Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 10, 2011

Bhagavad Gita Kannada Chapter-03 Shloka 39-43


ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ     ।
ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ  ॥೩೯॥

ಆವೃತಮ್  ಜ್ಞಾನಮ್ ಏತೇನ ಜ್ಞಾನಿನಃ ನಿತ್ಯವೈರಿಣಾ
ಕಾಮ ರೂಪೇಣ ಕೌಂತೇಯ ದುಷ್ಪೂರೇಣ ಅನಲೇನ ಚ-ಓ ಕೌಂತೇಯ, ಬೆಂಕಿಯಂತೆ ಕಬಳಿಸಿದಷ್ಟೂ ತೃಪ್ತಿಯಿಲ್ಲದೆ, ಕೊನೆಯಿಲ್ಲದ ಈ ಕಾಮವೆಂಬುದು ಸಾಧಕನ ಚಿರಶತ್ರು. ಇದು ಬಲ್ಲವರ ತಿಳಿವನ್ನೂ ಕವಿದು ಮಂಕಾಗಿಸುತ್ತದೆ.

ಈ ರಜೋಗುಣದ ಪರದೆ- ಜ್ಞಾನ ಬಂದವನಿಗೆ ಇದ್ದ ಜ್ಞಾನ ಉಪಯೋಗವಾಗದಂತೆ, ಜ್ಞಾನವಿಲ್ಲದವನಿಗೆ  ಜ್ಞಾನ ಬರದಂತೆ-ತಡೆಗೋಡೆಯಾಗಿ ನಿಲ್ಲುತ್ತದೆ. ರಾಗ-ದ್ವೇಷ ನಮ್ಮ ಕಡು ವೈರಿ. ಅದು ಎಷ್ಟು ಭಯಂಕರ ಎಂದರೆ ಅದನ್ನು 'ಬಯಕೆಯ ಬೆಂಕಿ' ಎನ್ನಬಹುದು. ಅದಕ್ಕೆ ಎಷ್ಟು ಬಡಿಸಿದರೂ ಅದು ಸಾಕು ಎನ್ನದು. ಕುಂತಿಯಂತಹ ಮಹಾ ತಾಯಿಯ ಮಗನಾದ ನೀನು ಈ ಕಾಮ(ಬಯಕೆ, Attachment) ಎನ್ನುವ ಜ್ಞಾನ ವಿರೋಧಿ ಶತ್ರುವನ್ನು ತಿಳಿ ಎನ್ನುತ್ತಾನೆ ಕೃಷ್ಣ.
ಇಲ್ಲಿ ನಮಗೆ ನಮ್ಮ ನಿಜ ವೈರಿ ನಮ್ಮ ಕಾಮ ಅಥವಾ  ಬಯಕೆ, ಅಥವಾ ರಾಗ-ದ್ವೇಷ ಎಂದು ತಿಳಿಯಿತು. ಹಾಗಿದ್ದರೆ ಈ ವೈರಿಯ ನೆಲೆ ಯಾವುದು? ಇದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.

ಇಂದ್ರಿಯಾಣಿ  ಮನೋ ಬುದ್ಧಿರಸ್ಯಾಧಿಷ್ಠಾನಮುಚ್ಯತೇ     ।
ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್            ॥೪೦॥

ಇಂದ್ರಿಯಾಣಿ  ಮನಃ ಬುದ್ಧಿಃ ಅಸ್ಯ ಅಧಿಷ್ಠಾನಮ್  ಉಚ್ಯತೇ    
ಎತೈಃ ವಿಮೋಹಯತಿ ಏಷಃ  ಜ್ಞಾನಮ್ ಆವೃತ್ಯ ದೇಹಿನಮ್-ಇಂದ್ರಿಯಗಳು, ಮನಸ್ಸು, ಬುದ್ಧಿ ಈ ಕಾಮದ ನೆಲೆದಾಣಗಳು. ಇವುಗಳ ಮೂಲಕ ಇದು ತಿಳಿವನ್ನು ಕವಿದು ಸಾಧಕನನ್ನು ಕಂಗೆಡಿಸುತ್ತದೆ.  

ನಮ್ಮ ಬಯಕೆಗಳ ಸರಮಾಲೆ ಮೊದಲು ಬಂದು ಕೂರುವುದು ನಮ್ಮ ಇಂದ್ರಿಯದಲ್ಲಿ. ಕಣ್ಣಿಗೆ ನೋಡುವ, ಕಿವಿಗೆ ಕೇಳುವ, ಮೂಗಿಗೆ ಮೂಸುವ, ಮೈಗೆ ಮುಟ್ಟುವ-ಹೀಗೆ ಒಂದೊಂದು ಬಯಕೆ ಒಂದೊಂದು ರೂಪದಲ್ಲಿ ಒಂದೊಂದು ಇಂದ್ರಿಯದಲ್ಲಿ ಬಂದು ಕೂರುತ್ತದೆ. ಅಲ್ಲಿ ನಾವು ಅದನ್ನು ನಿಗ್ರಹಿಸದೇ ಇದ್ದರೆ  ಅದು ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ.  ಅಲ್ಲೂ ನಾವು ಸಡಿಲಗೊಳಿಸಿದರೆ ಅದು ಮುಂದೆ ನಮ್ಮ ಬುದ್ಧಿಯನ್ನು ಆಕ್ರಮಿಸಿಬಿಡುತ್ತದೆ.  ಹೀಗೆ ಅಂಗಳದ(ಇಂದ್ರಿಯ) ಈ ಶತ್ರುವನ್ನು ಮೊಗಸಾಲೆ(ಮನಸ್ಸು)ಗೆ ಕರೆದು, ನಂತರ ನಮ್ಮ ನಡು ಮನೆಯಲ್ಲಿ(ಬುದ್ಧಿ) ಕುಳ್ಳಿರಿಸಿದಂತೆ.  ಒಮ್ಮೆ ಈ ಶತ್ರು ನಮ್ಮ ಬುದ್ಧಿಯನ್ನು ಆಕ್ರಮಿಸಿದರೆ ಮುಂದೆ ಅದನ್ನು ತೊಡೆದು ಹಾಕುವುದು ತುಂಬಾ ಕಷ್ಟ. ಈ ಸ್ಥಿತಿಯಲ್ಲಿ ಬಯಕೆ ಎನ್ನುವುದು ಸಿದ್ಧಾಂತವಾಗಿ ನಮ್ಮೊಳಗಿದ್ದು ನಮ್ಮನ್ನೇ ಆಳುವುದಕ್ಕೆ ಆರಂಭಿಸುತ್ತದೆ. ಇದರಿಂದ ಕಾಮನೆ ಎನ್ನುವುದು ನಮ್ಮ ಜೀವನ ಧರ್ಮವಾಗುತ್ತದೆ. ಉದಾಹರಣೆಗೆ ಒಂದು ಸಂಗತಿ ನಮ್ಮ ಕಿವಿ ಮೇಲೆ ಬೀಳುತ್ತದೆ. ನಾವು ಆ ವಿಷಯದಿಂದ ನಮಗೇನು ಉಪಯೋಗ ಆ  ಬಗ್ಗೆ ಗಮನ ಏಕೆ ಹರಿಸಬೇಕು ಎಂದು ಯೋಚಿಸುವುದಿಲ್ಲ, ಅದನ್ನು ಬಿಟ್ಟು ಕೇಳಿದ ವಿಷಯವನ್ನು ನೋಡಲು ಹಂಬಲಿಸುತ್ತೇವೆ. ನೋಡಿದ ಮೇಲೆ ಮುಟ್ಟಬೇಕು(ತಿನ್ನಬೇಕು ಮೂಸಬೇಕು ಇತ್ಯಾದಿ) ಎನ್ನುವ ಆಸೆ!  ಹೀಗೆ ನಾವು ನಮ್ಮೆಲ್ಲಾ ಇಂದ್ರಿಯದಲ್ಲಿ ಈ ಕಾಮನೆ ಎನ್ನುವ  ವೈರಿಗೆ ಪ್ರೋತ್ಸಾಹ ಕೊಡುತ್ತೇವೆ. ಆಗ ಅದು ನಿಧಾನವಾಗಿ  ನಮ್ಮ ಮನಸ್ಸನ್ನು ಆಕ್ರಮಿಸುತ್ತದೆ. ಮನಸ್ಸು ನಿರಂತರವಾಗಿ ಆ ವಿಷಯದ ಬಗ್ಗೆ ಯೋಚಿಸಲಾರಂಭಿಸುತ್ತದೆ. ಮನಸ್ಸು 'ಅದು ನನ್ನದಾಗಬೇಕು, ನನ್ನದೇ ಆಗಬೇಕು (Possessiveness)', ಎಂದು ಯೋಚಿಸುತ್ತಿದೆ ಎಂದರೆ ಈ ವೈರಿ ಮನಸ್ಸನ್ನು ಆಕ್ರಮಿಸಿದೆ ಎಂದರ್ಥ. ಇಲ್ಲಿಂದ ಮುಂದೆ ಬುದ್ಧಿ; 'ಅದನ್ನು ಬಿಟ್ಟು ನಾನಿರಲಾರೆ, ಏನೇ ಆಗಲಿ ನಾನು ಅದನ್ನು ಪಡೆಯಲೇ ಬೇಕು' ಇತ್ಯಾದಿ ಯೋಚನೆಗಳು, ಇದು ಕಾಮನೆ ನಮ್ಮ ಬುದ್ಧಿಯನ್ನು ಆಕ್ರಮಿಸುವ ಸೂಚನೆ. ಇದು ಸರ್ವನಾಶದ ಮುನ್ಸೂಚನೆ. ಹೀಗೆ ಜ್ಞಾನಕ್ಕೆ ವಿಭ್ರಮೆಯಾಗಿರುವ ಈ ಮೂರು ಜಾಗದಲ್ಲಿ ಕೂತು ಜ್ಞಾನಕ್ಕೆ ಪರದೆಯಾಗಿ ನಿಲ್ಲುತ್ತದೆ ಈ ನಮ್ಮ ವೈರಿ.
ಇಲ್ಲಿ 'ದೇಹಿನಮ್' ಎನ್ನುವ ಪದ ಬಳಕೆಯಾಗಿದೆ- ನಮ್ಮ ದೇಹ ಎನ್ನುವುದು ಜ್ಞಾನದ ಮೂಲಕ ನಮ್ಮನ್ನು  ಎತ್ತರಕ್ಕೆ ಕೊಂಡೊಯ್ಯುವ ಸಾಧನ, ಆದರೆ ಕಾಮನೆ ಎನ್ನುವ ವೈರಿಯ ಸಂಗ ಮಾಡಿದಾಗ ಅದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಸಾಧನವಾಗುತ್ತದೆ. ಇದು ಈ ಪದದ ಹಿಂದಿರುವ ಭಾವಾರ್ಥ.
ಹೀಗೆ ನಮ್ಮ ವೈರಿ ಯಾರು, ಆತ ಇರುವ ಸ್ಥಾನ ಯಾವುದು ಹಾಗು ಆತ ಹೇಗೆ ನಮ್ಮನ್ನು ಆಕ್ರಮಿಸುತ್ತಾನೆ ಎನ್ನುವ ವಿವರಣೆಯನ್ನು ಕೊಟ್ಟ ಕೃಷ್ಣ, ಈ ವೈರಿಯನ್ನು ಗೆದೆಯುವ ಪರಿಯನ್ನು ಮುಂದೆ ವಿವರಿಸುತ್ತಾನೆ.

ತಸ್ಮಾತ್ ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ      ।
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ ॥೪೧॥

ತಸ್ಮಾತ್  ತ್ವಮ್  ಇಂದ್ರಿಯಾಣಿ ಆದೌ ನಿಯಮ್ಯ ಭರತ ಋಷಭ     
ಪಾಪ್ಮಾನಮ್  ಪ್ರಜಹಿ ಹಿ ಏನಮ್ ಜ್ಞಾನ ವಿಜ್ಞಾನ ನಾಶನಮ್-ಅದರಿಂದ ,   ಭರತವಂಶದ ವೀರ, ಮೊದಲು ನೀನು ಇಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಂಡು, ಅರಿವನ್ನೂ ಆಳವಾದ ಚಿಂತನ ಶಕ್ತಿಯನ್ನೂ ಹಾಳು ಗೆಡವಬಲ್ಲ ಈ ಪಾಪಿಯನ್ನು ಒದ್ದೋಡಿಸು.

ಇಂತಹ ಮಹಾ ವೈರಿಯನ್ನು ನಾವು ಮೊದಲ ಹಂತದಲ್ಲೇ ನಿಯಂತ್ರಿಸಬೇಕು. ಈ ಶತ್ರುವಿನ ಮೊದಲ ಪ್ರವೇಶ ದ್ವಾರವಾದ ಇಂದ್ರಿಯದಲ್ಲೇ ಅದರ ನಿಯಂತ್ರಣ ಮಾಡಬೇಕು. ನಮ್ಮ ಜ್ಞಾನ(ಶ್ರವಣ)ವನ್ನು, ವಿಜ್ಞಾನ(ಮನನ-ನಿಧಿಧ್ಯಾಸನ)ವನ್ನು ಹಾಳುಗೆಡವಿ, ನಮ್ಮ ಚಿಂತನಾ ಶಕ್ತಿಯನ್ನು ನಾಶಮಾಡಬಲ್ಲ ಈ ಮಹಾ ಪಾಪಿಯನ್ನು ಓದ್ದೊಡಿಸು ಎನ್ನುತ್ತಾನೆ ಕೃಷ್ಣ.  ಆದರೆ ಹೇಗೆ? ಇದಕ್ಕೆ ಯಾರು ಸಹಾಯ ಮಾಡುತ್ತಾರೆ ? ಮುಂದೆ ಕೇಳಿ!

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ     ।
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ     ॥೪೨॥

ಇಂದ್ರಿಯಾಣಿ ಪರಾಣಿ ಆಹುಃ ಇಂದ್ರಿಯೇಭ್ಯಃ ಪರಮ್  ಮನಃ    
ಮನಸಃ ತು ಪರಾ ಬುದ್ಧಿಃ ಯಃ ಬುದ್ಧೇಃ  ಪರತಃ ತು ಸಃ-ಇಂದ್ರಿಯಗಳು[ಶರೀರಕ್ಕಿಂತ) ಹಿರಿದಾದ ತಾಣಗಳು. (ಇಂದ್ರಿಯಾಭಿಮಾನಿಗಳಾದ ಇಂದ್ರಾದಿಗಳು  ಹಿರಿಯ ದೇವತೆಗಳು].ಇಂದ್ರಿಯಗಳಿಗಿಂತ ಮನಸ್ಸು ಹಿರಿಯ ತಾಣ.[ಇಂದ್ರಿಯಾಭಿಮಾನಿ ದೇವತೆಗಳಿಗಿಂತ ಮನೋಭಿಮಾನಿ ರುದ್ರ ಹಿರಿಯ ದೇವತೆ]. ಮನಸ್ಸಿಗಿಂತ ಬುದ್ಧಿ ಹಿರಿಯ ತಾಣ(ಮನೋಭಿಮಾನಿಗಿಂತ ಬುದ್ಧಿಮಾನಿನಿ ಸರಸ್ವತಿ ಹಿರಿಯ ದೇವತೆ)  ಬುದ್ಧಿಗಿಂತಲು ಆಚೆಗಿರುವಂಥದು ಆ ಪರತತ್ವ(ಬುದ್ಧಿ ಮಾನಿನಿಗಿಂತಲೂ ಬುದ್ಧಿಗೋಚರನಾಗದ ಭಗವಂತ ಹಿರಿಯತತ್ವ).

ಹೇಗೆ ದುಷ್ಟ ಶಕ್ತಿಗಳಿವೆಯೋ ಹಾಗೇ ನಮ್ಮ ಒಳಿತನ್ನು ಬಯಸುವ ದೇವತಾಶಕ್ತಿಗಳು ನಮ್ಮ ರಕ್ಷಣೆಗೆ ನಿಂತಿರುತ್ತಾರೆ. ಪ್ರತಿಯೊಂದು ಇಂದ್ರಿಯಗಳಿಗೂ ಒಬ್ಬ ದೇವತೆ ಅಭಿಮಾನಿ. ನಮ್ಮ ಇಂದ್ರಿಯದ ಅಭಿಮಾನಿದೇವತೆ ಇಂದ್ರ. ಮನಸ್ಸಿನ ಅಭಿಮಾನಿ  ಶಿವ-ಪಾರ್ವತಿಯರು, ಬುದ್ಧಿಯ ಅಭಿಮಾನಿ ಸರಸ್ವತಿ. ಬುದ್ಧಿಯಿಂದಾಚೆಗಿರುವುದು ಆತ್ಮ-ಅದುವೇ ಆ ಭಗವಂತನ ಸ್ಥಾನ.
ನಾವು ನಮ್ಮ ಇಂದ್ರಿಯ ಮನಸ್ಸು ಬುದ್ಧಿಯನ್ನು ನಿಯಂತ್ರಿಸುವ ದೇವತಾ ಶಕ್ತಿಗೆ ಶರಣಾಗಬೇಕು. ಆಗ ಆ ದೇವತಾ ಶಕ್ತಿಗಳ ಸಹಾಯದಿಂದ ನಾವು ಜ್ಞಾನವನ್ನು ಪಡೆದು ಭಗವಂತನನ್ನು ಕಾಣಬಹುದು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಕಣ್ಣಿಗೆ  ಸೂರ್ಯ, ಕಿವಿಗೆ ಚಂದ್ರ, ಬಾಯಿಗೆ ಅಗ್ನಿ, ನಾಲಿಗೆ-ವರುಣ, ಮೂಗು-ಅಶ್ವಿದೇವತೆಗಳು ,ಕೈ-ಇಂದ್ರ(ಈತ ಸರ್ವೇಂದ್ರಿಯದ  ಒಡೆಯ ಕೂಡಾ ಹೌದು), ಕಾಲು-ಇಂದ್ರ ಪುತ್ರ ಉಪೇಂದ್ರ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಭಂದಪಟ್ಟ ಅಂಗದ ದೇವತೆ. ಹೀಗೆ ಪ್ರತಿಯೊಂದು ದೇವತೆಗಳೂ ನಮಗೆ ನಮ್ಮ ಶತ್ರುವಿನಿಂದ ಪಾರಾಗಲು ಸಹಾಯ ಮಾಡುತ್ತಾರೆ. ಹೀಗೆ ದೇವತೆಗಳನ್ನು ಪ್ರಾರ್ಥಿಸಿ ಅವರ ಸಹಾಯ ಪಡೆದು ದುಷ್ಟ ಶಕ್ತಿಯಿಂದ ದೂರ ಸರಿದು ಎಲ್ಲಕ್ಕೂ ಮಿಗಿಲಾದ ಆ ಪರತತ್ವವನ್ನು ಸೇರಬೇಕು.

ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾsತ್ಮಾನಮಾತ್ಮನಾ।
ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್ ॥೪೩॥

ಏವಮ್ ಬುದ್ಧೇಃ ಪರಮ್  ಬುದ್ಧ್ವಾ ಸಂಸ್ತಭ್ಯ ಆತ್ಮನಮ್  ಆತ್ಮಾನಾ
ಜಹಿ ಶತ್ರುಮ್  ಮಹಾ ಬಾಹೋ ಕಾಮರೂಪಮ್  ದುರಾಸದಮ್-ಓ ಮಹಾವೀರ, ಹೀಗೆ ಬುದ್ಧಿಗೂ ನಿಲುಕದ ಆ ಪರತತ್ವವನ್ನು ತಿಳಿದು, ವಿವೇಕದಿಂದ ಬಗೆಯನ್ನು ಬಿಗಿಹಿಡಿದು, ಸಾಮಾನ್ಯರಿಗೆ ಬಗ್ಗದ ಕಾಮವೆಂಬ ಹಗೆಯನ್ನು ಒದ್ದೋಡಿಸು.

ಹೀಗೆ ಇಂದ್ರಿಯ-ಮನಸ್ಸು-ಬುದ್ಧಿಗೆ  ನಿಲುಕದ ಆ ಪರತತ್ವವನ್ನು ತಿಳಿದು,  ಮನಸ್ಸೆಂಬ ಚಂಚಲವಾದ ಕುದುರೆಗೆ ಬುದ್ಧಿಯೆಂಬ ಲಗಾಮನ್ನು ಕಟ್ಟಿ, ಆ ಕಡಿವಾಣವನ್ನು ಭಗವಂತನ ಕೈಯಲ್ಲಿ ಕೊಟ್ಟು,  ಸರ್ವ ದೇವತೆಗಳ ಸಹಾಯದಿಂದ ಕಾಲನೇಮಿ ಎನ್ನುವ ರಾಕ್ಷಸನನ್ನು ಹಂತ ಹಂತವಾಗಿ ಗೆದ್ದು, ಭಗವಂತನನ್ನು ಸೇರು ಎನ್ನುತ್ತಾನೆ ಕೃಷ್ಣ.
ಇಲ್ಲಿ ಹೇಳಿದ ವಿವರಣೆಯನ್ನು ನಮಗೆ ಕೆಟ್ಟ ಬಯಕೆ ಹುಟ್ಟಿದಾಗ ನೆನಪಿಸಿಕೊಂಡರೆ ಕಾಲನೇಮಿ ಎನ್ನುವ ರಾಕ್ಷಸ ನಮ್ಮೊಳಗೆ ನುಸುಳದಂತೆ ತಡೆಯಬಹುದು.ಏಕೆಂದರೆ ಎಲ್ಲಾ ಬಯಕೆಗಳೂ ಕೆಟ್ಟದ್ದಲ್ಲ. ಭಗವಂತನನ್ನು ಸೇರಬೇಕು ಎನ್ನುವ ಬಯಕೆ ಬೇಕು. ಆದ್ದರಿಂದ ನಮ್ಮ ಬುದ್ಧಿಯನ್ನು ಭಗವಂತನ ಕೈಗೊಪ್ಪಿಸಿ, ದುಷ್ಟ ಕಾಮನೆಗಳ ವಿರುದ್ಧ ದೇವತೆಗಳ  ಸಹಾಯದಿಂದ ಹೋರಾಡಿ ಮೋಕ್ಷವನ್ನು ಪಡೆಯಬಹುದು. ಇಲ್ಲಿ ಒಂದು ಎಚ್ಚರ ಅಗತ್ಯ, ಒಂದೇ ಸಲ ಈ ದುಷ್ಟ ಶಕ್ತಿಯ ವಿರುದ್ಧ ಹೋರಾಡಿ ಜಯ ಗಳಿಸುತ್ತೇನೆ ಎಂದರೆ ಅದು ಅಸಾಧ್ಯ.  ಇದನ್ನು ಹಂತ ಹಂತವಾಗಿ ಗಳಿಸಬೇಕು. ಸಾಧನೆಯ ವಿವಿಧ ಮೆಟ್ಟಲಿನಲ್ಲಿ  ವಿವಿಧ ದೇವತೆಗಳು ನಮಗೆ ಸಹಾಯ ಮಾಡುತ್ತಾರೆ.    

ಇತಿ ತೃತೀಯೋಧ್ಯಾಯಃ
ಮೂರನೇ ಅಧ್ಯಾಯ  ಮುಗಿಯಿತು
*******

No comments:

Post a Comment