Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Thursday, June 2, 2011

Bhagavad Gita Kannada Chapter-06 Shloka 37-47

ಅರ್ಜುನ ಉವಾಚ
ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ     ೩೭

ಅರ್ಜುನ ಉವಾಚ-ಅರ್ಜುನ ಕೇಳಿದನು:
ಅಯತಿಃ ಶ್ರದ್ಧಯಾ ಉಪೇತಃ ಯೋಗಾತ್ ಚಲಿತ ಮಾನಸಃ      
ಅಪ್ರಾಪ್ಯ ಯೋಗಸಂಸಿದ್ಧಿಮ್  ಕಾಮ್  ಗತಿಮ್  ಕೃಷ್ಣ ಗಚ್ಛತಿ –ಕೃಷ್ಣ, ಶ್ರದ್ಧೆಯಿದೆ. ಪ್ರಯತ್ನಿಸುವುದಾಗಲಿಲ್ಲ. ಧ್ಯಾನಯೋಗದಿಂದ ಬಗೆ ಕದಲಿದೆ. ಯೋಗಸಿದ್ಧಿಯನ್ನು ಪಡೆಯಲಾಗದ ಇಂಥವನ ಪಾಡೇನು?

ಯೋಗದ ಸಾಧನೆಯಲ್ಲಿ ಸಾಧನೆ ಮಾಡಿದ, ಧ್ಯಾನ ಮಾಡುವುದಕ್ಕೂ ಪ್ರಯತ್ನ ಮಾಡಿದ, ಒಂದು ಹಂತದವರೆಗೆ ಶ್ರದ್ದೆಯಿಂದ ಏಕಾಗ್ರತೆಗೆ ಪ್ರಯತ್ನಿಸಿದ, ಯಾವುದೋ ಕಾರಣದಿಂದ ಪೂರ್ಣ ಗುರಿ ತಲುಪಲಿಲ್ಲ-ಅಂತವನ   ಪಾಡೇನು? ಇಂತವರಿಗೆ ಸಿದ್ಧಿ ಲಭಿಸದೆ?    

ಕಚ್ಚಿನ್ನೋಭಯವಿಭ್ರಷ್ಟಶ್ಛಿನ್ನಾಭ್ರಮಿವ ನಶ್ಯತಿ  
ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ           ೩೮

ಕಚ್ಚಿತ್ ನ ಉಭಯ ವಿಭ್ರಷ್ಟಃ ಛಿನ್ನ ಅಭ್ರಮ್ ಇವ ನಶ್ಯತಿ           
ಅಪ್ರತಿಷ್ಠಃ ಮಹಾಬಾಹೋಃ ವಿಮೂಢಃ  ಬ್ರಹ್ಮಣಃ ಪಥಿ –ಓ ಮಹಾವೀರ, ನೆಲೆಗಾಣದೆ, ಭಗವಂತನ ದಾರಿಯಲ್ಲಿ ಗುರಿತಪ್ಪಿದ ಅವನು ಇಲ್ಲೂ ಇಲ್ಲದೆ ಅಲ್ಲೂ ಸಲ್ಲದೆ ತುಂಡು ಮೋಡದಂತೆ ಮರೆಯಾಗುವನೆ?

ಇಂತವರು ಇಹವೂ ಇಲ್ಲದೆ, ಪರವೂ ಇಲ್ಲದೆ, ಒಂದು ತುಣುಕು ಮೋಡದಂತೆ ಆ ಕಡೆ ನೆರಳೂ ಆಗದೆ, ಈಚೆ ಮಳೆಯೂ ಸುರಿಸದೆ ಯಾವುದಕ್ಕೂ ಉಪಯೋಗವಿಲ್ಲದೆ ವ್ಯರ್ಥವಾಗಿ ಹೋಗುವುದೋ ಅವರ ಬದುಕು? ಜ್ಞಾನ ಬಲ ಇಚ್ಛಾ ಸ್ವರೂಪನಾದ(ಮಹಾಬಾಹೋಃ) ನೀನು ಅಂತಹ ವಯವಿಭ್ರಷ್ಟರನ್ನು ಏನು ಮಾಡುತ್ತೀಯ?   

ಏತನ್ಮೇ ಸಂಶಯಂ ಕೃಷ್ಣ ಚ್ಛೇತ್ತುಮರ್ಹಸ್ಯಶೇಷತಃ     
ತ್ವದನ್ಯಃ ಸಂಶಯಸ್ಯಾಸ್ಯ ಚ್ಛೇತ್ತಾ ನ ಹ್ಯುಪಪದ್ಯತೇ ೩೯

ಏತತ್ ಮೇ ಸಂಶಯಮ್  ಕೃಷ್ಣ ಚ್ಛೇತ್ತುಮ್ ಅರ್ಹಸಿ ಅಶೇಷತಃ 
ತ್ವತ್ ಅನ್ಯಃ ಸಂಶಯಸ್ಯ ಅಸ್ಯ ಚ್ಛೇತ್ತಾ ನ ಹಿ ಉಪಪದ್ಯತೇ- ಕೃಷ್ಣ, ನನ್ನ ಈ ಗೊಂದಲವನ್ನು ಪೂರ್ತಿಯಾಗಿ ನೀನೆ ಪರಿಹರಿಸಬೇಕು. ನೀನಲ್ಲದೆ ಇನ್ನಾರೂ ಇಂಥ ಸಂಶಯವನ್ನು ಪರಿಹರಿಸಲಾರರು ಎಂದು ಅರ್ಜುನ ಕೃಷ್ಣನನ್ನು ಕೇಳುತ್ತಾನೆ.

ಭಗವಾನುವಾಚ
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ
ನಹಿ ಕಲ್ಯಾಣಕೃತ್ ಕಶ್ಚಿದ್ ದುರ್ಗತಿಂ ತಾತ ಗಚ್ಛತಿ      ೪೦

ಭಗವಾನುವಾಚ-ಭಗವಂತ ಹೇಳಿದನು:
ಪಾರ್ಥ ನ ಏವ ಇಹ ನ ಅಮುತ್ರ ವಿನಾಶಃ ತಸ್ಯ ವಿದ್ಯತೇ
ನ ಹಿ ಕಲ್ಯಾಣಕೃತ್ ಕಶ್ಚಿತ್  ದುರ್ಗತಿಮ್  ತಾತ ಗಚ್ಛತಿ- ಪಾರ್ಥ, ಅವನ ಸಾಧನೆ ವ್ಯರ್ಥವಲ್ಲ, ಇಹದಲ್ಲಿ ಮತ್ತು ಪರದಲ್ಲಿ. ಅಪ್ಪಾ(ತಾತ), ಒಳಿತನ್ನು ಮಾಡುವವನು ಎಂದೂ ಕೇಡನ್ನು ಪಡೆಯುವುದಿಲ್ಲ.

ಅರ್ಜುನನ ಪ್ರಶ್ನೆಗೆ ಕೃಷ್ಣನ ಉತ್ತರ ದೊಡ್ಡ ಭರವಸೆ. ಕೃಷ್ಣ ಹೇಳುತ್ತಾನೆ “ಸಾಧನೆಯ ದಾರಿಯಲ್ಲಿ ಸಾಗಿದವರು ಇಹದಲ್ಲಿ ಅಥವಾ ಪರದಲ್ಲಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಓ ನನ್ನ ಪ್ರೀತಿಯ ಮಿತ್ರನೇ, ಒಳ್ಳೆಯದನ್ನು ಮಾಡಿದವರು ಎಂದೂ ಕೆಟ್ಟದ್ದನ್ನು ಪಡೆಯುವುದಿಲ್ಲ. ಇದು ಪ್ರಕೃತಿಯ ನಿಯಮ” ಎಂದು. ಇಲ್ಲಿ ಕೃಷ್ಣ ಅರ್ಜುನನನ್ನು ಪಾರ್ಥ ಎಂದು ಸಂಬೋದಿಸಿದ್ದಾನೆ. ಪಾರ್ಥ ಎಂದರೆ ಪಾರವನ್ನು(ದಡವನ್ನು) ತಿಳಿದವನು. ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟವನು ಒಮ್ಮೆಗೆ  ಭಗವಂತನನ್ನು ಕಾಣದಿದ್ದರೂ ಕೂಡಾ ಆತ ಎಂದೂ ಮಧ್ಯದಲ್ಲಿ ಮುಳುಗುವುದಿಲ್ಲ. ಆತ ಸಾಧನೆಯ ಆಚೆ ದಡವನ್ನು ಸೇರಿಯೇ ಸೇರುತ್ತಾನೆ. ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯ ಮಾರ್ಗವನ್ನು ತುಳಿದವರಿಗೆ ಎಂದೂ ಕೆಟ್ಟದ್ದಾಗುವುದಿಲ್ಲ. ನಮ್ಮಲ್ಲಿ ಕೆಲವರು ಹೇಳುವುದಿದೆ: “ನಾನು ನನ್ನ ಜೀವನದಲ್ಲಿ ಎಂದೂ ಕೆಟ್ಟ ಕೆಲಸ ಮಾಡಿಲ್ಲ, ಯಾವತ್ತೂ ಒಬ್ಬರಿಗೆ ಕೇಡನ್ನು ಬಯಸಲಿಲ್ಲ, ಆದರೆ ಏಕೆ ದೇವರು ನನಗೆ ಹೀಗೆ ಮಾಡಿದ?” ಎಂದು. ನಾವು ಜೀವನದಲ್ಲಿ ‘ಕೆಟ್ಟದ್ದನ್ನು ಮಾಡಿಲ್ಲ, ಕೆಟ್ಟದ್ದನ್ನು ಎಣಿಸಿಲ್ಲ’ ಎನ್ನುವುದು ಕೇವಲ ಈ ಜನ್ಮಕ್ಕೆ ಸೀಮಿತ. ಆದರೆ ಜೀವದ ಗತಿ ಅನಾದಿ ಅನಂತ. ಅದು ಜನ್ಮದಿಂದ ಜನ್ಮಕ್ಕೆ ಹರಿದು ಬರುವ ಪ್ರವಾಹ. ನಾವು ಈ ಜನ್ಮದಲ್ಲಿ ಒಂದು ದುರಂತ ಅಥವಾ ಕಷ್ಟಕ್ಕೆ  ಒಳಗಾದರೆ ಅದಕ್ಕೆ ಕಾರಣಭೂತವಾಗಿರುವಂತಹ ಇನ್ನೊಂದು ಕ್ರಿಯೆ ನಮ್ಮಿಂದ ನಡೆದಿರಲೇ ಬೇಕು. ಕೆಟ್ಟದ್ದನ್ನು ಮಾಡದವನು ಕೆಟ್ಟದ್ದನ್ನು ಪಡೆಯುವುದಿಲ್ಲ. ಒಳ್ಳೆಯದನ್ನು ಮಾಡಿದವನು ಒಳ್ಳೆಯದನ್ನು ಪಡೆಯದೆ ಇರುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಅಪವಾದವೇ ಇಲ್ಲ. ಅದು ಹೇಗೆ ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.   

ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋSಭಿಜಾಯತೇ ೪೧

ಪ್ರಾಪ್ಯ ಪುಣ್ಯಕೃತಾಮ್  ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ
ಶುಚೀನಾಮ್  ಶ್ರೀಮತಾಮ್  ಗೇಹೇ ಯೋಗ ಭ್ರಷ್ಟಃ ಅಭಿಜಾಯತೇ-ಇಂಥ ಯೋಗ ಭ್ರಷ್ಟನು ಪುಣ್ಯವಂತರ ಲೋಕಗಳನ್ನು ಪಡೆದು ಅಲ್ಲಿ ಬಹಳ ಕಾಲ ನೆಲಸಿ ಅನಂತರ ನಿರ್ಮಲರೂ ಸಿರಿವಂತರೂ ಆದವರ ಮನೆಯಲ್ಲಿ ಹುಟ್ಟುತ್ತಾನೆ.

ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೊ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ ವ್ಯರ್ಥವಲ್ಲ-ಇದು ಏಕೆ ಎನ್ನುವುದನ್ನು ಕೃಷ್ಣ ಹಿಂದಿನ ಅಧ್ಯಾಯದಲ್ಲೇ (ಅ-೨; ಶ್ಲೋ-೪೦) ಹೇಳಿದ್ದಾನೆ, ಅದಕ್ಕೆ ಒತ್ತು ಕೊಟ್ಟು ಇಲ್ಲಿ ಮತ್ತೆ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ಸಾಧನೆ ಮಧ್ಯದಲ್ಲಿ ನಿಂತು ಹೋದರೆ ಏನೂ ತೊಂದರೆ ಇಲ್ಲ. ಏಕೆಂದರೆ ಅಂತವನು ದೇಹತ್ಯಾಗ ಮಾಡಿದ ಮೇಲೆ ಪುಣ್ಯವನ್ನು ಗಳಿಸಿದವರು ಪಡೆಯುವಂತಹ ಲೋಕವನ್ನು ಪಡೆಯುತ್ತಾನೆ. ಬಹಳ ಕಾಲದ ತನಕ ಅಲ್ಲಿ ಸುಖವನ್ನು ಅನುಭವಿಸಿ, ಮತ್ತೆ ಭೂಮಿಯಲ್ಲಿ ಸ್ವಚ್ಛವಾದ ಶ್ರೀಮಂತ ವೇದಜ್ಞರ ಮನೆಯಲ್ಲಿ ಆತ ಹುಟ್ಟುತ್ತಾನೆ. ಆತನಿಗೆ ಯಾವುದೇ ಐಹಿಕ ಭೋಗದ ಕೊರತೆ ಕಾಡದು. ಯೋಗಸಾಧನೆಗೆ ಬೇಕಾದ ಅತ್ಯುತ್ತಮ ವಾತಾವರಣ ಅವನಿಗೆ ದೊರೆಯುತ್ತದೆ.  

ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್   ೪೨

ಅಥವಾ ಯೋಗಿನಾಮ್ ಏವ ಕುಲೇ ಭವತಿ ಧೀಮತಾಮ್
ಏತತ್ ಹಿ  ದುರ್ಲಭ ತರಮ್  ಲೋಕೇ ಜನ್ಮ ಯತ್ ಈದೃಶಮ್-ಅಥವಾ ಬಲ್ಲವರಾದ ಯೋಗಿಗಳ ಮನೆತನದಲ್ಲಿ ಹುಟ್ಟುತ್ತಾನೆ. ಲೋಕದಲ್ಲಿ ಈ ಬಗೆಯ ಹುಟ್ಟು ತುಂಬ ದುರ್ಲಭವಾದದ್ದು.

ಮುಂದುವರಿದು ಕೃಷ್ಣ ಹೇಳುತ್ತಾನೆ: ಯೋಗ ಸಾಧಕರಲ್ಲದಿದ್ದರೆ ಯೋಗ ಸಿದ್ಧರ ಮನೆಯಲ್ಲಿ ಆತ ಜನಿಸುತ್ತಾನೆ. ಇದರಿಂದ ಗರ್ಭದಿಂದಲೇ ಆತನಿಗೆ ಯೋಗದ ದೀಕ್ಷೆಯಾಗುತ್ತದೆ. ಹಿಂದಿನ  ಜನ್ಮದಲ್ಲಿ ಆತ ಸಾಧನೆಯ ಯಾವ ಮೆಟ್ಟಿಲನ್ನು ಹತ್ತಿದ್ದನೋ ಆ ಮೆಟ್ಟಿಲನ್ನು ಸುಲಭವಾಗಿ ಆತ ತಲುಪಿ ಅಲ್ಲಿಂದ ಮುಂದಿನ ಸಾಧನೆ ಮಾಡುವ ಅವಕಾಶ ಅವನಿಗೆ ಸಿಗುತ್ತದೆ. ಇದು ಅಧ್ಯಾತ್ಮ ಸಾಧನೆಯಲ್ಲಿನ ವಿಶೇಷ. ಒಂದು ಜನ್ಮದಲ್ಲಿ ಎರಡು ಮೆಟ್ಟಿಲು ಹತ್ತಿದರೆ  ಮುಂದಿನ ಜನ್ಮದಲ್ಲಿ ನೇರವಾಗಿ ಮೂರನೇ ಮೆಟ್ಟಿಲಿಗೆ ಹೆಜ್ಜೆ. ಈ ಕಾರಣದಿಂದ ಯಾವ ಸಾಧನೆಯೂ ವ್ಯರ್ಥವಲ್ಲ- ಈ ಬಗ್ಗೆ ಎಂದೂ ನಿರಾಶೆಪಡಬೇಕಾಗಿಲ್ಲ.  ಈ ರೀತಿ ಪಕ್ವವಾದ ಜೀವ ಯೋಗಸಿದ್ಧರ ಮನೆಯಲ್ಲಿ ಹುಟ್ಟುವುದರಿಂದ ಆತನಿಗೆ ಅಲ್ಲಿ ಅನುವಂಶೀಯ ಸಾತ್ವಿಕ ಸೆಳೆತ (genetic force) ಮತ್ತು ಅದಕ್ಕೆ ಬೇಕಾದ ವಾತಾವರಣ(Environmental forces)ಸಿಗುತ್ತದೆ ಮತ್ತು ಆತ  ಅಲ್ಲಿ ತನ್ನ ಸಾಧನೆಯನ್ನು ಮುಂದುವರಿಸುತ್ತಾನೆ. ಲೋಕದಲ್ಲಿ ಯೋಗಸಿದ್ಧರ ಮನೆಯಲ್ಲಿ ಹುಟ್ಟು ಬಹಳ ದುರ್ಲಭ. ಸಾಧನೆಯ ಹಾದಿಯಲ್ಲಿ ಎತ್ತರಕ್ಕೆರಿದವರಿಗೆ ಮಾತ್ರ ಈ ಭಾಗ್ಯ. 
             
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೈಹಿಕಮ್          
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ  ೪೩

ತತ್ರ ತಮ್  ಬುದ್ಧಿಸಂಯೋಗಮ್  ಲಭತೇ ಪೌರ್ವ ದೈಹಿಕಮ್  
ಯತತೇ ಚ ತತಃ  ಭೂಯಃ ಸಂಸಿದ್ಧೌ ಕುರುನಂದನ-ಈ ಜನ್ಮದಲ್ಲು ಹಿಂದಿನ ಜನ್ಮದ ವಿವೇಕದ ನಂಟನ್ನು ಮರಳಿ ಪಡೆಯುತ್ತಾನೆ. ಕುರುಕುಮಾರ, ಮತ್ತೆ ಮರಳಿ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ.

 ಹಿಂದಿನ ಜನ್ಮದಲ್ಲಿ ಅವನು ಏನು ಸಾಧನೆ ಮಾಡಿದ್ದ ಅವೆಲ್ಲವೂ ಸ್ತುಪ್ತಪ್ರಜ್ಞೆಯಲ್ಲಿ ಹುದುಗಿದ್ದು ಅದಕ್ಕೆ ಅನುಗುಣವಾದ ವಾತಾವರಣ ಸಿಕ್ಕ ತಕ್ಷಣ ಅದು ಜಾಗೃತವಾಗುತ್ತದೆ. ಈ ಜನ್ಮದ ಬೆಳವಣಿಗೆ ಹಿಂದಿನ ಜನ್ಮದ ಬೆಳವಣಿಗೆಯ ಉತ್ತರಾರ್ಧವಾಗುತ್ತದೆ. ಒಂದು ವೇಳೆ ಹಿಂದಿನ ಜನ್ಮದಲ್ಲಿ ಹೆಚ್ಚು ಬೆಳವಣಿಗೆ ಆಗದೇ ಇದಿದ್ದರೆ ಇಲ್ಲಿ ಅದನ್ನು ಪ್ರಾರಂಭಿಸಬೇಕೇ ಹೊರತು ಅದಕ್ಕಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಪೂರ್ವ ಜನ್ಮದ ಸಂಸ್ಕಾರ ಸದಾ ನಮ್ಮೊಂದಿಗಿರುತ್ತದೆ ಹಾಗು ಆ ಸಂಸ್ಕಾರದೊಂದಿಗೆ ನಾವು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ಧ್ಯಾನಯೋಗವೆಂಬುವುದು ಒಂದು ಜನ್ಮದ ಸಾಧನೆಯಲ್ಲ.  

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋSಪಿ ಸಃ        
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ೪೪

ಪೂರ್ವ ಅಭ್ಯಾಸೇನ ತೇನ ಏವ ಹ್ರಿಯತೇ ಹಿ ಅವಶಃ ಅಪಿ ಸಃ   
ಜಿಜ್ಞಾಸುಃ ಅಪಿ ಯೋಗಸ್ಯ ಶಬ್ದಬ್ರಹ್ಮ ಅತಿವರ್ತತೇ –ಹಿಂದಿನ ಅಭ್ಯಾಸ ಬಲದಿಂದ ಅವನಿಗರಿವಿಲ್ಲದೆಯೆ,ಅವನ ಬಗೆ ಅತ್ತ ಹರಿಯುತ್ತದೆ. ಧ್ಯಾನಯೋಗವನ್ನು ತಿಳಿಯಬಯಸಿದವನು ಕೂಡ ಶಬ್ದಬ್ರಹ್ಮದಾಚೆಗಿರುವ ಪರಬ್ರಹ್ಮನನ್ನು ಸೇರುತ್ತಾನೆ.

ಒಂದು ವೇಳೆ ವೇದಜ್ಞರ ಮನೆಯಲ್ಲಿ ಹುಟ್ಟದೇ ಇದ್ದರೂ ಕೂಡ ಹಿಂದಿನ ಜನ್ಮದ ಸಾಧನೆಯ ಫಲದಿಂದ ನಮಗರಿವಿಲ್ಲದಂತೆ ನಮ್ಮ ಮನಸ್ಸು ಸಾಧನೆಯತ್ತ ಹರಿಯುತ್ತದೆ. ಪ್ರಹಲ್ಲಾದನ ಮತ್ತು  ಪಿಂಗಳೆಯ ಕಥೆ ಇದಕ್ಕೆ ಉತ್ತಮ ದೃಷ್ಟಾಂತ. ಅಂತರಂಗದಲ್ಲಿ ಸದಾ ಅಧ್ಯಾತ್ಮದ ಬಗ್ಗೆ ತುಡಿತ, ಅತ್ಯಂತ ಉತ್ಕಟವಾದ ಕಳಕಳಿ ಇದ್ದರೆ ಅವರು ಶಾಸ್ತ್ರ ಓದಿದವರನ್ನು ಮೀರಿ ಎತ್ತರಕ್ಕೆರುತ್ತಾರೆ.

ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್    ೪೫

ಪ್ರಯತ್ನಾತ್  ಯತಮಾನಃ ಟು  ಯೋಗೀ ಸಂಶುದ್ಧ ಕಿಲ್ಬಿಷಃ
ಅನೇಕ ಜನ್ಮಸಂಸಿದ್ಧಃ ತತಃ  ಯಾತಿ ಪರಾಮ್  ಗತಿಮ್-ಧ್ಯಾನದಲ್ಲಿ ತೊಡಗುವ ಸಾಧಕ ಪ್ರಯತ್ನದ ಫಲವಾಗಿ ಬಗೆಯ ಕಿಲುಬು ಕಳೆದುಕೊಂಡು ಅನೇಕ ಜನ್ಮಗಳ ಸಾಧನೆಯಿಂದ ಸಿದ್ಧಿ ಪಡೆದು ಹಿರಿಯ ನೆಲೆಯಾದ ಭಗವಂತನನ್ನು ಸೇರುತ್ತಾನೆ.

ಹಿಂದೆ ಹೇಳಿದಂತೆ ನಮ್ಮ ಸಾಧನೆ ಅನೇಕ ಜನ್ಮಗಳದ್ದು. ಮೊದಲು ನಮ್ಮಲ್ಲಿ ಇಚ್ಛೆ ಹುಟ್ಟಿತು, ಅದರಿಂದ ಆ ಇಚ್ಛೆ ಪೂರ್ಣವಾಗುವ ವಾತವರಣವನ್ನು ಮುಂದಿನ ಜನ್ಮದಲ್ಲಿ ಭಗವಂತ ಕೊಟ್ಟ, ಅಲ್ಲಿ ಪ್ರಯತ್ನ ಮಾಡಿ ಒಳಗಿನ ಕೊಳೆ ತೊಳೆಯಿತು, ಸಾಧನೆಯಿಂದ ಸ್ವಚ್ಛವಾದ ಜ್ಞಾನ ಬಂತು. ಈ ಜ್ಞಾನ ಮತ್ತು ಸಾಧನೆಯಿಂದ ಅನೇಕ ಜನ್ಮಗಳ ನಂತರ ಶಬ್ದಬ್ರಹ್ಮನನ್ನು ಮೀರಿ ಭಗವಂತನನ್ನು ಕಾಣಲು ಸಾಧ್ಯ. ಹೀಗೆ ಅಂತರಂಗದಲ್ಲಿ ಉತ್ಕಟವಾದ ಕಳಕಳಿ ಉಳ್ಳ ಜಿಜ್ಞಾಸು ಶಾಸ್ತ್ರ ಪಂಡಿತರನ್ನು ಮೀರಿ ಮೋಕ್ಷವನ್ನು ತಲುಪಬಲ್ಲ.
ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಅಂತರಂಗ ಪ್ರಪಂಚದ ಸಾಧನೆ. ಹೊರಗಡೆ ಸ್ನಾನ, ಪೂಜೆ, ಹೋಮ, ಹವನ, ಏನೇ ಮಾಡಿದರೂ ಕೂಡಾ ಅದಕ್ಕಿಂತ ಮಿಗಿಲಾದದ್ದು ಅಂತರಂಗ ಪ್ರಪಂಚ. ಇದನ್ನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ ಕೃಷ್ಣ.     

ತಪಸ್ವಿಭ್ಯೋSಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ ಭವಾರ್ಜುನ ೪೬

ತಪಸ್ವಿಭ್ಯಃ ಅಧಿಕಃ ಯೋಗೀ ಜ್ಞಾನಿಭ್ಯಃ ಅಪಿ ಮತಃ ಅಧಿಕಃ
ಕರ್ಮಿಭ್ಯಃ ಚ ಅಧಿಕಃ  ಯೋಗೀ ತಸ್ಮಾತ್  ಯೋಗೀ ಭವ ಅರ್ಜುನ-ಧ್ಯಾನ ಯೋಗದ ಸಾಧಕ ಉಪವಾಸ ಮೊದಲಾದ ವ್ರತಸಾಧಕರಿಗಿಂತ ಮಿಗಿಲು; ಬರಿಯ ಧ್ಯಾನಯೋಗದ ಬಗೆಯನ್ನು ಬಲ್ಲವರಿಗಿಂತಲೂ ಮಿಗಿಲು ಎನ್ನುವುದು ತೀರ್ಮಾನ. ಕರ್ಮ ಯೋಗಿಗಳಿಗಿಂತಲು ಮಿಗಿಲು. ಆದ್ದರಿಂದ ಓ ಅರ್ಜುನ , ನೀನು ಧ್ಯಾನಯೋಗಿಯಾಗು.

ಯಾರು ಅಂತರಂಗದಲ್ಲಿ ಏಕಾಗ್ರವಾಗಿ ಭಗವಂತನನ್ನು ಧ್ಯಾನಿಸಬಲ್ಲ ಅವನು ತಪಸ್ಸು ಮಾಡುವವನಿಗಿಂತ ದೊಡ್ಡವ ಎನ್ನುತ್ತಾನೆ ಕೃಷ್ಣ. ಇಲ್ಲಿ ತಪಸ್ಸು ಎಂದರೆ ನಾವು ಮಾಡುವ ವೃತಾಚರಣೆ. ದೇಹ ದಂಡನೆ, ಏಕಾದಶಿ ಉಪವಾಸ, ಬ್ರಹ್ಮಚರ್ಯಪಾಲನೆ ಇತ್ಯಾದಿ. ಬಾಹ್ಯವಾದ ನೂರಾರು ವೃತಾಚರಣೆ, ಹೋಮ-ಹವನ ಮಾಡುವವರಿಗಿಂತಲೂ ಅಂತರಂಗದಲ್ಲಿ ಧ್ಯಾನ ಮಾಡತಕ್ಕವನು ಭಗವಂತನಿಗೆ ಹೆಚ್ಚು ಪ್ರಿಯ. ಅವನು ಜ್ಞಾನಿಗಳಿಗಿಂತಲೂ ದೊಡ್ಡವನು ಎನ್ನುತ್ತಾನೆ ಕೃಷ್ಣ. ಅಂದರೆ ಧ್ಯಾನದ ಬಗ್ಗೆ, ಶಾಸ್ತ್ರದ ಬಗ್ಗೆ ಕೇವಲ ತಿಳಿದಿರುವವರಿಗಿಂತ ಧ್ಯಾನ ಮಾಡುವವನು ದೊಡ್ಡವನು. ಇಂದು ಅಧ್ಯಾತ್ಮದ ಬಗ್ಗೆ ಮಾತನಾಡುವವರು ಸಿಗುತ್ತಾರೆ ಹೊರತು ನಿಜವಾದ ಧ್ಯಾನ ಯೋಗಿಗಳು ಅತೀ ವಿರಳ("There are nowadays professors of philosophy, but not philosophers”- Henry David Thoreau, Walden).
ನಮ್ಮಲ್ಲಿ ಕೆಲವರು ಕರ್ಮಟರು. ಯಜ್ಞ-ಯಾಗ ಮಾಡುವುದು, ಅಗ್ನಿ ಮುಖೇನ ಭಗವಂತನ ಆರಾದನೆ ಮಾಡುವವರು. ಅಂತರಂಗದಲ್ಲಿ ಭಗವಂತನನ್ನು ಕಾಣುವುದಕ್ಕೊಸ್ಕರ ಈ ಕರ್ಮ. ಇದೇ ರೀತಿ ಪ್ರತಿಮಾಪೂಜೆ. ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದೆ ಅದು ಅಂತರಂಗದಲ್ಲಿ ಭಗವಂತನನ್ನು ಕಾಣಲು ಸಹಾಯ ಮಾಡುವ ಸಂಕೇತ ಎನ್ನುವ ಜ್ಞಾನ ನಮಗಿರಬೇಕು. ಮಾನಸ ಪೂಜೆ ಇಲ್ಲದೆ ಬಾಹ್ಯ ಪೂಜೆ ಪೂಜೆಯೇ ಅಲ್ಲ. ಆದ್ದರಿಂದ ಬರೇ ಕರ್ಮಾಟನಾಗಿ  ಬಾಹ್ಯ ಪೂಜೆ ಮಾಡುವವನಿಗಿಂತ ಮಾನಸ ಪೂಜೆ ಮಾಡುವ ಧ್ಯಾನಯೋಗಿ ದೊಡ್ಡವ. “ ಆದ್ದರಿಂದ ನೀನು ಜೀವನದಲ್ಲಿ ಧ್ಯಾನಯೋಗಿಯಾಗು, ಅಂತರಂಗದ ಧ್ಯಾನದಲ್ಲಿ ತೊಡಗು. ಆ ಧ್ಯಾನದಲ್ಲಿ ತೊಡಗಿದ ಮೇಲೆ ನಿನ್ನ ಬಾಹ್ಯ ಕರ್ಮಗಳು ನಿನಗೆ ಲೇಪವಾಗುವುದಿಲ್ಲ. ಆಗ ಯುದ್ಧವೂ ಕೂಡಾ ಭಗವದ್ ಪೂಜೆಯಾಗುತ್ತದೆ” ಎನ್ನುವುದು ಅರ್ಜುನನಿಗೆ ಕೃಷ್ಣನ ಸಂದೇಶ
 
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ೪೭

ಯೋಗಿನಾಮ್ ಅಪಿ ಸರ್ವೇಷಾಮ್  ಮತ್ ಗತೇನ ಅಂತಃ ಆತ್ಮನಾ  
ಶ್ರದ್ಧಾವಾನ್ ಭಜತೇ ಯಃ  ಮಾಮ್  ಸಃ  ಮೇ ಯುಕ್ತ ತಮಃ  ಮತಃ –ನನ್ನಲ್ಲಿ ಒಳಬಗೆಯನ್ನಿರಿಸಿ ಶ್ರದ್ಧೆಯಿಂದ ನನ್ನನ್ನು ಸೇವಿಸುವವನು ಇತರ ಎಲ್ಲ ಧ್ಯಾನಯೋಗಿಗಳಿಗಿಂತಲು ಹಿರಿಯ ಯೋಗಿ ಎಂದು ನನ್ನ ತೀರ್ಮಾನ.

ಧ್ಯಾನವನ್ನು ಮಾಡುವಾಗ ನಾವು ಮನಸ್ಸನ್ನು ಯಾವುದರಮೇಲೆ ಕೂಡ ಏಕಾಗ್ರ ಮಾಡಿ ಧ್ಯಾನ ಮಾಡಬಹುದು. ಕೆಲವರು ಅನೇಕ ಕ್ಷುದ್ರ ದೇವತೆಗಳು, ಭೂತ-ಪ್ರೇತಗಳನ್ನು ಉಪಾಸನೆ ಮಾಡುವವರಿದ್ದಾರೆ. ಆದರೆ ಕೃಷ್ಣ ಹೇಳುತ್ತಾನೆ “ಯಾರು ಭಗವಂತನಲ್ಲೇ ಮನಸ್ಸನ್ನಿಟ್ಟು ಧ್ಯಾನ ಮಾಡುತ್ತಾರೋ ಅವರು ಎಲ್ಲರಿಗಿಂತ ಹಿರಿಯ ಯೋಗಿ” ಎಂದು. ಭಗವಂತನನ್ನು ಬಿಟ್ಟು ಇನ್ನೇನನ್ನೋ ಧ್ಯಾನ ಮಾಡಿದರೆ ಏನೂ ಉಪಯೋಗವಿಲ್ಲ. ನಮ್ಮ ಜೋತಿಷಿಗಳು ಸಾಮಾನ್ಯವಾಗಿ ‘ಇಂತಹ ಗ್ರಹಚಾರಕ್ಕೆ ಇಂತಹ ದೇವತೆಯನ್ನು ಉಪಾಸನೆ ಮಾಡು’ ಎಂದು ಹೇಳುತ್ತಾರೆ. ಅದರರ್ಥ  ಭಗವಂತನನ್ನು ಆ ಪ್ರತೀಕದಲ್ಲಿ ಕಾಣು ಎಂದರ್ಥ. ಯಾವುದೇ ದೇವತೆಯನ್ನು ಉಪಾಸನೆ ಮಾಡುವಾಗ ಆ ಪ್ರತೀಕದಲ್ಲಿ ಭಗವಂತನ ಉಪಾಸನೆ ಮಾಡದಿದ್ದರೆ ಅದು ನಿಜವಾದ ಯೋಗವಾಗುವುದಿಲ್ಲ. ಧ್ಯಾನದಲ್ಲಿ ಕೇವಲ ಭಗವಂತನನ್ನು ಕಾಣಬೇಕು ಎನ್ನುವ ಬಯಕೆ ಮತ್ತು  ಎಲ್ಲಾ ಪ್ರತೀಕದಲ್ಲೂ ಅವನನ್ನೇ ಕಾಣುವುದು ಶ್ರೇಷ್ಠವಾದ ಯೋಗ. ಈ ರೀತಿ ಬದುಕಿದಾಗ ನಮ್ಮ ಬದುಕೇ ಒಂದು ಯೋಗವಾಗುತ್ತದೆ.

ಇತಿ ಷಷ್ಠೋSಧ್ಯಾಯಃ
ಆರನೆಯ ಅಧ್ಯಾಯ ಮುಗಿಯಿತು
ಇಲ್ಲಿಗೆ ಭಗವದ್ಗೀತೆಯ ಮೊದಲ ಷಟ್ಕ(ಮೊದಲ ಆರು ಅಧ್ಯಾಯ) ಮುಗಿಯಿತು. ಈ ಷಟ್ಕದಲ್ಲಿ ಭಗವಂತನ ಉಪಾಸನೆಯ ಜ್ಞಾನ ಮತ್ತು ಸಾಂಖ್ಯವನ್ನು ಕೃಷ್ಣ ವಿವರಿಸಿದ. ಜ್ಞಾನಪೂರ್ವಕವಾಗಿ ಭಗವದುಪಾಸನೆಯನ್ನು ಮಾಡುವಂತಹ ವಿಧಾನವನ್ನು ಗೀತೆಯ ಮೊದಲ ಷಟ್ಕ ವಿವರಿಸುತ್ತದೆ. ಮುಂದೆ ಭಗವಂತನನ್ನು ಉಪಾಸನೆ ಮಾಡುವ  ವಿಷಯಾಂಶ(aspect) ಮತ್ತು ಭಗವಂತನ ಮಹಿಮೆ-ಅದರ ವಿವರಗಳು ಬರುತ್ತವೆ.
*******

No comments:

Post a Comment