ್ನ್ಯಾರೂ ಇದನ್ನು ಪೂರ್ಣವಾಗಿ ತಿಳಿದಿಲ್ಲ’ . ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ ಹಾಗು ತಿಳಿಯುವುದು ಸಾಧ್ಯವಿಲ್ಲ. ಆತ ಸ್ವತಂತ್ರ, ಪೂರ್ಣ ಮತ್ತು ನಿತ್ಯ ಸತ್ಯ. ಜೀವ ಅಪೂರ್ಣ, ಅಸ್ವತಂತ್ರ ಮತ್ತು ಅನಿತ್ಯಸತ್ಯ.        

No comments:

Post a Comment