Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, July 1, 2011

Bhagavad Geeta Kannada Chapter-07 Shloka 20-23


ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ೨೦

ಕಾಮೈಃ ತೈಃ ತೈಃ ಹೃ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ
ತಮ್ ತಮ್  ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ –ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.

ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು  ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು’ ಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ  ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ  ಈ  ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆ  ಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ  ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ “ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”.   “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆ” ಎಂದು.  [ಇಲ್ಲಿ ಹೇಳಿರುವ ‘ಪ್ರಕೃತಿ’ ಅಂದರೆ ಒಂದು ‘ಜೀವ ಸ್ವಭಾವ’ ಹಾಗು ಇನ್ನೊಂದು ‘ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ  ಎಷ್ಟೋ  ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕು” ಎಂದು. ಹೀಗೆ  ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.          

ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾSರ್ಚಿತುಮಿಚ್ಛತಿ
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್     ೨೧

ಯಃ ಯಃ  ಯಾಮ್ ಯಾಮ್  ತನುಮ್  ಭಕ್ತಃ ಶ್ರದ್ಧಯಾರ್ಚಿತುಮ್ ಇಚ್ಛತಿ
ತಸ್ಯ ತಸ್ಯಚಲಾಮ್  ಶ್ರದ್ಧಾಮ್  ತಾಮ್ ಏವ ವಿದಧಾಮಿ ಅಹಮ್-ಯಾರು ಯಾವ ದೇವತಾರೂಪವನ್ನು ಭಕ್ತಿಯಿಟ್ಟು ಶ್ರದ್ಧೆಯಿಂದ ಪೂಜಿಸಬಯಸುತ್ತಾನೆ ಅವರಿಗೆ ಅಂಥದೇ ಶ್ರದ್ಧೆಯನ್ನು ನಾನು ಗಟ್ಟಿಗೊಳಿಸುತ್ತೇನೆ.

ಭಗವಂತನೆಂಬ ಅಸಾಧಾರಣ ಶಕ್ತಿ ತನ್ನ ದೇವತಾ ಪರಿವಾರದೊಂದಿಗೆ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎನ್ನವ ಎಚ್ಚರ ಇಲ್ಲದೆ, ಭಗವಂತನ ಮೇಲಿನ  ಏಕಭಕ್ತಿ ಬಿಟ್ಟು, ಕೇವಲ ಒಂದು ದೇವತೆಯನ್ನು ಶ್ರದ್ಧೆಯಿಂದ  ಪೂಜೆ ಮಾಡಲು ಆಯ್ಕೆ ಮಾಡಿಕೊಂಡವರಿಗೆ –“ಯಾವ ದೇವತೆಯ ಮೇಲೆ ಭಕ್ತಿ ಇದೆಯೋ ಅದನ್ನೇ ಆಚಲವಾಗಿಸುತ್ತೇನೆ” ಎನ್ನುತ್ತಾನೆ ಕೃಷ್ಣ!  
ಮನುಷ್ಯ ಶ್ರದ್ಧೆಯ ಸ್ವರೂಪ. ಯಾವುದರ ಬಗೆಗೆ ಶ್ರದ್ಧೆ ಮೂಡಿತೋ ಅದೇ ಅವನಲ್ಲಿ ಬೆಳೆದುಕೊಂಡು ಹೋಗುತ್ತದೆ. ಯಾವ ದೇವತಾ ಶಕ್ತಿಯನ್ನು ಶ್ರದ್ಧೆಯಿಂದ ಆರಾಧನೆ ಮಾಡಿದೆವೋ ಅದೇ ನಂಬಿಕೆ ನಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು  ಆ ಶ್ರದ್ಧೆ ನಿಶ್ಚಲವಾಗುತ್ತದೆ. ಅದನ್ನು ಬದಲಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ದೇವರ ಬಗ್ಗೆ ತಿಳಿದುಕೊಳ್ಳಬೇಕು. ದೇವರು ಮತ್ತು ದೇವತಾ ಪರಿವಾರ  ಎಂದರೆ ಮಾನವರಂತೆ  ಒಬ್ಬರನೊಬ್ಬರು ದ್ವೇಷಿಸುವ ಆಸೂಹೆ ಪಡುವ ಸಂಸ್ಕ್ರತಿ ಉಳ್ಳ ಒಂದು ಗುಂಪು ಎಂದು ನಾವು ತಿಳಿದಿದ್ದರೆ ಅದು ನಮ್ಮ ಮೌಡ್ಯತೆಯ ಪರಮಾವದಿ. ಹಿಂದೆ ಹೇಳಿದಂತೆ ಭಗವಂತ ಅನ್ನುವುದು ಏಕಶಕ್ತಿ. ಆತ ಸದಾ ತನ್ನ ದೇವತಾ ಪರಿವಾರದೊಂದಿಗೆ ಅಭಿವ್ಯಕ್ತವಾಗುತ್ತಾನೆ. ನಾವು ಗಣಪತಿ ಅಥವಾ ಇನ್ನ್ಯಾವುದೇ ದೇವತೆಯ  ಆರಾಧನೆ ಮಾಡುವಾಗ ನಮಗೆ ಆ ಏಕ ಶಕ್ತಿಯ ಎಚ್ಚರ ಇದ್ದು ಮಾಡಿದರೆ ಆ ಪೂಜೆ ಮಹಾ ಪೂಜೆಯಾಗುತ್ತದೆ. ಅದನ್ನು ಬಿಟ್ಟು ಗಣಪತಿಯೇ(ಅಥವಾ ಇನ್ಯಾವುದೇ ದೇವತೆ) ಬೇರೆ, ಅವನೊಬ್ಬನೇ ದೇವರು  ಎಂದು ತಿಳಿದು ಅದರಲ್ಲೇ ಶ್ರದ್ಧೆ ಬೆಳೆಸಿಕೊಂಡರೆ  ಆಗ ಆ ಶ್ರದ್ಧೆಯ ಬೇಲಿಯಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಕಲ್ಲಿನ ಮೂರ್ತಿಯನ್ನು ದೇವರೆಂದು ಪೂಜಿಸಿದಂತಾಗುತ್ತದೆ. ನಿಜವಾಗಿ ನಾವು ಪೂಜಿಸುವುದು ಕಲ್ಲಿನ ಮೂರ್ತಿಯನ್ನಲ್ಲ –ಅದರಲ್ಲಿನ ಭಗವಂತನ  ಪ್ರತೀಕವನ್ನು. ಕಲ್ಲಿನ ಮೂರ್ತಿ ಕೇವಲ ದೇವತಾ ಪ್ರತೀಕ. ಸರ್ವಶಕ್ತ ಭಗವಂತ ಆ ಮೂರ್ತಿಯೊಳಗೆ ಅಂತರ್ಗತನಾಗಿದ್ದಾನೆ.   ಆದ್ದರಿಂದ ಯಾವುದೇ ದೇವತಾ ಪ್ರತೀಕವನ್ನು ಪೂಜಿಸುವಾಗಲೂ ಕೂಡಾ ‘ಭಗವಂತ ಒಬ್ಬನೆ, ಆತ ಈ ದೇವತೆಯ ಪ್ರತೀಕದಲ್ಲಿ ಅಂತರ್ಗತನಾಗಿ, ತನ್ನ ಸಮಸ್ತ ದೇವತಾ  ಪರಿವಾರದ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾನೆ’ ಎನ್ನುವ ಅನುಸಂಧಾನ ಬಹಳ ಮುಖ್ಯ. ಈ ಅನುಸಂಧಾನದಿಂದ ಗಣಪತಿಯನ್ನಾಗಲಿ, ವೀರಭದ್ರನನ್ನಾಗಲಿ, ಕೋಟಿ ಚನ್ನಯ್ಯನನ್ನಾಗಲಿ, ಅಥವಾ ಇನ್ಯಾವುದೇ ದೇವತೆಯನ್ನು  ಪೂಜಿಸಿದರೂ ಕೂಡ ಅದು ಪರಮಾತ್ಮ ಮೆಚ್ಚುವ ಮಹಾ ಪೂಜೆಯಾಗುತ್ತದೆ. ನಾವು ಮಾಡುವ ವ್ರತ-ಅನುಷ್ಠಾನ ಕೂಡಾ ಇದೇ ರೀತಿಯಾಗಿರಬೇಕು. ಅದು ಏಕಾದಶಿಯ ಉಪವಾಸವಾಗಿರಲಿ ಅಥವಾ ಸಂಕಷ್ಟಹರ ಚತುರ್ಥಿಯ ಉಪವಾಸವಾಗಿರಲಿ, ಎಲ್ಲವೂ ಕೂಡಾ ಆ ಭಗವದ್ ಪ್ರೀತ್ಯರ್ಥವಾಗಿರಬೇಕು. ಭಗವಂತ ಸರ್ವ ಶಬ್ದವಾಚ್ಯ-ಆದ್ದರಿಂದ ಯಾವ ಹೆಸರಿನಿಂದ ಕರೆದರೂ ಅದು ಭಗವಂತನ ಹೆಸರು; ಭಗವಂತ  ಸರ್ವ ಸಮರ್ಥ-ಆದ್ದರಿಂದ ಆತ ಕಲ್ಲಿನಲ್ಲೂ ಇರಬಹುದು ಕಂಬದಲ್ಲೂ ಇರಬಹುದು; ಭಗವಂತ ಸರ್ವಾಂತರ್ಯಾಮಿ-ಸರ್ವ ದೇವತೆಗಳ ಅಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುವವನು ಆ ಭಗವಂತ. ಈ ಅನುಸಂಧಾನದಿಂದ ಮಾಡುವ ಭಕ್ತಿ ಶ್ರೇಷ್ಠ ಭಕ್ತಿ ಎನಿಸುತ್ತದೆ. ಇದನ್ನು ಬಿಟ್ಟು ಅಂಧಶ್ರದ್ಧೆಯನ್ನು ಬೆಳೆಸಿಕೊಂಡರೆ ಅದೇ ನಮ್ಮಲ್ಲಿ ಗಟ್ಟಿಯಾಗಿ ನಮ್ಮನ್ನು ಅಧಃಪಾತಕ್ಕೆ ತಳ್ಳಬಹುದು!          
   
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾSರಾಧನಮೀಹತೇ
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ೨೨

ಸಃ ತಯಾ  ಶ್ರದ್ಧಯಾ ಯುಕ್ತಃ ತಸ್ಯ ಆರಾಧನಮ್ ಈಹತೇ
ಲಭತೇ ಚ ತತಃ ಕಾಮಾನ್ ಮಯಾ ಏವ ವಿಹಿತಾನ್ ಹಿ ತಾನ್-ಅವನು ಶ್ರದ್ಧೆಯನ್ನೆ ಆತುಕೊಂಡು ಆಯಾ ದೇವತೆಗಳನ್ನು ಪೂಜಿಸತೊಡಗುತ್ತಾನೆ. ಅದರ ಫಲವಾಗಿ ನಾನೇ ಈಡೇರಿಸಿದ ಆಯಾ ಬಯಕೆಗಳನ್ನು ಪಡೆಯುತ್ತಾನೆ.

ಮೇಲೆ ಹೇಳಿದ ಏಕಭಕ್ತಿಯನ್ನು ಪಾಲಿಸದೆ ಯಾವುದೋ ಒಂದು ದೇವತೆಯನ್ನು ಅಚಲವಾಗಿ ಪೂಜಿಸಿ ಫಲ ಪಡೆಯವವರನ್ನು ಪ್ರಪಂಚದಲ್ಲಿ ಕಾಣುತ್ತೇವೆ. ಇಲ್ಲಿ ‘ತಪ್ಪು ಪೂಜಾಕ್ರಮದಿಂದಲೂ ಹೇಗೆ ಫಲ ಸಿಗುತ್ತದೆ’ ಎನ್ನುವ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ.  ಕೃಷ್ಣ ಹೇಳುತ್ತಾನೆ “ನೀನು ಯಾರನ್ನು ಉಪಾಸನೆ ಮಾಡಿದರೂ ಕೊನೆಗೆ ಫಲ ಕೊಡುವವನು ನಾನೇ” ಎಂದು. ಶಾಸ್ತ್ರಗಳಲ್ಲಿ ಹೇಳುವಂತೆ "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಯಾರನ್ನು ಪೂಜೆ ಮಾಡಿದರೂ ಅದು ಸಲ್ಲುವುದು ಅದರೊಳಗಿನ ಭಗವಂತನನ್ನೇ. ಆದರೆ ವ್ಯತ್ಯಾಸ ಒಂದೆ-ತಿಳಿದು ಮಾಡಿದಾಗ ‘ಶಾಶ್ವತವಾದ ಪೂರ್ಣಫಲ’, ತಿಳಿಯದೇ ಫಲ ಕಾಮನೆಯಿಂದ ಮಾಡಿದಾಗ ‘ಬೌತಿಕವಾದ ಅಲ್ಪಫಲ’.
ನಾವು ಯಾವುದೇ ಆರಾಧ್ಯ ಮೂರ್ತಿಯನ್ನು ಪೂಜಿಸಿದರೂ ಕೂಡಾ ಆ ಆರಾಧ್ಯ ಮೂರ್ತಿಯ ಅಂತರ್ಯಾಮಿಯಾಗಿದ್ದು ಫಲ ಕೊಡುವವನು ಭಗವಂತನೇ. ಆದರೆ ‘ದೇವತಾ ಅಂತರ್ಗತನಾದ ಭಗವಂತ ಕೊಟ್ಟ’ ಅನ್ನುವ ಅರಿವು ನಮಗಿರುವುದಿಲ್ಲ ಅಷ್ಟೇ. ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಈ ಎಚ್ಚರ ಬಹಳ ಮುಖ್ಯ. ನಾವು ನಮ್ಮ ಪ್ರತಿಯೊಂದು ಅನುಸಂಧಾನವನ್ನು ಭಗವಂತನ ಪೂಜಾ ರೂಪವಾಗಿ ಮಾಡಿ ಭವ್ಯವಾಗಿಸಬೇಕು. ಇಲ್ಲದಿದ್ದರೆ ಮಹಾಫಲದಿಂದ ವಂಚಿತರಾಗಿ  ಯಾವುದೋ ಕ್ಷುದ್ರ ಫಲ ನಮ್ಮದಾಗುತ್ತದೆ. [ಇಲ್ಲಿ “ಮಯೈವ ವಿಹಿತಾನ್ ಹಿ ತಾನ್” ಎಂದರೆ ನಾನೇ ದೇವತೆಯೊಳಗಿದ್ದು ಫಲವನ್ನೂ ಕೊಡುವವನು ಎಂದರ್ಥವಾದರೆ,  ‘ಮಯೈವ ವಿಹಿತಾನ್ ಹಿತಾನ್’ ಎಂದರೆ ‘ನೀನು ಬಯಸಿದ-‘ನಿನಗೆ ಹಿತವಾದ’ ಕ್ಷಣಿಕ ಫಲವನ್ನು ನನ್ನಿಂದ ಪಡೆಯುತ್ತೀಯ’ ಎಂದರ್ಥ].    

ಅಂತವತ್ತು  ಫಲಂ ತೇಷಾಂ ತದ್  ಭವತ್ಯಲ್ಪಚೇತಸಾಮ್
ದೇವಾನ್ ದೇವಯಜೋ ಯಾಂತಿದ್ ಭಕ್ತಾ ಯಾಂತಿ ಮಾಮಪಿ   ೨೩

ಅಂತವತ್ ತು   ಫಲಮ್  ತೇಷಾಮ್  ತತ್   ಭವತಿ ಅಲ್ಪಚೇತಸಾಮ್
ದೇವಾನ್ ದೇವಯಜಃ  ಯಾಂತಿತ್  ಭಕ್ತಾಃ  ಯಾಂತಿ ಮಾಮ್ ಅಪಿ-ಅಲ್ಪಮತಿಗಳಾದ ಅಂಥವರ ಆ ಫಲಕ್ಕೆ ಅಳಿವುಂಟು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನು ಸೇರುತ್ತಾರೆ.

ಕೃಷ್ಣನ ಮಾತನ್ನು ಕೇಳಿದಾಗ ನಮ್ಮಲ್ಲಿ ಒಂದು ಭಾವನೆ ಮೂಡಬಹುದು: “ಯಾರು ಫಲ ಕೊಟ್ಟರೆ ನಮಗೇನು?  ನನಗೆ ನನ್ನ ಇಷ್ಟಾರ್ಥ ಸಿದ್ಧಿಯಾದರೆ ಸಾಕು” ಎಂದು. ಅದಕ್ಕಾಗಿ ಈ ಶ್ಲೋಕದಲ್ಲಿ ಕೃಷ್ಣ ಎಚ್ಚರಿಕೆಯ ನುಡಿಯನ್ನಾಡುತ್ತಾನೆ. ಕೃಷ್ಣ ಹೇಳುತ್ತಾನೆ “ಅಂತವತ್ತು  ಫಲಂ ತೇಷಾಂ ತದ್  ಭವತ್ಯಲ್ಪಚೇತಸಾಮ್” ಎಂದು. ಅಂದರೆ ಯಾವುದೋ ಒಂದು ಕ್ಷುದ್ರ ಫಲ ಸಿಕ್ಕಿತು ಎಂದು ಹಿಗ್ಗುವವರು  ಅಲ್ಪಮತಿಗಳು. ಈ ರೀತಿಯಾಗಿ ಸಿಗುವ ಫಲ ಎಂದೂ ಶಾಶ್ವತ ಅಲ್ಲ, ಅದು ಕ್ಷಣಿಕ. “ನೀವು ಯಾವ ದೇವತೆಯನ್ನು ಪೂಜಿಸುತ್ತೀರೋ ಆ ದೇವತೆಯನ್ನು ಸೇರುತ್ತೀರಿ ಹೊರತು ಮೊಕ್ಷವನ್ನಲ್ಲ” ಎನ್ನುತ್ತಾನೆ ಕೃಷ್ಣ. ಯಾವ ದೇವತೆಗಳೂ ಕೂಡ ಅನಂತ ಕಾಲದ ತನಕ ನಮ್ಮನ್ನು ಅವರ ಲೋಕದಲ್ಲಿ ಇರಗೊಡುವುದಿಲ್ಲ. ಆದ್ದರಿಂದ ನಾವು ಮಾಡಿದ ಕರ್ಮದ ಅವದಿ ಮುಗಿದಾಕ್ಷಣ ಮರಳಿ ಈ ಮೃತ್ಯುಲೋಕಕ್ಕೆ ಬರಬೇಕಾಗುತ್ತದೆ. ಈ ಕಾರಣದಿಂದ ಭಗವಂತನ ಅರಿವಿಲ್ಲದ ಕೇವಲ ದೇವತಾ ಉಪಾಸನೆ ಶಾಶ್ವತ ಮೋಕ್ಷವನ್ನು ಕೊಡಲಾರದು.
ಭಗವಂತನಲ್ಲಿ ಮನವಿಟ್ಟು, ಏಕಭಕ್ತಿಯಿಂದ ಭಗವಂತನನ್ನು ಭಜಿಸಿದರೆ ಆಗ ‘ತದ್ಧಾಮಂ ಪರಮಂ ಮಮ’- ಎಲ್ಲಿಂದ ಎಂದೂ ಮರಳಿ ಬರಬೇಕಾಗಿಲ್ಲವೋ ಅಂಥಹ  ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಭಗವಂತನನ್ನು ಪ್ರೀತಿಸುವುದರಿಂದ  ಯಥಾರ್ಥ ಜ್ಞಾನ ಸಿದ್ಧಿಯಾಗುತ್ತದೆ. ಇದರಿಂದ ಎಂದೆಂದೂ ದುಃಖವಿಲ್ಲದ ಭಗವದ್ ಪ್ರಾಪ್ತಿ ರೂಪವಾದ ಮೋಕ್ಷವನ್ನು ಪಡೆಯುಬಹುದು.
ಇಲ್ಲಿ ಕೆಲವರಿಗೆ ಒಂದು ಗೊಂದಲವಾಗಬಹುದು. “ದೇವರು ಏಕೆ ಹೊಗಳುವಿಕೆಯನ್ನು ಇಷ್ಟಪಡುತ್ತಾನೆ? ಆತ ಏಕೆ ತನ್ನನ್ನು ಹೊಗಳುವವರನ್ನು ಮಾತ್ರ ಉದ್ಧರಿಸಿ ಉಳಿದವರನ್ನು ಉದ್ಧರಿಸುವುದಿಲ್ಲ?” ಎಂದು. ದೇವರು ಪ್ರೀತಿಸುವುದು ಹೊಗಳಿಕೆಯನ್ನಲ್ಲ-ಸತ್ಯವನ್ನು. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮದಲ್ಲಿ ದೇವರು ಅಂದರೆ ಏನು ಆತನ ಮಹಾತ್ಮೆ ಏನು(etymologically)  ಎನ್ನುವ ಸತ್ಯ ಅಡಗಿದೆ. ಭಗವಂತ ಯಾರು ಸತ್ಯವನ್ನು ತಿಳಿಯುತ್ತಾರೋ ಅವರನ್ನು ಪ್ರೀತಿಸುತ್ತಾನೆ. ಆತನಿಗೆ ವೈಯಕ್ತಿಕ ಇಷ್ಟಾನಿಷ್ಟವಿಲ್ಲ. ಆತ ಇಷ್ಟ ಪಡುವುದು ಯಥಾರ್ಥ ಜ್ಞಾನವನ್ನು. ಯಥಾರ್ಥ ಜ್ಞಾನ-ಭಕ್ತಿ ರೂಪದಲ್ಲಿದೆ. ನಿಜವಾದ ಭಕ್ತಿ-ಯಥಾರ್ಥ ಜ್ಞಾನದಲ್ಲಿದೆ.  ಯಥಾರ್ಥದ ಅರಿವು ಭಗವಂತನಿಗೆ ಇಷ್ಟ ಮತ್ತು ಇದು ಮೋಕ್ಷವನ್ನು ತಲುಪಲು ಬೇಕಾದ ಅರ್ಹತೆ. ಆದ್ದರಿಂದ ಭಗವಂತ ತನ್ನನ್ನು ಹೊಗಳುವವರನ್ನು ಉದ್ಧರಿಸುವುದಲ್ಲ. ಆತ ಯಥಾರ್ಥವನ್ನು ತಿಳಿದವರನ್ನು ಉದ್ಧರಿಸುತ್ತಾನೆ ಮತ್ತು ಅರ್ಹತೆ ಉಳ್ಳವರಿಗೆ ಮೋಕ್ಷ ಕರುಣಿಸುತ್ತಾನೆ. 
“ಶಾಶ್ವತ ಫಲವನ್ನು ಕೊಡತಕ್ಕಂತಹ ಅಂತರ್ಯಾಮಿಯ ಉಪಾಸನೆಯಲ್ಲಿ ಗಟ್ಟಿಯಾಗಿ-ಮೋಕ್ಷವನ್ನು ಪಡೆ” ಎನ್ನುವುದು ಇಲ್ಲಿ ಕೃಷ್ಣನ ಸಂದೇಶ.

No comments:

Post a Comment