Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, March 7, 2011

Bhagavad Gita Kannada Chapter-02 Shloka 48-51

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ   
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥

ಯೋಗಸ್ಥಃ ಕುರು ಕರ್ಮಾಣಿ ಸಂಗಮ್  ತ್ಯಕ್ತ್ವಾ ಧನಂಜಯ-
ಸಿದ್ಧಿ  ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಂ ಯೋಗಃ  ಉಚ್ಯತೇ - ಧನಂಜಯ, 'ಯೋಗ' ದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು-ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ, ಕೆಟ್ಟರೂ-ಸಮಭಾವದಿಂದಿದ್ದು. ಇಂಥ ಸಮಭಾವಕ್ಕೆ 'ಯೋಗ'ವೆಂದು ಹೆಸರು.

ಎಂತಹ ಕರ್ಮ ಮಾಡುವುದಾದರೂ ಸಹ ಸುಮ್ಮನೆ ಮಾಡುವುದಲ್ಲ. ಅದರ ಹಿಂದೆ ಒಂದು ಯೋಗವಿರಬೇಕು. ಭಗವಂತ ಫಲವನ್ನು ಕೊಡತಕ್ಕಂತವ, ನನ್ನಿಂದ ಕರ್ಮವನ್ನು ಮಾಡಿಸತಕ್ಕಂತವನೂ ಅವನೆ. ಏನು ಫಲ, ಎಷ್ಟು ಫಲ, ಯಾವಾಗ ಫಲ, ಎಲ್ಲವೂ ಅವನಿಗೆ ಸೇರಿದ್ದು. ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಇದು ಭೌತಿಕ  ಸಮತೋಲನ. ಇಂತಹ ಸಮತೋಲನದಲ್ಲಿ ಕರ್ತವ್ಯ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು. ನಮ್ಮ ಬದುಕಿನ ಸಮಸ್ತ ಕರ್ಮದಲ್ಲಿ ಈ ಅನುಸಂಧಾನವಿದ್ದಾಗ ಅದು ಭಗವಂತನ ಪೂಜೆಯಾಗುತ್ತದೆ. ಇದೇ ಕರ್ಮಯೋಗ.
ಸಿದ್ಧಿ-ಅಸಿದ್ಧಿಯನ್ನು ಸಮಭಾವದಿಂದ ಕಾಣುವುದು ಮನಸ್ಸಿನ ಯೋಗ. ಇದೊಂದು ಮಾನಸಿಕ ಸ್ಥಿತಿ. ಈ ರೀತಿಯ ಯೋಗ ಭಾವನೆಯಿಂದ ಕರ್ಮ ಮಾಡಿದರೆ-ಫಲ ಬಂದಾಗ ಹೆಗ್ಗಳಿಕೆ ಇರುವುದಿಲ್ಲ, ಬಾರದೆ ಇದ್ದಾಗ ದುಃಖವಿರುವುದಿಲ್ಲ. ಹೀಗೆ ಸಿದ್ಧಿ-ಅಸಿದ್ಧಿಗಳ ಸಮತ್ವದಿಂದ ಮಾಡುವ ಪ್ರತಿಯೊಂದು ಕರ್ತವ್ಯವೂ ಕೂಡಾ ಭಗವಂತನ ಪೂಜೆಯಾಗುತ್ತದೆ. ಈ ಅನುಸಂಧಾನವಿಲ್ಲದೆ ಮಾಡುವ ಮಹಾಯಜ್ಞ ಕೂಡಾ ಪೂಜೆ ಆಗಲಾರದು. ಭಗವಂತ ನನ್ನಿಂದ ಈ ಕೆಲಸವನ್ನು ಮಾಡಿಸಿದ. ಇದು ಭಗವಂತನ ಪೂಜಾರೂಪವಾಗಿ ಅರ್ಪಿತವಾಗಲಿ ಎನ್ನುವ ಅನುಸಂಧಾನವಿದ್ದಾಗ ಮಾತ್ರ ಕರ್ಮ-ಯೋಗವಾಗುತ್ತದೆ. ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದೇ ಯೋಗ. ಈ ಅನುಸಂಧಾನಕ್ಕೆ ಪೂರಕವಾದ ಮತ್ತು ಅನುಸಂಧಾನಪೂರ್ವಕವಾದ ಎಲ್ಲಾ ಕರ್ಮವೂ ಕರ್ಮಯೋಗ.

ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್  ಧನಂಜಯ   
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ    ॥೪೯॥

ದೂರೇಣ ಹಿ ಅವರಮ್  ಕರ್ಮ ಬುದ್ಧಿಯೋಗಾತ್  ಧನಂಜಯ
ಬುದ್ಧೌ ಶರಣಮ್ ಅನ್ವಿಚ್ಛ ಕೃಪಣಾಃ ಫಲಹೇತವಃ -- ಧನಂಜಯ, ಅರಿವಿನ ದಾರಿಗಿಂತ ಕರ್ಮದ ದಾರಿ ತುಂಬಾ ಕೀಳು. ಅದರಿಂದ ಅರಿವಿನಲ್ಲಿ ನೆಲೆನಿಲ್ಲು.[ಅರಿವು ಬಂದ ಮೇಲೂ ಹರಿಗೆ ಶರಣಾಗು]. ಫಲವನ್ನೆ ನಂಬಿ ನಿಂತವರು ಮರುಕಪಡಬೇಕಾದವರು.

ಪ್ರಪಂಚದಲ್ಲಿ ಕೆಲವರು ಕರ್ಮಯೋಗಿಗಳು, ಇನ್ನು ಕೆಲವರು ಜ್ಞಾನಯೋಗಿಗಳು. ಕರ್ಮಯೋಗಿಗಳಿಗೆ ಜ್ಞಾನವಿಲ್ಲ, ಹಾಗು ಜ್ಞಾನ ಬಂದ ಮೇಲೆ ಕರ್ಮ ಬೇಕಿಲ್ಲ ಎನ್ನುವ ಚಿಂತನೆ ಕೆಲವರದು. ಕೆಲವರು ಕರ್ಮ ಮೇಲೆನ್ನುತ್ತಾರೆ ಮತ್ತೆ ಕೆಲವರು ಜ್ಞಾನ ಮೇಲು ಎನ್ನುತ್ತಾರೆ. ಇನ್ನು ಕೆಲವರು ಕರ್ಮ ಮತ್ತು  ಜ್ಞಾನ- ‘ಎರಡು ಚಕ್ರಗಳಂತೆ’ ಸಮಾನ ಎಂದು ವಾದ   ಮಾಡುತ್ತಾರೆ. ಇದರಿಂದ ಅನೇಕ ದ್ವಂದ್ವಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೃಷ್ಣ ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ: ಜ್ಞಾನದ ಮುಂದೆ ಕರ್ಮ ಬಹಳ ದೂರ ಎಂದು. ಕರ್ಮ ಮಾಡುವಾಗ ಜ್ಞಾನ ಅತಿಮುಖ್ಯ. ಜ್ಞಾನಕ್ಕೋಸ್ಕರ  ಕರ್ಮವಿರುವುದೇ ಹೊರತು ಅದು ಜ್ಞಾನಕ್ಕೆ ಸಮಾನ ಅಲ್ಲ. ಅದಕ್ಕಾಗಿ ಜ್ಞಾನಕ್ಕೆ ಶರಣಾಗಿ ಜ್ಞಾನಕ್ಕೆ ಪೂರಕವಾದ ಕರ್ಮ ಮಾಡಬೇಕು. ಜ್ಞಾನವಿಲ್ಲದೆ, ಫಲಾಪೇಕ್ಷೆಯಿಂದ ಕರ್ಮ ಮಾಡುವರ ಸ್ಥಿತಿ ಶೋಚನೀಯ. ಇವರು  ಕರ್ಮದ ಮರ್ಮವನ್ನು ತಿಳಿಯದೆ ಕರ್ಮ ಮಾಡಿ ಒದ್ದಾಡುತ್ತಿರುತ್ತಾರೆ.
ಜ್ಞಾನದ ಮಾರ್ಗದಲ್ಲಿ ಎತ್ತರಕ್ಕೇರಲು  ನಾವು ಕರ್ಮವನ್ನು ಮಾಡಬೇಕು. ಇದರಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಪಡದೆ, ಭಗವಂತನಲ್ಲಿ ಶರಣಾಗಬೇಕು. ಭಗವಂತನೇ ನನ್ನ ರಕ್ಷಕ ಹಾಗು ಆತನೇ ನನ್ನ ನೆಲೆ ಎಂದು ತಿಳಿದು ಆತನಲ್ಲಿ ಶರಣಾಗಬೇಕು. ದೇವರಿಗೆ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ, ಆತ ನನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ ಎನ್ನುವ ಮನವರಿಕೆ  (conviction) ಶರಣಾಗತಿ.
ನಮಗೆ ಏನಾದರೂ ಸಮಸ್ಯೆ ಬಂದಾಗ  ಭಗವಂತನ ಹತ್ತಿರ  ಪ್ರಾರ್ಥಿಸಿಕೊಳ್ಳಬೇಕೇ ಹೊರತು ಅನ್ಯರನ್ನಲ್ಲ. "ಓ ಭಗವಂತ ನನ್ನನ್ನು ಏಕೆ ಈ ಸಮಸ್ಯೆಯಲ್ಲಿ ಸಿಲುಕಿಸಿದಿ? ಇದಕ್ಕೆ ಪರಿಹಾರವನ್ನು ತೋರಿಸು ತಂದೆ" ಎಂದು ಮನಃಪೂರ್ವಕವಾಗಿ ಕೇಳಿಕೊಂಡರೆ ಖಂಡಿತ ಆತ ನಮ್ಮನ್ನು ಸಂಕಟದಿಂದ ಪಾರು ಮಾಡುತ್ತಾನೆ. ಆದರೆ ಇಲ್ಲಿ ಕೂಡಾ ಫಲದ ಅಧಿಕಾರ ಸಾಧಿಸದೆ, ಕೇವಲ ಭಗವಂತನನ್ನು ನಂಬಿ, ನಮ್ಮ ಎಲ್ಲಾ ಸಮಸ್ಯಗಳ ನಡುವೆಯೂ  ನಿಶ್ಚಿಂತೆಯಿಂದ ಬದುಕಲು ಕಲಿಯಬೇಕು.
ಮುಂದಿನ ಶ್ಲೋಕವನ್ನು ನೋಡುವ ಮೊದಲು ಇಲ್ಲಿ ಬಂದಿರುವ  ಧನಂಜಯ ಎನ್ನುವ ನಾಮವಿಶೇಷಣದ ಅರ್ಥವನ್ನು ತಿಳಿಯೋಣ. ಈ ಸಂಬೋಧನೆಗೆ ಎರಡು ಅರ್ಥವಿದೆ. ಒಂದು ಲೌಕಿಕ ಹಾಗು ಇನ್ನೊಂದು ಅಧ್ಯಾತ್ಮಿಕ ಅರ್ಥ. ಲೌಕಿಕವಾಗಿ ನೋಡಿದರೆ ಅರ್ಜುನ ಅನೇಕ ಕಡೆ ಯುದ್ಧ ಮಾಡಿ, ದೇಶದ ಸೀಮೆಯನ್ನು  ವಿಸ್ತರಿಸಿ, ರಾಜಕೋಶದ ಸಂಪತ್ತನ್ನು ವೃದ್ಧಿ ಮಾಡಿದವ-ಆದ್ದರಿಂದ ಆತ ಧನಂಜಯ. ಆಧ್ಯಾತ್ಮಿಕವಾಗಿ ನೋಡಿದರೆ ಈ ನಾಮಕ್ಕೆ ವಿಶೇಷ ಅರ್ಥವಿದೆ. ಭಗವಂತನ ಆರಾಧನೆ, ಅಧ್ಯಾತ್ಮದ ಅರಿವು-ನಿಜವಾದ ಧನ. ಭಗವಂತನ ಅರಿವು, ಜ್ಞಾನ  ಎಲ್ಲಕ್ಕಿಂತ ದೊಡ್ಡ ಸಂಪತ್ತು.  ಅರ್ಜುನ ಆ ಕಾಲದ ಅಪರೋಕ್ಷ ಜ್ಞಾನಿ. ಆತ ಸ್ವಯಂ ಇಂದ್ರ.  ಆತ ಜ್ಞಾನದ ಸಂಪತ್ತಿನ ಪರಾಕಾಷ್ಠೆ.  'ಇಂತಹ ಜ್ಞಾನಿಯಾದ ನೀನು ಭಗವಂತನಿಗೆ ಶರಣಾಗಿ, ಬುದ್ಧಿಪೂರ್ವಕವಾಗಿ ಕರ್ಮಮಾಡು' ಎನ್ನುವ ಅರ್ಥದಲ್ಲಿ ಕೃಷ್ಣ ಈ ಸಂಬೋಧನೆ ಮಾಡಿದ್ದಾನೆ.

ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್    ॥೫೦॥

ಬುದ್ಧಿಯುಕ್ತಃ ಜಹಾತಿ ಇಹ ಉಭೇ ಸುಕೃತದುಷ್ಕೃತೇ
ತಸ್ಮಾತ್  ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್- ಭಗವಂತನನ್ನರಿತವನು  ಬೇಡವಾದ ಪುಣ್ಯಪಾಪಗಳೆರಡನ್ನು ಇಲ್ಲೆ ತೊರೆಯುತ್ತಾನೆ. ಆದ್ದರಿಂದ ಅರಿವಿನ 'ಯೋಗ'ಕ್ಕೆ ತೊಡಗು. 'ಯೋಗ'ವೆಂದರೆ ಇದೆ: ತಿಳಿದು ಮಾಡುವ ಜಾಣತನ.

ತಿಳುವಳಿಕೆಯಿಂದ ಕರ್ಮ ಮಾಡಿದರೆ ತನ್ನ ಎಲ್ಲಾ ಪಾಪಗಳನ್ನು ಹಾಗು ಬೇಡವಾದ ಪುಣ್ಯವನ್ನು ತೊರೆದು ಭಗವಂತನನ್ನು ಸೇರುತ್ತಾನೆ. ಇಲ್ಲಿ ಬೇಡವಾದ ಪುಣ್ಯ ಅಂದರೆ: ಉದಾಹರಣೆಗೆ ಒಬ್ಬ ಮಹಾತ್ಮ ತನ್ನ ಜ್ಞಾನ ಕರ್ಮಗಳಿಂದ ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಈ ಮಾರ್ಗದಲ್ಲಿರುವಾಗ ಆತ ಇತರ ಪುಣ್ಯವನ್ನೂ ಗಳಿಸುತ್ತಾನೆ. ಒಂದು ವೇಳೆ ಆತ ಚಕ್ರವರ್ತಿಯಾಗಿ ಮೆರೆಯುವ ಪುಣ್ಯವನ್ನು ಪಡೆದಿದ್ದರೆ ಅದು ಆತನಿಗೆ ಬೇಡವಾದ ಪುಣ್ಯ. ಏಕೆಂದರೆ ಮೋಕ್ಷದ ಮುಂದೆ ಈ ಪುಣ್ಯದ ಅವಶ್ಯಕತೆ ಆತನಿಗಿಲ್ಲ. ಆತ ಈ ಪುಣ್ಯವನ್ನು ಇಲ್ಲೇ ತೊರೆಯುತ್ತಾನೆ.  ಇದನ್ನು ಇಲ್ಲಿ ಬೇಡವಾದ ಪುಣ್ಯ ಎಂದಿರುವುದು. ಯಾರು ಹೀಗೆ ಭಗವತ್ಪ್ರಜ್ಞೆಯಲ್ಲಿ ಬದುಕುತ್ತಾರೋ ಅವರು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಜ್ಞಾನಯೋಗದಲ್ಲಿ ನಿಂತು ಆ ಅರಿವಿನಿಂದ ಕರ್ಮವನ್ನು ಮಾಡುವುದು ಜಾಣತನ.

ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ   
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್    ॥೫೧॥

ಕರ್ಮಜಮ್  ಬುದ್ಧಿಯುಕ್ತಾಃ ಹಿ ಫಲಮ್  ತ್ಯಕ್ತ್ವಾ ಮನೀಷಿಣಃ
ಜನ್ಮಬಂಧ ವಿನಿರ್ಮುಕ್ತಾಃ ಪದಮ್ ಗಚ್ಛಂತಿ ಅನಾಮಯಮ್ --ಬಲ್ಲವರು ಭಗವಂತನ ಅರಿವು ಪಡೆದು, ಕರ್ಮ ಫಲದ ಹೊಣೆಯನ್ನು ಅವನಿಗೊಪ್ಪಿಸಿ, ಹುಟ್ಟು ಸಾವಿನ ಕಟ್ಟು ಕಳಚಿಕೊಂಡು, ಕ್ಲೇಶರಹಿತವಾದ ಪದವನ್ನು ಪಡೆಯುತ್ತಾರೆ.

ನಿಜವಾದ ಮನಿಷಿಗಳು ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ  ಜಿತೇಂದ್ರಿಯರು.  ಆತ್ಮಸಂಯಮ ಇರುವ ಜ್ಞಾನದ ಮಾರ್ಗದಲ್ಲಿ ಸಾಗಿ ಆ ಅರಿವನ್ನು ಪಡೆದವರು. ಬುದ್ಧಿವಂತರಾದ ಜ್ಞಾನಿಗಳು ಕರ್ಮದಿಂದ ಬರತಕ್ಕಂತಹ ಫಲದ ಮೋಹವನ್ನು(attachment) ಬಿಟ್ಟು ಅದನ್ನು ಭಗವಂತನಿಗೆ ಅರ್ಪಿಸುತ್ತಾರೆ. ಹೀಗೆ ಯಾರು ಕರ್ಮ ಫಲವನ್ನು ಭಗವಂತನಿಗೆ ಅರ್ಪಣ ಬುದ್ಧಿಯಿಂದ ತ್ಯಾಗ ಮಾಡಿ ನಿರ್ವಂಚನೆಯಿಂದ ಕರ್ಮ ಮಾಡುತ್ತಾರೆ, ಅವರು ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೆ, ಎಲ್ಲಾ ಬಂಧನವನ್ನು   ಕಳಚಿಕೊಂಡು, ದೋಷ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಆದ್ದರಿಂದ ಕರ್ತವ್ಯ ಕರ್ಮವನ್ನು ಭಗವಂತನ ಆರಾಧನೆ ಎಂದು ಮಾಡಿ ಮೋಕ್ಷ ಪಡೆಯಬೇಕು. ಇದನ್ನು  ಹೊರತುಪಡಿಸಿ   ‘ನಾನು ಜ್ಞಾನಿ, ನಾನೇನೂ ಮಾಡಲಾರೆ’ ಎನ್ನುವ ಧೋರಣೆ ಸರಿಯಲ್ಲ.

No comments:

Post a Comment