Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, June 6, 2011

Bhagavad Gita Kannada Chapter-07 Shloka 4-7


ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ 

ಭೂಮಿಃ ಆಪಃ ಅನಲಃ ವಾಯುಃ ಮ್  ನಃ  ಬುದ್ಧಿಃ ಏವ  
ಅಹಂಕಾರಃ  ತಿ ಇಯಮ್  ಮೇ ಭಿನ್ನ  ಪ್ರಕೃತಿಷ್ಟಧಾ- ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ,[ಸುಪ್ತಪ್ರಜ್ಞೆಯಿಂದ ಕೂಡಿದ] ಅಹಂಕಾರ ಹೀಗೆ ನನ್ನ ಅಧೀನವಾದ ಈ ಜಡ ಪ್ರಕೃತಿ ಎಂಟು ಬಗೆಯಾಗಿದೆ.

ಈ ಶ್ಲೋಕ ಭಗವಂತನ ಪ್ರಪಂಚ ಸೃಷ್ಟಿಯ ವಿರಾಟ ರೂಪವನ್ನು ಸಮಷ್ಟಿಯಾಗಿ ತಿಳಿಸುತ್ತದೆ. ನಮಗೆ ತಿಳಿದಂತೆ ಸೃಷ್ಟಿ ಪೂರ್ವದಲ್ಲಿ ಈ ಸಂಪೂರ್ಣ ಜಗತ್ತು ಸೂಕ್ಷ್ಮ ರೂಪದಲ್ಲಿ ಆ ಭಗವಂತನ ಉದರದಲ್ಲಿ  ನೆಲೆಗೊಂಡಿದ್ದು, ನಂತರ ಭಗವಂತ ಈ ಸೃಷ್ಟಿಯನ್ನು ನಿರ್ಮಿಸಿದ. ಹೀಗೆ ಮೊದಲು ನಿರ್ಮಾಣವಾದುದು ಈ ಜಡ ಪ್ರಕೃತಿ. ಇಲ್ಲಿ ಪಂಚಭೂತಗಳು(ಮಣ್ಣು, ನೀರು, ಬೆಂಕಿ, ಗಾಳಿ, ಆಗಸ) ಜೊತೆಗೆ ಮನಸ್ಸು, ಬುದ್ಧಿ ಮತ್ತು ಅಹಂಕಾರ. ಇವು ಒಟ್ಟಿಗೆ ಎಂಟು ಬಗೆ. ಈ ಇಡೀ ಸ್ಥೂಲಪ್ರಪಂಚ ಮಣ್ಣು ನೀರು ಬೆಂಕಿ ಗಾಳಿ ಆಕಾಶ ಇದರ ವಿಕಾರ. ಆದ್ದರಿಂದ ಈ ಪ್ರಪಂಚದಲ್ಲಿರುವ ಸಮಸ್ತ ಜಡಪದಾರ್ಥಗಳ ಮೂಲದ್ರವ್ಯ ಪಂಚಭೂತಗಳು.
 ಇಲ್ಲಿ ನಮಗೆ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ ಪಂಚಭೂತಗಳ ಸೃಷ್ಟಿಯಲ್ಲಿ ಆಕಾಶದ ಸೃಷ್ಟಿ ಅಂದರೇನು? ಎಂದು. ಮೂಲತಃ  ಆಕಾಶದ ಸೃಷ್ಟಿ ವಾಸ್ತವ ಅಲ್ಲ ಇದು ಸಾಪೇಕ್ಷವಾಗಿ . ಅಂತರಿಕ್ಷ (Space) ಮೊದಲೇ ಇತ್ತು. ಅದರಲ್ಲಿ ಭಗವಂತ ತನ್ನ ರೂಪವನ್ನು ಆವಿರ್ಭಾವ ಗೊಳಿಸುವುದೇ ಆಕಾಶ ಸೃಷ್ಟಿ. ಬಣ್ಣವಿಲ್ಲದ ಅಂತರಿಕ್ಷದಲ್ಲಿ  ‘ಕಣ್ಣಿಗೆ ಕಾಣದ ನೀಲ ವರ್ಣದ(Ultraviolet)’ ಆಕಾಶ ಸೃಷ್ಟಿಯಾಯಿತು.(ಇದನ್ನು ಹದಿಮೂರನೇ ಶತಮಾನದಲ್ಲಿ ಮಧ್ವಾಚಾರ್ಯರು ಉಲ್ಲೇಖಿಸಿದ್ದಾರೆ) ಅಲ್ಲಿ ಕಂಪನ ಉಂಟಾಗಿ ಅದರಿಂದ ಗಾಳಿ ಹುಟ್ಟಿತು. ಗಾಳಿಯ ಕಂಪನದಿಂದ ಬೆಂಕಿ ಹಾಗು ಬೆಂಕಿಯಿಂದ ನೀರಿನ ಸೃಷ್ಟಿಯಾಯಿತು. ಈ ನೀರು ಗಟ್ಟಿಯಾಗಿ ಕಾಲ ಕ್ರಮೇಣ ಭೂಮಿಯಾಗಿ ವಿಕಾರಗೊಂಡಿತು. ಹೀಗೆ ಈ ಪಂಚಭೂತಗಳಿಂದ ಅನಂತ ವಸ್ತುಗಳ ನಿರ್ಮಾಣವಾಯಿತು. ಇದು ನಮ್ಮ ‘ಅನ್ನಮಯಕೋಶ’.  ಬೆಂಕಿ ಗಾಳಿ ಆಕಾಶದಿಂದ ಪ್ರಾಣಮಯಕೋಶದ ಸೃಷ್ಟಿ. ಈ ಪ್ರಾಣಮಯಕೋಶದ ಒಳಗೆ ಮನಸ್ಸು ಮತ್ತು ಬುದ್ಧಿಯಿಂದಾದ ಮನೋಮಯಕೋಶ. ನಂತರ ನಮ್ಮ ನೆನಪಿನ ಶಕ್ತಿಯ ಅಹಂಕಾರತತ್ವ(awareness of self, ಚಿತ್ತ, ಚೇತನ)ದಿಂದಾದ ವಿಜ್ಞಾನಮಯಕೋಶ ಸೃಷ್ಟಿಯಾಯಿತು. ಇಲ್ಲಿ ಮನಸ್ಸು ಸೃಷ್ಟಿಯಾಯಿತು ಎಂದರೆ ಮನಸ್ಸಿನ ಅಭಿಮಾನಿ ದೇವತೆಯ ಸೃಷ್ಟಿಯಾಯಿತು ಎಂದರ್ಥ; ಭೂಮಿ ಸೃಷ್ಟಿಯಾಯಿತು ಎಂದರೆ ಈ ಜಡವಾದ ಭೂಮಿಯ ಜೊತೆಗೆ ಭೂಮಿಯ ಅಭಿಮಾನಿ ದೇವತೆಯ ಸೃಷ್ಟಿಯಾಯಿತು ಎಂದರ್ಥ. ಅದೇ ರೀತಿ ವಾಯುವಿನ ಸೃಷ್ಟಿ ಎಂದಾಗ ಅಲ್ಲಿ ವಾಯುವಿನ ಜೊತೆಗೆ  ನಲವತ್ತೊಂಬತ್ತು ದೇವತೆಗಳ ಸೃಷ್ಟಿಯಾಯಿತು ಎಂದರ್ಥ. ನಮಗೆ ತಿಳಿದಂತೆ ಭೂಮಿಯನ್ನು ಆವರಿಸಿರುವ ವಾಯುವಿನ ಪದರು ನಲವತ್ತೊಂಬತ್ತು. ಭೂಮಿಯಿಂದ ವಿವಿಧ ದೂರದಲ್ಲಿ ಗಾಳಿಯ ವಿವಿಧ ಒತ್ತಡಕ್ಕನುಗುಣವಾಗಿ ಈ ವಿಭಾಗ. ಇದನ್ನು ನಿಯಮಿತವಾಗಿ ಆಯಾ ಅಭಿಮಾನಿ ದೇವತೆಗಳು ನಿರ್ವಹಿಸುತ್ತಾರೆ.  (‘ಭಾರದ್ವಾಜ ಸಂಹಿತದಲ್ಲಿ ಈ ಬಗ್ಗೆ ಮತ್ತು ವಿಮಾನ ತಾಂತ್ರಿಕತೆ ಬಗ್ಗೆ ಸಂಪೂರ್ಣ ವಿವರವನ್ನು ಕಾಣಬಹುದು). ಹೀಗೆ ಭಗವಂತನ ಅಧೀನವಾಗಿ ಅಷ್ಟರೂಪದ ಅಕ್ಷರಪ್ರಕೃತಿ ರೂಪುಗೊಂಡಿತು. ಈ ಅಷ್ಟ ವಿಧದ ಪ್ರಪಂಚದಲ್ಲಿ  ಅಷ್ಟಾಕ್ಷರ ವಾಚ್ಯನಾಗಿ ಭಗವಂತ ತುಂಬಿದ.
ನಾದಸೃಷ್ಟಿಯ ಮೊದಲ ಸೃಷ್ಟಿ ಓಂಕಾರ. ಓಂಕಾರದಲ್ಲಿ ಎಂಟು ಅಕ್ಷರಗಳಿವೆ. ನಾಭಿಯಿಂದ ಹೊರಟು ಉಚ್ಚಾರದ ಕೊನೆಯ ತನಕ ಒಟ್ಟು ಎಂಟು ಅಕ್ಷರಗಳು. ಅವುಗಳೆಂದರೆ: ಅಕಾರ , ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಹೀಗೆ ಎಂಟು ಅಕ್ಷರದಿಂದ ವಾಚ್ಯನಾಗಿ; ವಿಶ್ವ, ತೈಜಸ, ಪ್ರಾಜ್ಞ, ತುರೀಯ , ಆತ್ಮ, ಅಂತರಾತ್ಮ, ಪರಮಾತ್ಮ ಮತ್ತು  ಜ್ಞಾನಾತ್ಮ ಎನ್ನುವ ಎಂಟು ರೂಪದಲ್ಲಿ ಭಗವಂತ ಈ  ಅಷ್ಟವಿಧ  ಪ್ರಕೃತಿಯಲ್ಲಿ ತುಂಬಿದ. ಹೀಗೆ ಇಡೀ ಪ್ರಪಂಚ ಅಷ್ಟ ವಿಧದಲ್ಲಿ ವಿಕಾರಗೊಂಡಿತು.
(ಅಧ್ಯಾತ್ಮದಲ್ಲಿ ಪ್ರತಿಯೊಂದು ಸಂಖ್ಯಯ ಹಿಂದೆ ಒಂದು ವೇದಾಂತವಿದೆ. ಸೃಷ್ಟಿ ಪ್ರಕ್ರಿಯೆಯಲ್ಲಿ ಎಂಟರ ಮಹತ್ವವನ್ನು ಇಲ್ಲಿ ನೋಡಿದೆವು.   ಬನ್ನಂಜೆಯವರ ‘ಅಂಕೆಯಲ್ಲಿ ಅಧ್ಯಾತ್ಮ’ ಎನ್ನುವ ಪುಟ್ಟ ಪುಸ್ತಕ ಈ ವಿಷಯದ ಮೇಲೆ  ಬೆಳಕು ಚಲ್ಲುತ್ತದೆ).     

ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್       
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್

ಅಪರಾ ಇಯಮ್ ಇತಃ ತು ಅನ್ಯಾಮ್ ಪ್ರಕೃತಿಮ್  ವಿದ್ಧಿ ಮೇ ಪರಾಮ್        
ಜೀವಭೂತಾಮ್  ಮಹಾಬಾಹೋ ಯಾ ಇದಮ್ ಧಾರ್ಯತೇ ಜಗತ್- ಎರಡು ಪ್ರಕೃತಿಗಳಲ್ಲಿ ಇದು ಕೆಳಮಟ್ಟದ್ದು. ನನ್ನ ಅಧೀನವಾದ ಇನ್ನೊಂದು ಪ್ರಕೃತಿ ಇದಕ್ಕಿಂತ ಮಿಗಿಲಾದದ್ದು. ಅದೇ ಚೇತನ ಪ್ರಕೃತಿ; ಶ್ರಿತತ್ವ. ಎಲ್ಲ ಜೀವರಿಗೆ ಆಸರೆಯಾಗಿ ಎಂದೆಂದೂ ಇರುವಂಥದು. ಮಹಾವೀರ, ಅದು ಈ ಜಗವನ್ನು ಹೊತ್ತುಕೊಂಡಿದೆ.

ಅಚೇತನ ಸೃಷ್ಟಿಗೆ ಒಬ್ಬ ನಿಮಿತ್ತ ಕಾರಣ ಮತ್ತು ಒಂದು ಉಪಾದಾನ ಕಾರಣ. ಜಡಪ್ರಕೃತಿ ಪ್ರಪಂಚಕ್ಕೆ ಉಪಾದಾನ ಕಾರಣ ಹಾಗು ಅದರ ಮೂಲಕ ಭಗವಂತ ಸಮಸ್ತ ಸೃಷ್ಟಿಗೆ ನಿಮಿತ್ತ ಕಾರಣ. ಚೇತನದಲ್ಲಿ ಎರಡು ವಿಧ, ಚರ ಮತ್ತು ಅಚರ. ಅಚರವಾದ ಚೇತನ(ಉದಾ-ಮರ ಗಿಡಗಳು)ದ ಸೃಷ್ಟಿಗೆ ಮೇಲೆ ಹೇಳಿದಂತೆ ಒಬ್ಬ ನಿಮಿತ್ತ ಕಾರಣ ಮತ್ತು ಒಂದು ಉಪಾದಾನ ಕಾರಣ ಸಾಕು. ಆದರೆ ಚೇತನದಲ್ಲಿ ಚರವಾದ  ಚೇತನ(ಅಂಡಜ ಮತ್ತು ಜರಾಯು) ಸೃಷ್ಟಿಗೆ ಒಂದು ನಿಮಿತ್ತ ಕಾರಣ ಸಾಲದು. ಇಲ್ಲಿ ಎರಡು ನಿಮಿತ್ತ ಕಾರಣ ಬೇಕು. ಒಂದು ತಂದೆ, ಒಂದು ತಾಯಿ. ಎರಡು ಚೇತನದಿಂದ ಒಂದು ಚೇತನ ಸೃಷ್ಟಿ. ಇದರ ಪ್ರಾರಂಭ ಮೂಲ ಸೃಷ್ಟಿಯಲ್ಲಿಯೇ ಆಗಿದೆ. ಹೀಗೆ ಎರಡು ಚೇತನ ಹಾಗು ಒಂದು ಜಡ ಸೇರಿ ಈ ಸಮಸ್ತ ಸೃಷ್ಟಿಯಾಗಿರುವುದು. ಹಿಂದೆ ಹೇಳಿದಂತೆ ವಸ್ತುತಃ ಪ್ರಳಯಕಾಲದಲ್ಲಿ ಇಡೀ ಪ್ರಪಂಚ ಭಗವಂತನ ಉದರದಲ್ಲೇ ಇದ್ದದ್ದು. ಆದ್ದರಿಂದ ಅವನೇ ತಂದೆ, ಅವನೇ ತಾಯಿ. ಆದರೂ ಈ ಪ್ರಪಂಚದಲ್ಲಿರುವ ಜೀವ ಜಾತದ ಸೃಷ್ಟಿಗೆ ಮುಂದೆ ಹೇಗೆ ತಂದೆ ತಾಯಿ ಎನ್ನುವ ಎರಡು ಚೇತನ ಬೇಕೋ  ಅದನ್ನು ಸೃಷ್ಟಿಯ ಆದಿಯಲ್ಲೇ  ಭಗವಂತ ಮಾಡಿದ. ಪ್ರಪಂಚದಲ್ಲಿ ಯಾವ ರೀತಿ ಜೀವದ ಸೃಷ್ಟಿ ಪ್ರಕ್ರಿಯೆ ಮುಂದುವರಿಯುತ್ತದೋ ಅದೇ ರೀತಿ ಪ್ರಾರಂಭದಿಂದ ಆ ವ್ಯವಸ್ಥೆ ಮಾಡಿದ ಭಗವಂತ. ಅದರದ್ದೇ ಮುಂದುವರಿಕೆ ಈ ಸೃಷ್ಟಿ.
ಈ ಶ್ಲೋಕದಲ್ಲಿ  ಕೃಷ್ಣ ಹೇಳುತ್ತಾನೆ “ನಾನು ಹಿಂದೆ ಹೇಳಿದ ಪ್ರಕೃತಿ ‘ಜಡಪ್ರಕೃತಿ’ ; ಆದರೆ ಅದಕ್ಕಿಂತ  ಬಿನ್ನವಾದ ಮತ್ತು ಶ್ರೇಷ್ಠವಾದ ಇನ್ನೊಂದು ಪ್ರಕೃತಿ ಇದೆ” ಎಂದು. ಅದೇ ಇಡೀ ಪ್ರಪಂಚಕ್ಕೆ ಮಾತೃ ಸ್ಥಾನ ಕೊಟ್ಟಿರುವ ಚಿತ್ ಪ್ರಕೃತಿ. ವೇದದಲ್ಲಿ ಹೇಳುವಂತೆ ಜಡಪ್ರಕೃತಿ ‘ಅಕ್ಷರ’, ಅದಕ್ಕಿಂತ ಭಿನ್ನವಾದ ಚೇತನಪ್ರಕೃತಿ-‘ಪರಮಾಕ್ಷರ’. ಭಗವಂತ ‘ಪರತ-ಪರಮಾಕ್ಷರ’. ಹೀಗೆ  ಭಗವಂತನಿಗೂ ಮತ್ತು ಪ್ರಪಂಚಕ್ಕೂ ಮಾಧ್ಯಮವಾಗಿ ಶ್ರೀತತ್ವ(ಶ್ರೀಲಕ್ಷ್ಮಿ)ವಿದೆ. ಈ ಕಾರಣದಿಂದ ಲಕ್ಷ್ಮಿಯನ್ನು ಲೋಕಮಾತೆ ಎನ್ನುತ್ತಾರೆ. ಈ ಜಗತ್ತನ್ನು ಸೃಷ್ಟಿ ಮಾಡುವಾಗ ಜಡ ಪ್ರಕೃತಿಯನ್ನು ಉಪಾದಾನ ಕಾರಣವಾಗಿ ಬಳಸಿದರೆ, ಆ ಜಡವಾದ ಶರೀರ(ಪಿಂಡಾಂಡ)ದಲ್ಲಿ ಜೀವದ ಸೃಷ್ಟಿಯಾಗಬೇಕಾದರೆ ಜೀವಭೂತಳಾದ ಚೇತನಾ ಶಕ್ತಿ ಹೊಂದಿರುವ ಚಿತ್ ಪ್ರಕೃತಿಯನ್ನು  ಕಾರಣವಾಗಿ ಬಳಸಿದ ಭಗವಂತ.  ಹೀಗೆ ಜಗತ್ತಿನ ಮೊದಲ ಜೀವ ಚತುರ್ಮುಖನ ಸೃಷ್ಟಿ ಶ್ರಿತತ್ವದಿಂದಾಯಿತು.
ಹೀಗೆ ಜಗತ್ತಿನ ಮೂಲದಲ್ಲೇ  ಪ್ರಕೃತಿ ಮತ್ತು ಪುರುಷ ಎನ್ನುವ ಎರಡು ವಿಧದ ಚೇತನವನ್ನು ನಾವು ಕಾಣುತ್ತೇವೆ. ಜೀವ ಸ್ವರೂಪದಲ್ಲೂ ಗಂಡು ಮತ್ತು ಹೆಣ್ಣು ಎನ್ನುವ ಎರಡು ಪ್ರಭೇದವಿದೆ ಎನ್ನುವುದು ಸೃಷ್ಟಿಯ ಆದಿಯಿಂದಲೇ ತಿಳಿಯುತ್ತದೆ. ಪುರುಷ ಮತ್ತು ಪ್ರಕೃತಿ ಎನ್ನುವ ಭಗವಂತನ ಎರಡು ಮುಖದಿಂದ ಈ ಸೃಷ್ಟಿಯಾಯಿತು. ಜಡಕ್ಕೆ ಲಿಂಗ ಭೇದವಿಲ್ಲ. ಆದರೂ ನಾವು ಕೆಲವು ಜಡ ವಸ್ತುವನ್ನು ಹೆಣ್ಣಾಗಿ ಮತ್ತು ಗಂಡಾಗಿ ಗುರುತಿಸುತ್ತೇವೆ. ಇದು ಆ ವಸ್ತುವಿನ ಅಭಿಮಾನಿ ದೇವತೆಯ ಲಿಂಗಕ್ಕನುಗುಣವಾಗಿ ಗುರುತಿಸಲ್ಪಟ್ಟಿರುವುದು. ಉದಾಹರಣೆಗೆ ನದಿ: ನದಿಯ ಅಭಿಮಾನಿ ದೇವತೆಗಳಲ್ಲಿ ಹೆಚ್ಚಿನವರು ಸ್ತ್ರೀಲಿಂಗ; ಅದೇ ರೀತಿ  ಭೂಮಿಯ ಅಭಿಮಾನಿ ದೇವತೆ ಕೂಡಾ ಹೆಣ್ಣು. ಈ ಕಾರಣಕ್ಕಾಗಿ ನದಿಯನ್ನು, ಭೂಮಿಯನ್ನು ನಾವು  ತಾಯಿ ರೂಪದಲ್ಲಿ ಕಾಣುತ್ತೇವೆ.
ಹೀಗೆ ಜಗತ್ತಿನ ಮೂಲ ಸಂಗತಿ ಭಗವಂತ(ಪುರುಷ) ಮತ್ತು ಆತನ ಅಧೀನವಾಗಿ ಜಡ ಪ್ರಕೃತಿ ಮತ್ತು ಚಿತ್  ಪ್ರಕೃತಿ. ಇವು ಸದಾ ನಿತ್ಯ -ಎಂದೂ ನಾಶವಿಲ್ಲದವು. ಆಕಾರದ(ವಿಕೃತಿಯ) ನಾಶವಾಗುತ್ತದೆ ಹೊರತು ಮೂಲದ್ರವ್ಯ ಉತ್ಪತ್ತಿ ನಾಶ ಜಗತ್ತಿನಲ್ಲಿಲ್ಲ. ಆದ್ದರಿಂದ ಇವು ‘ಅ-ಕ್ಷರ’  ಸಂಗತಿಗಳು. ಈ ಮೂರರಿಂದ ‘ಕ್ಷರ’ ವಾದ ಪ್ರಪಂಚ ಸೃಷ್ಟಿಯಾಗುತ್ತದೆ.
     
ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಯಸ್ತಥಾ

ಏತತ್ ಯೋನೀನಿ  ಭೂತಾನಿ ಸರ್ವಾಣಿ ಇತಿ ಉಪಧಾರಯ
ಅಹಮ್  ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಃ ತಥಾ-ಈ ಎರಡು ಪ್ರಕೃತಿಗಳಿಂದಲೆ ಎಲ್ಲ ಜೀವಿಗಳೂ ರೂಪುಗೊಂಡಿವೆ ಎಂದು ತಿಳಿ. ನಾನೇ ಎಲ್ಲ ಜಗದ ಹುಟ್ಟು-ಸಾವುಗಳಿಗೆ ಕಾರಣನಾಗಿದ್ದೇನೆ.

ಜಡ ಪ್ರಕೃತಿ ಮತ್ತು ಚಿತ್ ಪ್ರಕೃತಿ ಇವೇ ಇಡೀ ಜಗತ್ತಿನ ಎಲ್ಲಾ ಜೀವಜಾತಕ್ಕೆ ಮೂಲ ಕಾರಣ. ಭಗವಂತ ಜೀವಜಾತದ ಹಿಂದೆ ತಂದೆಯಾಗಿ, ಲಕ್ಷ್ಮೀದೇವಿ ತಾಯಿಯಾಗಿ ನಿಂತು ಈ ಜಗತ್ತನ್ನು ಸೃಷ್ಟಿ ಮಾಡಿದರು. ತಾಯಿಯ ಗರ್ಭದಲ್ಲಿ ಬೆಳೆಯುವ ಭ್ರೂಣದಂತೆ ಜಡಪ್ರಕೃತಿ ವಿಕಾರಗೊಂಡಿತು. ಹೀಗೆ ಚಿತ್ ಪ್ರಕೃತಿ ಜಡ ಪ್ರಕೃತಿಗೆ ರೂಪ ಕೊಟ್ಟಳು, ಕೊಟ್ಟು ಧಾರಣೆ ಮಾಡಿದಳು, ಅದೇ ಜಗತ್ತಾಯಿತು.
ಭಗವಂತನ ಶಕ್ತಿ ಆಧಾನದಿಂದ, ಪ್ರೇರಣೆಯಿಂದ, ಜಡ ಮತ್ತು ಚಿತ್ ಪ್ರಕೃತಿಯ ಮೂಲಕ ಈ ಜಗತ್ತಿನ ಹುಟ್ಟಿಗೆ ಭಗವಂತ ಹೇಗೆ ಕಾರಣನೋ ಹಾಗೇ ಇಡೀ ಜಗತ್ತಿನ ಪ್ರಳಯ ಕೂಡಾ ಭಗವಂತ. ಕೃಷ್ಣ ಹೇಳುತ್ತಾನೆ “ ಸಮಸ್ತ ಜಗತ್ತಿನ ಉತ್ಪತ್ತಿಗೆ ಮೂಲ ಕಾರಣ ನಾನು, ಜಗತ್ತಿನ ಸಂಹಾರಕ್ಕೆ ಕಾರಣ ನಾನು” ಎಂದು. ಈ ಜಗತ್ತಿನ ಹುಟ್ಟಿನ ಮೊದಲಿದ್ದವ, ಹುಟ್ಟಿಗೆ ಕಾರಣ, ಸಂಹಾರಕ್ಕೆ ಕಾರಣ, ಸಂಹಾರದ ನಂತರ ಇರುವವ ಆ ಭಗವಂತ.

ನಮ್ಮಲ್ಲಿ ಕೆಲವರು ಕೇಳುವುದಿದೆ: ಜಡಪ್ರಕೃತಿಗೆ ನಿಯಾಮಕ ಶಕ್ತಿ- ಚೇತನಪ್ರಕೃತಿ, ಚೇತನ ಪ್ರಕೃತಿಯನ್ನು ಪ್ರೇರಣೆ ಮಾಡಿ ಸೃಷ್ಟಿ ಸಂಹಾರದಲ್ಲಿ ತೊಡಗಿಸುವವ ‘ಪುರುಷ’ ನಾಮಕ ಭಗವಂತ. ಹಾಗಾದರೆ ಈ ಭಗವಂತನನ್ನು ನಿಯಂತ್ರಿಸುವವರು ಯಾರು? ಎಂದು. ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.

ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ       

ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ-ಧನಂಜಯ, ನಾನಲ್ಲದೆ ಇನ್ನೊಂದು ಪರತರ ವಸ್ತು ಇಲ್ಲ. ಈ ಎಲ್ಲ ನನ್ನಲ್ಲೆ ಹೆಣೆದುಕೊಂಡಿದೆ-ದಾರದಲ್ಲಿ ಮಣಿಗಳ ರಾಶಿ ಹೇಗೆ ಹಾಗೆ.

ಕೃಷ್ಣ ಹೇಳುತ್ತಾನೆ “ ನನ್ನನ್ನು ಮೀರಿ ನನ್ನಿಂದ ಹಿರಿದಾದ, ನನಗಿಂತ ಬೇರೆಯಾದ ಇನ್ನೊಂದು ವಸ್ತುವಿಲ್ಲ” ಎಂದು. ಚಿತ್ ಪ್ರಕೃತಿ, ಜಡ ಪ್ರಕೃತಿ, ಇದರಿಂದ ದೇಹ ಧಾರಣೆ ಮಾಡಿದ ಜೀವಜಾತ, ವಾಸಿಸುವ ಬ್ರಹ್ಮಾಂಡ, ಈ ಪಿಂಡಾಂಡ, ಎಲ್ಲವೂ ಕೂಡ ಭಗವಂತನಲ್ಲಿ ದಾರದಲ್ಲಿ ಮಣಿಗಳು ಹೆಣೆದುಕೊಂಡಂತೆ ಹೆಣೆದುಕೊಂಡಿವೆ. ಇಡೀ ವಿಶ್ವವನ್ನು  ಜೀವಜಾತವನ್ನು ಹೆಣೆದ ಸೂತ್ರ ಆ ಭಗವಂತ.

ಮುಂದೆ ಕೃಷ್ಣ ಒಂದೊಂದು ವಸ್ತುವಿನಲ್ಲಿ ಯಾವರೀತಿ ಭಗವಂತನ ವಿಭೂತಿ ಅಡಗಿದೆ ಎನ್ನುವ ವಿಜ್ಞಾನವನ್ನು ಸುವಿವರವಾಗಿ ವಿವರಿಸುತ್ತಾನೆ.     

No comments:

Post a Comment