Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, May 22, 2011

Bhagavad Gita Kannada Chapter-06 Shloka 10-14

ಹೀಗೆ ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ವಿವರಿಸಿದ ಕೃಷ್ಣ ಮುಂದೆ ನೇರವಾಗಿ  ಧ್ಯಾನಕ್ಕೆ ಕೂರುವ ವಿಧಾನವನ್ನು ವಿವರಿಸುತ್ತಾನೆ.  

ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ೧೦

ಯೋಗೀ ಯುಂಜೀತ ಸತತಮ್ ಆತ್ಮಾನಮ್  ರಹಸಿ ಸ್ಥಿತಃ
ಏಕಾಕೀ ಯತ ಚಿತ್ತ ಆತ್ಮಾ ನಿರಾಶೀಃ ಅಪರಿಗ್ರಹಃ –ಯೋಗ ಸಾಧಕನು ಒಬ್ಬನೆ ಏಕಾಂತದಲ್ಲಿ ಕುಳಿತು, ಮೈಮನಗಳನ್ನು ಹದಗೊಳಿಸಿ, ಆಸೆಪಡದೆ, ಏತಕ್ಕೂ ಕೈಯೊಡ್ಡದೆ, ಬಗೆಯನ್ನು ಸದಾ ಸಮಾಧಿಗೆ ಅಣಿಗೊಳಿಸಬೇಕು.

“ಸತತಮ್ ಆತ್ಮಾನಮ್”-ಧ್ಯಾನ ಮಾರ್ಗದಲ್ಲಿ ಸಾಧನೆ ಮಾಡತಕ್ಕಂತಹ ವ್ಯಕ್ತಿ ಮನಸ್ಸನ್ನು ನಿರಂತರ ಧ್ಯಾನ ಯೋಗದಲ್ಲಿ ತೊಡಗಿಸಲು ಹಾಗು  ಏಕಾಗ್ರಗೊಳಿಸಲು  ಪ್ರಯತ್ನಪಡಬೇಕು;  “ರಹಸಿ ಸ್ಥಿತಃ”- ಜನಜಂಗುಳಿ ಇದ್ದಲ್ಲಿ ಧ್ಯಾನ ಅಭ್ಯಾಸ ಮಾಡಲು ಅಸಾಧ್ಯ. ಈ ಕಾರಣಕ್ಕಾಗಿ ಹಿಂದಿನವರು ಧ್ಯಾನಕ್ಕಾಗಿ ಬೆಳಗಿನ ಜಾವದ ಅರುಣೋದಯ ಕಾಲವನ್ನು ಮೀಸಲಿಡುತ್ತಿದ್ದರು. ಬೆಳಗಿನಜಾವ ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ ಮೊದಲು ಧ್ಯಾನಕ್ಕೆ ಕುಳಿತರೆ ಆಗ ಇಡೀ ಪ್ರಕೃತಿ ಪ್ರಶಾಂತವಾಗಿರುತ್ತದೆ. ಈ ಕಾಲ ಮನಸ್ಸನ್ನು ಏಕಾಗ್ರತೆಗೆ ಕೊಂಡೊಯ್ಯಲು ಅತ್ಯಂತ ಪೂರಕ ಕಾಲ. ಇದನ್ನು ‘ಬ್ರಹ್ಮಮಹೂರ್ತ’ ಎನ್ನುತ್ತಾರೆ(ಸೂರ್ಯೋದಯಕ್ಕಿಂತ ತೊಬತ್ತಾರು ನಿಮಿಷ(ನಾಲ್ಕು ಘಳಿಗೆ) ಮೊದಲು ಪ್ರಾರಂಭವಾಗಿ ನಲವತ್ತೆಂಟು ನಿಮಿಷಗಳ ಕಾಲ(ಎರಡು ಘಳಿಗೆ) ಬ್ರಹ್ಮಮಹೂರ್ತ-ಉದಾಹರಣೆಗೆ ಸೂರ್ಯೋದಯ 5:44ಕ್ಕೆ  ಆದರೆ 4:08 ರಿಂದ 4:56 ರ ತನಕ ಬ್ರಹ್ಮಮಹೂರ್ತ). ಈ ಮಹೂರ್ತದ ದೇವತೆ ಚತುರ್ಮುಖ ಬ್ರಹ್ಮ. ಈತನೇ ನಮ್ಮ ಚಿತ್ತದ ದೇವತೆ. ಆದ್ದರಿಂದ ಈ ಕಾಲ ಜಪ ಸ್ಮರಣೆ ಮತ್ತು ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಧ್ಯಾನ  ಎನ್ನುವುದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಕೇವಲ ಭಗವಂತ ಮತ್ತು ಸಾಧಕ ಜೀವ ಮಾತ್ರ ಇರಬೇಕು, ಮೂರನೆ ಸಂಗಾತಿ ಬಂದರೆ ತೊಂದರೆಯಾಗುತ್ತದೆ. ಒಬ್ಬ ಕಲುಷಿತ ಮನಸ್ಸಿನ(polluted mind) ವ್ಯಕ್ತಿಯಿಂದ ಆತನ ಸುತ್ತಲಿನ ವಾತಾವರಣ ಕೆಡುತ್ತದೆ. ಅದಕ್ಕಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ ಏಕಾಂತವಾಗಿ ಅಭ್ಯಾಸ ಮಾಡಬೇಕು. ನಮ್ಮ ಚಿತ್ತ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟು, ಯಾವುದೇ ಆಸೆ ಆಕಾಂಕ್ಷೆ ಮನಸ್ಸಿಗೆ ಸುಳಿಯದಂತೆ, ತೃಪ್ತ ಮನಸ್ಸಿನಿಂದ ಧ್ಯಾನಕ್ಕೆ ಅಣಿಯಾಗಬೇಕು.

ಮುಂದಿನ ಶ್ಲೋಕದಲ್ಲಿ ಧ್ಯಾನಕ್ಕೆ ಕೂರುವ ಸ್ಥಳ ಹೇಗಿರಬೇಕು ಮತ್ತು ಹೇಗೆ ಕುಳಿತುಕೊಳ್ಳಬೇಕು  ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ.                

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ
ನಾತ್ಯುಚ್ಛ್ರಿತಂ ನಾತಿನೀಚಂ ಚೇಲಾಜಿನಕುಶೋತ್ತರಮ್            ೧೧

ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಾಃ
ಉಪವಿಶ್ಯಾSಸನೇ ಯುಂಜ್ಯಾದ್ ಯೋಗ ಮಾತ್ಮವಿಶುದ್ಧಯೇ   ೧೨

ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮ್ ಆಸನಮ್ ಆತ್ಮನಃ
ನ ಅತಿ ಉಚ್ಛ್ರಿತಮ್ ನ ಅತಿ ನೀಚಮ್  ಚೇಲ ಅಜಿನ ಕುಶ ಉತ್ತರಮ್     
ತತ್ರ ಏಕ ಅಗ್ರಮ್  ಮನಃ ಕೃತ್ವಾ ಯತಚಿತ್ತ ಇಂದ್ರಿಯ ಕ್ರಿಯಃ
ಉಪವಿಶ್ಯ ಆಸನೇ ಯುಂಜ್ಯಾದ್ ಯೋಗಮ್ ಆತ್ಮ ವಿಶುದ್ಧಯೇ –ನಿರ್ಮಲವಾದ ತಾಣದಲ್ಲಿ, ಹುಲ್ಲ(ದರ್ಬೆ) ಚಾಪೆ-ಜಿಂಕೆಯ ತೊಗಲ ಮೇಲೆ ಬಟ್ಟೆ ಹಾಸಿ, ತುಂಬ ಎತ್ತರವೂ ಅಲ್ಲದ, ತೀರ ತಗ್ಗೂ ಅಲ್ಲದ, ನಲುಗದ ಆಸನವನ್ನು ತನಗಾಗಿ ಅಣಿಗೊಳಿಸಬೇಕು. ಅದರಲ್ಲಿ ಕುಳಿತು, ಬಗೆಯನ್ನು ನೆಟ್ಟ ಗುರಿಯಲ್ಲಿರಿಸಿ, ಇಂದ್ರಿಯಗಳ ಮತ್ತು  ಒಳಬಗೆಯ ಚೆಲ್ಲಾಟವನ್ನು ನಿಲ್ಲಿಸಿ, ಆತ್ಮ ಶುದ್ಧಿಗಾಗಿ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕೂರುವ ಪ್ರದೇಶ ಸ್ವಚ್ಛವಾಗಿರಬೇಕು. ಮನೆಯಲ್ಲಿ ಸಾತ್ವಿಕ ಕಂಪನ(Vibration)ವಿರುವ ಸ್ಥಳವನ್ನು ಧ್ಯಾನಕ್ಕೆ  ಆರಿಸಿಕೊಳ್ಳಬೇಕು. ಹಿಂದೆ  ಮನೆಯಲ್ಲಿ ಹೆಚ್ಚು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿ ಅಲ್ಲಿ ದೇವರಮನೆಯನ್ನು ನಿರ್ಮಿಸುತ್ತಿದ್ದರು. ದುರಾದೃಷ್ಟಾವಶಾತ್ ಇಂದು ಮನೆ ಕಟ್ಟುವಾಗ  ಎಲ್ಲಿ ಜಾಗ ಉಳಿದಿದೆ ಅದನ್ನು ದೇವರಮನೆಯಾಗಿ ಪರಿವರ್ತಿಸುತ್ತಿದ್ದೇವೆ. ನಾವು   ಮನೆಯಲ್ಲಿ ಯಾವ ಭಾಗದಲ್ಲಿ ಕುಳಿತಾಗ ನಮಗೆ ಮನಸ್ಸು ಪ್ರಸನ್ನವಾಗಿ ದೇವರ ಧ್ಯಾನಕ್ಕೆ ಪೂರಕವಾಗಿರುತ್ತದೋ ಅಲ್ಲಿ ಸಾತ್ವಿಕ ಕಂಪನ ಹೆಚ್ಚಾಗಿದೆ ಎಂದು ನಾವು ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನೇ ಇಲ್ಲಿ “ಶುಚಿ ದೇಶ” ಎಂದಿದ್ದಾರೆ.
ನಾವು ಸಾತ್ವಿಕ ಕಂಪನವಿರುವ ಸ್ಥಳವನ್ನು ಗುರುತಿಸಿದರೆ ಸಾಲದು; ಅಲ್ಲಿ ಎಷ್ಟು ಒಳ್ಳೆಯ ಸಾತ್ವಿಕ ಕಂಪನವಿದ್ದರೂ ನಾವು ನೆಲದಲ್ಲಿ ಕುಳಿತರೆ ನೆಲದಲ್ಲಿರುವ ಕೆಟ್ಟ ಕಂಪನ ನಮ್ಮ ದೇಹವನ್ನು ಪ್ರವೇಶಿಸಬಹುದು. ಅದಕ್ಕಾಗಿ ನಾವು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಸರಿಯಾಗಿರಬೇಕು. ಸ್ಥಿರವಾದ ಆಸನ ಅತೀ ಮುಖ್ಯ. ಇದಕ್ಕಾಗಿ ಸೋಫಾದಂತಹ ಕುಶನ್ ಇರುವ ಆಸನವನ್ನು ಉಪಯೋಗಿಸಬಾರದು. ಇಲ್ಲಿ ಕೃಷ್ಣ ಯಾವ ರೀತಿಯ ಆಸನ ಯೋಗ್ಯ ಎನ್ನುವುದನ್ನು ವಿವರಿಸಿದ್ದಾನೆ. ನಾವು ಕುಳಿತು ಕೊಳ್ಳುವ ಆಸನ ಬಹಳ ತಗ್ಗಾಗಿ ಇರಬಾರದು ಬಹಳ ಎತ್ತರದಲ್ಲಿಯೂ ಇರಬಾರದು. ಕುಳಿತುಕೊಳ್ಳುವ ಸ್ಥಳದಲ್ಲಿ ಮೊದಲು ದರ್ಬೆಯ ಚಾಪೆಯನ್ನು ಹಾಸಬೇಕು. ಅದರ ಮೇಲೆ ಕೃಷ್ಣಾಜಿನವನ್ನು(ಸಂಸಾರಿಗಳು) ಅಥವಾ ವ್ಯಾಗ್ರಾಜಿನ(ಸಂಸಾರವನ್ನು ತ್ಯಜಿಸಿದ-ನೈಷ್ಠಿಕ ಬ್ರಹ್ಮಚಾರಿಗಳು)ವನ್ನು ಹಾಸಬೇಕು. ಅದರ ಮೇಲೆ ಬಟ್ಟೆ (ರೇಷ್ಮೆಯ ಪಟ್ಟೆ ಅಥವಾ ದಾವಳಿ). ಇದು ಧ್ಯಾನಕ್ಕೆ ಅತ್ಯಂತ ಶ್ರೇಷ್ಠ ಆಸನ.
ಇಲ್ಲಿ ದರ್ಬೆಯ ಚಾಪೆಯನ್ನು ಉಪಯೋಗಿಸಲು ಹೇಳಿದ್ದಾರೆ. ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು  ಇಡುತ್ತಾರೆ. ಧ್ಯಾನ ಕಾಲದಲ್ಲಿ ಯಾವ ದುಷ್ಟಶಕ್ತಿ ನಮಗೆ ತೊಂದರೆ ಕೊಡದಂತೆ ಇಲ್ಲಿ ದರ್ಬೆಯ ಚಾಪೆ ನಮಗೆ ಸಹಾಯ ಮಾಡುತ್ತದೆ. ಕೃಷ್ಣಾಜಿನ ಹಾಗು ಪಟ್ಟೆ ಮಹತ್ತಾದ ಸಾತ್ವಿಕ ಕಂಪನವನ್ನು ನಮಗೊದಗಿಸುತ್ತದೆ. ಇದು ನೆಲದಿಂದ ನಮ್ಮ ದೇಹಕ್ಕೆ ಕೆಟ್ಟ ಕಂಪನ ಪ್ರವೇಶಿಸದಂತೆ ತಡೆಯುತ್ತದೆ. ನಮ್ಮಲ್ಲಿ ಕೆಲವರು ಮರದ ಮಣೆಯನ್ನು ಉಪಯೋಗಿಸುತ್ತಾರೆ. ಆದರೆ ಮಣೆಯಲ್ಲಿ ಕುಳಿತಾಗ ನಮ್ಮ ದೇಹದ ಕೆಲವು ಭಾಗ ನೆಲವನ್ನು ಸ್ಪರ್ಶಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕೃಷ್ಣ ಹೇಳಿದ ಈ ಮೇಲಿನ  ಆಸನ ಬಹಳ ಸೂಕ್ತ. ಈ ರೀತಿಯ ಆಸನವನ್ನು ತಯಾರಿಸಿಕೊಂಡು ನಮಗೆ ಸಾಧ್ಯವಾದ ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ವಜ್ರಾಸನ ಬಹಳ ಪ್ರಸಿದ್ಧ. ಈ ಆಸನದಲ್ಲಿ ನಮ್ಮ ದೇಹ ನೆಟ್ಟಗಿರುತ್ತದೆ ಹಾಗು ಇದು ಧ್ಯಾನಕ್ಕೆ ಪೂರಕ. ಈ ಬಗ್ಗೆ ಮುಂದೆ ವಿವರವಾಗಿ ಹದಿಮೂರನೇ ಶ್ಲೋಕದಲ್ಲಿ  ಕೃಷ್ಣ ವಿವರಿಸುತ್ತಾನೆ.
ಮೇಲೆ ಹೇಳಿದ ರೀತಿ ಆಸನವನ್ನು ಸಿದ್ಧ ಪಡಿಸಿಕೊಂಡು ಕುಳಿತ ತಕ್ಷಣ ಧ್ಯಾನ ಸಾಧ್ಯವಾಗುವುದಿಲ್ಲ. ಆಸನದ ಮೇಲೆ ಸೂಕ್ತ ಭಂಗಿಯಲ್ಲಿ ಕೂತು ಮನಸ್ಸನ್ನು ಭಗವಂತನ ಕಡೆಗೆ ಏಕಾಗ್ರ ಮಾಡಬೇಕು. ‘ಏಕಾಗ್ರ’ ಎನ್ನುವ ಪದಕ್ಕೆ ಎರಡು ಅರ್ಥವಿದೆ. ಏಕ+ಅಗ್ರ-ಬಾಣದಂತೆ ಒಂದೇ ಗುರಿ. ಯಾವುದಕ್ಕೆ ಗುರಿ ಇಡುವುದು ಎಂದರೆ ಅದಕ್ಕೆ ಇದೇ ಪದದಲ್ಲಿ ಉತ್ತರವಿದೆ.  ‘ಏಷ ಏವ ಕರೋತೀತಿ ಏಕಾಗ್ರಹಃ’ ಯಾರೊಬ್ಬನು ಎಲ್ಲ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನಾಜ್ಞಾನ-ಬಂಧ-ಮೊಕ್ಷಗಳಿಗೆ ಕಾರಣನೋ ಅವನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಏಕಾಗ್ರ.  ಬಾಲ್ಯದಿಂದ ಬೆಳೆಸಿಕೊಂಡು ಬಂದ ಅಭ್ಯಾಸವನ್ನು ಬಿಟ್ಟು ಹೊಸ ಅಭ್ಯಾಸಕ್ಕೆ ತನ್ನನ್ನು ತಾನು ಅಣಿಗೊಳಿಸಬೇಕಾದರೆ ಮನಸ್ಸಿಗೆ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ಧ್ಯಾನಕ್ಕೆ ಕೂತ ತಕ್ಷಣ ಮನಸ್ಸು ಏಕಾಗ್ರವಾಗಲಿಲ್ಲ ಎಂದು ಯಾರೂ ಗಾಬರಿಯಾಗುವುದು ಬೇಡ. ನಿರಂತರ ಪ್ರಯತ್ನವನ್ನು ಎಂದೂ ಕೈಬಿಡದೆ ಛಲದಿಂದ ಸಾಧನೆ ಮಾಡಿದಾಗ ಏಕಾಗ್ರತೆ ಸಾಧ್ಯ.
ಮನಸ್ಸು ಏಕಾಗ್ರವಾದ ನಂತರ ‘ಯತಚಿತ್ತ ಇಂದ್ರಿಯ ಕ್ರಿಯಃ’ – ಎಲ್ಲ ಬಾಹ್ಯಇಂದ್ರಿಯ ಕ್ರಿಯೆಯನ್ನು ಸಂಪೂರ್ಣ ಸ್ಥಬ್ಧಗೊಳಿಸಬೇಕು. ಅಂದರೆ ಈ ಸ್ಥಿತಿಯಲ್ಲಿ ಹೊರಗಿನ ಶಬ್ದ ನಮಗೆ ಕೇಳಿಸದು, ಬಾಹ್ಯ ಕಂಪು ಮೂಗಿಗೆ ಬಡಿಯದು. ಒಂದು ವೇಳೆ ಒಂದು ಸೊಳ್ಳೆ ಕಚ್ಚಿದರೂ ಆ ನೋವಿನ ಅರಿವು ನಮಗಾಗುವುದಿಲ್ಲ. ಇದು ನಿದ್ದೆಯಂತೆ; ನಿದ್ದೆಯಲ್ಲಿ ನಮಗೆ ಅಂತರಂಗ ಪ್ರಪಂಚ ಎಚ್ಚರವಿರುವುದಿಲ್ಲ, ಆದರೆ ಧ್ಯಾನದಲ್ಲಿ ಅಂತರಂಗ ಪ್ರಪಂಚ ಎಚ್ಚರವಿರುತ್ತದೆ. ಹೀಗೆ ಬಾಹ್ಯೇಂದ್ರಿಯ ಕ್ರಿಯೆಯನ್ನು ಸ್ಥಬ್ಧಗೊಳಿಸಿ ನಂತರ ಚಿತ್ತವನ್ನು ನಿಯಂತ್ರಿಸಬೇಕು. ನಮ್ಮ ಚಿತ್ತದಲ್ಲಿ ಅದೆಷ್ಟು ವಿಚಾರ ಸಂಗ್ರಹವಾಗಿರುತ್ತದೆ. ಆದರೆ ಹಿಂದೆ ದಾಖಲಿಸಿರುವ ಎಲ್ಲ ವಿಷಯವನ್ನೂ ಬಿಟ್ಟು ಕೇವಲ ಭಗವಂತನ ಗುಣದ ಅಂಶವನ್ನು ಮಾತ್ರ ಧ್ಯಾನ ಮಾಡಬೇಕು.
ಹೀಗೆ ನಮ್ಮ ಮನಸ್ಸು ಚಿತ್ತವನ್ನು ನಿಯಂತ್ರಿಸಲು ಜನ್ಮ ಜನ್ಮಾಂತರದ ಸಾಧನೆ ಬೇಕು. ಕೆಲವರು ಈ ಸಾಧನೆಯಲ್ಲಿ ನಿರಂತರ ಪ್ರಯತ್ನ ಮಾಡಿ ಯಾವುದೇ ಸಿದ್ಧಿಫಲಿಸದೇ ನಿರಾಶರಾಗುವುದಿದೆ. ಆದರೆ ಹಿಂದೆ ಹೇಳಿದಂತೆ ನಾವು ಅಧ್ಯಾತ್ಮದಲ್ಲಿ ಇಡುವ ಒಂದು ತೊದಲು ಹೆಜ್ಜೆ ಕೂಡಾ ವ್ಯರ್ಥವಲ್ಲ. ಈ ಜನ್ಮದಲ್ಲಿ ಸಿದ್ಧಿ ಸಾಧ್ಯವಾಗದೇ ಇದ್ದರೆ ಖಂಡಿತ ಮುಂದಿನ ಜನ್ಮದಲ್ಲಿ ನಮ್ಮ ಸಾಧನೆ ನಾವು ಈ ಜನ್ಮದಲ್ಲಿ ಎಲ್ಲಿ ನಿಂತಿದ್ದೆವೋ ಅಲ್ಲಿಂದ ಆರಂಭವಾಗುತ್ತದೆ. ಆದ್ದರಿಂದ ಎಂದೂ ನಿರಾಶೆ ಬೇಡ, ಪ್ರಯತ್ನ ಮಾತ್ರ ನಿರಂತರವಾಗಿರಲಿ.
ಹೀಗೆ ನಮ್ಮ ಮನಸ್ಸು ಮತ್ತು ಚಿತ್ತ ನಿಯಂತ್ರಣಕ್ಕೆ ಬಂದ ಮೇಲೆ ನಾವು ಅದನ್ನು ಅದೇ ಸ್ಥಿತಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು(ಯುಂಜ್ಯಾದ್ ಯೋಗಮ್). ಈ ಸ್ಥಿತಿಯಲ್ಲಿ ನಮ್ಮ ಜ್ಞಾನಾನಂದಮಯವಾದ ಆತ್ಮಕ್ಕೆ ಹಿಡಿದ ಕೊಳೆ ತೊಳೆದುಹೋಗಿ ಆತ್ಮಶುದ್ಧಿಯಾಗುತ್ತದೆ. ಇಂತಹ ಶುದ್ಧವಾದ ಆತ್ಮದಿಂದ ಪವಿತ್ರನಾದ ಭಗವಂತನನ್ನು ಕಾಣಲು ಸಾಧ್ಯ.
ಮುಂದಿನ ಶ್ಲೋಕದಲ್ಲಿ ಕೃಷ್ಣ ಧ್ಯಾನ ಭಂಗಿ(ಕುಳಿತುಕೊಳ್ಳುವ ರೀತಿ)ಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣವನ್ನು ಕೊಡುತ್ತಾನೆ.

ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್            ೧೩

ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ೧೪


ಸಮಮ್  ಕಾಯ ಶಿರಃ ಗ್ರೀವಮ್  ಧಾರಯನ್ ಅಚಲಮ್  ಸ್ಥಿರಃ 
ಸಂಪ್ರೇಕ್ಷ್ಯ ನಾಸಿಕಾ ಅಗ್ರಮ್  ಸ್ವಮ್  ದಿಶಃ ಚ ಅನವಲೋಕಯನ್ ||

ಪ್ರಶಾಂತ ಆತ್ಮಾ ವಿಗತ ಭೀಃ ಬ್ರಹ್ಮಚಾರಿವ್ರತೇ ಸ್ಥಿತಃ
ಮನಃ ಸಂಯಮ್ಯ ಮತ್ ಚಿತ್ತಃ ಯುಕ್ತಃ  ಆಸೀತ ಮತ್ ಪರಃ -- ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.

ಧ್ಯಾನಕ್ಕೆ ಕುಳಿತಾಗ ಸೊಂಟದಿಂದ ಮೇಲಿನ ನಮ್ಮ ಶರೀರ ನೆಟ್ಟಗೆ ಸರಳರೇಖೆಯಲ್ಲಿರಬೇಕು. ಬೆನ್ನು ಬಗ್ಗಿರಕೂಡದು,  ಕುತ್ತಿಗೆ, ತಲೆ ವಾಲಿರಬಾರದು. ದೇಹವನ್ನು ನಿಶ್ಚಲಗೊಳಿಸಬೇಕು. ಸ್ವಲ್ಪವೂ ಅಲ್ಲಡಿಸಬಾರದು. ಈ ರೀತಿ ಕುಳಿತುಕೊಳ್ಳದೆ ಮನಸ್ಸಿನ ಸ್ಥಿರತೆ ಅಸಾಧ್ಯ. ಮನಸ್ಸು ಈ ದೇಹವೆಂಬ ಪಾತ್ರೆಯೊಳಗಿನ ನೀರಿನಂತೆ. ಪಾತ್ರೆ ಅಲ್ಲಾಡಿದರೆ ಮನಸ್ಸೆಂಬ ನೀರಿನಲ್ಲಿ ಅಲೆಗಳು ಮೂಡುತ್ತವೆ, ಇದರಿಂದ ಏಕಾಗ್ರತೆಗೆ ಭಂಗವಾಗುತ್ತದೆ.
ದೇಹದಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವನ್ನು ಸ್ಥಿರಗೊಳಿಸಿದ ಮೇಲೆ ಕಣ್ಣನ್ನು ಸ್ಥಿರಗೊಳಿಸಬೇಕು. ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನೆಟ್ಟು ಯಾವ ದಿಕ್ಕಿನ ಯಾವ ಆಕೃತಿಯೂ ಕಾಣದಂತೆ ನೇರವಾಗಿ ಒಂದೇ ಕಡೆ ದೃಷ್ಟಿ ಸ್ಥಿರಗೊಳಿಸಬೇಕು.(ಕಣ್ಣನ್ನು ಮುಚ್ಚಿ ಧ್ಯಾನ ಮಾಡಬಹುದು, ಆದರೆ ಕಣ್ಣನ್ನು ಮುಚ್ಚಿದರೆ ನಿದ್ದೆ ಮಾಡುವ ಸಾಧ್ಯತೆ ಹೆಚ್ಚು).
ಈ ರೀತಿ ಧ್ಯಾನದ ಸ್ಥಿತಿಯನ್ನು ತಲುಪಿದಾಗ ಮನಸ್ಸು ಪ್ರಶಾಂತವಾಗುತ್ತದೆ. ಯಾವ ಗೊಂದಲವೂ ಇಲ್ಲದ ಹೇಳಲಾಗದ ವಿಚಿತ್ರ ಆನಂದದಸ್ಥಿತಿಯನ್ನು ನಾವು ಈ ಸ್ಥಿತಿಯಲ್ಲಿ  ಅನುಭವಿಸುತ್ತೇವೆ. ಇದರಿಂದ ನಮಗೆ ಎಲ್ಲಾ ಭಯವೂ ಹೊರಟು ಹೋಗುತ್ತದೆ. ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾದ  ಇನ್ನೊಂದು ಅಂಶ ಬ್ರಹ್ಮಚರ್ಯ ಪಾಲನೆ. ಇಲ್ಲಿ ಬ್ರಹ್ಮಚರ್ಯ ಎನ್ನುವ ಪದಕ್ಕೆ ಮೂರು ಅರ್ಥವಿದೆ. ಪರಬ್ರಹ್ಮನ ಕಡೆಗೆ ಹೋಗುವ ಧೀಕ್ಷೆ-ಬ್ರಹ್ಮಚರ್ಯ; ನಿರಂತರ ವೇದಾಧ್ಯಯನ-ಬ್ರಹ್ಮಚರ್ಯ; ಸಂಸಾರಿಗಳಾದವರು ನಿಯಮಿತ ಲೈಂಗಿಕತೆ ಪಾಲಿಸುವುದು(ಅತಿ ಸುಲಭವಾಗಿ ಲೈಂಗಿಕತೆಯಿಂದ ದೂರ ಸರಿದು ನಿಲ್ಲುವ ಕ್ಷಮತೆ ಹಾಗು ಬೇಕೆನಿಸಿದಾಗ ನಿಯಮಿತ ಲೈಂಗಿಕತೆ) ಹಾಗು ವಿರಕ್ತಿಗಳ(ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕ ಮುಕ್ತ ಜೀವನ-ಬ್ರಹ್ಮಚರ್ಯ.
ಭಗವಂತನೇ ಸರ್ವೋತ್ತಮ ಎನ್ನುವ ಅಚಲವಾದ ಭಕ್ತಿಯಿಂದ, ಭಗವಂತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಸದಾ ಭಗವಂತನನ್ನು ನೆನೆಯುತ್ತ, ಎಂದೂ ಎದೆಗುಂದದೆ ಸಮಾಧಿಯನ್ನು ಸಾಧಿಸಬೇಕು.
ಧ್ಯಾನದ  ಪರಿಣಾಮವೇನು? ನಾವು ಏಕೆ ಧ್ಯಾನ ಮಾಡಬೇಕು? ಉತ್ತರ ಮುಂದಿನ ಶ್ಲೋಕ!

No comments:

Post a Comment