Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, May 15, 2011

Bhagavad Gita Kannada Chapter-06 Shloka 1-3

ಅಧ್ಯಾಯ ಆರು

ಹಿಂದಿನ ಅಧ್ಯಾಯದಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆಯ ಸಾಧನೆಯನ್ನು ವಿವರಿಸಿದ ಕೃಷ್ಣ  ಈಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ತಳಸ್ಪರ್ಶಿಯಾಗಿ ವಿವರಿಸುತ್ತಾನೆ.

ಭಗವಾನುವಾಚ
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ         
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ

ಭಗವಾನುವಾಚ- ಭಗವಂತ ಹೇಳಿದನು:
ಅನಾಶ್ರಿತಃ ಕರ್ಮ ಫಲಮ್  ಕಾರ್ಯಮ್  ಕರ್ಮ ಕರೋತಿ ಯಃ 
ಸಃ ಸಂನ್ಯಾಸೀ ಚ ಯೋಗೀ  ಚ ನ ನಿಃ ಅಗ್ನಿಃ ನ ಚ ಅಕ್ರಿಯಃ –ಕರ್ಮದ ಫಲನ್ಯಾಸ ಮಾಡಿ  ಕರ್ತವ್ಯವನ್ನು ಮಾಡುತ್ತಿರುವವನೆ ನಿಜವಾದ ಸಂನ್ಯಾಸಿ ಮತ್ತು ನಿಜವಾದ ಯೋಗಿ. ಬೆಂಕಿಯಲ್ಲಿ ಹೋಮಿಸದವನಲ್ಲ, ಕರ್ಮವನ್ನು ತೊರೆದವನೂ ಅಲ್ಲ.

ಸಾಮಾನ್ಯವಾಗಿ ನಾವು ಕರ್ಮಯೋಗಿಗಳು ಬೇರೆ ಮತ್ತು ಸಂನ್ಯಾಸಿಗಳು ಬೇರೆ ಎಂದು ಎರಡು ಗುಂಪು ಮಾಡುತ್ತೇವೆ. ಇಲ್ಲಿ ಕೃಷ್ಣ ಯಾರು ಸಂನ್ಯಾಸಿಗಳು, ಯಾರು ಕರ್ಮಯೋಗಿಗಳು ಎನ್ನುವ ಲೋಕದ ಕಲ್ಪನೆಗಿಂತ ಭಿನ್ನವಾದ ವಿವರವನ್ನು ಈ ಶ್ಲೋಕದಲ್ಲಿ ನಮ್ಮ ಮುಂದಿಟ್ಟಿದ್ದಾನೆ. ಕೃಷ್ಣ ಹೇಳುತ್ತಾನೆ “ಅನಾಶ್ರಿತಃ ಕರ್ಮಫಲಂ” ಎಂದು. ನಾವು ಸಾಮಾನ್ಯವಾಗಿ ಕರ್ಮತ್ಯಾಗ ಮಾಡಿದವರು ಸಂನ್ಯಾಸಿಗಳು, ಕರ್ಮ ಮಾಡುವವರು ಗೃಹಸ್ಥರೆಂದು ಭಾವಿಸುತ್ತೇವೆ. ಆದರೆ ಕೃಷ್ಣ ಹೇಳುತ್ತಾನೆ ಪ್ರತಿಯೊಬ್ಬರೂ ಕರ್ಮಯೋಗಿಗಳಾಗಬೇಕು ಮತ್ತು ಪ್ರತಿಯೊಬ್ಬರೂ ಸಂನ್ಯಾಸಿಗಳಾಗಬೇಕು ಎಂದು. ಇದು ಒಂದನ್ನು ಬಿಟ್ಟು ಒಂದು ಇರತಕ್ಕದ್ದಲ್ಲ. ಸಂನ್ಯಾಸಿ ಎಂದರೆ ನಾವು ಮಾಡಿದ್ದನ್ನೆಲ್ಲಾ ಭಗವಂತನಿಗೆ ಅರ್ಪಿಸುವುದೇ ಹೊರತು ಏನೂ ಮಾಡದೆ ಇರುವುದಲ್ಲ.(ಹಿಂದೆ ಕರ್ಮ ಸಂನ್ಯಾಸದ ಬಗ್ಗೆ ವಿವರಿಸುವಾಗ ಈ ಬಗ್ಗೆ ನೋಡಿದ್ದೇವೆ). ಸಮಸ್ತ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸಂ-ನ್ಯಾಸ. ಇಲ್ಲಿ ಬಹಳ ಮುಖ್ಯವಾದ ವಿಷಯ ಎಂದರೆ  ಕರ್ಮದ ಫಲದ ಬಯಕೆಯನ್ನು ಸಂಪೂರ್ಣನಾದ ಭಗವಂತನ ಹೃದಯದಲ್ಲಿ ನೆಲೆಗೊಳಿಸಬೇಕು.
ಸಂನ್ಯಾಸ ಎಂದರೆ ತನ್ನ ಕುಟುಂಬವನ್ನು ತೊರೆದು ಕಾಡಿಗೆ ಹೋಗುವುದಲ್ಲ. ಕರ್ಮಯೋಗ ಮಾಡಲೇ ಬೇಕು. “ಕಾರ್ಯಂ ಕರ್ಮ ಕರೋತಿ ಯಃ” ಯಾರ್ಯಾರಿಗೆ ಯಾವುದ್ಯಾವುದು ಕಾರ್ಯವೋ ಅವರವರು ಅದನ್ನದನ್ನು ಮಾಡಬೇಕು. ಈ ಕಾರಣಕ್ಕಾಗಿ ಸಂನ್ಯಾಸ ಮತ್ತು ಕರ್ಮಯೋಗ ಎರಡೂ ಒಟ್ಟೊಟ್ಟಿಗಿರುವುದು. ನಿಜವಾದ ಸಂನ್ಯಾಸಿ ಕರ್ಮಯೋಗಿಯಾಗಿರುತ್ತಾನೆ, ಮತ್ತು ನಿಜವಾದ ಕರ್ಮಯೋಗಿ ಸಂನ್ಯಾಸಿಯಾಗಿರುತ್ತಾನೆ. ಇದಲ್ಲದೆ ನಾವು ತಿಳಿದಂತೆ ಅಗ್ನಿಯನ್ನು ತ್ಯಾಗ ಮಾಡಿದವರು, ಕರ್ಮವನ್ನು ತ್ಯಾಗ ಮಾಡಿದವರು ಸಂನ್ಯಾಸಿಗಳು ಅಥವಾ ಯೋಗಿಗಳಲ್ಲ.
ಸಂನ್ಯಾಸಿ ಎಂದೂ ನಿಷ್ಕ್ರೀಯ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕ್ರಿಯೆ ಇರುತ್ತದೆ. ಬ್ರಹ್ಮಚಾರಿಯಾದವನು ಅಧ್ಯಯನ, ಗುರುಕುಲವಾಸ, ಗುರು ಶುಶ್ರೂಷೆ, ಇತ್ಯಾದಿ ಕಾರ್ಯ ಮಾಡಿದರೆ, ಗ್ರಹಸ್ಥ ಅತಿಥಿಸತ್ಕಾರ, ಸಂಸಾರ ಪಾಲನೆ ಇತ್ಯಾದಿ ಕಾರ್ಯವನ್ನು ಮಾಡುತ್ತಾನೆ. ಹೀಗಾಗಿ ಎಲ್ಲರಿಗೂ ಕರ್ಮವಿದೆ.
   
ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ
ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ

ಯಮ್  ಸಂನ್ಯಾಸಮ್ ಇತಿ ಪ್ರಾಹುಃ ಯೋಗಮ್ ತಮ್  ವಿದ್ಧಿ ಪಾಂಡವ
ನ ಹಿ ಅಸಂನ್ಯಸ್ತ ಸಂಕಲಪಃ  ಯೋಗೀ ಭವತಿ ಕಶ್ಚನ-ಯಾವುದನ್ನು ಸಂನ್ಯಾಸವೆನ್ನುವರೋ ಅದನ್ನೆ ಯೋಗವೆಂದು ತಿಳಿ ಪಾಂಡವ. ಬಯಕೆಗಳ ‘ಸಂನ್ಯಾಸ’ ಮಾಡದ ಯಾವನೂ ಮರ್ಮವರಿತ ಕರ್ಮಯೋಗಿಯಾಗಲಾರ.

ಸಂನ್ಯಾಸ ಕೂಡಾ ಒಂದು ಯೋಗ. ಕರ್ಮ ಫಲತ್ಯಾಗ ಕೂಡಾ ಕರ್ಮ ಮಾಡತಕ್ಕ ಕರ್ಮಯೋಗಿಯ ಯೋಗದ ಒಂದು ಮುಖ. ಎಲ್ಲವನ್ನೂ ಭಗವಂತನಿಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದೆ ಭಗವದ್ ಪೂಜಾ ದೃಷ್ಟಿಯಿಂದ ಮಾಡುವಂತಹ ಕ್ರಿಯೆ ಸಾತ್ವಿಕರ ಸಾಧನೆ. ಸಂನ್ಯಾಸ ಎಂದರೆ ಕಾಮ-ಸಂಕಲ್ಪವನ್ನು ಭಗವಂತನಲ್ಲಿ ಅರ್ಪಿಸುವುದು. ಕಾಮ ಅಂದರೆ ‘ಮಾಡಬೇಕು’ ಎಂದು ಬಯಸುವುದು, ಸಂಕಲ್ಪ ಎಂದರೆ  ‘ಮಾಡುತ್ತೇನೆ’ ಎಂದು ನಿರ್ಧರಿಸುವುದು. ಕಾಮಸಂಕಲ್ಪ ವರ್ಜಿತ-ಸಂನ್ಯಾಸ. ಇಲ್ಲಿ ಕೃಷ್ಣ ವಿವರಿಸುತ್ತಿರುವುದು ಆಶ್ರಮಕ್ಕೆ(ಸಂನ್ಯಾಸಾಶ್ರಮ) ಸಂಭಂದಪಟ್ಟ ವಿಚಾರವಲ್ಲ. ಇದು ಸಾಧನೆಗೆ ಸಂಭಂದಪಟ್ಟ ವಿಚಾರ. ಸಾಧನೆಯ ಮುಖದಲ್ಲಿ ಯೋಗಿಗಳು ಸಂನ್ಯಾಸಿಗಳಾಗಬೇಕು ಮತ್ತು ಸಂನ್ಯಾಸಿಗಳು ಯೋಗಿಗಳಾಗಬೇಕು ಇದು ಕೃಷ್ಣನ ಸಂದೇಶ.

ನಾವು ಸಾಧನೆ ಮಾಡುವಾಗ ಕರ್ಮವೂ ಇರಬೇಕು ಫಲನ್ಯಾಸವೂ ಇರಬೇಕು. ಹೀಗಿರುವಾಗ ಎಲ್ಲರೂ ಮಾಡಬೇಕಾದ ಕರ್ಮ ಅಂತ ಒಂದು ಇದೆಯೋ ? ಸಾಧಕನ ಸಾಮಾಜಿಕ ಕರ್ತವ್ಯ ಯಾವುದು? ಸಮಾಜದೊಂದಿಗೆ ಒಬ್ಬ ಸಾಧಕ ಹೇಗೆ ಸ್ಪಂದಿಸಬೇಕು? ಕರ್ಮದ ಕೊನೆ ಎಂದು? ಸಾಧನೆಗೂ ಕರ್ಮಕ್ಕೂ ಇರುವ ಹೊಂದಿಕೆ ಏನು? ಅದು ಹೇಗೆ ಸಾಧನೆಗೆ ಪೂರಕ? ಈ ಎಲ್ಲಾ  ಪ್ರಶ್ನೆಗಳಿಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರ  ಕೊಡುತ್ತಾನೆ.          
  

ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ        
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ

ಆರುರುಕ್ಷೋಃ ಮುನೇಃ ಯೋಗಮ್ ಕರ್ಮ ಕಾರಣಮ್ ಉಚ್ಯತೇ           
ಯೋಗ ಆರೂಢಸ್ಯ ತಸ್ಯ ಏವ ಶಮಃ ಕಾರಣಮ್ ಉಚ್ಯತೇ –ಸಾಧನೆಯ ಮೆಟ್ಟಲೇರುವವನಿಗೆ ಗುರಿ ಮುಟ್ಟಲು ಕರ್ಮಯೋಗ[ಹಲವು ಬಗೆಯ ಜನಸೇವೆ]ಕಾರಣವೆನಿಸುತ್ತದೆ. ಅವನೆ ಗುರಿ ಸೇರಿದಾಗ ಭಗವತ್ ಸಮಾಧಿ [ಜನ ಸೇವೆಯಿಂದ ವಿರಾಮ ಮತ್ತು ಭಗವಂತನಲ್ಲಿ ಧ್ಯಾನ ನಿಷ್ಠೆ] ಸುಖದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.

ಈ ಶ್ಲೋಕಕ್ಕೆ ಎರಡು ಆಯಾಮವಿದೆ. ನಾವು ಮಾಡತಕ್ಕ ನಿತ್ಯಕರ್ಮ ಒಬ್ಬ ಸಾಧಕ ಎಲ್ಲಿಯತನಕ ಮಾಡಬೇಕು ಮತ್ತು ಎಲ್ಲಿಂದ ಬಿಡಬಹುದು ಎನ್ನುವುದು ಒಂದು ಆಯಾಮವಾದರೆ ಇನ್ನೊಂದು ಸಾಮಾಜಿಕವಾಗಿ ಒಬ್ಬ ಸಾಧಕನ ಕರ್ತವ್ಯವೇನು ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ.
ಇನ್ನೂ ಸಿದ್ಧಿ ಪಡೆಯದ ಸಾಧನೆಯ ಹಾದಿಯಲ್ಲಿರುವ ಒಬ್ಬ ಸಾಧಕ  ಆ ಸ್ಥಿತಿಯಲ್ಲಿ ಎಲ್ಲ ವಿಹಿತಕರ್ಮವನ್ನು ಮಾಡುತ್ತಿರಬೇಕು, ಯಾವುದನ್ನೂ ಬಿಡುವಂತಿಲ್ಲ. ಸಿದ್ಧನಾದ ಮೇಲೆ ಆತ ಸಮಾಧಿ ಸ್ಥಿತಿಯಲ್ಲಿ ಭಗವಂತನನ್ನು ಒಳಗಿನಿಂದ ಕಾಣಬಲ್ಲ.  ಆ ಸ್ಥಿತಿಯಲ್ಲಿ ಆತನಿಗೆ ಉಳಿದ ಕರ್ಮಗಳಿಗಿಂತ ಅಂತರಂಗದಲ್ಲಿ ಭಗವಂತನನ್ನು ಕಾಣುವ ಕರ್ಮ ಮುಖ್ಯವಾಗುತ್ತದೆ. ಒಬ್ಬ ಅಪರೋಕ್ಷ್ಣ ಜ್ಞಾನ ಬಂದವ ಸದಾ ಸಮಾಧಿ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಅವನು ಹೊರ ಪ್ರಪಂಚಕ್ಕೆ ಬರಲೇ ಬೇಕು. ಆಗ ಅವನ ಮುಖ್ಯ ಕರ್ಮವೆಂದರೆ ಶಾಸ್ತ್ರ ಶ್ರಾವಣ, ಮಂತ್ರ ಜಪ, ಪ್ರವಚನ ಇತ್ಯಾದಿ. ಆದ್ದರಿಂದ ವಿಹಿತಕರ್ಮಗಳ ವಿಧಿನಿಷೇದ ಬದ್ದತೆ ಅಪರೋಕ್ಷ  ಜ್ಞಾನದವರೆಗೆ ಮಾತ್ರ. ಉದಾಹರಣೆಗೆ ಒಬ್ಬ ಅಪರೋಕ್ಷ ಜ್ಞಾನಿ ಧ್ಯಾನಕ್ಕೆ ಕುಳಿತಿದ್ದಾನೆ, ಆತ ತನ್ನ ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿದ್ದಾನೆ ಮತ್ತು ಆ ಆನಂದದಲ್ಲಿ ಮುಳುಗಿದ್ದಾನೆ. ಅದು ಬೆಳಗಿನಜಾವ-ಸೂರ್ಯೋದಯದ ಕಾಲ. ಸ್ನಾನ ಮಾಡಿ ಸಂಧ್ಯಾವಂದನೆ ಮಾಡುವ ಸಮಯದಲ್ಲಿ ಈತ ಧ್ಯಾನದಲ್ಲಿ ಕುಳಿತಿದ್ದಾನಲ್ಲ ಎಂದು ನಾವು ಅವನನ್ನು ಎಬ್ಬಿಸುವುದು ತಪ್ಪು. ಆತ ಸಂಧ್ಯಾವಂದನೆ ಮಾಡದಿದ್ದರೆ ಯಾವ ಕರ್ಮ ಲೇಪವೂ ಆಗುವುದಿಲ್ಲ. ಏಕೆಂದರೆ ಸಂಧ್ಯಾವಂದನೆ ಮಾಡುವುದು ಭಗವಂತನ ದರ್ಶನಕ್ಕಾಗಿ-ಆದರೆ ಆತ ಆಗಲೇ ಭಗವಂತನ ದರ್ಶನ ಪಡೆಯುತ್ತಿದ್ದಾನೆ. ಹೀಗೆ ಅಪರೋಕ್ಷ ಜ್ಞಾನಿಗೆ ಕರ್ಮದ ಬದ್ಧತೆ ಇಲ್ಲ. ಸಮಾಧಿಸ್ಥಿತಿಯಿಂದ ಹೊರಬಂದ ಮೇಲೆ ಇರತಕ್ಕ ಕರ್ತವ್ಯ ಎಂದರೆ ಭಗವಂತನ ಗುಣಗಾನ, ಪ್ರವಚನ, ಅಧ್ಯಯನ, ಜಪ ಇತ್ಯಾದಿ.
ಈ ಶ್ಲೋಕದ ಇನ್ನೊಂದು ಆಯಾಮವನ್ನು ಬಹಳ ಸುಂದರವಾಗಿ ಮಧ್ವಾಚಾರ್ಯರು ತಮ್ಮ ಗೀತಾತಾತ್ಪರ್ಯದಲ್ಲಿ ವಿವರಿಸಿದ್ದಾರೆ. ಇದು ಮುಖ್ಯವಾಗಿ ಒಬ್ಬ ಸಾಧಕನ ಸಾಮಾಜಿಕ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. ಕರ್ಮ ಎನ್ನುವುದಕ್ಕೆ ಆಚಾರ್ಯರು ಒಂದು ಅಪೂರ್ವ ಅರ್ಥವನ್ನು ಕೊಟ್ಟಿದ್ದಾರೆ. ಕರ್ಮ ಅಂದರೆ ಕರ+ಮ. ಕರ ಅಂದರೆ ಕಂದಾಯ(Duty).ಯಾವುದನ್ನು ಕಂದಾಯವೆಂದು ತಿಳಿದು ನಾವು ಮಾಡಬೇಕೋ ಅದು ‘ಕರ-ಮ’. ನಾವು ಭಗವಂತನ ರಾಜ್ಯದಲ್ಲಿನ ಪ್ರಜೆಗಳು. ಅದಕ್ಕೋಸ್ಕರ ಅವನಿಗೆ ನಾವು ಕೊಡುವ ಕರ ಕರ್ಮ. ಯಾವುದೋ ಅಭಿಲಾಷೆಯಿಂದ ದೇವಸ್ಥಾನದಲ್ಲಿ ನಾವು ಕಾಣಿಕೆ ಹಾಕುವುದು ನಿಜವಾದ ಕಂದಾಯವಲ್ಲ, ಅದನ್ನು ಭಗವಂತ ಬಯಸುವುದೂ ಇಲ್ಲ. ಭಗವಂತ ನಮ್ಮಿಂದ ಬಯಸುವ ಕರ್ಮ ಕಷ್ಟದಲ್ಲಿರುವವರ ಶುಶ್ರೂಷೆ. ಒಬ್ಬ ಸಾಧಕ ಅಪರೋಕ್ಷ ಸಾಧಕನಾಗುವ ತನಕ ಅವನ ಸಾಧನೆಯಲ್ಲಿ ಇದು ಒಂದು ಮುಖ್ಯ ಸಾಧನೆ. ಸಮಸ್ತ ಜೀವಜಾತದ ಮೇಲೆ ಅನುಕಂಪ ಸೇವಾ ಮನೋವೃತ್ತಿ  ಬಹಳ ಮುಖ್ಯ. ಯೋಗಶಾಸ್ತ್ರದಲ್ಲಿ ಕೂಡಾ ಇದನ್ನೇ ಹೇಳುತ್ತಾರೆ. ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಎನ್ನುವ ನಾಲ್ಕು ಮನೋವೃತ್ತಿ ಒಬ್ಬ ಸಾಧಕನಲ್ಲಿರಬೇಕು. ಮೈತ್ರಿ ಎಂದರೆ ಸಜ್ಜನರ ಸಹವಾಸ, ಎಲ್ಲಿ ಒಳ್ಳೆಯತನವಿದೆ ಅವರ ಸ್ನೇಹ;  ದುಃಖವನ್ನು ಕಂಡಾಗ ಅಲ್ಲಿ ಕರುಣೆ ಹಾಗು ನೆರವು-ಕರುಣಾ; ಇನ್ನೊಬ್ಬರ ಉದ್ಧಾರ ನೋಡಿ ಸಂತೋಷಪಡುವುದು ಮುದಿತ; ದುಷ್ಟರಿಂದ ದೂರವಿರುವುದು ಉಪೇಕ್ಷ. ಕೆಟ್ಟವರೊಂದಿಗೆ ಜಗಳ ಬೇಡ ಆದರೆ ಅವರ ಒಡನಾಟದಿಂದ ಯಾವುದೇ ದ್ವೇಷವಿಲ್ಲದೆ ದೂರವಿರುವುದು ಉಪೇಕ್ಷ. ಹೀಗೆ ಸಾಧಕನ ಜೀವನದಲ್ಲಿ ಇದು ಮಹತ್ತರವಾದ ಸಾಮಾಜಿಕ ಕರ್ತವ್ಯ. ಒಬ್ಬ ಸಿದ್ಧನಾದವ(ಯೋಗಾರೂಢ) ಸದಾ ಅಂತರ್ಮುಖಿ-ಯಾಗಿರುತ್ತಾನೆ. ಅವನಿಗೆ ಈ ಸಾಮಾಜಿಕ ಬದ್ಧತೆ ಇಲ್ಲ(ಅವರಿಗೆ ಅದು ಸಾಧ್ಯವಾಗುವುದಿಲ್ಲ). ಅವರ ಆನಂದಾಭಿವೃದ್ಧಿಗೆ ಕಾರಣ ‘ಶಮಃ’.  ಅಂದರೆ ಸದಾ ಭಗವಂತನಲ್ಲೇ ಮನಸ್ಸನ್ನು ನೆಟ್ಟಿರುವುದು, ಅದರಿಂದ ವ್ಯತಿರಿಕ್ತವಾದ ಇನ್ನೊಂದು ಕರ್ಮ ಅವರಿಗಿಲ್ಲ.
ಹೀಗೆ ಲೋಕಸೇವೆ ಎನ್ನುವುದು ಒಬ್ಬ ಸಾಧಕನ ಅವಿಭಾಜ್ಯ ಅಂಗವಾಗಬೇಕು ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ  ಸ್ಪಷ್ಟವಾಗಿ ಹೇಳಿದ. ಯೋಗಾರೂಢನಿಗೆ ಯಾವ ಸಾಮಾಜಿಕ ಬದ್ಧತೆ ಇಲ್ಲ, ಅವನು ಅಂತರಂಗದಲ್ಲಿ ಭಗವಂತನನ್ನು ಕಾಣುತ್ತಿರುತ್ತಾನೆ ಎಂದು ಕೃಷ್ಣ ಹೇಳಿದಾಗ ನಮಗೆ ಒಂದು ಪ್ರಶ್ನೆ ಮೂಡಬಹುದು. ಇಂತಹ ಅಪರೋಕ್ಷ  ಜ್ಞಾನಿಗಳನ್ನು ಗುರುತಿಸುವುದು ಹೇಗೆ ಎಂದು. ಮುಂದಿನ ಶ್ಲೋಕ ಈ ನಮ್ಮ ಪ್ರಶ್ನೆಗೆ ಉತ್ತರ ರೂಪದಲ್ಲಿದೆ.                            

No comments:

Post a Comment