Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, April 11, 2011

Bhagavad Gita in Kannada Chapter-04 Shloka-01-03


ಅಧ್ಯಾಯ ನಾಲ್ಕು

ಹಿಂದೆ  ಕೃಷ್ಣ  ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಎರಡನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿ, ಆ ನಂತರ ಮೂರನೇ ಅಧ್ಯಾಯದಲ್ಲಿ ಕರ್ಮಯೋಗದ ವಿಸ್ತಾರವನ್ನು ತಿಳಿಸಿದ. ನಾಲ್ಕನೇ ಅಧ್ಯಾಯದಲ್ಲಿ ಭಗವಂತನ ಜ್ಞಾನದ ಅರಿವಿನ ಮುಖ ಮತ್ತು ಕರ್ಮದ ಪ್ರಭೇದಗಳನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದ ಜ್ಞಾನಯೋಗ ಮತ್ತು ಕರ್ಮಯೋಗವನ್ನೇ ವಿಸ್ತರಿಸಿ ಜ್ಞಾನದ ಮಹತ್ವ ಮತ್ತು ಕರ್ಮದ ಪ್ರಭೇದಗಳ ಜೊತೆಗೆ ಈ ಎರಡು ಮಾರ್ಗದಿಂದ ನಾವು ಪಡೆಯತಕ್ಕಂತಹ ಭಗವಂತನ ಮಹಿಮೆ- ಇದನ್ನು ಈ ಅಧ್ಯಾಯದಲ್ಲಿ ಕಾಣಬಹುದು. ಈ ಅಧ್ಯಾಯ ಕೃಷ್ಣನ ಮಾತಿನೊಂದಿಗೆ ಆರಂಭವಾಗುತ್ತದೆ.

ಭಗವಾನುವಾಚ ।
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್   ।
ವಿವಸ್ವಾನ್  ಮನವೇ  ಪ್ರಾಹ ಮನುರಿಕ್ಷ್ವಾಕವೇSಬ್ರವೀತ್     ॥೧॥

ಭಗವಾನ್ ಉವಾಚ-ಭಗವಂತ  ಹೇಳಿದನು:
ಇಮಮ್  ವಿವಸ್ವತೇ ಯೋಗಮ್  ಪ್ರೋಕ್ತವಾನ್ ಅಹಮ್ ಅವ್ಯಯಮ್ | 
ವಿವಸ್ವಾನ್  ಮನವೇ  ಪ್ರಾಹ ಮನುಃ ಇಕ್ಷ್ವಾಕವೇ ಅಬ್ರವೀತ್ -ಅಳಿವಿರದ ಈ ಸಾಧನ ಮಾರ್ಗವನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯ ಮನುವಿಗೆ ಹೇಳಿದ್ದ. ಮನು ಇಕ್ಷ್ವಾಕುವಿಗೆ ಹೇಳಿದ್ದ.

ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋವಿದುಃ ।
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ           ॥೨॥

ಏವಮ್  ಪರಂಪರಾ ಪ್ರಾಪ್ತಮ್ ಇಮಮ್ ರಾಜ ಋಷಯಃ ವಿದುಃ |
ಸಃ ಕಾಲೇನ ಇಹ ಮಹತಾ ಯೋಗಃ ನಷ್ಟಃ ಪರಂತಪ-ಹೀಗೆ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿರುವ ಇದನ್ನು ಜ್ಞಾನಿಗಳಾದ ಅರಸರು ಅರಿತಿದ್ದರು. ಓ ಅರಿಗಳನ್ನು ತರಿದವನೆ, ತುಂಬ ಕಾಲದ ಬಳಿಕ ಆ ಅರಿವಿನ ದಾರಿ ಈ ನೆಲದಲ್ಲಿ ಕಣ್ಮರೆಯಾಯಿತು.

ಸ ಏವಾಯಂ ಮಯಾ ತೇSದ್ಯ ಯೋಗಃ ಪ್ರೋಕ್ತಃ ಪುರಾತನಃ।
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್      ॥೩॥

ಸಃ ಏವ ಅಯಮ್  ಮಯಾ ತೇ ಅದ್ಯ ಯೋಗಃ ಪ್ರೋಕ್ತಃ ಪುರಾತನಃ |
ಭಕ್ತಃ ಅಸಿ ಮೇ ಸಖಾ ಚ ಇತಿ ರಹಸ್ಯಮ್  ಹಿ ಏತತ್ ಉತ್ತಮಮ್-ಅದೇ ಹಳೆಯ ಅರಿವಿನ ದಾರಿಯನ್ನು ನಾನೀಗ ನಿನಗೆ ಹೇಳಿದೆ -ನೀನು ನನ್ನ ಭಕ್ತ ಮತ್ತು ಗೆಳೆಯ ಎನ್ನುವುದಕ್ಕಾಗಿ. ಇದು ತುಂಬ ರಹಸ್ಯವಾದ ಹಿರಿಯ ಸಂಗತಿ.

ಈ ಮೇಲಿನ ಮೂರು ಶ್ಲೋಕದಲ್ಲಿ ಸೃಷ್ಟಿಯ ಆದಿಯಿಂದ ಈ ಜ್ಞಾನದ ಪರಂಪರೆ ಹೇಗೆ ಬೆಳೆದು ಬಂತು ಎನ್ನುವ ಚಿತ್ರಣವನ್ನು ಕೃಷ್ಣ ಕೊಟ್ಟಿದ್ದಾನೆ. ವಾಸ್ತವಿಕವಾಗಿ ಜ್ಞಾನದ ಮೂಲ ವೇದಗಳು. ವೇದದ ಸಾರವನ್ನು ಸಂಗ್ರಹ ಮಾಡಿ, ಸಮಸ್ತ ವೇದಾರ್ಥ ಸಂಗ್ರಹವಾದಂತಹ ಒಂದು ಗ್ರಂಥ ರಚನೆಯಾಯಿತು. ಅದನ್ನು ಪಂಚರಾತ್ರ ಎಂದು ಕರೆದರು. ಪಂಚರಾತ್ರ ಅನ್ನುವುದು ವೈದಿಕ ವಾಗ್ಮಯದ ಜ್ಞಾನಯೋಗ ಮತ್ತು  ಕರ್ಮಯೋಗಗಳ ಸಮಷ್ಠಿರೂಪವಾಗಿರುವಂತಹ  ಗ್ರಂಥ. ಆ ಪಂಚರಾತ್ರದ ಸಾರಸಂಗ್ರಹವೇ ಭಗವದ್ಗೀತೆ. ಸೃಷ್ಟಿಯ ಆದಿಯಲ್ಲಿ, ಸ್ವಾಯಂಭುವ ಮನ್ವಂತರದಲ್ಲಿ ಭಗವಂತ ಪಂಚರಾತ್ರವನ್ನು ಚತುರ್ಮುಖನಿಗೆ ಉಪದೇಶಿಸಿದ. ಹೀಗೆ ಪ್ರಪಂಚ ಸೃಷ್ಟಿಯಾದ ಮೊದಲಲ್ಲೇ  ಪಂಚರಾತ್ರದ ಜ್ಞಾನ ಚತುರ್ಮುಖನಿಗೆ ಹಾಗು ದೇವತೆಗಳಿಗೆ ಬಂತು. ಸೂರ್ಯ ವೈವಸ್ವತ ಮನ್ವಂತರದಲ್ಲಿ ಇದನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದ. ಇದನ್ನೇ ಕೃಷ್ಣ ಇಲ್ಲಿ ಅರ್ಜುನನನಿಗೆ ವಿವರಿಸುತ್ತಿದ್ದಾನೆ.
ಮೊಟ್ಟ ಮೊದಲು ದೇವತೆಗಳು ಭಗವಂತನಿಂದ ಈ ಜ್ಞಾನವನ್ನು ಪಡೆದರು. ಈ ದೇವತೆಗಳಲ್ಲಿ ಸೂರ್ಯನೂ ಒಬ್ಬ. ಸೂರ್ಯ ಭೂಮಿಗೂ ದೇವತೆಗಳಿಗೂ ಸಂಪರ್ಕ ಕೊಡುವ ದೇವತೆ. ಈತನಿಂದ ವೈವಸ್ವತ ಮನ್ವಂತರದ ಅಭಿಮಾನಿಯಾದ ಮನುವಿಗೆ ಈ ಜ್ಞಾನ ಹರಿದು ಬಂತು. ಮನು ಇದನ್ನು ತನ್ನ ಮಗ  ಇಕ್ಷ್ವಾಕುವಿಗೆ ಹೇಳಿದ. ಈತ ಭೂಲೋಕದಲ್ಲಿ ಚಕ್ರವರ್ತಿಯಾಗಿ ಬಾಳಿದ ಮಹಾ ರಾಜರ್ಷಿ. ಹೀಗೆ ಈ ಜ್ಞಾನ ದೇವತೆಗಳಿಂದ ಭೂಲೋಕಕ್ಕೆ ಹರಿದು ಬಂತು.
ಜ್ಞಾನ ಎನ್ನುವುದು ಅನಾಧಿನಿತ್ಯ.  ಇದು ಅಳಿವಿರದ ವಿದ್ಯೆ. ಪ್ರತೀ ಸೃಷ್ಟಿಯ ಆದಿಯಲ್ಲೂ ಈ ವಿದ್ಯೆ ಭಗವಂತನಿಂದ ಹೇಳಲ್ಪಡುತ್ತದೆ. ನಂತರ ದೇವತೆಗಳು, ದೇವತೆಗಳಿಂದ ರಾಜರ್ಷಿಗಳು, ನಂತರ ಋಷಿಗಳು ಹೀಗೆ ಜ್ಞಾನ ಪರಂಪರೆ ಬೆಳೆಯುತ್ತದೆ. ಇಂದು ಈ ರೀತಿ ಹರಿದು ಬಂದ ವಿದ್ಯೆ ಕಣ್ಮರೆಯಾಗುತ್ತಿದೆ; ಜನ ಮರೆಯುತ್ತಿದ್ದಾರೆ. ಮಹಾನ್ ಜ್ಞಾನಿಯಾದ ಅರ್ಜುನ ಕೂಡಾ ಈ ಜ್ಞಾನವನ್ನು ಮರೆತಿದ್ದಾನೆ. ಹಿಂದೆ ಹೇಳಿದಂತೆ ಅರ್ಜುನ ಆ ಕಾಲದ ಮಹಾನ್ ಜ್ಞಾನಿ. ಆದರೂ ಅದು ಆತನಿಗೆ ನೆನಪಿಗೆ ಬರುತ್ತಿಲ್ಲ. ಇಲ್ಲಿ ಕೃಷ್ಣ ಅರ್ಜುನನನ್ನು "ಪರಂತಪ" ಎಂದು ಸಂಬೋಧಿಸಿದ್ದಾನೆ. ಪರಂತಪ ಎಂದರೆ ಸದಾ ಭಗವಂತನನ್ನು ಜ್ಞಾನದ ದೃಷ್ಟಿಯಿಂದ ಕಾಣಬಲ್ಲವ. "ನೀನು ಅಪರೋಕ್ಷ ಜ್ಞಾನಿ; ನಿನ್ನಲ್ಲೇ ಆ ಜ್ಞಾನ ಪರಂಪರೆ ಇದೆ; ಆದರೂ ನಿನಗೆ ಸಂಶಯ ಬಂತು; ಈ ಅನಾಧಿನಿತ್ಯವಾದ  ಜ್ಞಾನ ಪರಂಪರೆ ನಿನ್ನಲ್ಲೇ ಮರೆಯಾಗುತ್ತಿದೆ. ಹೀಗಿರುವಾಗ ಉಳಿದವರ ಪಾಡೇನು" ಎನ್ನುವ ಧ್ವನಿ ಈ ಪರಂತಪ ಎನ್ನುವ ಸಂಬೋಧನೆಯಲ್ಲಿದೆ.
ಜ್ಞಾನ  ನಾಶವಾಗಿಲ್ಲ, ಆದರೆ ಮೋಹದ ಪರದೆ ಅದನ್ನು ತಡೆದಿದೆ. ಆದ್ದರಿಂದ ನಿನಗೆ ನಾನು ಈಗ ಆ ಜ್ಞಾನವನ್ನು ಪುನಃ ಹೇಳುತ್ತಿದ್ದೇನೆ ಎನ್ನುತ್ತಾನೆ ಕೃಷ್ಣ. ಅರ್ಜುನ ಕೃಷ್ಣನ ಮೇಲಿಟ್ಟಿರುವ ಅಪಾರ ಗೌರವ, ಭಕ್ತಿ  ಹಾಗು ಆತ್ಮೀಯತೆಯನ್ನು ಗುರುತಿಸಿ, ಅನಾದಿನಿತ್ಯವಾದ, ಅಪೂರ್ವವಾದ ಈ ಜ್ಞಾನವನ್ನು ಕೃಷ್ಣ ಅರ್ಜುನನಿಗೆ ನೆನಪಿಸುತ್ತಿದ್ದಾನೆ. ಅರ್ಜುನನ ಭಕ್ತಿ ನವವಿಧ ಭಕ್ತಿಯಲ್ಲಿ (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ ,ಸಖ್ಯ ಹಾಗು ಆತ್ಮ ನಿವೇದನ) ಒಂದಾದ ಸಖ್ಯ. ಆತ ಭಗವಂತನನ್ನು ಗೆಳೆಯನಾಗಿ ಪೂಜಿಸಿದ. ಈ ಕಾರಣಕ್ಕಾಗಿ ಇಲ್ಲಿ ಕೃಷ್ಣ ಹೇಳುತ್ತಾನೆ: "ನೀನು ನನ್ನ ಭಕ್ತ ಮತ್ತು ಸಖ. ಆ ಕಾರಣಕ್ಕಾಗಿ ಈ ಅಮೂಲ್ಯವಾದ ಜ್ಞಾನವನ್ನು ನಿನಗೆ ಹೇಳಿದೆ" ಎಂದು.
ಇಲ್ಲಿ ರಹಸ್ಯವಾದ ಜ್ಞಾನವನ್ನು ನಿನಗೆ ಹೇಳುತ್ತಿದ್ದೇನೆ ಎಂದು ಕೃಷ್ಣ ಹೇಳಿದ್ದಾನೆ. ಜ್ಞಾನವನ್ನು ರಹಸ್ಯವಾಗಿಡಲು  ಎರಡು ಕಾರಣವಿದೆ. ಒಂದು ಅದರ ದುರುಪಯೋಗ ಹಾಗು ಇನ್ನೊಂದು ಅದರ ನಿರುಪಯೋಗ.  ಯಾರು ಜ್ಞಾನವನ್ನು ಪಡೆದು ಅದನ್ನು ತಮ್ಮ ತಲೆಮಾರಿಗೆ ಕೊಡಲಾರರೋ ಅಂಥವರಿಗೆ ಜ್ಞಾನವನ್ನು ಕೊಡುವುದು ವ್ಯರ್ಥ. ಇದರಿಂದ ಜ್ಞಾನ ಪರಂಪರೆ ಹರಿದು ಬರಲಾರದು. ಇನ್ನು ದುರುಪಯೋಗ. ಜ್ಞಾನ ಇರುವುದು ನಮ್ಮ ಅಂತರಂಗದ ಉದ್ಧಾರಕ್ಕೆ ಹಾಗು ಇನ್ನೊಬ್ಬರ ಉದ್ಧಾರದ ದಾರಿ ತೋರುವುದಕ್ಕಾಗಿ.  ಹೊರತು ವ್ಯವಹಾರ-ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ಜ್ಞಾನದಿಂದ ಸಮಾಜವನ್ನು ಮೋಸಗೊಳಿಸಬಹುದು. ತಿಳುವಳಿಕೆ ಇಲ್ಲದವರನ್ನು ತನ್ನ ತಿಳುವಳಿಕೆಯಿಂದ ಮೋಸ ಮಾಡಿ ವಂಚಿಸಬಹುದು. ಈ ಎಲ್ಲಾ ಕಾರಣದಿಂದ ಜ್ಞಾನ ರಹಸ್ಯ ವಿಷಯ. ಹಿಂದೆ ಯೋಗ ಸಿದ್ಧಿಯಿಂದ ಮಾಯವಾಗುವ ವಿದ್ಯೆ ಜ್ಞಾನಿಗಳಿಗೆ ತಿಳಿದಿತ್ತು. ಇಂತಹ ಅಮೂಲ್ಯ ವಿದ್ಯೆಯ ದುರುಪಯೋಗ ಅತೀ ಸುಲಭ. ಆ ಕಾರಣಕ್ಕಾಗಿ ಅದನ್ನು ರಹಸ್ಯವಾಗಿಟ್ಟರು. ಪ್ರಾಣಿ ಭಾಷೆಯನ್ನೂ ಅರ್ಥ ಮಾಡಿಕೊಳ್ಳುವ ವಿದ್ಯೆ ನಮ್ಮಲ್ಲಿತ್ತು. ಇದನ್ನೂ ಕೂಡಾ ರಹಸ್ಯವಾಗಿಟ್ಟರು. ಹೀಗೆ ಜ್ಞಾನದಿಂದ ದುರುಪಯೋಗವಾಗುವ ಸಾಧ್ಯತೆ ಇದ್ದಾಗ ಅದನ್ನು ರಹಸ್ಯವಾಗಿಡಬೇಕು.  ಇಂಥ ರಹಸ್ಯವಾದ ವಿಷಯವನ್ನು  ನಾನು 'ನಿನ್ನನ್ನು ಆಯ್ಕೆ ಮಾಡಿ ಹೇಳುತ್ತಿದ್ದೇನೆ' ಎಂದಿದ್ದಾನೆ ಕೃಷ್ಣ.

No comments:

Post a Comment