Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, April 23, 2011

Bhagavad Gita Kannada Chapter-04 Shloka 25-32


ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ           ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ                        ॥೨೫॥

ದೈವಮ್ ಏವ ಅಪರೇ ಯಜ್ಞಮ್  ಯೋಗಿನಃ ಪರ್ಯುಪಾಸತೇ |
ಬ್ರಹ್ಮ ಅಗ್ನೌ ಅಪರೇ ಯಜ್ಞಮ್  ಯಜ್ಞೇನ ಏವ ಉಪಜುಹ್ವತಿ-ಕೆಲವು ಸಾಧಕರು ಭಗವದುಪಾಸನೆಯೆಂಬ ಮಾನಸ ಯಜ್ಞವನ್ನು ಆಚರಿಸುತ್ತಾರೆ.[ಭಗವಂತನನ್ನೇ ಯಜ್ಞ ರೂಪನೆಂದು ಪೂಜಿಸುತ್ತಾರೆ.] ಕೆಲವರು ಬೆಂಕಿಯ ರೂಪದ ಭಗವಂತನಲ್ಲಿ ಹೋಮಿಸುವ ಮೂಲಕ ಬಾಹ್ಯ ಯಜ್ಞದಿಂದ ಯಜ್ಞ ನಾಮಕ ಭಗವಂತನನ್ನು ಪೂಜಿಸುತ್ತಾರೆ.[ಯಜ್ಞನಾಮಕ ಭಗವಂತನಿಂದಲೆ ಬಾಹ್ಯ ಯಜ್ಞವನ್ನು ಆಚರಿಸುತ್ತಾರೆ].

ಭಗವಂತನ  ಉಪಾಸನೆಯ ಮಾರ್ಗದಲ್ಲಿ ಸಾಗುವ  ಕೆಲವು ಯೋಗಿಗಳು(ಸಾಧಕರು) ದೈವವನ್ನೇ ಯಜ್ಞವಾಗಿ ಉಪಾಸನೆ ಮಾಡುತ್ತಾರೆ. ಅಂದರೆ ನಿರಂತರ ಅಂತರಂಗದಲ್ಲಿ ಭಗವಂತನ ಉಪಾಸನೆಯೇ ಅವರ ಯಜ್ಞ. ಇದಕ್ಕೆ ಯಾವ ಬಾಹ್ಯ ಪರಿಕರ ಬೇಡ. ಇದು ಧ್ಯಾನ ರೂಪ ಯಜ್ಞ. ಈ ರೀತಿ ಬಾಹ್ಯ ಪರಿಕರಗಳಿಲ್ಲದೆ ಮಾಡುವ ಯಜ್ಞ ಅತ್ಯಂತ ಶ್ರೇಷ್ಠ ಯಜ್ಞ. ಇದು  ಸಾಮಾನ್ಯವಾಗಿ ಅತ್ಯಂತ ಎತ್ತರಕ್ಕೇರಿದ ಸಾಧಕರು ಮಾಡಬಲ್ಲ ಯಜ್ಞ. ಎಲ್ಲಾ ಬಾಹ್ಯ ಪರಿಕರಗಳನ್ನು ಬಿಟ್ಟು ಮಾನಸ ಪರಿಗ್ರಹದಿಂದ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞವಿದು.
ಇನ್ನೊಂದು  ಪ್ರಕಾರದ ಯಜ್ಞ ಅಗ್ನಿ ಮುಖದಲ್ಲಿ ಮಾಡತಕ್ಕ ಕರ್ಮ ಪ್ರಧಾನವಾದ ಯಜ್ಞ. ಇದನ್ನು ಸಾಮಾನ್ಯ ಮಾನವರು ಅನುಸರಿಸುತ್ತಾರೆ. ಭಗವಂತನ ಸನ್ನಿಧಾನವಿರುವ ಅಗ್ನಿಯ ಮುಖದಲ್ಲಿ ಭಗವಂತನಿಗೆ ಅರ್ಪಣೆ ಮಾಡುವ ಆರಾಧನೆ. ಇದು ಬಾಹ್ಯ ಯಜ್ಞ. ಇದು ಬಹಳ ಮುಖ್ಯವಾದದ್ದು. ವೇದದಲ್ಲಿ ಭಗವಂತನ ಆರಾದನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಮಾಡಬಹುದು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ  ಭಗವಂತ. ಈ ಅನುಸಂಧಾನದಲ್ಲಿ ಯಜ್ಞ. ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ ಭಕ್ತಿ ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಆರಾದನೆ.          

ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ         ।
ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ                       ॥೨೬॥

ಶ್ರೋತ್ರಾ ಆದೀನಿ ಇಂದ್ರಿಯಾಣಿ ಅನ್ಯೇ ಸಂಯಮ ಅಗ್ನಿಷು ಜುಹ್ವತಿ |
ಶಬ್ದ ಆದೀನ್ ವಿಷಯಾನ್ ಅನ್ಯ ಇಂದ್ರಿಯ ಅಗ್ನಿಷು ಜುಹ್ವತಿ-ಕೆಲವರು ಕಿವಿ ಮೊದಲಾದ ಇಂದ್ರಿಯಗಳನ್ನು ಅಂಕೆಯ ಬೆಂಕಿಯಲ್ಲಿ ಹೋಮಿಸುತ್ತಾರೆ. ಕೆಲವರು ಶಬ್ದ ಮೊದಲಾದ ವಿಷಯಗಳನ್ನು ಇಂದ್ರಿಯಗಳ ಬೆಂಕಿಯಲ್ಲಿ ಹೋಮಿಸುತ್ತಾರೆ.

ಒಬ್ಬ ಸಾಧಕನಲ್ಲಿರಬೇಕಾದ ವಿಶಿಷ್ಟ ಸಾಧನೆ ಕೂಡಾ ಒಂದು ಯಜ್ಞ.ಇಂದ್ರಿಯವೆಂಬ ಹವಿಸ್ಸನ್ನು 'ನಿಗ್ರಹ' ಎನ್ನುವ ಬೆಂಕಿಯಲ್ಲಿ ಆಹುತಿಗೊಳಿಸುವುದು ಒಂದು ಯಜ್ಞ. ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟದ್ದನ್ನು ಆಡುವುದಿಲ್ಲ. ಕೆಟ್ಟದ್ದನ್ನು ನೋಡುವುದಿಲ್ಲ, ಹೀಗೆ ಇಂದ್ರಿಯ ಸಂಯಮದಿಂದ ಇಂದ್ರಿಯ ಚಾಪಲವನ್ನು ಹೋಮಿಸು. ಇದು ಇಂದ್ರಿಯ ಚಾಪಲವನ್ನು ಗೆಲ್ಲುವ ಪ್ರಕ್ರಿಯೆ.  ಸಂಯಮ ಎನ್ನುವ ಅಗ್ನಿಯಲ್ಲಿ ಇಂದ್ರಿಯ ಚಾಪಲವೆಂಬ ಹವಿಸ್ಸನ್ನು ಹೋಮಿಸಿ, ಭಗವಂತನನ್ನು ಆರಾದಿಸುವುದು. ಭಗವಂತ ಪ್ರಸನ್ನನಾಗಲಿ, ಅದರ ಮೂಲಕ ನನ್ನನ್ನು ಸಾಧನೆಯ ದಾರಿಯಲ್ಲಿ ಮುನ್ನೆಡೆಸಲಿ ಎನ್ನುವ ಅನುಸಂಧಾನದಲ್ಲಿ ಮಾಡುವ ಯಜ್ಞವಿದು.
ಇನ್ನು ಒಳ್ಳೆಯ ಸಂಗತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುವುದೂ ಒಂದು ಯಜ್ಞ. ಕಿವಿ ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಗುಣಗಾನವೆಂಬ ಹವಿಸ್ಸನ್ನು ಹಾಕುವುದು, ಕಣ್ಣು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಪ್ರತೀಕ ಎನ್ನುವ ಹವಿಸ್ಸನ್ನು ಹಾಕುವುದು, ಮೂಗು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನಿಗೆ ಅರ್ಪಿತವಾದ ತುಳಸಿ, ಗಂಧ ರೂಪದ ಹವಿಸ್ಸನ್ನು ಹಾಕುವುದು. ಹೀಗೆ ಇಂದ್ರಿಯ ವಿಷಯಗಳನ್ನು ಸ್ವೀಕರಿಸುವುದೂ ಒಂದು ಯಜ್ಞವಾಗುತ್ತದೆ.  ಇಂದ್ರಿಯ ನಿಗ್ರಹದಂತೆ ಇಂದ್ರಿಯ ಗ್ರಹಣ ಕೂಡಾ ಒಂದು ಯಜ್ಞ. ಭಗವಂತನ ಚಿಂತನೆಗೆ ಪೂರಕವಾದ ವಿಷಯವನ್ನು ಗ್ರಹಣ ಮಾಡು ಮತ್ತು ಅಲ್ಲದ ವಿಷಯವನ್ನು ತ್ಯಾಗ ಮಾಡು-ಇದು ಸಾಧನೆಯ ಹಾದಿಯಲ್ಲಿ ಪ್ರಮುಖ ಹೆಜ್ಜೆ.     

ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ                        ॥೨೭॥

ಸರ್ವಾಣಿ ಇಂದ್ರಿಯ ಕರ್ಮಾಣಿ ಪ್ರಾಣಕರ್ಮಾಣಿ ಚ ಅಪರೇ ।
ಆತ್ಮ ಸಂಯಮ ಯೋಗ ಅಗ್ನೌ ಜುಹ್ವತಿ ಜ್ಞಾನದೀಪಿತೇ-ಕೆಲವರು ಎಲ್ಲ ಇಂದ್ರಿಯ ಕ್ರಿಯೆಗಳನ್ನೂ,  ಪ್ರಾಣವಾಯುವಿನ  ಕ್ರಿಯೆಗಳನ್ನೂ  ತಿಳಿವಿನಿಂದ ತಿಳಿಗೊಂಡ ಆತ್ಮನಿಗ್ರಹದ ಸಾಧನೆಯೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ.

ನಮ್ಮ   ದೇಹದಲ್ಲಿ ಜ್ಞಾನೇಂದ್ರಿಯ ಹಾಗು ಕರ್ಮೇಂದ್ರಿಯದಿಂದ ನಿರಂತರ ಕ್ರಿಯೆ ನಡೆಯುತ್ತಿರುತ್ತದೆ. ಇದಲ್ಲದೆ ಪ್ರಾಣ ಶಕ್ತಿಯಿಂದ ಆಗುವ ಕ್ರಿಯೆಗಳು ಅನೇಕ (ಉದಾ: ಉಸಿರಾಟ, ಬಲ, ಸಂತಾನಶಕ್ತಿ, ಸಂತೋಷ ಅಥವಾ ದುಃಖವಾದಾಗ ಕಣ್ಣೀರು ಇತ್ಯಾದಿ). ಮನೋನಿಗ್ರಹ ಎನ್ನುವ ಅಗ್ನಿಯಲ್ಲಿ ಈ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮತ್ತು ಪ್ರಾಣಶಕ್ತಿಯಿಂದ ಆಗುವ ಕ್ರಿಯೆಯನ್ನು ಹೋಮಿಸುವುದು(ಹಿಡಿತ) ಒಂದು ಯಜ್ಞ. ಇದು ಹಠಕ್ಕೊಸ್ಕರ ಅಲ್ಲ, ಯಜ್ಞ ರೂಪವಾಗಿ ಭಗವಂತನ ಪೂಜಾರೂಪವಾಗಿ. ಇದು  ಭಗವಂತನ ಅರಿವಿನಿಂದ ಬೆಳಗುವ ಆತ್ಮ ಸಂಯಮ. ಭಗವಂತನ ಅರಿವಿಗೊಸ್ಕರ ಮಾಡಿದ ಆತ್ಮ ಸಂಯಮ; ಭಗವಂತನ ಅರಿವಿನೆಡೆಗೆ ಕೊಂಡೊಯ್ಯುವ  ಜ್ಞಾನಪೂರ್ವಕ ಸಂಯಮ, ಆವೇಶವಲ್ಲ.

ಯಜ್ಞಗಳ ವೈವಿದ್ಯವನ್ನು  ಹೇಳುತ್ತಾ ಮುಂದುವರಿದು ಕೃಷ್ಣ ಯಜ್ಞದ ಒಂದು ಪಟ್ಟಿಯನ್ನು ನಮ್ಮ ಮುಂದಿಡುತ್ತಾನೆ:

ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾSಪರೇ   ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ          ॥೨೮॥

ದ್ರವ್ಯ ಯಜ್ಞಾಃ ತಪಃ ಯಜ್ಞಾಃ ಯೋಗ ಯಜ್ಞಾಃ ತಥಾ ಅಪರೇ |
ಸ್ವಾಧ್ಯಾಯ ಜ್ಞಾನ ಯಜ್ಞಾಃ  ಚ ಯತಯಃ ಸಂಶಿತ ವ್ರತಾಃ -ಕೆಲವರು ಸೊತ್ತುಗಳನ್ನು ಹೋಮಿಸುವವರು. ಕೆಲವರು ತಪಸ್ಸನ್ನೆ ಭಗವಂತನಲ್ಲಿ ಹೋಮಿಸುವವರು. ಕರ್ಮ ಸಾಧನೆಯೆ ಕೆಲವರ ಯಜ್ಞ. ಚುರುಕು ನಿಷ್ಠೆಯ ಪ್ರಯತ್ನಶೀಲರಾದ ಕೆಲವರಿಗೆ ವೇದಾಧ್ಯಯನ, ಭಗವಂತನ ಅರಿವೇ ಯಜ್ಞ.

ದ್ರವ್ಯಯಜ್ಞ: ಕೆಲವರು  ದ್ರವ್ಯದ ಮೂಲಕ ಭಗವಂತನನ್ನು ಆರಾದನೆ ಮಾಡುತ್ತಾರೆ. ಇದು ಅಗ್ನಿ ಮುಖೇನವಿರಬಹುದು, ಧನದಾನ, ಅನ್ನದಾನ, ಕನ್ಯಾದಾನ ಇತ್ಯಾದಿ ದಾನಗಳ ಮುಖೇನ ಇರಬಹುದು. ಯೋಗ್ಯನಾದವನಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದ್ದನ್ನು, ಅವರೊಳಗಿರುವ ಭಗವಂತ ಪ್ರೀತನಾಗಲಿ ಎಂದು ಕೊಡುವುದು ದ್ರವ್ಯ ಯಜ್ಞ.
ತಪೋಯಜ್ಞ: ಇದಕ್ಕೆ ಎರಡು ಮುಖ. ಒಂದು ಬಾಹ್ಯ ಇನ್ನೊಂದು ಅಂತರಂಗ.  ಒಂದು ನಿರಂತರ ಧ್ಯಾನ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ. ಎರಡನೆಯದು ಭಗವಂತನ ಚಿಂತನೆಗೆ ಬೇಕಾದ ಆತ್ಮಸಂಯಮ(discipline)-ಇದನ್ನು ತಪಸ್ಸು ಎನ್ನುತ್ತಾರೆ. ಉದಾಹರಣೆಗೆ ಬ್ರಹ್ಮಚರ್ಯಪಾಲನೆ, ವೃತಾನುನುಷ್ಠಾನ, ಇತ್ಯಾದಿ.
ಯೋಗಯಜ್ಞ: ಅಂದರೆ ವಿಧವಿಧವಾದ ಕರ್ಮಯೋಗವನ್ನು ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು. ಇದು ಬಾಹ್ಯ ಕರ್ಮಗಳ ಮೂಲಕ ಭಗವಂತನ ಆರಾದನೆ. ಉದಾಹರಣೆಗೆ: ದೇವರಿಗೆ 108 ಪ್ರದಕ್ಷಿಣೆ, ಅರ್ಚನೆ , ಇತ್ಯಾದಿ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ಹೇಳಿರುವ ಯಮನಿಯಮ ಪಾಲನೆ.
ಸ್ವಾಧ್ಯಾಯ ಜ್ಞಾನಯಜ್ಞ: ಇದು ಭಗವಂತನಿಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಎನ್ನುವುದಕ್ಕೆ ಅನೇಕ ಅರ್ಥವಿದೆ. ತನಗೆ ಸಂಬಂಧಪಟ್ಟದ್ದನ್ನು, ತಾನು ಓದಬೇಕಾದ್ದನ್ನು ಓದುವುದು. ತನ್ನ ಶಾಖೆಯ ವೇದಾಧ್ಯಯನ; ಎಲ್ಲಾ ಕಡೆ ಸ್ವತಂತ್ರನಾಗಿರುವ ಸರ್ವೋತ್ತಮನಾದ ಭಗವಂತನ ಗುಣವನ್ನು ಅಧ್ಯಯನ ಮೂಲಕ  ಎಲ್ಲ ಗ್ರಂಥಗಳಲ್ಲಿ ಕಂಡು ಕೊಳ್ಳುವುದು ಸ್ವಾಧ್ಯಾಯ. ಈ ಕಾಲದಲ್ಲಿ ಶಾಸ್ತ್ರದ ರಹಸ್ಯವನ್ನು ತಿಳಿದವರು ಸಿಗುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಕಾಲವನ್ನು ವ್ಯರ್ಥ ಮಾಡದೆ, ಭಗವಂತ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದೂ  ಸ್ವಾಧ್ಯಾಯ. ಈ ಎಲ್ಲಾ ಸ್ವಾಧ್ಯಾಯ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾದದ್ದು. ನಾವು ತಿಳಿಯುವುದು, ತಿಳಿದಿದ್ದನ್ನು ಇನ್ನೊಬ್ಬರಿಗೆ ಹಂಚುವುದು-ಭಗವಂತನಿಗೆ ಅತ್ಯಂತ ಪ್ರೀಯ.  ಇನ್ನೊಬ್ಬರಿಗೆ ಹಂಚುವುದರಿಂದ ಹೆಚ್ಚಾಗುವ ಏಕಮೇವ ಸಂಪತ್ತು  ಎಂದರೆ ಅದು ಜ್ಞಾನ. ಇದನ್ನು ಮಾಡಬೇಕಾದರೆ ನಾವು ಯತಿಗಳಾಗಬೇಕು. ಇಲ್ಲಿ ಯತಿ ಎಂದರೆ ಸನ್ಯಾಸಿ ಅಲ್ಲ. ಯತಿ ಅಂದರೆ ನಿರಂತರ ಪ್ರಯತ್ನಶೀಲ.  ಸಾಧನೆ ಜೊತೆಗೆ ಹರಿತವಾದ ವೃತ ಕೂಡಾ ಅಗತ್ಯ. ಅಂದರೆ ಸ್ವಚ್ಛವಾದ ಪ್ರಾಮಾಣಿಕವಾದ ಬದುಕು. ಇದಿಲ್ಲದೆ ಮಾಡುವ ಯಾವ ಕರ್ಮ ಕೂಡಾ ಯಜ್ಞವಾಗುವುದಿಲ್ಲ.ಆಧ್ಯಾತ್ಮದ ದಾರಿಯಲ್ಲಿ ಮುಂದೆ ಸಾಗಲು ಛಲ ಅಗತ್ಯ.          

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇSಪಾನಂ ತಥಾSಪರೇ  ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ      ॥೨೯॥

ಅಪಾನೇ ಜುಹ್ವತಿ ಪ್ರಾಣಮ್  ಪ್ರಾಣೇ ಅಪಾನಮ್  ತಥಾ ಅಪರೇ  ।
ಪ್ರಾಣ ಅಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪರಾಯಣಾಃ  -ಮತ್ತೆ ಕೆಲವರು ಪ್ರಾಣಾಯಾಮದ ಸಾಧಕರು. ಪ್ರಾಣಾಪಾನಗಳ ನಡೆಯನ್ನು ತಡೆಹಿಡಿದು ಅಪಾನದಲ್ಲಿ ಪ್ರಾಣವನ್ನು ಹೋಮಿಸುತ್ತಾರೆ. ಪ್ರಾಣದಲ್ಲಿ ಅಪಾನವನ್ನು.

ಯೋಗದಲ್ಲಿ   ವಿಶಿಷ್ಟವಾದ ಸಾಧನೆ ಪ್ರಾಣಯಾಮ. ಕೆಲವರಿಗೆ ಪ್ರಾಣಾಯಾಮವೇ ಬದುಕಿನಲ್ಲಿ ಒಂದು ಸಾಧನೆ. ಪ್ರಾಣಾಪಾನಗಳನ್ನು ಭಗವಂತನಲ್ಲಿ ಯಜ್ಞ ರೂಪವಾಗಿ ಅರ್ಪಿಸಿ, ಪ್ರಾಣಾಯಾಮದಿಂದ ಭಗಂತನ ಉಪಾಸನೆ-ಅಪಾನದಲ್ಲಿ ಪ್ರಾಣವನ್ನು ಹೋಮಿಸುವುದು. ಇದು ಕುಂಭಕಕ್ಕೆ  ಸಂಬಂಧಪಟ್ಟಿದ್ದು. ದೇಹದ ಒಳಗಿನಿಂದ  ಶ್ವಾಸವನ್ನು ಹೊರಬಿಡುವುದು 'ರೇಚಕ'; ಆಮ್ಲಜನಕಯುಕ್ತ ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದು 'ಪೂರಕ'. ನಮ್ಮ ಹೃದಯ ಕಲಶದಲ್ಲಿ ಪ್ರಾಣಶಕ್ತಿಯನ್ನು ಹಿಡಿದಿಡುವುದು-‘ಕುಂಭಕ’. ಇದು ಬಹಳ ಪರಿಣಾಮಕಾರಿ. ಇದರಿಂದ ಏಕಾಗ್ರತೆ, ಆರೋಗ್ಯ, ಆಯಸ್ಸು ಹೆಚ್ಚುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಆಯಸ್ಸು ಆತನ ಉಸಿರಾಟದ ಮೇಲೆ ನಿರ್ಧಾರವಾಗಿರುತ್ತದೆ. ಸಹಜ ಉಸಿರಾಟ ಎಂದರೆ ನಾಲ್ಕು ಸೆಕೆಂಡಿಗೆ ಒಂದು  ಉಸಿರಾಟ(ರೇಚಕ ಮತ್ತು ಪೂರಕ). ಒಬ್ಬ ಮನುಷ್ಯ ನೂರು ವರ್ಷ ಬದುಕುತ್ತಾನೆ ಎಂದರೆ ಆತನ ಆಯಸ್ಸು '೭೭ ಕೋಟಿ, ೭೬ ಲಕ್ಷ ಉಸಿರು'. ಒಂದು ವೇಳೆ ನಾಲ್ಕು ಸೆಕೆಂಡಿಗೆ ಬದಲಾಗಿ ೮ ಸೆಕೆಂಡಿಗೊಮ್ಮೆ ಉಸಿರಾಟ ಮಾಡಿದರೆ ಆತ ೨೦೦ ವರ್ಷ ಬದುಕಬಹುದು. ಇದನ್ನು ಹಿಂದೆ ಕೆಲವು ಸಾಧಕರು ಪ್ರಾಣಾಯಾಮದಿಂದ ಸಾಧಿಸುತ್ತಿದ್ದರು. ಇಂದೂ ಕೂಡಾ ಹಿಮಾಲಯದಲ್ಲಿ ನೂರಾರು ವರ್ಷ ವಯಸ್ಸಾಗಿರುವ ಆರೋಗ್ಯಪೂರ್ಣ ಸಾಧಕರಿದ್ದಾರೆ ಎಂದು  ಪರಮಹಂಸ ಯೋಗನಂದರು(Autobiography of Yogi) ಮತ್ತು ಸ್ವಾಮಿರಾಮ್(Living with Himalayan Masters) ತಮ್ಮ  ಸ್ವಂತ ಅನುಭವದಿಂದ ಹೇಳಿದ್ದಾರೆ.
ಪ್ರಾಣಾಯಾಮದಿಂದ ಪ್ರಾಣಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಇನ್ನೊಬ್ಬರ ರೋಗವನ್ನು  ಕೂಡಾ ಗುಣಪಡಿಸಬಹುದು. ಇದನ್ನು ಸ್ಪರ್ಶ ಅಥವಾ   Touch Heal ಎನ್ನುತ್ತಾರೆ. ಕೇವಲ ಹಸ್ತ ಸ್ಪರ್ಶದಿಂದ ಭಯ, ರೋಗ, ದುಃಖ, ಹುಚ್ಚು, ಕುರುಡುತನ ಎಲ್ಲವನ್ನೂ ಗುಣ ಪಡಿಸಬಹುದು. ಈ ಕಾರಣಕ್ಕಾಗಿ ಒಬ್ಬರು ಇನ್ನೊಬ್ಬರಿಗೆ ಆಶೀರ್ವಾದ ಮಾಡುವಾಗ ತಲೆ ಮೇಲೆ ಕೈ ಇಟ್ಟು ಮಾಡುತ್ತಾರೆ. ಇದರಿಂದ ಪ್ರಾಣ ಶಕ್ತಿ ದೊಡ್ಡವರಿಂದ ಚಿಕ್ಕವರಿಗೆ ಹರಿಯುತ್ತದೆ.   ಹೀಗೆ ಪ್ರಣಾಯಾಮದಲ್ಲಿ ಅನೇಕ ಸಾಧನೆ ಸಾಧ್ಯ. ಮುಖ್ಯವಾಗಿ ಇದರಿಂದ ಮನಸ್ಸು ದೇವರಲ್ಲಿ ನೆಲೆಗೊಳ್ಳುತ್ತದೆ. ಕೃಷ್ಣ ಇದನ್ನು ಯಜ್ಞ ಎನ್ನುತ್ತಾನೆ.
ಮೇಲಿನಿಂದ ಕೆಳಕ್ಕೆ ಹರಿಯುವ ಶಕ್ತಿ ಅಪಾನ, ಊರ್ಧ್ವ ಮುಖವಾಗಿ ಮೂಲಾದಾರದಿಂದ ಸಹಸ್ರಾರದತ್ತ ಹರಿಯುವ ಶಕ್ತಿ ಪ್ರಾಣ. ಈ ಎರಡು ಶಕ್ತಿಗಳನ್ನು ಹೃದಯದಲ್ಲಿ ಸ್ಥಗಿತ ಮಾಡುವುದು ಕುಂಭಕ. ಪೂರ್ಣವಾಗಿ ಒಳಗಿನ ಗಾಳಿಯನ್ನು ತನ್ನ ಬಲ ಮೂಗಿನ ಹೊರಳೆಯಿಂದ ಹೊರ ಹಾಕಿ, ತನ್ನ ಎಡ ಮೂಗಿನ ಹೊರಳೆಯಿಂದ ಶುದ್ಧ ಗಾಳಿಯನ್ನು ಇನ್ನು ಒಳಗೆ ಹೋಗುವುದಿಲ್ಲ ಅನ್ನುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡುಪ್ರಾಣಶಕ್ತಿ  ಮೇಲಕ್ಕೆ ಹೋಗದಂತೆ, ಅಪಾನ ಕೆಳಗೆ ಹೋಗದಂತೆ ಶಕ್ತಿಯನ್ನು ಹೃದಯದಲ್ಲಿ ಸ್ಥಗಿತ ಗೊಳಿಸುವುದು- ಕುಂಭಕ.  ಇದು ಪ್ರಾಣಾಯಾಮ ಪರಾಯಣರು ಮಾಡುವ ಯಜ್ಞ. ಭಗವಂತ ಪ್ರಸನ್ನನಾಗಿ ನನಗೆ ಏಕಾಗ್ರತೆಯನ್ನು ಕೊಟ್ಟು, ನನ್ನ ಸಾಧನೆಯನ್ನು ಮುಂದುವರಿಸಲು ಸಹಕರಿಸಲಿ ಎನ್ನುವ ಅನುಸಂಧಾನದಿಂದ ಮಾಡುವ ಉಸಿರಾಟದ ಯಜ್ಞ. [ಗುರುವಿನ ಮಾರ್ಗದರ್ಶನವಿಲ್ಲದೆ ಪ್ರಾಣಾಯಾಮವನ್ನು ಪ್ರಯತ್ನಿಸಬಾರದು]                         

ಅಪರೇ ನಿಯತಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ   ।
ಸರ್ವೇSಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ                          ॥೩೦॥

ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ |
ಸರ್ವೇ ಅಪಿ ಏತೇ ಯಜ್ಞವಿದಃ ಯಜ್ಞಕ್ಷಪಿತ ಕಲ್ಮಷಾಃ -ಕೆಲವರು ಆಹಾರವನ್ನು ಮಿತಗೊಳಿಸಿ ಇಂದ್ರಿಯವೃತ್ತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುತ್ತಾರೆ.[ಕಿರಿಯರಾದ ಇಂದ್ರಿಯ ದೇವತೆಗಳು ಹಿರಿಯರಾದ ಇಂದ್ರಿಯ ದೇವತೆಗಳಿಗೆ ಅಧೀನರೆಂದು ಚಿಂತನೆ ಮಾಡುತ್ತಾರೆ] ಈ ಎಲ್ಲರೂ ಯಜ್ಞದ ಬಗೆಯನ್ನು ಬಲ್ಲವರು; ಯಜ್ಞದಿಂದ ಕೊಳೆಯನ್ನು ತೊಳೆದುಕೊಂಡವರು.

ಕೆಲವರು ಆಹಾರ ನಿಯಂತ್ರಣಗೊಳಿಸಿ, ಇಂದ್ರಿಯ ಚಾಪಲವನ್ನು ಕಡಿಮೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಆಹಾರ ನಿಯಂತ್ರಣ ಎಂದರೆ ಹೆಚ್ಚು ಆಹಾರ ಸೇವಿಸದೆ ಇರುವುದು, ಉಪ್ಪು-ಹುಳಿ-ಖಾರ ಕಡಿಮೆ ತಿನ್ನುವುದು ಇತ್ಯಾದಿ. ಇದರಿಂದ ಇಂದ್ರಿಯ ಸೆಳೆತ ಕಡಿಮೆಯಾಗುತ್ತದೆ. ಇದರ ಪರಿಣಾಮ ನೇರವಾಗಿ ಮನಸ್ಸಿನ ಮೇಲೆ. ಹೀಗೆ ಆಹಾರ ನಿಯಂತ್ರಣದ ಮೂಲಕ ಸಾಧನೆ ಒಂದು ಯಜ್ಞ. ಈ ಕಾರಣಕ್ಕಾಗಿ ನಮ್ಮಲ್ಲಿ ಅನೇಕ ಹಬ್ಬ ಹರಿದಿನಗಳಲ್ಲಿ, ಏಕಾದಶಿಯಂದು-ಉಪವಾಸ ಪದ್ಧತಿ ಸಾಮಾಜಿಕವಾಗಿ ನೆಡೆದು ಬಂತು. ಇದರಿಂದ ಕನಿಷ್ಠ ಆ ಒಂದು ದಿನವಾದರೂ ಮನಸ್ಸು ಸ್ವಚ್ಛವಾಗಿ ಭಗವಂತನ ಉಪಾಸನೆಯಲ್ಲಿ ತೊಡಗಲಿ ಎನ್ನುವುದು ಇದರ ಹಿಂದಿನ ಸಂಕಲ್ಪ.
ಇನ್ನೊಂದು ವಿಧವಾದ  ಯಜ್ಞ "ಪ್ರಾಣಾನ್ ಪ್ರಾಣೇಷು ಜುಹ್ವತಿ" ಅಂದರೆ ಪ್ರಾಣಗಳಲ್ಲಿ ಪ್ರಾಣವನ್ನು ಹೋಮಿಸುವುದು ಅಥವಾ ಇಂದ್ರಿಯಗಳಲ್ಲಿ ಇಂದ್ರಿಯವನ್ನು ಹೋಮಿಸುವುದು. ಇಲ್ಲಿ ಇಂದ್ರಿಯಗಳು ಎಂದರೆ ಇಂದ್ರಿಯಾಭಿಮಾನಿ ದೇವತೆಗಳು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಈ ದೇವತೆಗಳು ಒಂದೊಂದು ಸ್ತರದಲ್ಲಿ ಕೆಲಸ ಮಾಡುತ್ತಾರೆ(Protocol). ಒಬ್ಬೊಬ್ಬ ದೇವತೆ  ಒಂದೊಂದು  ಮೆಟ್ಟಲಿನಲ್ಲಿ  ನಿಂತು  ಕಾರ್ಯ  ನಿರ್ವಹಿಸುತ್ತಿರುತ್ತಾರೆ ಹಾಗು ಇವರು ಭಗವಂತನನ್ನು ಸೇರುವಲ್ಲಿ ನಮಗೆ ಸಹಾಯ ಮಾಡುತ್ತಾರೆ. ಈ ದೇವತೆಗಳನ್ನು ವಿವಿಧ ಮೆಟ್ಟಲಿನಲ್ಲಿ ತಾರತಮ್ಯ ಚಿಂತನೆ ಮಾಡುವುದು, ಅದರ ಮುಖೇನ ಭಗವಂತನ ಚಿಂತನೆ ಒಂದು ಯಜ್ಞ. ಸರ್ವೋತ್ತಮನಾದ ಭಗವಂತ ಮೊದಲಿನವನು. ಎಲ್ಲವೂ ಅವನ ಅಧೀನ. ಆತನ ನಂತರ ಪ್ರಕೃತಿ ಮಾತೆ ಲಕ್ಷ್ಮಿ, ನಂತರ ಬ್ರಹ್ಮ-ವಾಯು, ಸರಸ್ವತಿ-ಭಾರತಿ, ಗರುಡ-ಶೇಷ-ರುದ್ರಸುಪರ್ಣಿ-ವಾರುಣಿ-ಪಾರ್ವತಿ, ಇಂದ್ರ-ಕಾಮರು, ದಕ್ಷಾದಿಗಳು, ಸೂರ್ಯ-ಚಂದ್ರ-ಯಮಾದಿಗಳು, ವರುಣ, ಅಗ್ನಿ, ಅಶ್ವೀದೇವತೆಗಳು, ಕುಬೇರ, ಯಜ್ಞ. ಹೀಗೆ ಒಬ್ಬರು ಇನ್ನೊಬ್ಬರಿಗೆ ಅಧೀನವಾಗಿ ವಿವಿಧ ಮೆಟ್ಟಲಿನಲ್ಲಿ   ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ರೀತಿ ದೇಹ ಎನ್ನುವ ಈ ಅದ್ಭುತ ಯಂತ್ರವನ್ನು ನಿಯಂತ್ರಿಸುವ ದೇವತೆಗಳ ಅರಿವು, ಅದರ ಮೂಲಕ ಭಗವಂತನೆಡೆಗೆ ಸಾಗುವ ಜ್ಞಾನಸಾಧನೆ-ತಾರತಮ್ಯ ಜ್ಞಾನಯಜ್ಞ.
ಯಜ್ಞದಲ್ಲಿ ಒಂದು ಒಳ್ಳೆಯದು ಒಂದು ಕೆಟ್ಟದ್ದು ಅನ್ನುವುದಿಲ್ಲ. ಯಾರಿಗೆ ಯಾವ ಯಜ್ಞ ಒಗ್ಗುತ್ತದೆ ಅದರ ಮುಖೇನ ಸಾಧನೆ ಮಾಡುತ್ತಾರೆ. ಎಲ್ಲರೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಯಾರಿಗೆ ಯಾವುದು ಹಿತವೆನಿಸುತ್ತದೋ, ಸಾಧನೆಗೆ ಅನುಕೂಲವಾಗುತ್ತದೋ, ಆ ದಾರಿಯಲ್ಲಿ ಸಾಗಬೇಕು. ಯಜ್ಞದಿಂದ ಆರಾಧ್ಯನಾದ ಯಜ್ಞಮೂರ್ತಿಯಾದ ಭಗವಂತನತ್ತ ಸಾಗುವವನು, ತನ್ನ ಜೀವನದ ಪ್ರತಿಯೊಂದು ನಡೆಯನ್ನು ಭಗವಂತನ ಆರಾದನೆಯಾಗಿ ಮಾಡಿಕೊಳ್ಳುವ ಮೂಲಕ, ತನ್ನ ಬದುಕಿನ ಕಲ್ಮಶವನ್ನು ತೊಳೆದುಕೊಂಡು ಸ್ವಚ್ಚವಾದ ಬದುಕನ್ನು ಬಾಳುತ್ತಾನೆ.
  
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್    ।
ನಾಯಂ ಲೋಕೋSಸ್ತ್ಯಯಜ್ಞಸ್ಯ ಕುತೋSನ್ಯಃ ಕುರುಸತ್ತಮ ॥೩೧॥

ಯಜ್ಞ ಶಿಷ್ಟ ಅಮೃತ ಭುಜಃ ಯಾಂತಿ ಬ್ರಹ್ಮ ಸನಾತನಮ್ |
ನ ಅಯಮ್  ಲೋಕಃ ಅಸ್ತಿ ಅಯಜ್ಞಸ್ಯ ಕುತಃ ಅನ್ಯಃ ಕುರುಸತ್ತಮ -- ಯಜ್ಞದಲ್ಲಿ ಅರ್ಪಿಸಿ ಉಳಿದ ಅಮೃತವನ್ನುಣ್ಣುವವರು(ಯಜ್ಞ ಫಲದ ಅಮೃತ) ಶಾಶ್ವತವಾದ ಭಗವಂತನನ್ನು ಪಡೆಯುತ್ತಾರೆ. ಓ ಕುರುಶ್ರೇಷ್ಠ, ಯಜ್ಞವಿರದವನಿಗೆ ಈ ಲೋಕವೇ ಇಲ್ಲ. ಆ ಲೋಕದ ಮಾತೇನು?

ಯಜ್ಞದಲ್ಲಿ ಭಗವಂತನಿಗೆ ಅರ್ಪಿಸಿ ಉಳಿದಿದ್ದನ್ನು  'ಅಮೃತ' ಎನ್ನುತ್ತಾರೆ. ಅದು ನಮ್ಮನ್ನು ಸಾವಿನಿಂದಾಚೆಗೆ ಕೊಂಡೊಯ್ಯುತ್ತದೆ. ಜೀವನದ ಪ್ರತಿಯೊಂದು ನಡೆಯಲ್ಲಿ ಈ ರೀತಿಯ ಬದುಕನ್ನು ಬದುಕುತ್ತಿದ್ದರೆ ಕ್ರಮೇಣ ಎಂದೆಂದೂ ಬದಲಾಗದ, ಶಾಶ್ವತ ಮತ್ತು  ಸನಾತನವಾದ ಭಗವಂತನನ್ನು ಹೋಗಿ ಸೇರುತ್ತೇವೆ.
ಇಲ್ಲಿ 'ಸನಾತನ' ಎನ್ನುವಲ್ಲಿ ಇನ್ನೊಂದು ಧ್ವನಿ ಇದೆ. ಕೇವಲ ಉಪವಾಸ ಪ್ರಾಣಾಯಾಮ ಮಾಡಿದಾಗ ಮೋಕ್ಷ ಸಿಗದು. ಸನಾತನ(ನಾತನ-ನಾದನ) ಅಂದರೆ ಶಬ್ದ.   ಬ್ರಹ್ಮ ಸನಾತನ ಎಂದರೆ ಸರ್ವಶಬ್ದ ವಾಚ್ಯನಾದ, ವೇದವೇದ್ಯ ಭಗವಂತ.  ಇಂತಹ  ಭಗವಂತನನ್ನು ಶಾಸ್ತ್ರದ ಮುಖೇನ ತಿಳಿದುಮಾಡುವ ಯಜ್ಞದಿಂದ ಮೋಕ್ಷ ಸಾಧ್ಯ. ಇಲ್ಲದಿದ್ದರೆ ಏನೂ ಉಪಯೋಗವಿಲ್ಲ. ವೇದದಲ್ಲಿ ಹೇಳಿರುವ ಗುಣವನ್ನು ಬಲ್ಲವರಿಂದ ತಿಳಿದು ಉಪಾಸನೆ ಮಾಡುವವ, ವೇದವನ್ನು ಓದಿ ಅದರಿಂದ ತಿಳಿದವ, ತಿಳಿದು ಇನ್ನೊಬ್ಬರಿಗೆ ಹೇಳುವವ, ಹೀಗೆ ಎಲ್ಲರೂ ಸಾಧಕರೆನಿಸುತ್ತಾರೆ. ಯಜ್ಞದಲ್ಲಿ ಪ್ರಮುಖವಾಗಿ ಬೇಕಾಗಿರುವುದು ಜ್ಞಾನ, ಅನನ್ಯ ಭಕ್ತಿ ಮತ್ತು ಶರಣಾಗತಿ. "ಜೀವನದಲ್ಲಿ ಈ ಅನುಸಂಧಾನವಿಲ್ಲದವ, ಯಜ್ಞವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದವ, ಇಹದಲ್ಲೂ ವ್ಯರ್ಥವಾಗಿ ಬದುಕುತ್ತಾನೆ-ಇನ್ನು ಪರದ ಮಾತೇನು" ಎನ್ನುತ್ತಾನೆ ಕೃಷ್ಣ.
ಇಲ್ಲಿ  ಅರ್ಜುನನನ್ನು ಕೃಷ್ಣ 'ಕುರುಸತ್ತಮ' ಎಂದು ಸಂಬೋಧಿಸಿದ್ದಾನೆ. ಕುರುವಂಶದಲ್ಲಿ ಶ್ರೇಷ್ಠನಾದ ನೀನು ನಿಷ್ಕ್ರೀಯನಾಗದೆ  ಕಾರ್ಯ ಪ್ರವೃತ್ತನಾಗು; ಯಜ್ಞದಲ್ಲಿ ತಮ್ಮನ್ನು ತೊಡಗಿಸಿಕೊಂಡುಬಂದ ವಂಶದಲ್ಲಿ ಹುಟ್ಟಿದ ಜ್ಞಾನಿಶ್ರೇಷ್ಠ, ಸಾತ್ವಿಕನಾದ ನೀನು- 'ಯುದ್ಧವನ್ನು ಯಜ್ಞವಾಗಿ ಮಾಡು' ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ.     

ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ    ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ         ॥೩೨॥

ಏವಮ್  ಬಹುವಿಧಾಃ  ಯಜ್ಞಾಃ ವಿತತಾಃ ಬ್ರಹ್ಮಣಃ ಮುಖೇ
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಮ್  ಜ್ಞಾತ್ವಾ ವಿಮೋಕ್ಷ್ಯಸೇ- ಹೀಗೆ ಹಲವು ಬಗೆಯ ಯಜ್ಞಗಳು ಭಗವಂತನ ಬಾಯಲ್ಲಿ ಹರವಿಕೊಂಡಿವೆ. ಅವೆಲ್ಲ ಕರ್ಮದಿಂದಲೆ ಆಗುವಂಥವು ಎನ್ನುವುದನ್ನು ತಿಳಿ. ಹೀಗೆ ತಿಳಿದರೆ ಬಿಡುಗಡೆ ಹೊಂದುವೆ.

ಯಜ್ಞ ಅನ್ನುವುದಕ್ಕೆ ಹಲವು ಮುಖ. ಬದುಕಿನ ಯಾವುದೇ  ನಡೆಯನ್ನು ಭಗವಂತನ ಪ್ರಜ್ಞೆಯಿಂದ ಮಾಡಿದಾಗ, ಬದುಕಿನ ನಡೆ ಭಗವಂತನ ಕಡೆ ಸಾಗುವ ನಡೆಯಾದಾಗ, ಅದು ಯಜ್ಞವಾಗುತ್ತದೆ. ಯಾವ ರೀತಿ ಯಜ್ಞ ಮಾಡಿದರೂ ಅದು ಭಗವಂತನ ಮುಖದಲ್ಲೇ ಬಂದು ಸೇರುತ್ತದೆ.  ಸರ್ವಯಜ್ಞಗಳ ನಿಯಾಮಕ ಆ ಭಗವಂತನೊಬ್ಬನೆ. ವೈವಿಧ್ಯತೆ ಕೇವಲ ನಮ್ಮ ಅನುಸಂಧಾನ ಮತ್ತು ಕ್ರಿಯೆಯಲ್ಲಿ.
ನಾವು ನಮ್ಮ ಕರ್ಮದ ಮುಖೇನ ಯಜ್ಞ ಮಾಡಬೇಕು. ಕರ್ಮವನ್ನು ಬಿಟ್ಟು ಭಗವಂತನ ಉಪಾಸನೆ ಮಾಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಿಲ್ಲ. ನಾವು ನಮ್ಮನಮ್ಮ ಕರ್ತವ್ಯ ಕರ್ಮದಲ್ಲಿ ಭಗವಂತನನ್ನು ಕಾಣುವುದು ಯಜ್ಞ. ಈ ಅನುಸಂಧಾನದಿಂದ  ಯಾವ ಕರ್ಮ ಮಾಡಿದರೂ ಅದು ನಮ್ಮನ್ನು ಬಿಡುಗಡೆಯ ಮಾರ್ಗದತ್ತ ಕೊಂಡೊಯ್ಯುತ್ತದೆ.
ಈವರಗೆ ಕೃಷ್ಣ ಕರ್ಮ-ಯಜ್ಞವಾಗುವುದು ಹೇಗೆ, ಅದರಲ್ಲಿನ ವಿಧ, ಅದರ ಸ್ವಾಮಿ- ಈ ವಿಚಾರವನ್ನು ವಿವರವಾಗಿ ಹೇಳಿದ. ಮೂಲಭೂತವಾಗಿ ಯಜ್ಞದಲ್ಲಿ ಬಾಹ್ಯ ಮತ್ತು ಅಂತರಂಗ ಯಜ್ಞ ಎನ್ನುವುದನ್ನೂ ನಾವು ನೋಡಿದೆವು. ಈ ಎರಡು ವಿಧವಾದ ಯಜ್ಞದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಮತ್ತು ಏಕೆ-ಈ ಕುರಿತು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

No comments:

Post a Comment