Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, March 15, 2011

Bhagavad Gita Kannada Chapter-02 Shloka 65-68

ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ          
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತಿ       ॥೬೫॥

ಪ್ರಸಾದೇ ಸರ್ವ ದುಃಖಾನಾಮ್  ಹಾನಿಃ ಅಸ್ಯ ಉಪಜಾಯತೇ
ಪ್ರಸನ್ನಚೇತಸಃ ಹಿ ಅಶು ಹ್ಯಾಶು ಬುದ್ಧಿಃ ಪರಿ ಅವತಿಷ್ಠತಿ--ಮನಸ್ಸು ತಿಳಿಗೊಂಡಾಗ ಸಾಧಕನ ಎಲ್ಲಾ ದುಗುಡಗಳು ಇಲ್ಲವಾಗುತ್ತವೆ. ಏಕೆಂದರೆ ಬಗೆ ತಿಳಿಗೊಂಡವನ ಬುದ್ಧಿ  ಬೇಗನೆ ಭಗವಂತನಲ್ಲಿ ನೆಲೆಗೊಳ್ಳುತ್ತದೆ.
ಮನಸ್ಸು ಕೊಳೆಯಾದರೆ ಎಲ್ಲವೂ ಕೊಳೆ. ಮನಸ್ಸು ತಿಳಿಯಾದರೆ ಎಲ್ಲವೂ ತಿಳಿ. ಎಲ್ಲಾ ಸಮಸ್ಯೆ ಇರುವುದು ಮನಸ್ಸು ಕೊಳೆಯಾಗುವುದರಿಂದ. ನಮಗೆ ನಮ್ಮ ಮನಸ್ಸಿನ ಸ್ವಚ್ಛತೆ ಬಗ್ಗೆ ಗಮನ ಇಲ್ಲದಿದ್ದರೆ ಇತರ ಎಲ್ಲಾ ಕಾರ್ಯವೂ ವ್ಯರ್ಥ. ಮನಸ್ಸು ಸ್ವಚ್ಚವಾದರೆ ಮಡಿ. ಅದೇ ಪ್ರಸನ್ನವಾದ ಸ್ಥಿತಿ.  ಮನಸ್ಸು ತಿಳಿಯಾದಾಗ ಸರ್ವ ದುಃಖವೂ ತನ್ನಷ್ಟಕ್ಕೆ ತಾನು ಕಣ್ಮರೆಯಾಗುತ್ತದೆ. ಇದು ದುಃಖಾತೀತ ಆನಂದ ಸ್ಥಿತಿ.
ಮನಸ್ಸು ತಿಳಿಯಾಯಿತು ಎಂದರೆ ಅದು ಭಗವಂತನನ್ನು ತಿಳಿಯಲು ಸಹಾಯ ಮಾಡುತ್ತದೆ. ಕೊಳೆಯಾದ ಮನಸ್ಸಿನಿಂದ ಭಗವಂತನ ಚಿಂತನೆ ಸಾಧ್ಯವಿಲ್ಲ. ಭಗವಂತನನ್ನು ತಿಳಿದ ಮೇಲೆ ದುಃಖವಿಲ್ಲ. ಬುದ್ಧಿ-ಗಟ್ಟಿಗೊಂಡು ಭಗವಂತನ ಅಪರೋಕ್ಷ  ಜ್ಞಾನದಲ್ಲಿ ನಿಂತುಬಿಡುತ್ತದೆ. ಈ ಸ್ಥಿತಿಯಲ್ಲಿ ಯಾವ ದೆಸೆಯಲ್ಲಿ ಯೋಚನೆ ಹೋದರೂ ಕೂಡಾ ಅದು ಭಗವಂತನಲ್ಲಿ ಹೋಗಿ ನಿಲ್ಲುತ್ತದೆ. ಯಾವುದನ್ನು ಕೇಳಿದರು, ಯಾವುದನ್ನು ನೋಡಿದರು, ಅದರ ಹಿಂದೆ ಇರುವ ಜಗತ್ತಿನ ಮೂಲ ಶಕ್ತಿಯ ಚಿಂತನೆ ಮನಸ್ಸಿಗೆ ಬಂದುಬಿಡುತ್ತದೆ. ಆಗ ಯಾವುದೋ ಸಣ್ಣ ಸಂಗತಿಗಾಗಿ ಕೊರಗುವ ಪ್ರಶ್ನೆಯೇ ಉಳಿಯುವುದಿಲ್ಲ. ತಿಳಿಯಾದ ಮನಸ್ಸು ಭಗವನ್ಮಯವಾಗುತ್ತದೆ. ಒಮ್ಮೆ ಭಗವಂತ ಮನಸ್ಸಿನಲ್ಲಿ ತುಂಬಿದ ಅಂದರೆ ಸರ್ವವೂ ಆನಂದಮಯ. ಆ ನಂತರ ದುಃಖವೆಂಬುವುದಿಲ್ಲಈ ಆನಂದ ಅಪರಿಮಿತ.

ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ       
ನ ಚಾಭಾವಯತಃ ಶಾಂತಿರಶಾಂತಸ್ಯ  ಕುತಃ ಸುಖಮ್    ॥೬೬॥

ನ ಅಸ್ತಿ  ಬುದ್ಧಿಃ ಅಯುಕ್ತಸ್ಯ ನ ಚ ಅಯುಕ್ತಸ್ಯ ಭಾವನಾ
ನ ಚ ಅಭಾವಯತಃ  ಶಾಂತಿಃ ಅಶಾಂತಸ್ಯ  ಕುತಃ ಸುಖಮ್--ಮನಸ್ಸು ಮಣಿಸದವನಿಗೆ ತಿಳಿಯಾದ ತಿಳಿವಿಲ್ಲ. ಮನಸ್ಸು ಮಣಿಸದವನಿಗೆ ಧ್ಯಾನವೂ ಇಲ್ಲ. ಧ್ಯಾನ ಇರದವನಿಗೆ ಮುಕ್ತಿಯಿಲ್ಲ[ಭಗವಂತನಲ್ಲಿ ಬಗೆ ನೆಲೆಸದು]. ಮುಕ್ತನಾಗದವನಿಗೆ[ಭಗವಂತನಲ್ಲಿ ಬಗೆ ನೆಡದವನಿಗೆ] ಎಲ್ಲಿಯ ಸುಖ ?

ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೆ ವಿಕ್ಷಿಪ್ತವಾಗಿದ್ದರೆ ಅದು ಭಗವಂತನನ್ನು ಹೋಗಿ ಸೇರುವುದಿಲ್ಲ. ಯಾರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಿಲ್ಲವೋ ಅವನಿಗೆ ಅಪರೋಕ್ಷವಿಲ್ಲ. ಅಂಥವನ ಮನಸ್ಸು ತಿಳಿಯಾಗದು. ಇಂಥವರು  ಏಕಾಗ್ರವಾಗಿ ಚಿಂತಿಸಲು ಸಾಧ್ಯವಿಲ್ಲ. ಏಕಾಗ್ರವಾಗಿ ಚಿಂತಿಸದ ಹೊರತು ಯಥಾರ್ಥ  ಜ್ಞಾನವಿಲ್ಲ. ಇಂಥವರಿಗೆ ಧ್ಯಾನ(Meditation) ಅಸಾಧ್ಯ. ಇಲ್ಲಿ  ಧ್ಯಾನ  ಅಂದರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತಿಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನಮಗೆ ಖಚಿತವಾದ ಅರಿವು ಬರಬೇಕಾದರೆ  ನಮಗೆ ಏಕಾಗ್ರತೆ ಬೇಕು. ಅದನ್ನೇ ಇಲ್ಲಿ 'ಭಾವನಾ' ಎಂದಿದ್ದಾರೆ. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ.  ಯಾವುದನ್ನೂ ಆಳವಾಗಿ ಚಿಂತಿಸದ ಹೊರತು ಅದರ ಬಗ್ಗೆ, ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡದು. ಹೀಗೆ ಆಳಕ್ಕಿಳಿದು ಚಿಂತನೆ ಮಾಡದವನಿಗೆ ಶಾಂತಿ ಇಲ್ಲ. ಇಲ್ಲಿ ಶಾಂತಿ ಎನ್ನುವುದಕ್ಕೆ ಎರಡು ಅರ್ಥವಿದೆ.  ಮೇಲ್ನೋಟಕ್ಕೆ ಶಾಂತಿ ಅಂದರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಜೀವನಿಗೆ ಪೂರ್ಣ ಆನಂದದ ಸ್ಥಿತಿ ಅಂದರೆ ಮೋಕ್ಷ. ಆದ್ದರಿಂದ ಯಾರು ಧ್ಯಾನದಿಂದ ಭಗವಂತನನ್ನು ಕಂಡುಕೊಳ್ಳುವುದಿಲ್ಲವೋ ಅವನಿಗೆ ಮೋಕ್ಷವಿಲ್ಲ. ಮೋಕ್ಷದ ದಾರಿಯಲ್ಲಿ ಸಾಗದವನಿಗೆ ಸುಖವಿಲ್ಲ. ಇನ್ನು ಶಾಂತಿ ಎಂದರೆ ಆನಂದದ ತುತ್ತತುದಿ ಅಥವಾ ಪರಾಕಾಷ್ಠೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಾಗ ನಮಗೆ ಶಾಂತಿ.
ಹೀಗೆ ಇಂದ್ರಿಯಗಳನ್ನು ಸಂಯಮ ಮಾಡಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವನ್ನು ಕಂಡುಕೊಳ್ಳಬೇಕು. ನಾವು ಹೊರ ಪ್ರಪಂಚವನ್ನು ಬಿಟ್ಟು ಒಳ ಪ್ರಪಂಚದಲ್ಲಿ  ಆಳವಾಗಿ ಮುಳುಗದ ಹೊರತು ಸತ್ಯದ ಸಾಕ್ಷಾತ್ಕಾರವಾಗದು. ಸತ್ಯದ ಸಾಕ್ಷಾತ್ಕಾರವಾಗದ ಹೊರತು ಸುಖವಿಲ್ಲ.

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋSನುವಿಧೀಯತೇ          
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ     ॥೬೭॥

ಇಂದ್ರಿಯಾಣಾಂ ಹಿ ಚರತಾಮ್ ಯತ್ ಮನಃ ಅನುವಿಧೀಯತೇ
ತತ್ ಅಸ್ಯ ಹರತಿ ಪ್ರಜ್ಞಾಮ್  ವಾಯುಃ  ನಾವಮ್ ಇವ ಅಂಭಸಿ--ವಿಷಯಗಳತ್ತ ಹರಿಯುವ ಇಂದ್ರಿಯಗಳ ಬೆನ್ನು ಹತ್ತುವಂತೆ ಮನಸ್ಸು ರೂಪುಗೊಂಡಿದೆಯಲ್ಲವೇ? ಆದ್ದರಿಂದ, ಅದು ಸಾಧಕನ ಅರಿವನ್ನು ದಾರಿಗೆಡಿಸಿಬಿಡುತ್ತದೆ-ಕಡಲಲ್ಲಿ ಬಿರುಗಾಳಿ ಹಡಗನ್ನು ಹೇಗೆ ದಾರಿ ತಪ್ಪಿಸುತ್ತದೋ ಹಾಗೆ.

ಇಷ್ಟೆಲ್ಲಾ ಗಹನವಾದ ವಿಚಾರ ಇದ್ದರೂ ಕೂಡಾ, ಮನಸ್ಸು ಏಕೆ ಅಂತರಂಗದ ಆಳಕ್ಕಿಳಿಯುವುದಿಲ್ಲ?  ಅದು ಸಹಜ ಎನ್ನುತ್ತಾನೆ ಕೃಷ್ಣ. ಏಕೆಂದರೆ ಮನಸ್ಸಿಗೆ ಒಂದು ಸ್ವಭಾವವಿದೆ. ಯಾವುದನ್ನು ನಾವು ಅದಕ್ಕೆ ಅಭ್ಯಾಸ ಮಾಡಿದೆವೋ ಅದನ್ನೇ ಮೆಚ್ಚಿಕೊಳ್ಳುವುದು. ಹೊಸದನ್ನು ಅದು ನಿರಾಕರಿಸುತ್ತದೆ ಹಾಗು ಪರಿಚಿತವಾದುದನ್ನು ಮಾತ್ರ ಅದು ಇಷ್ಟಪಡುತ್ತದೆ. ಮನಸ್ಸಿಗೆ ಒಳಪ್ರಪಂಚ ಅಪರಿಚಿತ. ಆದ್ದರಿಂದ  ಅದು ಒಳಪ್ರಪಂಚದತ್ತ ಹರಿಯುವುದಿಲ್ಲ.  ಮನಸ್ಸಿಗೆ ಗಟ್ಟಿಯಾಗಿ ಹೇಳಿದರೆ ಅದು ಅಂತರ್ಮುಖವಾಗುತ್ತದೆ; ಆದರೆ ಆ ಪ್ರಯತ್ನ ನಾವು ಮಾಡುವುದಿಲ್ಲ!  ಈ ಅಪಾಯವನ್ನು ಈ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.
ಮನಸ್ಸಿಗೆ  ನಾವು ಬಾಲ್ಯದಿಂದ ಎನನ್ನು  ಅಭ್ಯಾಸ ಮಾಡಿಸಿದ್ದೆವೋ ಅದರ ಹಿಂದೆ ಅದು ಹೋಗುತ್ತದೆ. ಉದಾಹರಣೆಗೆ ಬಾಲ್ಯದಿಂದಲೂ ಶಾಖಾಹಾರಿಯಾಗಿದ್ದವನಿಗೆ ಮಾಂಸವನ್ನು ಕಂಡಾಗ ಅಸಹ್ಯ ಅನಿಸುತ್ತದೆ. ಆದರೆ ಅದೇ ಮಾಂಸ ಮಾರುವವ ಮಾಂಸದ ಮಧ್ಯದಲ್ಲೇ ಇದ್ದು  ಅದನ್ನೇ ಬೇಯಿಸಿ ತಿಂದರೂ ಅವನಿಗೆ ಹೇಸಿಗೆ ಅನಿಸುವುದಿಲ್ಲ. ಇದೆಲ್ಲವೂ ಮನಸ್ಸಿಗೆ ನಾವು ಕೊಡುವ ತರಬೇತಿ. ಮನಸ್ಸು ನಿರಂತರ ಯಾವುದನ್ನು ನೋಡುತ್ತದೋ ಅದನ್ನೇ ರೂಢಿ  ಮಾಡಿಕೊಳ್ಳುತ್ತದೆ. ಆ ರೀತಿ  ಮನಸ್ಸು ಭಗವಂತನಿಂದ ನಿರ್ಮಿಸಲ್ಪಟ್ಟಿದೆ. ಇಂದ್ರಿಯಗಳು ನಿತ್ಯ ಯಾವುದನ್ನು ನೋಡುತ್ತವೋ ಅದನ್ನು ಮೆಚ್ಚುವಂತಹ ಸ್ವಭಾವವನ್ನು ಭಗವಂತ ಮನಸ್ಸಿಗೆ ಕೊಟ್ಟಿದ್ದಾನೆ. ಇಂತಹ ಮನಸ್ಸಿನ ಸ್ವಭಾವವನ್ನು ಅರಿಯದಿದ್ದರೆ  ಅಪಾಯಕಾರಿ. ಅದು ನಮ್ಮ ಪ್ರಜ್ಞೆಯನ್ನು ಅಪಹಾರ ಮಾಡಿಬಿಡುತ್ತದೆ. ಇದನ್ನು ಒಂದು ಒಳ್ಳೆಯ ದೃಷ್ಟಾಂತದ ಮುಖೇನ ಕೃಷ್ಣ ವಿವರಿಸಿದ್ದಾನೆ:
ನಾವು   ಹಾಯಿ ದೋಣಿಯಲ್ಲಿ ಪ್ರಯಾಣಿಸುವ ನಾವಿಕನಂತೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಬಟ್ಟೆ. ಒಂದು ವೇಳೆ ನಮಗೆ ಈ ಬಟ್ಟೆಯನ್ನು ತಿರುಗಿಸಿ ನಮಗೆ ಬೇಕಾದಂತೆ ದೋಣಿಯನ್ನು ನಿಯಂತ್ರಿಸುವ ಕಲೆ ಗೊತ್ತಿಲ್ಲದಿದ್ದರೆ, ಗಾಳಿ ಬೀಸಿದತ್ತ ನಾವು ಹೋಗುತ್ತೇವೆ ಹೊರತು ನಮಗೆ ತಲುಪಬೇಕಾದಲ್ಲಿಗಲ್ಲ. ಈ ದೃಷ್ಟಾಂತ ತುಂಬಾ  ಔಚಿತ್ಯಪೂರ್ಣವಾಗಿದೆ. ಒಂದು ವೇಳೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ಕಲಿಯದಿದ್ದರೆ ಬದುಕು ಛಿದ್ರ-ವಿಛಿದ್ರವಾಗುತ್ತದೆ. ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.

ತಸ್ಮಾದ್ ಯಸ್ಯ  ಮಹಾಬಾಹೋ ನಿಗೃಹೀತಾನಿ ಸರ್ವಶಃ  
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ     ॥೬೮॥

ತಸ್ಮಾತ್  ಯಸ್ಯ  ಮಹಾಬಾಹೋ ನಿಗೃಹೀತಾನಿ ಸರ್ವಶಃ
ಇಂದ್ರಿಯಾಣಿ ಇಂದ್ರಿಯಾರ್ಥೇಭ್ಯಃ  ತಸ್ಯ  ಪ್ರಜ್ಞಾ ಪ್ರತಿಷ್ಠಿತಾ-ಆದ್ದರಿಂದ  ಓ ಮಹಾವೀರ, ಯಾರ ಇಂದ್ರಿಯಗಳು ಎಲ್ಲ ಬಗೆಯಿಂದಲು ಇಂದ್ರಿಯ ವಿಷಯಗಳಿಂದ ಪಾರಾಗಿ ಹಿಡಿತದಲ್ಲಿರುವವೋ ಅವನ ಅರಿವು ಗಟ್ಟಿಗೊಡಿರುತ್ತದೆ.

ಕೃಷ್ಣ  ಹೇಳುತ್ತಾನೆ, ಮನಸ್ಸು ಯಾವಾಗಲೂ ಹೊರಗಿನ ಇಂದ್ರಿಯಗಳು ಎನನ್ನು ಅಭ್ಯಾಸ ಮಾಡಿದವೋ ಅದರ ಹಿಂದೆಯೇ ಹೋಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸದೆ ಮನಸ್ಸನ್ನು  ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮೊದಲು ನಾವು ಇಂದ್ರಿಯಗಳಿಗೆ ತರಬೇತಿ ಕೊಡಬೇಕು. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು  ಅತಿ ಮುಖ್ಯ. ಚಿಕ್ಕಂದಿನಿಂದಲೂ ಪಾಲಿಸಿಕೊಂಡು ಬಂದ ಅಭ್ಯಾಸವನ್ನು ಮುರಿಯುವುದು ಅಸಾಧ್ಯ. ಈ ಕಾರಣಕ್ಕಾಗಿ ಹಿಂದೆ ಶಾಲೆಯಲ್ಲಿ ಹಾಗು ಮನೆಯಲ್ಲಿ ಅನೇಕ ಸಂಸ್ಕಾರಗಳನ್ನು ರೂಢಿ ಮಾಡಿಕೊಂಡು ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು. ಆದರೆ ಇಂದು ಶಾಲೆಯಲ್ಲಾಗಲಿ, ಮನೆಯಲ್ಲಾಗಲೀ ಇಂತಹ ಮಾರ್ಗದರ್ಶನ ಮಕ್ಕಳಿಗೆ ಸಿಗದೇ, ಇಂದಿನ ಯುವ ಪೀಳಿಗೆ ಬಿರುಗಾಳಿಗೆ ಸಿಕ್ಕ ದೋಣಿಯಂತಾಗಿದೆ.
ಇಂದ್ರಿಯ ನಿಗ್ರಹ ಮಾಡಲು ಪೂರಕವಾದ ಸಂಸ್ಕಾರ ಬಾಲ್ಯದಿಂದ ಬಂದರೆ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುವ ಪರಿಸ್ಥಿತಿ ಬಂದೊದಗುವುದಿಲ್ಲ. ಇದರಿಂದ ಮನಸ್ಸು ಗಟ್ಟಿಯಾಗುತ್ತದೆ. ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆ ಬಂದಾಗ ಅರಿವು ಗಟ್ಟಿಗೊಳ್ಳುತ್ತದೆ.
ಮನಸ್ಸನ್ನು ನಿಗ್ರಹ ಮಾಡುವುದು ಹೇಗೆ,  ನಿಗ್ರಹ ಮಾಡಿದಂತಹ ಮನಸ್ಸು ಯಾವ ರೀತಿ ವರ್ತಿಸುತ್ತದೆ, ಅಂತಹ ಮನಃಸ್ಥಿತಿಯವರು ಹೇಗೆ ಜ್ಞಾನಿಗಳಾಗಲು  ಸಾಧ್ಯ- ಅನ್ನುವ ಒಂದು ವಿಸ್ತಾರವಾದ ಮನೋವಿಶ್ಲೇಷಣೆಯನ್ನು ಕೃಷ್ಣ ಮಾಡಿದ. ಅರ್ಜುನ ಹಾಕಿದ ಮೂಲ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ. ಒಬ್ಬ ಸ್ಥಿತ ಪ್ರಜ್ಞ ಹೇಗಿರುತ್ತಾನೆ, ಆತನ ನಡೆ ನುಡಿ ಹೇಗಿರುತ್ತದೆ  ಎನ್ನುವ ಪ್ರಶ್ನೆಗೆ ಮಹತ್ತರವಾದ  ಉತ್ತರವನ್ನು  ಕೃಷ್ಣ ಇಲ್ಲಿ  ಕೊಟ್ಟಿದ್ದಾನೆ.

No comments:

Post a Comment