Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, March 9, 2011

Bhagavad Gita Kannada Chapter-02 Shloka 54-55

ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್   ॥೫೪॥

ಅರ್ಜುನ ಉವಾಚ -ಅರ್ಜುನ ಕೇಳಿದನು:
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ
ಸ್ಥಿತಧೀಃ ಕಿಮ್  ಪ್ರಭಾಷೇತ ಕಿಮ್  ಆಸೀತ ವ್ರಜೇತ ಕಿಮ್-- ಓ ಬ್ರಹ್ಮರುದ್ರರ ನಿಯಾಮಕನೆ, ಸಮಾಧಿಯನ್ನೇರಬಲ್ಲ [ತಿಳಿವಿನ ತಪ್ಪುಗಳನ್ನು ತಿದ್ದಿಕೊಂಡ] ಅರಿವು ಗಟ್ಟಿಗೊಡವರನ್ನು ಹೇಗೆ ಗುರುತಿಸುವುದುಅಂಥಹ ಸ್ಥಿತಪ್ರಜ್ಞ ಏನೆಂದು ನುಡಿಯುತ್ತಾನೆ? ಏನೆಂದು ಕೂಡುತ್ತಾನೆ? ಏನೆಂದು ನಡೆಯುತ್ತಾನೆ?

ಈ ಹಂತದಲ್ಲಿ ಕೃಷ್ಣ ತನ್ನ ಉಪದೇಶವನ್ನು ನಿಲ್ಲಿಸಿ ಅರ್ಜುನನ ಪ್ರಶ್ನೆಯನ್ನು ಆಲಿಸುತ್ತಾನೆ.  ಮನುಷ್ಯನ ಅರಿವು ಗಟ್ಟಿಗೊಳ್ಳಬೇಕು; ಸತ್ಯದ ಸಾಕ್ಷಾತ್ಕಾರದಿಂದ ಮನುಷ್ಯ ಸ್ಥಿತಪ್ರಜ್ಞನಾಗಬಲ್ಲ. ಇಂತಹ ಸ್ಥಿತಪ್ರಜ್ಞರನ್ನು ಗುರುತಿಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನನ್ನು ಆತನ ವೇಷ ಭೂಷಣದಿಂದ ಗುರುತಿಸುವುದು ಅಸಾಧ್ಯ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದೆ  ಅಂತರಂಗ ಪ್ರಪಂಚದಲ್ಲಿ  ಸಮಾಧಿಸ್ಥಿತಿಯನ್ನು ತಲುಪಿದ ಅವರನ್ನು ಹೇಗೆ ಗುರುತಿಸಬಹುದು? ಅವರು ಬಾಹ್ಯ ಪ್ರಪಂಚದೊಂದಿಗೆ ಹೇಗೆ ವ್ಯವಹರಿಸುತ್ತಾರೆ? ಅವರ ನಡೆ-ನುಡಿ ಹೇಗಿರುತ್ತದೆ? ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸಿದ್ದಾನೆ. ಈ ಸಂಬೋಧನೆಯಿಂದಲೇ ಅರ್ಥವಾಗುತ್ತದೆ, ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಎಂದು. ಕೇಶವ ಎಂದರೆ ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ- ಕೇಶವ . ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ  ಕೇಶವಃ.  “ಜಗತ್ತಿಗೆ ಬೆಳಕು ಕೊಡುವ ನಿನ್ನಿಂದ ನಾನು ಈ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ” ಎನ್ನುವ ಅರ್ಥದಲ್ಲಿ ಈ  ಸಂಬೋಧನೆಯಿದೆ.

ಭಗವಾನುವಾಚ ।
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ      ॥೫೫॥

ಭಗವಾನುವಾಚ -ಭಗವಂತ ಹೇಳಿದನು:
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ- -ಪಾರ್ಥ, ಮನದಲ್ಲಿ ಮನೆಮಾಡಿದ ಎಲ್ಲ ಬಯಕೆಗಳನ್ನು ತೋರೆದಾಗ, ಪರಮಾತ್ಮನಲ್ಲೆ ನೆಲೆನಿಂತು, ಪರಮಾತ್ಮನ ಹಸಾದದಿಂದ ತಣಿದು ನಲಿದಾಗ ಸ್ಥಿತಪ್ರಜ್ಞ ಎನಿಸುತ್ತಾನೆ.

ಕೃಷ್ಣ ನೇರವಾಗಿ ಸ್ಥಿತಪ್ರಜ್ಞನ ನಡೆ-ನುಡಿಗಳ ಬಗ್ಗೆ ಹೇಳದೆ, ಆತ ಹೇಗಿರುತ್ತಾನೆ ಎನ್ನುವುದನ್ನು ಇಲ್ಲಿ ಮೊದಲು ವಿವರಿಸುತ್ತಾನೆ. ನಿಜವಾದ ಸ್ಥಿತಪ್ರಜ್ಞನಿಗೆ ಮೂಲಭೂತವಾಗಿ ಯಾವ ಬಯಕೆಯೂ ಕಾಡುವುದಿಲ್ಲ (ಇಲ್ಲಿ  ಬಯಕೆ ಎಂದರೆ ಮನುಷ್ಯನನ್ನು ದಾರಿ ತಪ್ಪಿಸುವ ಕೆಟ್ಟ ಕಾಮನೆಗಳು). ಆತ ಇಂತಹ ಎಲ್ಲಾ ಕ್ಷುದ್ರ ಕಾಮನೆಗಳನ್ನು ತೊರೆದು ತನ್ನೊಳಗಿರುವ ಜ್ಞಾನಾನಂದಮಯನಾದ ಭಗವಂತನನ್ನು ಕಾಣುತ್ತಾ ಸದಾ ಸಂತೋಷವಾಗಿರುತ್ತಾನೆ.
ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೆ ಇದ್ದಾಗ ದುಃಖ- ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಆ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೆ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಎಂದೂ ಉದ್ವೇಗಕ್ಕೆ (Tension or Stress) ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದಾಗಿ ಆತ ಯಶಸ್ಸನ್ನು ಕಾಣಬಲ್ಲ.

ಇಲ್ಲಿ ಕೃಷ್ಣ ಅರ್ಜುನನನ್ನು 'ಪಾರ್ಥ' ಎಂದು ಸಂಬೋಧಿಸಿದ್ದಾನೆ. ಪಾರ್ಥ ಎಂದರೆ ಪಾರ-ತೀರ-ಗಮನೆ, ಅಂದರೆ ಸತ್ಯದ, ಸಾಧನೆಯ ಕಡಲನ್ನು ದಾಟಿದವ. “ಸಾಧನೆಯ  ಕಡಲನ್ನು ದಾಟಿದ ನಿನಗೆ ಇದು ಸ್ಪಷ್ಟವಾಗಿ ತಿಳಿಯಬೇಕು” ಎನ್ನುವ  ಅರ್ಥದಲ್ಲಿ ಈ ಸಂಬೋಧನೆ ಇದೆ.
ಮುಂದೆ ಬರುವ ಮೂರು ಶ್ಲೋಕಗಳಲ್ಲಿ ಕೃಷ್ಣ ಕಾಮನೆಗಳನ್ನು ಬಿಡುವುದು ಅಂದರೆ ಏನು ಹಾಗು ಹೇಗೆ? ಎನ್ನುವುದನ್ನು ವಿವರಿಸುತ್ತಾನೆ.

No comments:

Post a Comment