Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Saturday, March 5, 2011

Bhagavad Gita Kannada Chapter-02-Shloka-45

ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ   
ನಿರ್ದ್ವನ್ದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ ॥೪೫॥

ತ್ರೈಗುಣ್ಯ ವಿಷಯಾಃ ವೇದಾಃ ನಿಸ್ತ್ರೈಗುಣ್ಯಃ ಭವ ಅರ್ಜುನ
ನಿರ್ದ್ವಂದ್ವಃ  ನಿತ್ಯಸತ್ತ್ವಸ್ಥಃ ನಿರ್ಯೋಗಕ್ಷೇಮಃ ಆತ್ಮವಾನ್-- ವೇದಗಳು ಹೊರನೋಟಕ್ಕೆ ತ್ರಿಗುಣಗಳ ನಂಟನ್ನೇ ನಿರೂಪಿಸುತ್ತವೆ [ಒಳಗಿನಿಂದ ತ್ರಿಗುಣಗಳ ನಂಟಿನ ನಂಜನ್ನು ನಿವಾರಿಸುತ್ತವೆ]. ಓ ಅರ್ಜುನ, ನೀನು ತ್ರಿಗುಣಗಳ ನಂಟನ್ನು ನೀಗಿ ನಿಲ್ಲು.     ದ್ವಂದ್ವಗಳ ತಾಕಲಾಟ ತೊಡೆದು ಸದಾ ಭಗವಂತನಲ್ಲಿ ಬಗೆಯನ್ನಿಡು. ಯೋಗ-ಕ್ಷೇಮದ ಹೊಣೆಯನ್ನು ಅವನಿಗೊಪ್ಪಿಸಿ ಅವನೇ ಸ್ವಾಮಿ ಎಂದು ನಂಬಿ ನಡೆ.

ಈವರೆಗೆ ನಾವು ವೇದವನ್ನು ಹೇಗೆ ಅನುಸಂಧಾನ ಮಾಡಬೇಕು, ಅದರ ಮೇಲ್ನೋಟದ ಅರ್ಥದಿಂದ ಆಳಕ್ಕೆ ಹೇಗೆ ಇಳಿಯಬೇಕು ಎನ್ನುವುದನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ನೋಡಿದೆವು. ಇನ್ನಷ್ಟು ಸ್ಪಷ್ಟವಾಗಿ , ಅದು ಹೇಗೆ ಕಾಣುತ್ತದೆ ಹಾಗು ಅದನ್ನು ಹೇಗೆ ನೋಡಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ. ಇದು ಒಂದು ರೀತಿಯಲ್ಲಿ ಇಡೀ ಆಧ್ಯಾತ್ಮದ ಅನುಸಂಧಾನದ ಪ್ರಮುಖವಾದ ವಿಚಾರ. ಇಲ್ಲಿ ಕೃಷ್ಣ ಅದನ್ನು ಹೇಗೆ ಅನುಸಂಧಾನ ಮಾಡಬೇಕು, ಹಾಗು ನಮ್ಮ ಮನಸ್ಸನ್ನು  ಹೇಗೆ ಅಣಿಗೊಳಿಸಬೇಕು ಎಂದು ಹೇಳುತ್ತಾನೆ.
ನಮಗೆ ಮೇಲ್ನೋಟಕ್ಕೆ ವೇದ ಸತ್ವ-ರಜಸ್ಸು-ತಮೋಗುಣಗಳಿಗೆ(ತ್ರೈಗುಣ್ಯ) ಸಂಬಂಧಪಟ್ಟ ಪ್ರಾಪಂಚಿಕ ವಿಷಯ, ಹಾಗು ಕೇವಲ ಪ್ರಾಪಂಚಿಕ ಅರ್ಥವನ್ನೇ ಹೇಳುವಂತೆ  ಕಾಣುತ್ತದೆ-ಕೆಂಪು ಕನ್ನಡಕ ಧರಿಸಿದವನಿಗೆ ಪ್ರಪಂಚವೆಲ್ಲಾ ಕೆಂಪಾಗಿ ಕಾಣುವಂತೆ. ಉದಾಹರಣೆಗೆ: ಸಂತಾನ ವೃದ್ಧಿ, ಹಟ್ಟಿ ತುಂಬಾ ಹಸು, ಕೈತುಂಬ  ದುಡ್ಡು, ಮನೆತುಂಬ ಮಕ್ಕಳು, ರಾಜಸೂಯ, ಅಶ್ವಮೇಧ, ಪುರುಷಮೇಧ  ಇತ್ಯಾದಿ. ಇವು ವೇದದಲ್ಲಿ ಮೇಲ್ನೋಟಕ್ಕೆ ಕಾಣುವವು. ಇವೆಲ್ಲವೂ ತೀರಾ ಪ್ರಾಪಂಚಿಕ ವಿಷಯಗಳು.  ಇದರಿಂದಾಗಿ ವೇದ ನಮ್ಮನ್ನು ಆಧ್ಯಾತ್ಮದ ಆಳಕ್ಕೆ ಕೊಂಡೊಯ್ಯುವುದಿಲ್ಲ ಎನ್ನುವಂತೆ ಬಾಸವಾಗುತ್ತದೆ. ಆದರೆ ನಾವು ವೇದವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಪ್ರಾಪಂಚಿಕ ಪ್ರಭಾವವನ್ನು ದಾಟಿ  ನಿಲ್ಲಬೇಕು. ಪ್ರಾಪಂಚಿಕ ಪ್ರಭಾವ ಕೆಂಪು ಕನ್ನಡಕದಂತೆ. ಅದರ ಪ್ರಭಾವದಲ್ಲಿ ವೇದವನ್ನು ಕಂಡರೆ ನಮಗೆ ಕಾಣುವುದು ಕೇವಲ ಪ್ರಾಪಂಚಿಕ ವಿಷಯ ಮಾತ್ರ. ಅದಕ್ಕಾಗಿ ನಾವು ತ್ರೈಗುಣ್ಯವರ್ಜಿತರಾಗಬೇಕು. ಈ ತ್ರೈಗುಣ್ಯದ ಪ್ರಭಾವವನ್ನು ದಾಟಿ ನಮ್ಮ ನಿಜವಾದ ಸ್ವಭಾವ ಏನು ಎನ್ನುವುದನ್ನು ಗುರುತಿಸಿಕೊಂಡಾಗ ಶುದ್ಧ ಚಿಂತನೆ ಸಾಧ್ಯ. ತ್ರಿಗುಣದ ಬೇಲಿಯನ್ನು ದಾಟದೆ ಸತ್ಯ ತಿಳಿಯುವುದಿಲ್ಲ. ತ್ರಿಗುಣದ ಪ್ರಭಾವದಿಂದ ಪೂರ್ಣ ಆಚೆಗೆ ನಿಲ್ಲುವುದು ಅಸಾಧ್ಯ, ಆದರೆ ಈ ವಿಷಯ ಗೊತ್ತಿದ್ದು ಅದರ ಎಚ್ಚರ ಇದ್ದರೆ ನಾವು ಸಾಧನೆ ಮಾಡಲು ಸಾಧ್ಯ.  ನಾವು ಎಷ್ಟು ಅಪವಿತ್ರರಾಗಿರಲಿ, ಬಾಯಿಯಲ್ಲಿ ಭಗವಂತನ ನಾಮ ಸ್ಮರಣೆ, ನಮ್ಮೊಳಗೆ ಭಗವಂತನಿದ್ದಾನೆ ಎನ್ನುವ ಎಚ್ಚರ ನಮ್ಮನ್ನು ಶುದ್ಧವಾಗಿಸುತ್ತದೆ.
ಧ್ಯಾನ  ಮಾಡುವಾಗ ನಮ್ಮ ಮನಸ್ಸು ಹೊರ ಪ್ರಪಂಚದತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಆತ್ಮಜ್ಞಾನವಿಲ್ಲದೆ ಹೋಮ ಹವನ ಮಾಡಿ ಉಪಯೋಗವಿಲ್ಲ. ನಮಗೆ ಆಶ್ರಯವಾಗಿರುವ ಆತ್ಮತತ್ವ ಭಗವಂತನ ಅರಿವಿನಿಂದ ನಿಸ್ವಾರ್ಥವಾಗಿ ಸಾಧನೆ ಮಾಡಬೇಕು. ಎಂದೂ ಕಪಟ ವಂಚನೆ ಇಲ್ಲದ ಧರ್ಮವನ್ನು ಆಚರಿಸಬೇಕು. ನಮ್ಮ ಮನಸ್ಸನ್ನು ಶುದ್ಧ ಭಾವ ಚಿಂತನೆಗೆ ಅಣಿಗೊಳಿಸಬೇಕು. ನಮ್ಮ ಸ್ವಾರ್ಥದತ್ತ ನೋಡದೆ, ತ್ರಿಗುಣಗಳನ್ನು ದಾಟಿ ನಿಂತರೆ ಮಾತ್ರ ನಮಗೆ ವೇದದ ನಿಜ ಸಂದೇಶ ತಿಳಿಯುತ್ತದೆ.  ಈ ಸ್ಥಿತಿಯಲ್ಲಿ ವೇದ ಓದಿದರೆ ಅದು ಕೇವಲ ಲೌಕಿಕ ವಿಷಯವಲ್ಲ ಎನ್ನುವುದು ಅರ್ಥವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು, ಪೂಜೆ ಪುರಸ್ಕಾರವನ್ನು, ನಿಸ್ವಾರ್ಥವಾಗಿ ಭಗವಂತನ ಆರಾಧನೆ ಎಂದು ಮಾಡಬೇಕು. ನಮಗೇನು ಬೇಕು ಅನ್ನುವುದು ನಮಗೆ ಗೊತ್ತಿಲ್ಲ , ನಮಗೆ ಅಗತ್ಯವಾದುದ್ದನ್ನು ಭಗವಂತ ಕೊಟ್ಟೇ ಕೊಡುತ್ತಾನೆ ಎಂದು, ನಮ್ಮ ಭವಿಷ್ಯದ ಚಿಂತೆಯನ್ನು ಭಗವಂತನಿಗೊಪ್ಪಿಸಿ, ಮುನ್ನೆಡೆದರೆ ಜ್ಞಾನ ಸಿದ್ಧಿಯಾಗುತ್ತದೆ.
ಇಲ್ಲದ್ದನ್ನು ಪಡೆಯುವುದು ಯೋಗ, ಪಡೆದಿದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಈ ಯೋಗ ಕ್ಷೇಮದಲ್ಲೇ ನಮ್ಮ ಇಡೀ ಜೀವನ ಕಳೆದು ಹೋಗುತ್ತದೆ. ಇದನ್ನು ಬಿಟ್ಟು ಭಗವಂತ ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಸಂತೋಷವಾಗಿರಲು ಕಲಿಯಬೇಕು.  'ನಿರ್ಯೋಗಕ್ಷೇಮದ'  ಸ್ಥಿತಿಯಲ್ಲಿ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಯೋಗಕ್ಷೇಮದ ಹೊಣೆ ಆ ಭಗವಂತನದ್ದು, ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಎಂದೆಂದೂ ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ಭರವಸೆಯಿಂದ, ಭಗವಂತನ ಚಿಂತನೆಗೆ ತೊಡಗಬೇಕು. ಇದು ಆಧ್ಯಾತ್ಮ ಸಾಧನೆಗೆ ಬೇಕಾದ ಮಾನಸಿಕ ತಯಾರಿ. ಇಂಥಹ ಮನಃಸ್ಥಿತಿಯಲ್ಲಿ ಯಾವ ಗ್ರಂಥ ಓದಿದರೂ ಅದು ಭಗವಂತನ ಸ್ತುತಿಯಾಗುತ್ತದೆ. ಈ ಮನಃಸ್ಥಿತಿ ತಲುಪದೆ ವೇದಾಂತ ನಮಗೆ ಅರ್ಥವಾಗುವುದಿಲ್ಲ.

ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ವ್ಯಕ್ತಿಯ ಸಾಧನೆ ಏನಿರಬೇಕು, ಅಂತರಂಗದ ಅನುಷ್ಠಾನ ಹೇಗಿರಬೇಕು, ಎನ್ನುವುದನ್ನು ಸ್ಪಷ್ಟಪಡಿಸಿದ ಕೃಷ್ಣನ ಮಾತಿನಿಂದ ನಮಗೆ ಒಂದು ಪ್ರಶ್ನೆ ಮೂಡಬಹುದು. ಕೃಷ್ಣ  ಕರ್ಮ ಮತ್ತು ಜ್ಞಾನಗಳಲ್ಲಿ- ಜ್ಞಾನಕ್ಕೆ ಒತ್ತುಕೊಟ್ಟು ಸಾಗಬೇಕು, ನಮ್ಮ ಯಾವುದೇ ಕ್ರಿಯೆಯ  ಅನುಸಂಧಾನ ಜ್ಞಾನದ ಕಡೆಗೆ ಪೂರಕವಾಗಿರಬೇಕು ಎನ್ನುತ್ತಾನೆ. “ಏಕೆ ಜ್ಞಾನ ಸಾಧನೆಗೆ ಇಷ್ಟೊಂದು ಮಹತ್ವ? ಕರ್ಮಯೋಗದಿಂದ ಸ್ವರ್ಗವನ್ನು ಪಡೆಯಬಹುದಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಕೃಷ್ಣ ಇಲ್ಲಿ ಉತ್ತರಿಸುತ್ತಾನೆ.  ಹಿಂದೆ ವೇದವನ್ನು ಜ್ಞಾನಕಾಂಡ, ಕರ್ಮಕಾಂಡ ಮತ್ತು ಉಪಾಸನಕಾಂಡ ಎಂದು ಮೂರು ವಿಭಾಗ ಮಾಡಿದ ಪರಂಪರೆ ಇತ್ತು. ಆದರೆ ಕೃಷ್ಣ ಹೇಳುತ್ತಾನೆ, ವೇದಕ್ಕೆ ಇರುವುದು ಒಂದೇ ಮುಖ ಎಂದು. ವೇದದಲ್ಲಿ ಹೇಳುವ ಕರ್ಮ, ಉಪಾಸನೆ, ಎಲ್ಲವುದರ ಹಿಂದೆ ಜ್ಞಾನವಡಗಿದೆ. ಎಲ್ಲವೂ ಜ್ಞಾನಕ್ಕೊಸ್ಕರ. ಆದ್ದರಿಂದ ಇಡೀ ವೇದವೇ ಜ್ಞಾನಕಾಂಡ ಎಂದು ಮುಂದಿನ ಶ್ಲೋಕದಲ್ಲಿ ಕೃಷ್ಣ ಒತ್ತಿ ಹೇಳುತ್ತಾನೆ.

No comments:

Post a Comment